ವಿಶ್ವ ಅಂಚೆ ದಿನದಂದು ಅಂಚೆಯಣ್ಣನ ನೆನೆಯಿರಿ !
![](https://saaranga-aws.s3.ap-south-1.amazonaws.com/s3fs-public/styles/article-landing/public/World%20Post%20Day.png?itok=wMufUDrl)
“ಅಂಚೆಯ ಅಣ್ಣ ಬಂದಿಹೆ ಚಿಣ್ಣ,
ಅಂಚೆಯ ಹಂಚಲು ಮನೆಮನೆಗೆ”
ಈ ಪದ್ಯವನ್ನು ಪ್ರಾಥಮಿಕ ಶಾಲೆಯ ಶಿಕ್ಷಕರು ರಾಗವಾಗಿ ಅಭಿನಯದೊಂದಿಗೆ ಕಲಿಸಿದ ಬಾಲ್ಯದ ದಿನಗಳ ಖುಷಿಯನ್ನು ಮರೆಯಲು ಸಾಧ್ಯವೇ? ಇಂದಿನ ಇಂಟರ್ನೆಟ್ ಯುಗದಲ್ಲಿ ‘ಎಲ್ಲಾ ಬಣ್ಣ ಮಸಿ ನುಂಗಿತು’ ಎಂದಾಗಿದೆ. ಮೊಬೈಲ್ ನಲ್ಲಿ ವಿಶ್ವವೇ ಅಡಗಿದೆ. ಕ್ಷಣದಲ್ಲಿ ಸಂವಹನವಿರುವಾಗ ಪತ್ರಲೇಖನ ಯಾರಿಗೂ ಬೇಡ. ಬರೆಯಲೂ ಪುರುಸೊತ್ತಿಲ್ಲ, ಓದಲೂ ಪುರುಸೊತ್ತಿಲ್ಲ. ಇಂದು ಮನುಷ್ಯಾವಸ್ಥೆ ಎಲ್ಲಿಗೆ ತಲುಪಿದೆಯೆಂದರೆ ಯಾವುದಕ್ಕೂ “ಟೈಮಿಲ್ಲ,ಪುರುಸೊತ್ತಿಲ್ಲ” ಈ ಎರಡು ಪದಗಳಿಗೆ ಸೀಮಿತವಾಗಿದೆ. ದಿನದ ೨೪ ಗಂಟೆ ಸಾಕಾಗುವುದಿಲ್ಲವೆಂಬ ಮಾತುಗಳೂ ಇದೆ.
ಪುರಾಣಕಥೆಗಳಲ್ಲಿ ನಾವು ಓದಿದಂತೆ ಸಂವಹನದ ಮಾಧ್ಯಮ ‘ಪಾರಿವಾಳಗಳಂತೆ’. ಓಲೆಯನ್ನು ಬರೆದು ಪಾರಿವಾಳದ ಕಾಲಿಗೆ ಕಟ್ಟಿ ಹಾರಿಸುತ್ತಿದ್ದರಂತೆ. ದುಷ್ಯಂತ ಶಾಕುಂತಲೆಯ ಕಥೆ ನೆನಪಾಗುತ್ತಿದೆ. ೧೮೭೪ರಲ್ಲಿ ಸ್ವಿಟ್ಜರ್ಲೆಂಡಿನಲ್ಲಿ ಪೋಸ್ಟಲ್ ಯೂನಿಯನ್ ವಾರ್ಷಿಕೋತ್ಸವವನ್ನು ಮೊದಲ ಸಲ ಆಚರಿಸಲಾಯಿತು. ತದನಂತರ ‘ವಿಶ್ವ ಅಂಚೆ ದಿನ’ ವನ್ನು ೧೯೬೯ ರಲ್ಲಿ ಆಚರಿಸಲಾಯಿತು