ವಿಶ್ವಮಾನವ ಬಸವಣ್ಣನವರು

ವಿಶ್ವಮಾನವ ಬಸವಣ್ಣನವರು

“ಅನುಭವ ಮಂಟಪ”ದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ೧೨ನೇ ಶತಮಾನದಲ್ಲಿಯೇ ಸಾಕಾರಗೊಳಿಸಿದ ಬಸವಣ್ಣನವರು ಜಗತ್ತಿನ ಮಹಾ ದಾರ್ಶನಿಕರಲ್ಲೊಬ್ಬರು. ಆಗ ಸಮಾಜದಲ್ಲಿ ಬೇರು ಬಿಟ್ಟಿದ್ದ ಅಂಧಶ್ರದ್ಧೆ, ಮೂಢನಂಬಿಕೆ, ಲಿಂಗಭೇದ, ಜಾತಿಭೇದಗಳಂತಹ ಸಾಮಾಜಿಕ ಪಿಡುಗುಗಳನ್ನು ಬೇರು ಸಹಿತ ಕಿತ್ತೆಸೆಯಲು ಬದುಕಿನುದ್ದಕ್ಕೂ ಶ್ರಮಿಸಿದರು. ಇವತ್ತು, ಅಕ್ಷಯ ತೃತೀಯಾ ದಿನ, ಬಸವಣ್ಣನವರ ಜಯಂತಿ.

ಮಾದರಸ ಮತ್ತು ಮಾದಲಾಂಬಿಕೆಯರ ಮಗನಾಗಿ ೧೧೦೫ರಲ್ಲಿ ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು ಬಸವಣ್ಣ. ಬಾಲ್ಯದಲ್ಲೇ ಕ್ರಾಂತಿಕಾರಿ ಮನೋಭಾವದ ಬಸವಣ್ಣ ಮೂಢನಂಬಿಕೆಗಳನ್ನು ಪ್ರಶ್ನಿಸುತ್ತ, ಪ್ರತಿಭಟಿಸುತ್ತ ಬೆಳೆದರು.

ಕುಟುಂಬ ತೊರೆದು ಕೂಡಲಸಂಗಮಕ್ಕೆ ಬಂದ ಬಸವಣ್ಣನವರು, ಅಲ್ಲಿ ಜಾತವೇದ ಮುನಿಗಳ ಶಿಷ್ಯರಾಗಿ ವೇದೋಪನಿಷತ್ತುಗಳ ಅಧ್ಯಯನ ಮಾಡಿದರು. ವೀರಶ್ವೆವ ಧರ್ಮದ ತತ್ವಗಳಿಂದ ಪ್ರಭಾವಿತರಾಗಿ ಆ ಧರ್ಮವನ್ನು ಸ್ವೀಕರಿಸಿದರು. ಅದರ ಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡು, ಶ್ರದ್ಧೆಯಿಂದ ಆಚರಿಸಿದರು. ಉದಾತ್ತ ಬದುಕಿನ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸಲಿಕ್ಕಾಗಿ ಜನರ ಆಡುಮಾತಿನಲ್ಲೇ ವಚನಗಳನ್ನು ಬರೆದು ಪ್ರಚುರ ಪಡಿಸಿದರು. ಹೊಸ ಸಮಾಜ ಕಟ್ಟಲಿಕ್ಕಾಗಿ ಎಲ್ಲ ಜಾತಿಮತಗಳ ಜನರನ್ನು ಸಂಘಟಿಸಿದರು. ಇತರರನ್ನೂ ವಚನಗಳ ರಚನೆಗೆ ಪ್ರೇರೇಪಿಸಿದರು.

ಇವರ ಪ್ರತಿಭೆಗೆ ಮನಸೋತ ಮಂಗಳವೇಡೆಯ ದೊರೆ ಬಿಜ್ಜಳ ಇವರನ್ನು ಕರಣಿಕರಾಗಿ ನೇಮಿಸಿದ. ಅನಂತರ ದೊರೆ ರಾಜ್ಯಭಾರವನ್ನೇ ಬಸವಣ್ಣನವರಿಗೆ ಒಪ್ಪಿಸಿದ. ಆಗ ಕಲ್ಯಾಣದಲ್ಲಿ ಬಸವಣ್ಣ ಸ್ಥಾಪಿಸಿದ “ಅನುಭವ ಮಂಟಪ” ಜಗತ್ತಿನ ಮೊದಲ ಸಂಸತ್ತು ಎಂಬ ಮನ್ನಣೆಗೆ ಪಾತ್ರವಾಗಿದೆ. ಅದರ ಮೂಲಕ ತಮ್ಮ ದಕ್ಷ ಆಡಳಿತದಿಂದ ಕಲ್ಯಾಣದ ಅಭ್ಯುದಯಕ್ಕೆ ಅಡಿಪಾಯ ಹಾಕಿದರು ಬಸವಣ್ಣ.

