ವಿಶ್ವ ಆರೋಗ್ಯ ದಿನಾಚರಣೆ - “೧೦೦೦ ನಗರಗಳು – ೧೦೦೦ ಜೀವಗಳು”

ವಿಶ್ವ ಆರೋಗ್ಯ ದಿನಾಚರಣೆ - “೧೦೦೦ ನಗರಗಳು – ೧೦೦೦ ಜೀವಗಳು”

ಬರಹ

     ವಿಶ್ವ ಆರೋಗ್ಯ ದಿನಾಚರಣೆ - “೧೦೦೦ ನಗರಗಳು – ೧೦೦೦ ಜೀವಗಳು”


ಏಪ್ರಿಲ್ ೭, ೨೦೧೦


ವಿಶ್ವ ಆರೋಗ್ಯ ದಿನಾಚರಣೆಯ ದಿವಸ


ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ನಗರವಾಸಿಗಳ ಆರೋಗ್ಯವನ್ನು ಕುರಿತು ಜನಜಾಗೃತಿಯನ್ನು ಮೂಡಿಸಲು ಯೋಜನೆಯನ್ನು ಹಾಕಿಕೊಂಡಿದೆ. “೧೦೦೦ ನಗರಗಳು – ೧೦೦೦ ಜೀವಗಳು” ಎನ್ನುವುದು ಈ ವರ್ಷದ ಘೋಷವಾಕ್ಯ.


ನಗರೀಕರಣ:


ಇಂದು ನಗರೀಕರಣ ಶರವೇಗದಲ್ಲಿ ಹರಡುತ್ತಿದೆ. ಗ್ರಾಮೀಣವಾಸಿಗಳು ತಮ್ಮ ಬದುಕಿಗಾಗಿ ನಗರಗಳತ್ತ ವಲಸೆ ಹೊರಟಿದ್ದಾರೆ. ಈ ವಲಸೆಯಿಂದ ನಗರಗಳ ಜನಸಂಖ್ಯೆ ಮಿತಿಮೀರುತ್ತಿದೆ. ನಗರಗಳಲ್ಲಿ ಇರುವ ಸೀಮಿತ ಸಂಪನ್ಮೂಲಗಳು ಈ ಹೆಚ್ಚುವರಿ ಜನಪ್ರವಾಹದ ಒತ್ತಡವನ್ನು ಭರಿಸುವ ಸ್ಥಿತಿಯಲ್ಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಅನ್ವಯ, ಇನ್ನು ಮುಂದಿನ ೩೦ ವರ್ಷಗಳಲ್ಲಿ,  ಕೇವಲ ನಗರಗಳಲ್ಲಿ ಜನಸಂಖ್ಯೆಯ ಸ್ಫೋಟವಾಗಲಿದೆ. ಗ್ರಾಮೀಣ ಭಾರತ ಹಾಗೂ ಗ್ರಾಮೀಣ ಜಗತ್ತಿನಲ್ಲಿ ಜನಸಂಖ್ಯೆಯ ಒತ್ತಡ ಕಂಡುಬರುವುದಿಲ್ಲ. ಈ ಜನಸಂಖ್ಯಾಸ್ಫೋಟ ನಗರದ ಆರೋಗ್ಯವನ್ನೇ ಹಾಳುಮಾಡಲಿದೆ. ಮುಂದೆ ನಗರವಾಸಿಗಳು ಎದುರಿಸಬೇಕಾದ ಮುಖ್ಯ ಸಮಸ್ಯೆಗಳಲ್ಲಿ ಕೆಲವು ಈ ಕೆಳಕಂಡಂತಿವೆ.



  • ನಗರ ವಾಸಿಗಳಿಗೆ ಕುಡಿಯಲು ಸೂಕ್ತವಾದ ನೀರಿನ ಪೂರೈಕೆ.

