ವಿಶ್ವೇಶ್ವರಯ್ಯ ಮ್ಯೂಸಿಯಂ ನೋಡಿದ್ದೀರಾ?

ವಿಶ್ವೇಶ್ವರಯ್ಯ ಮ್ಯೂಸಿಯಂ ನೋಡಿದ್ದೀರಾ?

ಬರಹ

ಯಾವುದೇ ವಸ್ತು ಸಂಗ್ರಹಾಲಯಕ್ಕೆ ಹೋದರೂ ಅಲ್ಲಿ ನೀವು ಕಾಣುವ ಮೊದಲ ಸೂಚನೆ "Dont Touch' ಆದರೆ ಯುರೋಪಿನ ದೇಶಗಳ ಮ್ಯೂಸಿಯಂಗಳಲ್ಲಿ "Do It Yourself' ಎಂದಿರುತ್ತದೆ. ಆದರೆ ನಮ್ಮಲ್ಲೂ ಅಂಥದ್ದೇ ಒಂದು ಮ್ಯೂಸಿಯಂ ಇದೆ ಎಂದು ನನಗೆ ಗೊತ್ತಾದದ್ದು ಮೊನ್ನೆ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗಲೇ. ಮೊದಲಿಗೆ ನನಗೆ ಆಶ್ಚರ್ಯವಾಗಿದ್ದು ,ಅಲ್ಲಿ ಎಲ್ಲಾ ಮ್ಯೂಸಿಯಂಗಳಲ್ಲಿ ಕಾಣುವಂಥ ಘನಗಂಭೀರ ಮುಖಗಳು ಕಾಣದೇ, ಫನ್‌ವರ್ಲ್ಡ್‌ನಲ್ಲಿರುವಂತೆ ಮಕ್ಕಳ ನಗು, ಕೇಕೆ ಕಂಡಿದ್ದು. ನೂರಾರು ಮಕ್ಕಳು, ಆ ಬೃಹತ್ ವಿಜ್ಞಾನ, ತಂತ್ರಜ್ಞಾನದ ಎದುರು ಮಕ್ಕಳೇ ಆಗಿರುವ ದೊಡ್ಡವರೂ ಬೆರಗಿನಿಂದ ಅಗಲವಾದ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. 'ಅದು ಹೇಗೆ ಹೀಗಾಗತ್ತಪ್ಪ?' ಎನ್ನುವ ಮಕ್ಕಳ ಪ್ರಶ್ನೆಗೆ ಅಲ್ಲಿರುವ ವಿವರಣೆ ಓದಿ ತಿಳಿ ಹೇಳುವ ಪ್ರಯತ್ನದಲ್ಲಿದ್ದರು. ಆದರೆ ಅಲ್ಲಿ 'ಅದನ್ನು ಮುಟ್ಟಬೇಡಿ', 'ಇದಕ್ಕೆ ಕೈ ತಾಕಿಸಬೇಡಿ' ಎನ್ನುವವರ್ಯಾರೂ ಇರಲೇ ಇಲ್ಲ.
