ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ "ಯೋಗ ದಿನ”ದ ಸಂದೇಶ

ಇವತ್ತು (ಜೂನ್ 21) ಒಂಭತ್ತನೆಯ “ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು. ಯೋಗವನ್ನು ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಇದರ ಉದ್ದೇಶ.
ಇಂದಿನ ಶುಭದಿನದಲ್ಲಿ ಜಾಗತಿಕ ಮಟ್ಟದಲ್ಲಿ ಯೋಗದ ಬಗ್ಗೆ ಸಂದೇಶ ನೀಡುವ ಹಿರಿಮೆ ಭಾರತದ ಪ್ರಧಾನ ಮಂತ್ರಿ ಶ್ರೀ ನರೇದ್ರ ಮೋದಿಯವರಿಗೆ ಒದಗಿ ಬಂದದ್ದು ವಿಶೇಷ. ಯು.ಎಸ್.ಎ. ದೇಶದ ಮಹಾನಗರ ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ “ಅಂತರರಾಷ್ಟ್ರೀಯ ಯೋಗ ದಿನ" ಕಾರ್ಯಕ್ರಮದಲ್ಲಿ ಶ್ರೀ ನರೇಂದ್ರ ಮೋದಿಯವರು ತಮ್ಮ ಸಂದೇಶದಲ್ಲಿ ಹೀಗೆಂದು ನುಡಿದರು: "ಯೋಗವು ಜಗತ್ತಿಗೆ ಭಾರತದಿಂದ ಬಂದಿರುವ ಕೊಡುಗೆ. ಯೋಗಕ್ಕೆ ಕಾಪಿರೈಟ್ ಇಲ್ಲ, ಪೇಟೆಂಟ್ ಇಲ್ಲ, ರಾಯಲ್ಟಿ ಇಲ್ಲ. ಇದನ್ನು ಎಲ್ಲರೂ ಅಭ್ಯಾಸ ಮಾಡಬಹುದು. ಮನೆಯಲ್ಲಿ, ಕಚೇರಿಯಲ್ಲಿ ಅಥವಾ ಪ್ರಯಾಣಿಸುವಾಗಲೂ ಯೋಗವನ್ನು ಅಭ್ಯಾಸ ಮಾಡಬಹುದು. ಏಕಾಂಗಿಯಾಗಿ ಅಥವಾ ಇತರರೊಂದಿಗೆ ಅಭ್ಯಾಸ ಮಾಡಬಹುದು. ಯೋಗವನ್ನು ಸ್ವತಃ ಕಲಿಯಬಹುದು ಅಥವಾ ಗುರುವಿನಿಂದ ಕಲಿಯಬಹುದು. ಆದ್ದರಿಂದಲೇ ಯೋಗವು ಸರ್ವಮಾನ್ಯವಾದದ್ದು.”
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ, ಶ್ರೀ ನರೇಂದ್ರ ಮೋದಿಯವರು ತಮ್ಮ ಸಂದೇಶದ ಮುಕ್ತಾಯದಲ್ಲಿ ಇವತ್ತಿನ ಯೋಗದಿನದ ಧ್ಯೇಯವಾಕ್ಯ “ವಸುದೈವ ಕುಟುಂಬ”ದ ಮಹತ್ವವನ್ನು ತಿಳಿಸಿ, "ಯೋಗದಿಂದಾಗಿ ಎಲ್ಲರೂ ಸಂತೋಷವಾಗಿರಲಿ ಮತ್ತು ಆರೋಗ್ಯವಂತರಾಗಲಿ” ಎಂದು ಹಾರೈಸಿದರು. ಅನಂತರ, ಅಲ್ಲಿ ನೆರೆದಿದ್ದ 125 ದೇಶಗಳ ಜನರ ಬೃಹತ್ ಸಮುದಾಯದ ಯೋಗಾಸನಗಳ ಅಭ್ಯಾಸದ ನೇತೃತ್ವ ವಹಿಸಿದರು. ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಭವ್ಯ ಕಾರ್ಯಕ್ರಮದಲ್ಲಿ ನಮ್ಮ ಯೋಗದ ಮಹತ್ವವನ್ನು ಮಗದೊಮ್ಮೆ ಜಗತ್ತಿಗೆ ಸಾರಿದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸಂದೇಶ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸಿದೆ.
ಈ ಸಂದರ್ಭದಲ್ಲಿ ಜಗತ್ತಿನಲ್ಲಿ ಯೋಗವನ್ನು ಜನಪ್ರಿಯಗೊಳಿಸಲು ಬದುಕನ್ನೇ ಮುಡಿಪಾಗಿಟ್ಟ ಭಾರತದ ಕೆಲವು ಯೋಗ ಗುರುಗಳ ಬಗ್ಗೆ ತಿಳಿದುಕೊಳ್ಳೋಣ.