  • ಮಲಿನಮುಕ್ತ ಪರಿಸರ (ಗಾಳಿ, ನೀರು, ಆಹಾರ ಇತ್ಯಾದಿ)

  • ಹಿಂಸಾಪ್ರವೃತ್ತಿ ಮುಕ್ತ ಹಾಗೂ ಅಪಘಾತ ರಹಿತತೆ

  • ಸೋಂಕೇತರ ರೋಗಗಳ ಹೆಚ್ಚಳ-ಅತಿರಕ್ತದೊತ್ತಡ, ಸಕ್ಕರೆಕಾಯಿಲೆ, ಹೃದಯಕಾಯಿಲೆ, ಕ್ಯಾನ್ಸರ್ ಇತ್ಯಾದಿಗಳು. ಹೆಚ್ಚುವ ಧೂಮಪಾನ ಹಾಗೂ ಮದ್ಯಪಾನ. ಅನಾರೋಗ್ಯಕರ ಜೀವನಶೈಲಿ. ವ್ಯಾಯಾಮರಹಿತ ಬದುಕು. ವೇಶ್ಯಾವಾಟಿಕೆ, ಲೈಂಗಿಕ ರೋಗಗಳು ಹಾಗೂ ಏಡ್ಸ್.

  • ಹೆಚ್ಚುತ್ತಿರುವ ಹಳೆಯ (ಕ್ಷಯ, ಮಲೇರಿಯ, ಟೈಫಾಯ್ಡ್) ಹಾಗೂ ಹೊಸ ಸೋಂಕುರೋಗಗಳು (ಉದಾ: ಸಾರ್ಸ್, ಎಚ್೧ಎನ್೧ ಇತ್ಯಾದಿ)

  • ಪ್ರಾಕೃತಿಕ (ಭೂಕಂಪ, ಪ್ರವಾಹ, ಬರಗಾಲ ಇತ್ಯಾದಿ) ಹಾಗೂ ಮನುಷ್ಯ ನಿರ್ಮಿತ (ಹೊಡೆದಾಟ, ಭಯೋತ್ಪಾದನೆ, ಯುದ್ಧ, ಕಟ್ಟಡ ಕುಸಿಯುವಿಕೆ ಇತ್ಯಾದಿ)

ಪರಿಹಾರ:


ನಗರೀಕರಣ, ವೈಜ್ಞಾನೀಕರಣ ಹಾಗೂ ಪಾಶ್ಚಾತ್ಯೀಕರಣಗಳು ಅನಿವಾರ್ಯ ಶನಿ. ಹಾಗಾಗಿ ನಗರೀಕರಣವನ್ನು ಮಾಡುವಾಗ ದೂರದೃಷ್ಟಿ ಇರಬೇಕು. ಭವಿಷ್ಯದ ಸ್ಥಿತಿಗತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಗರಗಳನ್ನು ಯೋಜಿಸಬೇಕಾಗುತ್ತದೆ. ಮುಖ್ಯವಾಗಿ ಈ ಕೆಳಕಂಡ ಅಂಶಗಳ ಬಗ್ಗೆ ಗಮನವನ್ನು ಹರಿಸಬೇಕಾಗುತ್ತದೆ.



  • ನಗರಯೋಜನೆಯು ಜನಸಾಂದ್ರೀಕರಣವನ್ನು ತಪ್ಪಿಸಬೇಕು. ಒಂದು ಚದರ ಕಿಲೋಮೀಟರಿನಲ್ಲಿ ವಾಸಿಸುವ ಜನಸಂಖ್ಯೆ ಹೆಚ್ಚೂಕಡಿಮೆ ಏಕಪ್ರಮಾಣದಲ್ಲಿರಬೇಕು.

  • ಪರಿಣಾಮಕಾರಿಯಾದ ಸಂಚಾರ ಸಾಗಾಣಿಕೆ ವ್ಯವಸ್ಥೆಯಿರಬೇಕು.

