ವಿಶ್ವಾಸಾರ್ಹತೆ ಮುಖ್ಯ

ವಿಶ್ವಾಸಾರ್ಹತೆ ಮುಖ್ಯ

ಗ್ರಾಮೀಣ ಭಾರತದಲ್ಲಿ ಆರ್ಥಿಕತೆಯ ಜೀವನಾಡಿಯಾಗಿರುವ ಸಹಕಾರ ಸಂಘ, ಸಂಸ್ಥೆಗಳು ಮತ್ತು ಸಹಕಾರ ಬ್ಯಾಂಕುಗಳು ಕೂಡ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಮೋಸದಂಥ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದು ವಿಪರ್ಯಾಸದ ಬೆಳವಣಿಗೆ. ಆರ್ಥಿಕ ಒಳಗೊಳ್ಳುವಿಕೆಯ ಜಾಲವನ್ನು ಬಲಪಡಿಸಲು ಸಹಕಾರ ತತ್ತ್ವಕ್ಕಿಂತ ಪರಿಣಾಮಕಾರಿ ಮಾಧ್ಯಮ ಬೇರೆ ಇಲ್ಲ. ಜನರ ವಿಶ್ವಾಸಾರ್ಹತೆ ಉಳಿಸಿ, ಬೆಳೆಸಿಕೊಳ್ಳಬೇಕಿದ್ದ ಸಹಕಾರಿ ರಂಗ ತನ್ನದೇ ಅಪಸವ್ಯಗಳಿಂದ ಸೊರಗುತ್ತಿದೆ. ಅಭಿವೃದ್ಧಿಯ ಹಾದಿಯಿಂದ ವಿಮುಖವಾಗುತ್ತಿದೆ. ಲೆಕ್ಕಪತ್ರಗಳಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲ ಮಹತ್ತರವಾದ ಕ್ರಮಗಳಿಗೆ ಮುಂದಾಗಿದೆ. ‘ಸಹಕಾರ ಇಲಾಖೆಯಲ್ಲಿ ಲೆಕ್ಕ ಪರಿಶೋಧನೆಯನ್ನು ಇಲಾಖೆ ವತಿಯಿಂದ ಕೈಗೊಳ್ಳಲು ಅನುಕೂಲವಾಗುವಂತೆ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಖಾಲಿ ಇರುವ ೪೦೨ ಲೆಕ್ಕ ಪರಿಶೋಧಕರ ಹುದ್ದೆಯನ್ನು ಭರ್ತಿ ಮಾಡಲಾಗುವುದು. ಈಗಾಗಲೇ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ' ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ. ಎಲ್ಲ ಸಂಘಗಳಲ್ಲಿ ಲೆಕ್ಕ ಪರಿಶೋಧನೆಯನ್ನು ಪಾರದರ್ಶಕವಾಗಿ, ಕಟ್ಟುನಿಟ್ಟಾಗಿ ಮಾಡಲು ಮಾರ್ಗಸೂಚಿ ಸಿದ್ಧ ಪಡಿಸಿ ಬಿಡುಗಡೆ ಮಾಡಲಾಗುವುದು ಸಕಾಲಿಕ ಕ್ರಮ. ಇದರಿಂದಾಗಿ ಇಲಾಖಾ ಲೆಕ್ಕ ಪರಿಶೋಧಕರು ಗುಣಮಟ್ಟದ ಆಡಿಟ್ ಮಾಡಿಸಲು ಅನುವಾಗಲಿದೆ. ಅಲ್ಲದೆ, ಸರಿಯಾಗಿ ಆಡಿಟ್ ಮಾಡಿಸದ ಸುಮಾರು ೬೦ ಸಹಕಾರ ಸಂಘಗಳನ್ನು ರದ್ದು ಮಾಡಲಾಗಿರುವುದು ಗಮನಾರ್ಹ.

