ವಿಶ್ವಾಸ...!

ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ ನಾನು ವಿಮಾನ ನಿಲ್ದಾಣ ತಲುಪುವಾಗ ತುಂಬಾನೇ ತಡವಾಗಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಮಜಾಯಿಶಿ ಕೊಟ್ಟು ಕಡೆಗೂ ವಿಮಾನ ಹತ್ತುವಾಗ ನಾನು ಬೆವರಿ ಹೋಗಿದ್ದೆ. ವಿಮಾನದ ಒಳಗಡೆ ಪ್ರವೇಶಿಸುವಾಗ ಎಲ್ಲರೂ ನನ್ನತ್ತ ನೋಡಿದರು. ನಾನು ನನ್ನ ಸೀಟು ಹುಡುಕಾಡಿ, ನನ್ನ ಬ್ಯಾಗ್ ಅನ್ನು ಲಗೇಜ್ ಇಡುವಲ್ಲಿಟ್ಟು ಸೀಟಲ್ಲಿ ಕುಳಿತು ಸ್ವಲ್ಪ ಸುಧಾರಿಸಿಕೊಂಡೆ. ನಿಧಾನವಾಗಿ ನನ್ನ ಸುತ್ತ ಮುತ್ತಲಿನವರತ್ತ ಗಮನ ಹರಿಸಿದೆ. ನನ್ನ ಬದಿಯ ಸೀಟಿನಲ್ಲಿ ಓರ್ವ ಪುಟ್ಟ ಹುಡುಗಿ ಕುಳಿತಿದ್ದಳು. ನನ್ನ ಮತ್ತೊಂದು ಬದಿಯಲ್ಲಿ ಓರ್ವ ವಯಸ್ಸಾದ ಅಜ್ಜಿ ಕುಳಿತಿದ್ದರು. ಹುಡುಗಿ ತದೇಕ ಚಿತ್ತದಿಂದ ಬಣ್ಣದ ಪೆನ್ಸಿಲ್ ನಿಂದ ಒಂದು ಪುಸ್ತಕದಲ್ಲಿ ಡ್ರಾಯಿಂಗ್ ಮಾಡುತ್ತಿದ್ದಳು.
ಹುಡುಗಿ ಮುದ್ದಾಗಿದ್ದಳು, ನನ್ನ ಮಗಳ ಪ್ರಾಯದವಳೇ ಆಗಿದ್ದಾಳು ಅಂತ ಅನಿಸಿತು. ಅವಳ ಗಮನವನ್ನು ನನ್ನತ್ತ ಸೆಳೆಯುವ ಪ್ರಯತ್ನ ಮಾಡಿದೆ. ಆದರೆ ಅವಳು ಡ್ರಾಯಿಂಗ್ ಮಾಡುವುದರಲ್ಲಿ ತುಂಬಾನೇ ಮಗ್ನಳಾಗಿದ್ದಳು. ನಾನೇ ಮಾತನಾಡಿದೆ
‘ನಿನಗೆ ಡ್ರಾಯಿಂಗ್ ಮಾಡುವುದು ತುಂಬಾ ಇಷ್ಟ ಅನಿಸುತ್ತೆ ಅಲ್ಲವೇ?’ ಅಂದೆ.
ಅವಳು ತಲೆಯೆತ್ತದೇ ‘ಹೌದು ಅಂಕಲ್, ಡ್ರಾಯಿಂಗ್ ಜೊತೆಗೆ ಕಾರ್ಟೂನ್ ನೋಡುವುದೂ ನನಗಿಷ್ಟ.’ ಎಂಬ ಉತ್ತರ ಮಧುರವಾಗಿ ಕೇಳಿ ಬಂತು.