  • ಒಂದು ಚದರ ಕಿ.ಮೀ. ವಾಸಿಸುವ ಜನಸಂಖ್ಯೆಗೆ ಅನುಗುಣವಾಗಿ ಉದ್ಯಾನವನ, ಆಟದ ಮೈದಾನ, ಸಮುದಾಯ ಚಟುವಟಿಕೆಗಳಿಗೆ ಅಗತ್ಯವಾದ ಮುಕ್ತಪ್ರದೇಶ ಇತ್ಯಾದಿಗಳಿರಬೇಕು.

  • ಧೂಮಪಾನಕ್ಕೆ ಸಂಬಂಧಿಸಿದ ಹಾಗೆ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು.

  • ಆಹಾರ, ನೀರು, ಗಾಳಿ ಉತ್ತಮವಾಗಿರಬೇಕು. ಚರಂಡಿ ವ್ಯವಸ್ಥೆಯು ಉತ್ತಮವಾಗಿರಬೇಕು – ಇವು ನಗರವಾಸಿಗಳ ಆರೋಗ್ಯವನ್ನು ನಿರ್ಧರಿಸುವ ಮುಖ್ಯಾಂಶಗಳು.

  • ಕಟ್ಟಡಗಳನ್ನು ಕಟ್ಟುವಾಗ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನಿಗದಿತ ಕಾನೂನನ್ನು ಮೀರದಿರುವಂತೆ ಎಚ್ಚರವಹಿಸಬೇಕು.

ಈ ಎಲ್ಲವನ್ನು ಜಾರಿಗೆ ತರಲು ಹೆಚ್ಚಿನ ಹಣ ಬೇಕಾಗಿಲ್ಲ. ಇರುವ ಹಣವನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಬೇಕು. ಅಷ್ಟೆ. ವಿನಿಯೋಗಿಸುವ ಮನಸ್ಸನ್ನು ಮಾಡಬೇಕು.


ಬೆಂಗಳೂರು:


ಬೆಂಗಳೂರು ನಗರವು ೧.೫ ಚದರ ಕಿ.ಮೀಟರ್ ಪ್ರದೇಶದಲ್ಲಿ ಆರಂಭವಾಯಿತು. ಈಗ ೨೨೫ ಚ.ಕಿ.ಮೀ. ಗಿಂತಲೂ ಹೆಚ್ಚಿನ ಪ್ರದೇಶವನ್ನು ವ್ಯಾಪಿಸಿದೆ. ಇಲ್ಲಿ ಸುಮಾರು ೮೦ ಲಕ್ಷ ಜನರು ವಾಸವಾಗಿದ್ದಾರೆ. ಪ್ರತಿದಿನ ೧೦ ಲಕ್ಷ ಜನರು ಈ ನಗರಕ್ಕೆ ಬಂದು ಹೋಗುತ್ತಿರುತ್ತಾರೆ. ಈ ನಗರದ ರಸ್ತೆಗಳು, ಸಂಚಾರಿ ವ್ಯವಸ್ಥೆ, ವಿದ್ಯುತ್ತು, ಕುಡಿಯುವ ನೀರು ಇತ್ಯಾದಿಗಳು ಈ ಜನಸಂಖ್ಯಾ ಸ್ಫೋಟಕ್ಕೆ ಸರಿಯಾಗಿ ಬೆಳೆಯಲಿಲ್ಲ. ಕಳೆದ ೩-೪ ವರ್ಷಗಳಲ್ಲಿ ನಗರದಲ್ಲಿದ್ದ ದೊಡ್ಡ ದೊಡ್ಡ ಮರಗಳನ್ನು ಕಡಿದು ರಸ್ತೆಯನ್ನು ದೊಡ್ಡದು ಮಾಡಿದರು. ಫ್ಲೈಓವರ್ ಕಟ್ಟಿದರು. ವಾಹನಗಳ ಸಂಖ್ಯೆ ದುಪ್ಪಟ್ಟಾಯಿತು. ಆದರೆ ಮರಗಳನ್ನು ಮತ್ತೆ ನೆಡುವ ಗೋಜಿಗೆ ಹೋಗಲಿಲ್ಲ. ಕಳೆದ ವಾರದಲ್ಲಿ ಬೆಂಗಳೂರು ನಗರದ ಉಷ್ಣತೆಯು ಹಿಂದೆಂದೂ ಕಾಣದಂತಹ ೪೧ ಡಿಗ್ರೀ ಸೆಲ್ಷಿಯಸ್ ನಷ್ಟು ಏರಿತು. ಇದು ಬೆಂಗಳೂರು ನಗರವು ಅವನತಿಯತ್ತ ಸಾಗುತ್ತಿರುವುದರ ಒಂದು ಮುನ್ಸೂಚನೆಯಾಗಿದೆ.


