ವಿಶ್ವ ಅರಣ್ಯ ದಿನ ಮಾರ್ಚ್ 21...
ಬಹುಶಃ ಸೃಷ್ಟಿಯಲ್ಲಿ ನೀರಿನ ನಂತರ ಅತಿಹೆಚ್ಚು ಪ್ರಮಾಣದಲ್ಲಿ ಇರುವುದು ಸಸ್ಯ ಸಂಕುಲವೇ ಇರಬೇಕು. ಜೀವಸಂಕುಲದ ಉಸಿರಾಟದ ಮೂಲ ಆಮ್ಲಜನಕ ನೀಡುವುದು ಇದೇ ಸಸ್ಯರಾಶಿ. ಜೀವ ಸಂಕುಲದ ಮೂಲಭೂತ ಅವಶ್ಯಕತೆಗಳಾದ ಗಾಳಿ ನೀರು ಆಹಾರದ ಪ್ರಮುಖ ಭಾಗ ಅರಣ್ಯ ಸಂಪತ್ತು. ಅಂತಹ ಮಹತ್ವದ ಅರಣ್ಯ ದಿನವಿದು. ವ್ಯಾಲೆಂಟೈನ್ ಡೇ, ಫಾದರ್ ಡೇ, ಮದರ್ ಡೇ, ಹೋಲಿ ಫೆಸ್ಟಿವಲ್, ಯುಗಾದಿ, ರಂಜಾನ್, ಕ್ರಿಸ್ಮಸ್ ಎಂದು ಸಂಭ್ರಮದಿಂದ ಆಚರಿಸುವ ಹಿಂದಿನ ಶಕ್ತಿ ನಮ್ಮ ವನ ಸಂಪತ್ತು. ಆದರೆ ಕೃತಜ್ಞತೆ ಇಲ್ಲದ ಮನುಷ್ಯ ಪ್ರಾಣಿ ಇಷ್ಟು ದೊಡ್ಡ ಮಾಧ್ಯಮ ಪ್ರಪಂಚದಲ್ಲಿ ಅರಣ್ಯ ದಿನವನ್ನು ಆಚರಿಸಲು ಸಮಯವು ಇಲ್ಲ ಆಸಕ್ತಿಯೂ ಇಲ್ಲ. ಕನಿಷ್ಠ ಸಂವೇದನೆಯೂ ಇಲ್ಲ.
ನವೀನ್ ಎಂಬ ಯುವಕ ಯುದ್ಧದ ಕಾರಣದಿಂದ ನಿಧನರಾದರು. ಅದಕ್ಕೆ ತುಂಬಾ ವಿಷಾದವಿದೆ. ಆತನ ಮೃತ ದೇಹ ಇಂದು ಮನೆ ತಲುಪಿ ಕೊನೆಯ ವಿಧಿಗಳು ಮುಗಿದವು. ಅವರ ಮನೆಯವರಿಗೆ ದುಃಖ ಭರಿಸುವ ಶಕ್ತಿ ದೊರಕಲಿ. ಅದಕ್ಕಾಗಿ ಇಡೀ ದಿನ ಮಾಧ್ಯಮಗಳು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದವು. ಅದು ಅವರ ಆಯ್ಕೆ. ಆದರೆ ಕನಿಷ್ಠ ಒಂದೈದು ನಿಮಿಷ ಕರ್ನಾಟಕದ ಜನ ಸಮೂಹಕ್ಕೆ ಅರಣ್ಯ ದಿನವನ್ನು ನೆನಪಿಸಿ ಸಸ್ಯ ಜಗತ್ತಿನ ಪ್ರಾಮುಖ್ಯತೆಯ ಪರಿಚಯ ಮಾಡಿಕೊಡುವ ಸೌಜನ್ಯ, ಕರ್ತವ್ಯ, ಜವಾಬ್ದಾರಿ ತೋರಬಹುದಿತ್ತಲ್ಲವೇ ? ಯುದ್ದದಿಂದ ಸಾಯುವುದಕ್ಕಿಂತ ಹೆಚ್ಚು ಜನ ಅರಣ್ಯ ನಾಶದ ದುಷ್ಪರಿಣಾಮಗಳಿಂದ ಸಾಯುತ್ತಿದ್ದಾರೆ. ಆ ಬಗ್ಗೆ ನಮಗೆ ಅರಿವೇ ಇಲ್ಲದಿರುವುದು ಮನುಷ್ಯನ ಮೂರ್ಖತನಕ್ಕೆ ಸಾಕ್ಷಿ.