ಮ್ಯೂಸಿಯಂನ ಹೊರಭಾಗದಲ್ಲಿರುವ ವಿಮಾನ, ರಾಕೆಟ್, ಡೈನೋಸಾರಸ್ ಮಕ್ಕಳನ್ನಾಗಲೇ ಚುಂಬಕದಂತೆ ಸೆಳೆದಿದ್ದವು. ಒಳ ಹೊಕ್ಕೊಡನೆ ಬೃಹತ್ ಡೈನೋಸಾರಸ್ ಕುಟುಂಬದ ಸ್ಪೈನೊಸಾರಸ್ ಘೀಳಿಡುತ್ತಾ ಎದುರುಗೊಂಡಿತು. ಅಲ್ಲಿಂದ ಮುಂದೆ ಹೋಗಲೊಪ್ಪದ ಮಕ್ಕಳನ್ನು ಬಲವಂತವಾಗಿ ಮುಂದಿನ ಕೊಠಡಿಗೆ ಕರೆದುಕೊಂಡು ಹೋಗಬೇಕಾಯಿತು. "ಇಂಜಿನ್ ಹಾಲ್"ನಲ್ಲಿ ವಿವಿಧ ಯಂತ್ರಗಳ ಸರಳ ಉಪಯೋಗಗಳ ಡೆಮೊ ಕುತೂಹಲ ಕೆರಳಿಸುವಂತಿದೆ. ಕಬ್ಬಿಣದ ಸರಳುಗಳ ಮಧ್ಯೆ ನಿರಂತರವಾಗಿ ಸುತ್ತುವ , ಎಲ್ಲಿಂದಲೋ ಜಾರಿ ಎಲ್ಲೋ ಹಾರಿ ಬುಟ್ಟಿಯೊಳಗೆ ಬಂದು ಬೀಳುವ ಚೆಂಡುಗಳನ್ನು ಕಣ್ಣರಳಿಸಿಕೊಂಡು ನೋಡುತ್ತಿದ್ದರು. ಸಿನಿಮಾಸಕ್ತರಿಗೆ " ಅಪ್ಪು ರಾಜಾ’ ದಲ್ಲಿ ಕಮಲ್ ಹಸನ್ ಕೇವಲ ಒಂದು ಚೆಂಡನ್ನು ಬಳಸಿ ಕೇಡಿಗನನ್ನು ಕೊಲ್ಲುವ ತಂತ್ರವನ್ನು ನೆನಪಾದರೆ ಆಶ್ಚರ್ಯವಿಲ್ಲ. ಇಲ್ಲಿ ಬೇರೆಲ್ಲೂ ನೋಡಲು ಸಿಗದ ರೈಟ್ ಸಹೋದರರು ನಿರ್ಮಿಸಿದ ಮೊದಲ ವಿಮಾನದ ಪ್ರತಿಕೃತಿಯೂ ಇದೆ.
ಎರಡನೇ ಅಂತಸ್ತಿನ "ಎಲೆಕ್ಟ್ರೋ ಟೆಕ್ನಿಕ್ ಗ್ಯಾಲೆರಿ"ಯಂತೂ ಅಚ್ಚರಿಗಳ ಸಂತೆ. ತಳವೇ ಇಲ್ಲದ ಬಾವಿ, ಎಲ್ಲೋ ಪಿಸುಗುಟ್ಟಿದರೆ ಇನ್ನೆಲ್ಲೋ ಕಿವಿಗೊಟ್ಟು ಆಲಿಸಬಹುದಾದ ತಂತ್ರ, ದೃಷ್ಟಿ ಭ್ರಮೆ ಹುಟ್ಟಿಸುವ ವಿವಿಧ ಆಟಗಳು, ದೇಹ ತೂಕದ ಜತೆಗೆ ಅದರಲ್ಲಿರುವ ನೀರಿನ ತೂಕವನ್ನೂ ತಿಳಿಸುವ ಯಂತ್ರ, ನಮ್ಮದೇ ಬೆನ್ನನ್ನು ಕಣ್ಣೆದುರು ತೋರಿಸುವ ಕನ್ನಡಿ, ಒಂದೇ ಎರಡೇ. ವಿವಿಧ ಗ್ರಹಗಳ ಮೇಲೆ ನಮ್ಮ ತೂಕ ಎಷ್ಟು ಎಂದು ತೋರಿಸುವ ಯಂತ್ರ ನೋಡುಗರಲ್ಲಿ ಆ ಬಗ್ಗೆ ಕುತೂಹಲ ಹುಟ್ಟಿಸುವುದು ಖಂಡಿತ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವಿವಿಧ ಆಟಗಳ ಮೂಲಕ ಕಂಪ್ಯೂಟರ್ ಹೇಗೆ ಸ್ಪರ್ಶವನ್ನು ಗಮನಿಸುತ್ತದೆ ಎಂದು ತೋರಿಸುವುದೂ ಒಳ್ಳೇ ಪ್ರಯೋಗ.