ಬೆಂಗಳೂರು ನಗರದಲ್ಲಿ ಲಭ್ಯವಿರುವ ಆರೋಗ್ಯ ಸೌಲಭ್ಯಗಳತ್ತ ಒಮ್ಮೆ ಕಣ್ಣು ಹರಿಸಬೇಕು. ಬೆಂಗಳೂರು ಇಂದು ಜಾಗತಿಕ ಆರೋಗ್ಯ ಪ್ರವಾಸೋದ್ಯಮದ ಕಾಶಿ ಎಂಬ ಹೆಸರನ್ನು ಪಡೆದಿದೆ. ೧೦ ತೃತೀಯ ಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಬಲ್ಲ ಪ್ರಧಾನ ಆಸ್ಪತ್ರೆಗಳು, ೨೫೦೦ ದೊಡ್ಡ ಆಸ್ಪತ್ರೆಗಳು ಹಾಗೂ ೫೦೦೦ ಕುಟುಂಬ ವೈದ್ಯರು ಇರುವರು. ಬಿಬಿಎಂಪಿಯು ೪೮ ಆರೋಗ್ಯಕೇಂದ್ರ, ೨೪ ಹಎರಿಗೆ ಆಸ್ಪತ್ರೆ, ೬ ದೊಡ್ಡ ಆಸ್ಪತ್ರೆಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ೧೦% ಜನರು ಆರ್ಥಿಕ ದುರ್ಬಲ ವರ್ಗಕ್ಕೂ ಹಾಗೂ ೧೦% ಜನರು ಕೊಳೆಗೇರಿಯಲ್ಲಿ ವಾಸವಾಗಿದ್ದಾರೆ. ಇವರೆಲ್ಲರೂ ಆರೋಗ್ಯ ಸೇವೆಗಳಿಗಾಗಿ ಬಿಬಿಎಂಪಿ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ನಂಬಿದ್ದಾರೆ. ಆದರೆ ಈಗ ಇರುವ ಆರೊಗ್ಯಸೌಕರ್ಯಗಳು ಈ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾಗಿವೆ. ಹಾಗಾಗಿ ಸರ್ಕಾರವು ಮತ್ತಷ್ಟು ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಮಧ್ಯಮ ವರ್ಗದ ಬಹಳಷ್ಟು ಜನರು ಆರೋಗ್ಯವಿಮೆಯನ್ನು ನಂಬಿ ಖಾಸಗೀ ಆಸ್ಪತ್ರೆಗಳಿಗೆ ಹೋಗಬೇಕಿದೆ. ಆರೋಗ್ಯವಿಮೆಯಿಲ್ಲದೇ ಈ ಆಸ್ಪತ್ರೆಗಳ ದಿಕ್ಕಿನ ಕಡೆಯೂ ತಲೆ ಹಾಕಿ ಮಲಗದಂತಹ ಸ್ಥಿತಿ ಏರ್ಪಟ್ಟಿದೆ. ಹಾಗಾಗಿ ಇಂದು ಮಧ್ಯಮವರ್ಗದ ಜನರು ಅನಿವಾರ್ಯವಾಗಿ ಆರೋಗ್ಯ ವಿಮೆಯನ್ನು ಮಾಡಿಕೊಳ್ಳಲೇಬೇಕಾದಂತಹ ವಿಷಮ ಸ್ಥಿತಿ ಉಂಟಾಗಿದೆ.