ಪ್ರವಾಸೋದ್ಯಮ ಹೆಸರಿನಲ್ಲಿ ಹಣಕ್ಕಾಗಿ ರೆಸಾರ್ಟ್ ಜಂಗಲ್ ಲಾಡ್ಜ್ ಕೈಗಾರಿಕಾ ಅಭಿವೃದ್ಧಿ ವಿದ್ಯುತ್ ಉತ್ಪಾದನೆ ಮುಂತಾದ ಕೆಲಸಗಳಿಗಾಗಿ ಕಾಡು ವಿನಾಶದ ಹಾದಿಯಲ್ಲಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ ಭಾರತದಲ್ಲಿ ಕಾಡು ಪ್ರದೇಶ ಹೆಚ್ಚಾಗುತ್ತಿದೆ. ಆದರೆ ವಾಸ್ತವದಲ್ಲಿ ಅದು ಅಂಕಿ ಸಂಖ್ಯೆ ಮಾತ್ರ. ನೈಜತೆ ಭಿನ್ನವಾಗಿದೆ. ಅರಣ್ಯ ಸಂರಕ್ಷಣಾ ನೀತಿಗೆ ತಿದ್ದುಪಡಿ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಅರಣ್ಯಗಳಲ್ಲಿ ರೆಸಾರ್ಟ್ ಮತ್ತು ಕಟ್ಟಡ ಕಟ್ಟಲು ಅನುವು ಮಾಡಿಕೊಡುವ ತಿದ್ದುಪಡಿ ಕರಡು ಸರ್ಕಾರದ ಅನುಮತಿಗಾಗಿ ಸಿದ್ಧವಾಗಿದೆ ಅಥವಾ ಜಾರಿಯಾಗಿದೆ ಎಂಬ ಮಾಹಿತಿ ಕೇಳಲ್ಪಟ್ಟೆ. ಒಂದು ವೇಳೆ ಅದು ನಿಜವೇ ಆಗಿದ್ದರೆ…
ಈಗಾಗಲೇ ಕಾಡು ವಿನಾಶದ ಅಂಚಿನಲ್ಲಿದ್ದು ಪ್ರಾಣಿಗಳು ಅಸ್ತಿತ್ವ ಉಳಿಸಿಕೊಳ್ಳಲೇ ಒದ್ದಾಡುತ್ತಿವೆ. ದಟ್ಟ ಅರಣ್ಯಗಳು ನಿತ್ಯ ಹರಿದ್ವರ್ಣದ ಕಾಡುಗಳು ಅಪರೂಪವಾಗುತ್ತಿವೆ. ಕಾಂಕ್ರೀಟ್ ಕಾಡುಗಳೇ ಎಲ್ಲೆಲ್ಲೂ ರಾರಾಜಿಸುತ್ತಿವೆ. ಬರಗಾಲ ಆಗಾಗ ಕಾಡುತ್ತಲೇ ಇದೆ. ಗಾಳಿ ನೀರು ಕಲ್ಮಶವಾಗಿದೆ. ಕುಡಿದು ಕುಣಿದು ಕುಪ್ಪಳಿಸಿ ಇಸ್ಪೀಟಾಡುತ್ತಾ ಪ್ರಾಣಿಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತಂದು ಅವುಗಳ ವಾಸಸ್ಥಾನನವನ್ನು ಅಕ್ರಮವಾಗಿ ಆಕ್ರಮಿಸಿ ಅತ್ಯಂತ ಅಮಾನವೀಯವಾಗಿ ನಡೆದುಕೊಳ್ಳಲಾಗುತ್ತಿದೆ. ಬಹಳ ಕಠಿಣ ನಿಯಮಗಳು ಇದ್ದಾಗಲೇ ಕಾಡಿನ ನಾಶ ನಿರಂತರವಾಗಿದೆ. ಇನ್ನು ಕಾನೂನಿನ ಮಾನ್ಯತೆ ದೊರಕಿದರೆ ರಿಯಲ್ ಎಸ್ಟೇಟ್ ದಂಧೆಯ ಹಡಬೆ ಹಣದ ಖದೀಮರು ತಮ್ಮ ಅನೈತಿಕ ತೆವಲುಗಳಿಗೆ ಇದನ್ನು ದುರುಪಯೋಗ ಪಡಿಸಿಕೊಳ್ಳದೇ ಇರುತ್ತಾರೆಯೇ?