ಹಲವು ಸಹಕಾರಿ ಬ್ಯಾಂಕುಗಳು, ಸಂಘಗಳು ಮೂಲ ಉದ್ದೇಶವನ್ನು ಗಾಳಿಗೆ ತೂರಿ, ಅನರ್ಹ ವ್ಯಕ್ತಿ/ಸಂಸ್ಥೆಗಳಿಗೆ ಭದ್ರತೆಯಿಲ್ಲದೆ ಸಾಲ ನೀಡಿ, ಸ್ವಜನಪಕ್ಷಪಾತ, ಅವ್ಯವಹಾರ, ನಕಲಿ ಖಾತೆಗಳ ಸೃಷ್ಟಿ. ರಾಜ್ಯ ಸರ್ಕಾರಗಳ ಹಸ್ತಕ್ಷೇಪ, ರಾಜಕೀಯ ಪ್ರಭಾವದಿಂದಾಗಿ ಹತ್ತಾರು ಅಕ್ರಮಗಳಿಗೆ ಕೈಹಾಕಿದವು. ಇದರಿಂದ ಠೇವಣಿದಾರರು ಬೀದಿಗೆ ಬಿದ್ದರು. ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್, ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್, ಮಾಧವಪುರ ಮರ್ಚೆಂಟೈಲ್ ಕೋ ಆಪರೇಟಿವ್ ಬ್ಯಾಂಕ್, ಕೃಷಿ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್, ಚಾರ್ಮಿನಾರ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್, ನಾಗ್ಪುರ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಹೀಗೆ ಹಲವು ಬ್ಯಾಂಕ್ ಗಳು ಹಗರಣದಲ್ಲಿ ಸಿಲುಕಿಕೊಂಡಿವೆ. ಇವುಗಳನ್ನು ನಂಬಿದ್ದ ಗ್ರಾಹಕರೀಗ ಕೋರ್ಟ್-ಕಚೇರಿ ಅಲೆಯುವಂತಾಗಿದೆ. ರಾಜ್ಯ ಸರಕಾರವು ‘ಅನಿಯಂತ್ರಿತ ಠೇವಣಿ ಸಂಗ್ರಹ (ನಿಯಂತ್ರಣ) ಕಾಯ್ದೆ' ರೂಪಿಸಿದ್ದು, ಆ ಮುಖೇನ ಅವ್ಯವಹಾರಗಳನ್ನು ಕೊನೆಗಾಣಿಸಲು ಹೊರಟಿರುವುದು ಉತ್ತಮ ಬೆಳವಣಿಗೆ. ಖಾಸಗಿ/ಸಹಕಾರಿ ಬ್ಯಾಂಕುಗಳ ಎಲ್ಲ ವ್ಯವಹಾರಗಳನ್ನು ರಿಸರ್ವ್ ಬ್ಯಾಂಕ್ ಪರಿಧಿಯಲ್ಲಿಡುವ ‘ಬ್ಯಾಂಕಿಂಗ್ ನಿಯಂತ್ರಕ ತಿದ್ದುಪಡಿ ಮಸೂದೆ-೨೦೨೦’ ಕೂಡ ಪರಿಣಾಮಕಾರಿ ಹೆಜ್ಜೆಯಾಗಿದೆ. ದೇಶದಲ್ಲೀಗ ೧೯೩೪ ಸಹಕಾರಿ ಬ್ಯಾಂಕುಗಳಿದ್ದು, ಕಳೆದೆರಡು ದಶಕಗಳಲ್ಲಿ ಅವ್ಯವಹಾರ, ಹಣಕಾಸು ಕೊರತೆ ಕಾರಣಗಳಿಂದಾಗಿ ೪೩೦ ಸಹಕಾರಿ ಬ್ಯಾಂಕುಗಳ ಪರವಾನಗಿ ರದ್ದುಗೊಳಿಸಲಾಗಿದೆ. ಅದೇನಿದ್ದರೂ, ಸಹಕಾರಿ ಬ್ಯಾಂಕುಗಳು ಮತ್ತು ಸಂಘ, ಸಂಸ್ಥೆಗಳು ಕೊರತೆ, ಭ್ರಷ್ಟಾಚಾರವನ್ನು ದೂರವಾಗಿಸಿ ಗ್ರಾಹಕರ ವಿಶ್ವಾಸಾರ್ಹತೆ ಕಾಯ್ದುಕೊಳ್ಳಲು ಮೊದಲ ಆದ್ಯತೆ ನೀಡಬೇಕು. ಆಗಲೇ, ಸಹಕಾರ ರಂಗದ ನೈಜ ಉದ್ದೇಶ, ಆಶಯ ಈಡೇರಲು, ಜನರಿಗೆ ನಿಜಾರ್ಥದಲ್ಲಿ ನೆರವಿಗೆ ಬರಲು ಸಾಧ್ಯ. 

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ. ೧೬-೦೨-೨೦೨೨

ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