ಈಗೆರೆಡು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ "ಬಾಲ ವಿಜ್ಞಾನ" ವಿಭಾಗದಲ್ಲಿ ಕುಳ್ಳಗಾಗಿ, ದಪ್ಪವಾಗಿ, ಉದ್ದವಾಗಿ ತೋರುವ ಕನ್ನಡಿಗಳು, ನಡೆದರೆ ನುಡಿಯುವ ಪಿಯಾನೊ ಇರುವ ಜಾಗವನ್ನೇ ಮರೆಸಿಬಿಡಬಲ್ಲವು. ಅಲ್ಲಿರುವ ೩ಈ ಚಿತ್ರಮಂದಿರದಲ್ಲಿ ವಿಶೇಷ ಕನ್ನಡಕ ಧರಿಸಿಕೊಂಡು ಚಿತ್ರ ನೋಡುವಾಗ ಮಕ್ಕಳಿರಲಿ, ದೊಡ್ಡವರೂ ಬೆರಗಾಗುವುವುದು ಅವರ ಕೇಕೆ, ಉದ್ಗಾರದಲ್ಲೇ ಗೊತ್ತಾಗುತ್ತಿತ್ತು.
ಸರ್. ಎಂ. ವಿಶ್ವೇ ಶ್ವರಯ್ಯನವರ ಜನ್ಮಶತಮಾನೋತ್ಸವದ ಅಂಗವಾಗಿ ೧೯೬೨ ಈ ಸಂಗ್ರಹಾಲಯವನ್ನು ಸ್ಥಾಪಿಸಿದ್ದಾದರೂ ಅಪ್‌ಡೇಟ್ ಆಗುತ್ತಿದೆ ಎನ್ನುವುದಕ್ಕೆ ಅಲ್ಲಿ ಸಾಕ್ಷಿಗಳಿದ್ದವು. ಪ್ರತಿ ದಿನ ನೂರಾರು ವೀಕ್ಷಕರಿರುವ , ಪ್ರತಿ ವಸ್ತುವನ್ನೂ ಮುಟ್ಟಿ, ತಟ್ಟಿ ನೋಡುವ ಈ ಸಂಗ್ರಹಾಲಯವನ್ನು ನೋಡಿಕೊಳ್ಳುವುದು ಸಾಮಾನ್ಯದ ಮಾತಲ್ಲ. ಆ ಕೆಲಸವನ್ನು ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯ ಸೊಸೈಟಿಯು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಬಹು ಅಂತಸ್ತಿನ ಕಟ್ಟಡದಲ್ಲಿ ಲಿಫ್ಟ್ ಇಲ್ಲ ಎನ್ನುವುದೊಂದು ಕೊರತೆ. ಆದರೂ ಅಲ್ಲಲ್ಲಿ ಕೂರಲು ಕುರ್ಚಿಗಳು, ಸ್ವಚ್ಛ ಶೌಚಾಲಯಗಳೂ ನೋಡುಗರನ್ನು ಹಗುರಾಗಿಸುತ್ತವೆ. ಮೇಲಂತಸ್ತನಲ್ಲಿರುವ ಕ್ಯಾಂಟೀನ್ ಮಾತ್ರ ಕೊಂಚ ದುಬಾರಿಯೇ.
ನಮ್ಮೊಂದಿಗೆ ವಿವಿಧ ವಯಸ್ಸಿನ ಮಕ್ಕಳನ್ನು ಕರೆದುಕೊಂಡು, "ಮಕ್ಕಳಿಗೆ ಬೋರ್ ಆಗುತ್ತದೆಯೇನೋ, ಆದರೂ ಇವನ್ನೆಲ್ಲಾ ತಿಳಿದಿರಬೇಕು" ಎಂದು ದೊಡ್ಡವರ ಪೋಸ್ ಕೊಡುತ್ತಾ ಬಂದಿದ್ದ ನಮಗೂ ಇದು ವಿಶಿಷ್ಟ ಅನುಭವ. ವಿವರವಾಗಿ ನೋಡಲು ಇಡೀ ದಿನ ಸಾಲದು. ಭಾನುವಾರವೂ ತೆರೆದಿರುತ್ತದೆ ಎನ್ನುವುದು ಪ್ಲಸ್ ಪಾಯಿಂಟ್. ನೀವು ನೋಡಿಲ್ಲದಿದ್ದರೆ ಒಮ್ಮೆ ಭೇಟಿ ನೀಡಲೇಬೇಕಾದ ಸ್ಥಳವಿದು. ನಿಮ್ಮೊಡನೆ ಮಕ್ಕಳಿದ್ದರೆ ಭೇಟಿ ಇನ್ನಷ್ಟು ಸಾರ್ಥಕ.
ವಿಳಾಸ: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ. ಕಸ್ತೂರಬಾ ರಸ್ತೆ. ಬೆಂಗಳೂರು.