ನಗರಗಳಲ್ಲಿ ಬಾರುಗಳು ಮಾಲುಗಳು ಪಬ್ಬುಗಳಲ್ಲೇ ಕುಡಿದು ಮಜಾ ಮಾಡಲು ಸಾಧ್ಯವಿರುವಾಗ ಇವರಿಗೆ ಕಾಡಿನ ಸಹವಾಸವೇಕೆ. ಪ್ರಕೃತಿ ಪ್ರಿಯರು ಪರಿಸರ ಪ್ರವಾಸೋದ್ಯಮದ ಆಸಕ್ತರಿಗೆ ಬೇಕಾದರೆ ಕಾಡಿಗೆ ಅಲ್ಲಿನ ಜೀವಜಂತುಗಳಿಗೆ ಅವುಗಳ ಸ್ವಾತಂತ್ರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಒಂದು ಕ್ರಮಬದ್ಧ ವ್ಯವಸ್ಥೆ ಕಲ್ಪಿಸಿ ಕಾಡನ್ನು ಕಣ್ತುಂಬಿಕೊಳ್ಳುವ ಸೌಕರ್ಯ ನಿರ್ಮಿಸಿದರೆ ಒಳಿತಲ್ಲವೇ?
ಕಾಡಿನಲ್ಲಿ ರೆಸಾರ್ಟ್ ಮಾಡಬೇಕೆಂದರೆ ರಸ್ತೆ ಆಗಬೇಕು ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಮೊಬೈಲ್ ಟವರ್ ಮಾಡಬೇಕು.ಇದರಿಂದ ವಾಹನಗಳ ಓಡಾಟ ಹೆಚ್ಚಾಗುವುದು, ಪೋಲೀಸ್ ವ್ಯವಸ್ಥೆ ರೂಪಿಸುಬೇಕಾಗುವುದು ಆ ಕಾರಣಕ್ಕಾಗಿ ಹತ್ತಿರದಲ್ಲೇ ಜನವಸತಿ ಸೌಕರ್ಯ ಮಾಡುವುದು, ಮತ್ತೆ ಅವರ ಅವಶ್ಯಕತೆಗೆ ಮತ್ತಷ್ಟು ಅಂಗಡಿಗಳನ್ನು ಸ್ಥಾಪಿಸುವುದು, ಸಣ್ಣ ಶಾಲೆ ಪ್ರಾರಂಭಿಸುವುದು, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ಅಂಚೆ ಕಛೇರಿ, ವಹಿವಾಟಿಗೆ ಒಂದು ಬ್ಯಾಂಕು ಹೀಗೆ ಸಣ್ಣ ಪಟ್ಟಣವೇ ಬೇಕಾಗುತ್ತದೆ. ಕೆಲವು ವರ್ಷಗಳ ನಂತರ ಆ ದಟ್ಟ ಕಾಡಿನ ಕುರುಹುಗಳೇ ಇರುವುದಿಲ್ಲ.
ಈಗಾಗಲೇ ನಗರಗಳನ್ನು ವಾಸಕ್ಕೆ ಅಯೋಗ್ಯವಾಗಿ ಮಾಡಿರುವ ಸರ್ಕಾರಗಳು ಕಾಡುಗಳನ್ನು ನಾಶ ಮಾಡುವ ಈ ದುಸ್ಸಾಹಸಕ್ಕೆ ಮುಂದಾಗಿವೆ. ಆಡಳಿತಗಾರರು ನಿಜಕ್ಕೂ ಹೊಟ್ಟೆಗೆ ಅನ್ನ ತಿನ್ನುವವರೇ ಆಗಿದ್ದರೆ, ತಮ್ಮ ಮಕ್ಕಳ ಭವಿಷ್ಯದ ಬಗೆಗೆ ಕಾಳಜಿ ಉಳ್ಳವರೇ ಆಗಿದ್ದರೆ, ಈ ರೀತಿಯ ತೀರ್ಮಾನ ತೆಗೆದುಕೊಳ್ಳುವ ಮೊದಲು ಹಲವಾರು ಬಾರಿ ಯೋಚಿಸಿ. ಪ್ರಕೃತಿಯನ್ನು ನಾಶಮಾಡುತ್ತಾ ಸಾಗುವ ನಾಗರಿಕತೆ ಅತ್ಯಂತ ಅಮಾನವೀಯ ಜೀವನ ಮೌಲ್ಯಗಳ ಕಡೆ ಸಾಗುತ್ತದೆ ಎಂದು ಇತಿಹಾಸ ದೃಡಪಡಿಸಿದೆ. ರಾಜಕಾರಣಿಗಳ ಅಧಿಕಾರಿಗಳ ಹಣದ ದಾಹಕ್ಕೆ ಪ್ರಕೃತಿಯೂ ಬಲಿಯಾಗುತ್ತಿದೆ. ಜನರಿಂದ ಜನರಿಗಾಗಿ ಇರುವುದೇ ಸರ್ಕಾರಗಳಂತೆ....