ಯೋಗಾನಂದ ಪರಮಹಂಸ
ಲಕ್ಷಗಟ್ಟಲೆ ಜನರ ಬದುಕನ್ನೇ ಬದಲಾಯಿಸಿದ ಅಧ್ಯಾತ್ಮಿಕ ಗುರು ಯೋಗಾನಂದ ಪರಮಹಂಸರು. ಕ್ರಿಯಾ ಯೋಗ ಧ್ಯಾನದ ಮೂಲಕ ಹಲವರ ಗೌರವಾದರಕ್ಕೆ ಪಾತ್ರರಾದರು. ದೇಹ, ಮನಸ್ಸು ಮತ್ತು ಆತ್ಮಗಳ ಉನ್ನತಿ ಹಾಗೂ ಸಮತೋಲನದ ಆರೋಗ್ಯ - ಇವು ಕ್ರಿಯಾ ಯೋಗ ಧ್ಯಾನದ ಅಂತಃಸತ್ವವಾಗಿದೆ.
ತಿರುಮಲೈ ಕೃಷ್ಣಮಾಚಾರ್ಯ
ಇವರು “ಆಧುನಿಕ ಯೋಗದ ಪಿತಾಮಹ” ಎಂದೇ ಸುಪ್ರಸಿದ್ಧರು. ಯೋಗಾಸನಗಳು ಮತ್ತು ಪ್ರಾಣಾಯಾಮ ಬಹು ಮುಖ್ಯ ಎಂದವರು. ಯಾಕೆಂದರೆ ದೇಹ ಆರೋಗ್ಯಪೂರ್ಣ ಆಗಿಲ್ಲದಿದ್ದರೆ, ಮನಸ್ಸು ವಿಕಸನ ಹೊಂದಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು.
ಕೆ. ಪಟ್ಟಾಭಿ ಜೋಯಿಸ್
ಅಷ್ಟಾಂಗ ಯೋಗದ ಸ್ಥಾಪಕರು ಇವರು. ಜಗತ್ತಿನಲ್ಲಿ ಲಕ್ಷಾಂತರ ಜನರು ಅನುಸರಿಸುವ ಈ ಯೋಗವು ದೈಹಿಕವಾಗಿ ಕಠಿಣವಾದದ್ದು.
ಬಿ.ಕೆ.ಎಸ್. ಅಯ್ಯಂಗಾರ್
ಇವರು ಜಗತ್ಪ್ರಸಿದ್ಧ ಯೋಗಗುರುಗಳು. ಇವರ ಪೂರ್ಣ ಹೆಸರು ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್. ತನ್ನದೇ ಆರೋಗ್ಯ ಹದಗೆಟ್ಟಾಗ ಯೋಗಗುರುಗಳಾದ ತಿರುಮಲೈ ಕೃಷ್ಣಮಾಚಾರ್ಯ ಅವರಿಂದ ಯೋಗ ಕಲಿತರು. ಅನಂತರ ಅದರ ಪ್ರಸಾರಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸಿದರು. ಇವರು ಬರೆದಿರುವ “ಯೋಗದೀಪಿಕಾ" ಮತ್ತು ಇತರ ಯೋಗಾಸನಗಳ ಬಗೆಗಿನ ಅತ್ಯುಪಯುಕ್ತ ಪುಸ್ತಕಗಳ ಲಕ್ಷಗಟ್ಟಲೆ ಪ್ರತಿಗಳು ಮಾರಾಟವಾಗಿವೆ. ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ವ್ಯಕ್ತಿಗಳಿಗೆ ಯೋಗ ಕಲಿಸಿದ ಹೆಗ್ಗಳಿಕೆ ಇವರದು. ಯೆಹೂದಿ ಮೆನುಹಿನ್, ಬೆಲ್ಜಿಯಂ ರಾಣಿ ಎಲಿಜಬೆತ್, ಕಾದಂಬರಿಕಾರ ಅಲ್-ಡೌಸ್ ಹಕ್ಸ್-ಲಿ ಇವರಿಂದ ಯೋಗ ಕಲಿತ ಕೆಲವರು.
ಮಹರ್ಷಿ ಮಹೇಶ ಯೋಗಿ
ಟ್ರಾನ್ಸ್-ಡೆಂಟಲ್ ಧ್ಯಾನ ವಿಧಾನವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದವರು ಇವರು. ದೇಹ ಮತ್ತು ಮನಸ್ಸನ್ನು ರಿಲಾಕ್ಸ್ ಮಾಡಿ ಪ್ರಜ್ನೆಯನ್ನು ಉನ್ನತಿಗೊಳಿಸುವ ಈ ವಿಧಾನವು ಪರಿಣಾಮಕಾರಿ. ಬ್ರಿಟನ್, ಯು.ಎಸ್.ಎ., ಕೆನಡಾ ಮತ್ತು ಸ್ವಿಟ್ಜರ್-ಲ್ಯಾಂಡ್ ದೇಶಗಳಿಗೆ 1950 - 1960ರಲ್ಲಿ ಭೇಟಿಯಿತ್ತು ಸಾವಿರಾರು ಜನರಿಗೆ ಈ ವಿಧಾನವನ್ನು ಕಲಿಸಿದರು.
ಫೋಟೋ: ನ್ಯೂಯಾರ್ಕಿನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ 21-6-2023