ಎಂಬ ಮಾಹಿತಿ ನೋಡಬಹುದು. ಅಂಚೆಯಣ್ಣ ಹಳ್ಳಿಯ ಮೂಲೆಮೂಲೆ ಮನೆಗಳಿಗೂ ಬಿಸಿಲು, ಮಳೆ ಗಾಳಿ ಎಂದು ನೋಡದೆ ಪತ್ರವನ್ನು, ಮಾಹಿತಿಯನ್ನು ತಲುಪಿಸುತ್ತಾನೆ. ಅನಕ್ಷರಸ್ಥರಾದರೆ ಬಂದ ಪತ್ರವನ್ನು ಅವನ ಕೈಯಲ್ಲೇ ಓದಿಸುತ್ತಿದ್ದರು. ಅಂಚೆಯಣ್ಣನಿಗೂ ಪ್ರತಿ ಮನೆಯ ಯಜಮಾನನಿಗೂ ಅಷ್ಟೊಂದು ನಿಕಟ ಸಂಬಂಧವಿತ್ತು. ಆತ ಗೌರವಕ್ಕೆ ಪಾತ್ರನಾಗಿದ್ದ. ನಾನು ಸಣ್ಣವಳಿರುವಾಗ ಮನೆಯಿಂದ ೨ ಮೈಲು ದೂರದ ಸರಕಾರಿ ಪ್ರಾಥಮಿಕ ಶಾಲೆಗೆ ಗುಡ್ಡಗಾಡಿನ ದಾರಿಯಲ್ಲಿ ಹೋಗುತ್ತಿದ್ದೆ. ನಿತ್ಯವೂ ಅಂಚೆಯಣ್ಣ ಶಾಲೆಗೆ ಬಂದು ಬಟವಾಡೆ ಮಾಡುತ್ತಿದ್ದ ದೃಶ್ಯ ಈಗಲೂ ಕಣ್ಣ ಮುಂದಿದೆ.
ಮೊಬೈಲ್ ಬಂದ ಮೇಲೆ ಪತ್ರ ಬರೆಯುವವರೇ ಇಲ್ಲವೇನೋ ಅನ್ನಿಸ್ತಾ ಇದೆ. ಇತ್ತೀಚೆಗೆ ಪುಸ್ತಕಗಳು,ಯಾವುದಾದರೂ ವಾರ, ಮಾಸ ಪತ್ರಿಕೆಗಳು, ಸ್ಪೀಡ್ ಪೋಷ್ಟ್, ಸುತ್ತೋಲೆಗಳು ಮಾತ್ರ ಅಂಚೆಯ ಮೂಲಕ ಬರ್ತಿದೆ. ಶಾಲಾ ಮಕ್ಕಳಿಗೆ ಶಾಲೆಯಲ್ಲಿ ಪತ್ರ ಲೇಖನ ಕಲಿಸುವುದಿದೆ. ಇರಲಿ ಇಲ್ಲದಿರಲಿ, ಪತ್ರ ಬರೆಯುವ ಕ್ರಮವಾದರೂ ತಿಳಿದಿರಬೇಕಲ್ಲ? ನಮ್ಮ ಮನೆಯ ಮಕ್ಕಳಿಗೆ ಪತ್ರ ಬರೆಯಲು ನಾವೇ ಕಲಿಸೋಣ. ಭಾರತೀಯ ಅಂಚೆಸೇವೆ ವಿಶ್ವದಲ್ಲಿಯೇ ಹೆಸರುವಾಸಿಯಂತೆ. ನಮ್ಮೆಲ್ಲ ಅಂಚೆ ಇಲಾಖೆಯ ಬಂಧುಗಳನ್ನು ಈ ಸಂದರ್ಭದಲ್ಲಿ ಅವರ ಸೇವೆಯನ್ನು ನೆನಪಿಸಿಕೊಂಡು, ಮನದಾಳದ ಧನ್ಯವಾದಗಳನ್ನು ತಿಳಿಸೋಣ.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