ಕರ್ನಾಟಕದ ಯಾವ ಸರ್ಕಾರದ ಅವಧಿಯಲ್ಲಿ ಈ ಪ್ರಸ್ತಾವನೆ ಸಿದ್ದಪಡಿಸಲಾಯಿತೋ, ಅದು ಎಲ್ಲಿಗೆ ಮುಂದುವರಿಯಿತೋ, ಯಾರ ಅವಧಿಯಲ್ಲಿ ಕೇಂದ್ರಕ್ಕೆ ಅನುಮತಿಗಾಗಿ ಕಳುಹಿಸಲಾಯಿತೋ, ಅದಕ್ಕೆ ಎಷ್ಟು ಸಮಯ ತೆಗೆದುಕೊಂಡಿತೋ ಅಧಿಕೃತವಾಗಿ ಗೊತ್ತಿಲ್ಲ. ಆದರೆ ಕೇಂದ್ರ ಪರಿಸರ ಇಲಾಖೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುಮಾರು 100 ಹೆಕ್ಟೇರ್ ಅರಣ್ಯವನ್ನು ವಿಶೇಷ ಆರ್ಥಿಕ ವಲಯವಾಗಿ ಪರಿವರ್ತಿಸಲು ಅನುಮತಿ ನೀಡಿದೆ. ಮಾತೃಭೂಮಿ, ಪ್ರಕೃತಿಯೇ ದೇವರು, ವನ ದೇವತೆ, ರಾಷ್ಟ್ರ ಭಕ್ತಿ, ಜನರ ಕಲ್ಯಾಣ…
ಏನು ಭಾಷಣಗಳಲ್ಲಿ ಹೇಳಿದ್ದೇ ಹೇಳಿದ್ದು, ಮಾಡುತ್ತಿರುವುದು ಮಾತ್ರ ಅತ್ಯಮೂಲ್ಯ ಅರಣ್ಯ ನಾಶ. ಹೆಸರು ಮಾತ್ರ ಜನರ ಅಭಿವೃದ್ಧಿ. ಹೌದು, ಅಭಿವೃದ್ಧಿ ಖಂಡಿತ ಬೇಕು. ಜನಸಂಖ್ಯೆಯ ಏರಿಕೆಯಿಂದ ಆಗುವ ತೊಂದರೆ ನಿವಾರಿಸಲು ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಿದೆ ನಿಜ. ಆದರೆ ಪ್ರಕೃತಿಯನ್ನು ನಾಶ ಮಾಡಿ ಸಾಧಿಸುವುದು ಅಭಿವೃದ್ಧಿಯಲ್ಲ ಅವಸಾನ. ಆರೋಗ್ಯವೇ ಇಲ್ಲದ ಮೇಲೆ ಅಭಿವೃದ್ಧಿಗೆ ಅರ್ಥವೇನು?
ಭಾರತ ಮತ್ತು ಚೀನಾ ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗುವ ದುರಾಸೆಗೆ ಬಿದ್ದಿವೆ. ಅಮೆರಿಕಾವನ್ನು ಹಿಂದಿಕ್ಕಿ ನಂಬರ್ ಒನ್ ಶಕ್ತಿಯಾಗುವುದು ಇವುಗಳ ಗುರಿ. ತಮ್ಮಲ್ಲಿರುವ ಮಾನವ ಸಂಪನ್ಮೂಲಗಳನ್ನು ಪೋಷಿಸಲು ಪ್ರಕೃತಿಯನ್ನು ಅವಶ್ಯಕತೆಗಿಂತ ಹೆಚ್ಚು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಇದರ ಪರಿಣಾಮ ಅಭಿವೃದ್ಧಿಯ ಮಾನದಂಡಗಳು ಬದಲಾಗಿವೆ ಮತ್ತು ಅಪಾಯಕಾರಿಯಾಗಿದೆ. ಬನ್ನೇರುಘಟ್ಟ ಇರುವುದೇ ಸ್ವಲ್ಪ ಜಾಗದಲ್ಲಿ. ಈಗಾಗಲೇ ಸುತ್ತಲೂ ಮನೆಗಳು ತಲೆ ಎತ್ತಿವೆ. ಬೆಂಗಳೂರು ನಗರಕ್ಕೆ ಹತ್ತಿರವೂ ಇದೆ. ಕೆಲವು ಪ್ರಾಣಿಗಳು ಹೇಗೋ ಜೀವಿಸುತ್ತಿವೆ.