‘ನಿನಗೆಷ್ಟು ವರ್ಷ? ‘ ಎಂದೆ ನಾನು. ‘ಎಂಟು' ಅಂದಳು ಆ ಹುಡುಗಿ. ‘ಹೋ, ನನ್ನ ಮಗಳದ್ದೇ ವಯಸ್ಸು' ಎಂದು ನಾನು ಮನದಲ್ಲೇ ಅಂದುಕೊಂಡೆ. ಅವಳು ಪುಟ್ಟ ಬೆಕ್ಕಿನ ಮರಿಯ ಚಿತ್ರ ಬಿಡಿಸುತ್ತಿದ್ದಳು. ‘ನಿನಗೆ ಬೆಕ್ಕಿನ ಮರಿ ಇಷ್ಟಾನಾ ?’ ಎಂದೆ ನಾನು.
‘ನನಗೆ ಬೆಕ್ಕಿನ ಮರಿ, ನಾಯಿ ಮರಿ ಮತ್ತು ಕುದುರೆ ಇಷ್ಟ.’ ಅಂದಳು ಪೋರಿ.
ಅವಳ ಸುತ್ತಮುತ್ತ ಯಾರೂ ಅವಳನ್ನು ವಿಚಾರಿಸಿಕೊಳ್ಳದ ಕಾರಣ, ಅವಳು ಒಬ್ಬಳೇ ಪ್ರಯಾಣ ಮಾಡುತ್ತಿದ್ದಾಳೆ ಎಂದು ಅಂದುಕೊಂಡೆ. ನಿನ್ನ ಜೊತೆ ಯಾರೂ ಇಲ್ಲವೇ ಎಂದು ಅವಳಲ್ಲಿ ಕೇಳುವಷ್ಟರಲ್ಲೇ, ಧ್ವನಿವರ್ಧಕದಲ್ಲಿ ಪೈಲೆಟ್ ಧ್ವನಿ ಕೇಳಿಸಿತು.
‘ಪ್ರಯಾಣಿಕರೇ, ಕೆಟ್ಟ ಹವಾಮಾನದ ಕಾರಣ ವಿಮಾನ ಸ್ವಲ್ಪ ಸಮಯ ಅಲುಗಾಡುವ ಸಾಧ್ಯತೆ ಇದೆ. ತಾವೆಲ್ಲರೂ ಗಾಭರಿ ಪಡದೇ ತಮ್ಮ ತಮ್ಮ ಸೀಟಿನ ಬೆಲ್ಟ್ ಗಳನ್ನು ಕಟ್ಟಿಕೊಂಡು ಶಾಂತ ರೀತಿಯಲ್ಲಿ ಕುಳಿತುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ವಾತಾವರಣ ಸರಿಯಾದ ಬಳಿಕ ತಮಗೆ ತಿಳಿಸಲಾಗುವುದು'. ಈ ಮಾತು ಕೇಳಿದಾಕ್ಷಣ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರ ಮುಖಗಳು ಬಿಳಚಿಕೊಂಡವು. ಗಾಭರಿಯಲ್ಲಿ ಎಲ್ಲರೂ ಬೆಲ್ಟ್ ಕಟ್ಟಿಕೊಳ್ಳಲಾರಂಭಿಸಿದರು. ನನ್ನ ಇನ್ನೊಂದು ಪಕ್ಕದಲ್ಲಿದ್ದ ಅಜ್ಜಿ ದೇವರನ್ನು ಜೋರಾಗಿ ಪ್ರಾರ್ಥಿಸುವುದು ನನಗೆ ಕೇಳತೊಡಗಿತು. ವಿಮಾನವೂ ಸ್ವಲ್ಪ ಅಲುಗಾಡತೊಡಗಿತು. ನನಗೂ ಮನೆಯಲ್ಲಿದ್ದ ನನ್ನ ಪತ್ನಿ, ಮಗಳನ್ನು ನೆನೆದು ಮನಸ್ಸಿನಲ್ಲಿ ಕಸಿವಿಸಿಯಾಗತೊಡಗಿತು. ನನ್ನ ಇಷ್ಟದ ದೇವರನ್ನು ನಾನೂ ಮನದಲ್ಲೇ ಪ್ರಾರ್ಥಿಸತೊಡಗಿದೆ. ತಕ್ಷಣ ನನಗೆ ನನ್ನ ಹತ್ತಿರದ ಸೀಟಿನ ಪುಟ್ಟ ಹುಡುಗಿಯ ನೆನಪಾಯ್ತು. ಅವಳೆಷ್ಟು ಹೆದರಿರಬಹುದು, ಸ್ವಲ್ಪ ಧೈರ್ಯ ಹೇಳಬೇಕು ಎನ್ನುತ್ತಾ ಅವಳ ಕಡೆ ನೋಡಿದೆ.