ಆದರೆ ಬಸವಣ್ಣ ಅಂತರ್ಜಾತೀಯ ವಿವಾಹ ಮಾಡಿಸಿದಾಗ, ಸಂಪ್ರದಾಯವಾದಿಗಳ ತೀವ್ರ ವಿರೋಧಕ್ಕೆ ಗುರಿಯಾದರು. ದೊರೆ ಬಿಜ್ಜಳ ಸಂಪ್ರದಾಯವಾದಿಗಳ ಒತ್ತಡಕ್ಕೆ ಮಣಿದಾಗ, ಬಸವಣ್ಣ ಮನನೊಂದು, ಮಂತ್ರಿಪದವಿಯನ್ನೂ, ಕಲ್ಯಾಣವನ್ನೂ ತೊರೆದರು. ಪುನಃ ಕೂಡಲಸಂಗಮದಲ್ಲಿ ನೆಲೆಸಿ, ಸಾಮಾಜಿಕ ಬದಲಾವಣೆಯ ಆಂದೋಲನವನ್ನು ಮುನ್ನಡೆಸುತ್ತಾ ೧೧೬೭ರಲ್ಲಿ ಲಿಂಗೈಕ್ಯರಾದರು.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ, ಮಹಿಳಾ ಸಬಲೀಕರಣ, ದುಡಿಮೆಯ ಸಂಸ್ಕೃತಿ ಇಂತಹ ಪರಿಕಲ್ಪನೆಗಳಿಗೆ ಪಾಶ್ಚಾತ್ಯ ದೇಶಗಳ ಚಿಂತಕರೇ ಮೂಲ ಎಂದು ಭಾವಿಸುವ ಕೆಲವರಿದ್ದಾರೆ. ಅವರು ಬಸವಣ್ಣನವರ ವಚನಗಳನ್ನು ಓದಿಕೊಳ್ಳಬೇಕು. ಆಗ ಅವರಿಗೆ ಅರ್ಥವಾಗುತ್ತದೆ - ವಿಶ್ವಮಾನವ ಬಸವಣ್ಣನವರು ೧೨ನೇ ಶತಮಾನದಲ್ಲೇ ಇಂತಹ ಕ್ರಾಂತಿಕಾರಿ ತತ್ವಗಳನ್ನು ಅನುಷ್ಠಾನಗೊಳಿಸಿದ್ದರು ಎಂಬ ಸತ್ಯ.

ಎಲ್ಲ ಕಾಲಕ್ಕೂ ಪ್ರಸ್ತುತವಾದ, ನಮ್ಮೆಲ್ಲರ ಬದುಕಿಗೆ ದಾರಿದೀಪಗಳಂತಿರುವ ಬಸವಣ್ಣನವರ ಐದು ವಚನಗಳು ಇಲ್ಲಿವೆ:

ದಯವಿಲ್ಲದ ಧರ್ಮವದಾವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ,
ಕೂಡಲ ಸಂಗಯ್ಯನಂತಲ್ಲದೊಲ್ಲದಯ್ಯಾ.

ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರೋ!
ಸತ್ಯವ ನುಡಿವುದೇ ದೇವಲೋಕ
ಮಿಥ್ಯವ ನುಡಿವುದೇ ಮರ್ತ್ಯಲೋಕ.
ಆಚಾರವೇ ಸ್ವರ್ಗ, ಅನಾಚಾರವೇ ನರಕ
ಕೂಡಲಸಂಗಮದೇವಾ, ನೀವೇ ಪ್ರಮಾಣು.

ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ.
ಮಾರಿಯೆಂಬುದೇನು?
ಕಂಗಳು ತಪ್ಪಿ ನೋಡಿದಡೆ ಮಾರಿ,
ನಾಲಗೆ ತಪ್ಪಿ ನುಡಿದಡೆ ಮಾರಿ,
ನಮ್ಮ ಕೂಡಲಸಂಗಮದೇವರ
ನೆನಹ ಮರೆದಡೆ ಮಾರಿ.

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ;
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.

ಮನೆಯೊಳಗೆ ಮನೆಯೊಡೆಯನಿದ್ದಾನೋ, ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೋ, ಇಲ್ಲವೋ?
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನದೊಳಗೊಡೆಯನಿದ್ದಾನೋ, ಇಲ್ಲವೋ?
ಇಲ್ಲ, ಕೂಡಲಸಂಗಮದೇವಾ