ಈಗ ಅದರಲ್ಲೂ 100 ಹೆಕ್ಟೇರ್ ಪ್ರದೇಶ ಆಕ್ರಮಿಸಿಕೊಂಡರೆ ಗತಿಯೇನು ? ಆ ಕಾಡು ಕೊಡುತ್ತಿದ್ದ ಆಕ್ಸಿಜನ್ ಸರ್ಕಾರ ಕೊಡುತ್ತದೆಯೇ ? ಪ್ರಾಣಿಗಳ ವಾಸಕ್ಕೆ ಮನೆ ಕಟ್ಟಿಸಿಕೊಡುತ್ತದೆಯೇ ? ಶಾಸಕರು, ಸಂಸದರು ಮುಂತಾದ ಜನ ಪ್ರತಿನಿಧಿಗಳು ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ ಎಂದು ಮಕ್ಕಳಿಗೆ ಹೇಳಿ ಕೊಡುವುದು ಕೇವಲ ನಾಟಕವೇ ? ಕೈಗಾರಿಕೆಗಳು ಖಂಡಿತ ಬೇಕು. ಅದಕ್ಕೆ ಇರಬಹುದಾದ ಪರ್ಯಾಯ ವ್ಯವಸ್ಥೆ ಹುಡುಕಬೇಕಿದೆ. 20/30 ವರ್ಷಗಳ ಹಿಂದೆ ಕಾಡು ಕಡಿಯದೆ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಕೇಳಬಹುದಿತ್ತು. ಆದರೆ ಈಗ ಕಾಡು ಬೆಳೆಸುವುದೇ ಅಭಿವೃದ್ಧಿ ಎಂಬಲ್ಲಿಗೆ ಬಂದು ನಿಂತಿದೆ.
ಯಾವ ಪಕ್ಷದವರೇ ಆಗಿರಲಿ ನಮ್ಮ ರಾಜಕಾರಣಿಗಳು ಇದನ್ನು ಯೋಚಿಸುವುದೇ ಇಲ್ಲ. ಭೂಮಿ ಬಗೆದು, ಕಾಡು ಕಡಿದು ಬರಡು ಜಾಗವನ್ನು ಸೃಷ್ಟಿ ಮಾಡಿ ವಿಕೃತ ಆನಂದ ಪಡೆಯುತ್ತಾರೆ. ಪ್ರಕೃತಿಯ ಮೇಲೆ ಮನುಷ್ಯ ಮಾಡುವ ಭಯಂಕರ ದಬ್ಬಾಳಿಕೆಯ ಪರಿಣಾಮವನ್ನು ಈಗಾಗಲೇ ನಾವು ಅನುಭವಿಸುತ್ತಿದ್ದೇವೆ. ಆದರೂ ಪಾಠ ಕಲಿಯದೆ ಮತ್ತೆ ಮತ್ತೆ ಅದೇ ತಪ್ಪು ಪುನರಾವರ್ತನೆ ಆಗುತ್ತಿದೆ. ನಮ್ಮನ್ನಾಳುವ ಸರ್ಕಾರಗಳಿಗೆ ಇದನ್ನು ಹೇಗೆ ಮನವರಿಕೆ ಮಾಡಿಕೊಡುವುದು? ಪ್ರತಿಭಟನೆಗಳು ಕೇವಲ ಸಾಂಕೇತಿಕ ಎನಿಸಿಕೊಳ್ಳುತ್ತಿವೆ. ಜಾಗತೀಕರಣದ ಭೂತ ಎಲ್ಲರನ್ನೂ, ಎಲ್ಲವನ್ನೂ ಆಕ್ರಮಿಸಿಕೊಳ್ಳುತ್ತಿದೆ. ಮನುಷ್ಯನ ಈ ದುರಾಸೆಗೆ ಪ್ರಕೃತಿಯೇ ಏನಾದರೂ ಪರಿಹಾರ ಹುಡುಕಿಕೊಳ್ಳುತ್ತದೆ. ಸಾಮಾನ್ಯ ಮನುಷ್ಯನ ಅಸಹಾಯಕ ನಿಟ್ಟುಸಿರಿನೊಂದಿಗೆ… ಅರಣ್ಯ ದಿನದ ಶುಭಾಶಯಗಳು.
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