ಆ ಹುಡುಗಿ ತನ್ನ ಡ್ರಾಯಿಂಗ್ ಬುಕ್ ನ್ನು ಮಡಚಿ ಸೀಟ್ ಎದುರುಗಡೆ ಇದ್ದ ಕವರ್ ನೊಳಗೆ ಹಾಕಿ, ಸೀಟು ಬೆಲ್ಟ್ ಕಟ್ಟಿಕೊಂಡು ತನ್ನ ಕೈಗಳನ್ನು ಕಾಲಿನ ಮೇಲೆ ಇಟ್ಟು ಆರಾಮದಿಂದ ಸೀಟಿಗೆ ಒರಗಿಕೊಂಡಿದ್ದಳು. ಅವಳ ಮುಖದಲ್ಲಿ ಯಾವುದೇ ಗಾಭರಿಯಾಗಲೀ, ಆತಂಕವಾಗಲೀ ಕಾಣಿಸುತ್ತಿರಲಿಲ್ಲ. ನನಗೆ ಬಹಳ ಆಶ್ಚರ್ಯವಾಯಿತು.
ಅಷ್ಟರಲ್ಲೇ ಮತ್ತೆ ಪೈಲೆಟ್ ಧ್ವನಿ ಕೇಳಿಸತೊಡಗಿತು “ಪ್ರಯಾಣಿಕರೇ, ವಾತಾವರಣ ತಿಳಿಯಾಗಿದೆ. ಕೆಟ್ಟ ಹವಾಮಾನವನ್ನು ನಾವು ದಾಟಿಹೊರಬಂದಿದ್ದೇವೆ. ನೀವು ಮೊದಲಿನಂತೆ ಸೀಟು ಬೆಲ್ಟ್ ಬಿಚ್ಚಿಟ್ಟು, ಆರಾಮವಾಗಿರಬಹುದು. ತಾವು ತೋರಿದ ಸಹಕಾರಕ್ಕೆ ಧನ್ಯವಾದಗಳು'
ಈ ಮಾತು ಕೇಳಿ ನಾನು ನಿರಾಳನಾದೆ. ಹುಡುಗಿಯ ನಿರಾಳತೆಯ ಬಗ್ಗೆ ಕುತೂಹಲವಿದ್ದ ನಾನು ಕೂಡಲೇ ಅವಳ ಬಳಿ ಮುಖ ಮಾಡಿ ಕೇಳಿದೆ ‘ಅಲ್ಲಾ ಪುಟ್ಟಿ, ವಿಮಾನ ಇಷ್ಟೊಂದು ಅಲುಗಾಡುತ್ತಿರುವಾಗ ನಿನಗೆ ಹೆದರಿಕೆಯಾಗಲಿಲ್ಲವೇ? ನಿನ್ನ ಜೊತೆಯಲ್ಲಿ ಸಹಾ ಯಾರೂ ಇಲ್ಲ'
ಹುಡುಗಿ ಮುಖದಲ್ಲಿ ಸಣ್ಣ ನಗು ಅರಳಿಸಿ ಹೇಳಿದಳು ‘ಹೆದರಿಕೆ ಯಾಕೆ ಅಂಕಲ್? ವಿಮಾನದ ಪೈಲೆಟ್ ನನ್ನ ಅಪ್ಪ !’
(ಅಂತರ್ಜಾಲ ತಾಣದಲ್ಲಿ ಕಂಡು ಬಂದ ಆಂಗ್ಲ ಬರಹದ ಭಾವಾನುವಾದ)
ಚಿತ್ರ ಕೃಪೆ: ಅಂತರ್ಜಾಲ ತಾಣ