ಬೆಂಗಳೂರು ನಗರದಲ್ಲಿ ಉದ್ಯಾನವನಗಳು, ಆಟದ ಮೈದಾನಗಳು, ಈಜುಕೊಳಗಳು ಹಾಗೂ ಇತರ ಮನರಂಜನಾ ಕೇಂದ್ರಗಳು ಹೆಚ್ಚಬೇಕಿದೆ. ಇಲ್ಲಿ ಇರುವ ಜನಸಂಖ್ಯೆಗೆ ಅನುಗುಣವಾಗುವಂತಹ ಸಾಂಸ್ಕೃತಿಕ ಚಟುವಟಿಕೆಗಳು ಈ ನಗರದಲ್ಲಿ ನಡೆಯುತ್ತಿಲ್ಲ ಎಂಬುದು ಖೇದನೀಯ ವಿಚಾರ.


ಜೀವನಶೈಲಿ:


ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾಸಿಸುವ ಜನರು ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಆರೋಗ್ಯ ವರ್ಧನೆಗೆ ಹೆಚ್ಚು ಮಹತ್ವವನ್ನು ನೀಡಬೇಕಿದೆ. ಇವರು ನಡೆಸುವ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರಬೇಕಿದೆ. ಕೃತಕ ಒತ್ತಡಗಳಿಂದ ಪಾರಾಗಬೇಕಿದೆ. ತಮ್ಮ ಇತಿ ಮಿತಿಯನ್ನು ಅರಿತುಕೊಳ್ಳಬೇಕಿದೆ. ಆಹಾರ ಪದ್ಧತಿಯಲ್ಲಿ ದಿಡೀರ್ ಆಹಾರ ಪದಾರ್ಥಗಳ, ಪಿಜ಼್ಜ಼ಾ ಮುಂತಾದ ಜಂಕ್ ಪದಾರ್ಥಗಳನ್ನು ಕಡಿಮೆ ಮಾಡಬೇಕಿದೆ. ಪ್ರತಿದಿನ ಕನಿಷ್ಠ ೫ ವಿವಿಧ ಹಣ್ಣುಗಳನ್ನು ತಿನ್ನಬೇಕಿದೆ. ನಿತ್ಯ ೩ ತರಕಾರಿಗಳನ್ನು ಸೇವಿಸಬೇಕು. ಈ ಮೂರು ತರಕಾರಿಗಳಲ್ಲಿ ಒಂದು ಬಣ್ಣದ ತರಕಾರಿಯಿರಬೇಕು ಹಾಗೂ ಮತ್ತೊಂದು ಸೊಪ್ಪಾಗಿರಬೇಕು. ನಮ್ಮ ಆಹಾರದಲ್ಲಿ ಐದು ಬಿಳಿವಿಷಗಳನ್ನು (ಹಾಲು, ಉಪ್ಪು, ಸಕ್ಕರೆ, ತೆಂಗು, ಮೊಟ್ಟೆ) ಹಿತಮಿತವಾಗಿ ಸೇವಿಸಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಬದುಕಿನಲ್ಲಿ ಇತ್ಯಾತ್ಮಕ ಮನೋಭಾವವನ್ನು ರೂಡಿಸಿಕೊಳ್ಳಬೇಕು. ಇಲ್ಲಿದಿದ್ದರೆ ನಗರಬದುಕಿನ ಒತ್ತಡಕ್ಕೆ ನಾವು ಮುರುಟಿ ಹೋಗಬೇಕಾಗುತ್ತದೆ.


ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ!


 


-ನಾಸೋ