ವಿಶ್ವ ಆಹಾರ ದಿನದ ಮಹತ್ವ
ಆರೋಗ್ಯವೇ ಭಾಗ್ಯ, ಆರೋಗ್ಯ ಪರಿಪೂರ್ಣವಾಗಿದ್ದರೆ ಎಲ್ಲವೂ ಪರಿಪೂರ್ಣ. ಹಾಗಾದರೆ ಆರೋಗ್ಯ ಸರಿಯಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಹುದು?ಎಂದು ಯೋಚಿಸಿದರೆ "ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವಿಸಿದರೆ"ನಾವು ಆರೋಗ್ಯ ವಾಗಿರಬಹುದು. ನಾವು ಸದೃಢರಾಗಿರಬೇಕು,ದೈಹಿಕವಾಗಿ, ಮಾನಸಿಕವಾಗಿ, ಭೌತಿಕವಾಗಿ,ಸಾಮಾಜಿಕವಾಗಿ ಸಹ.ಮನಸ್ಸಿನಲ್ಲಿ ಸದಾ ಯೋಚನೆ ತುಂಬಿಕೊಂಡರೆ,ಹೇಗೆ ಆರೋಗ್ಯ ವಾಗಿರಲು ಸಾಧ್ಯ?
ನಮ್ಮಲ್ಲಿ ಇರುವುದರಲ್ಲಿ ಆದಷ್ಟೂ ಒಳ್ಳೆಯ ಆಹಾರವಸ್ತುಗಳನ್ನು ತಯಾರಿಸಿ ಸೇವಿಸುವುದೇ ಆರೋಗ್ಯದ ಗುಟ್ಟು. ಸೇವಿಸುವ ಆಹಾರವನ್ನು ಹಾಳು ಮಾಡಿ ಎಸೆಯಬಾರದು.ಹಳ್ಳಿ ಪರಿಸರದಲ್ಲಿ ಮನೆಯ ಸುತ್ತಲೂ ಒಮ್ಮೆ ಕಣ್ಣಾಡಿಸಿದರೆ ಆ ದಿನಕ್ಕೆ ಬೇಕಾದ ಪದಾರ್ಥಗಳನ್ನು ತಯಾರಿಸಲು ಸಾಧ್ಯ. ಪಟ್ಟಣಗಳಲ್ಲಿ ಈಗೀಗ ತಾರಸಿ ತೋಟ ಗ್ರೋ ಬ್ಯಾಗ್ ಗಳಲ್ಲಿ, ಚಟ್ಟಿ,ಕುಂಡಗಳಲ್ಲಿ ಸೊಪ್ಪು ತರಕಾರಿ ಮಾಡುವುದನ್ನು ರೂಢಿ ಮಾಡಿಕೊಳ್ತಾ ಇದ್ದಾರೆ.
ವಿಶ್ವದಲ್ಲಿ ಆಹಾರ ತಿನ್ನುವುದು, ಉಣ್ಣುವುದು ಪ್ರತಿಯೊಬ್ಬನ ಹಕ್ಕು. ಆದರೆ ಎಷ್ಟು ಜನ ಹೊಟ್ಟೆ ತುಂಬಾ ಉಣ್ಣುತ್ತಿದ್ದಾರೆ? ಒಂದು ಹೊತ್ತಿನ ಊಟಕ್ಕಿಲ್ಲದೆ ಪರದಾಡುವ ಕುಟುಂಬಗಳು ಎಷ್ಟೋ ಇವೆ. ಇರುವುದನ್ನು ಹಂಚಿತಿನ್ನುವುದು ಉತ್ತಮ ಗುಣ. ಆದರೆ ಎಷ್ಟು ದಿನ ಹಾಗೆ ತಿನ್ನಲು ಸಾಧ್ಯ? ತನ್ನ ಆಹಾರವನ್ನು ತಾನೇ ಬೆಳೆಯಿಸುವ ಇಲ್ಲವೇ ಖರೀದಿಸಿ ಬಳಸುವ ಸಾಮರ್ಥವನ್ನು ಪ್ರತಿಯೊಬ್ಬರೂ ಪಡೆಯಬೇಕು. ಶಾಲಾ ಜೀವನದಲ್ಲಿ ಪಠ್ಯ ಮಾತ್ರವಲ್ಲದೆ ಪಠ್ಯೇತರ ವಿಷಯಗಳು, ಜೀವನ ಶಿಕ್ಷಣದ ಹಂತಗಳು ಇರಬೇಕು. ಅಪೌಷ್ಟಿಕತೆ, ಮಕ್ಕಳಲ್ಲಿ ತೂಕ ಕಡಿಮೆ ಇರುವುದು, ಗರ್ಭಿಣಿಯರಿಗೆ ಪೋಷಕಾಂಶ ಕೊರತೆ ಇವುಗಳಿಗೆ ಪರಿಹಾರವಾಗಿ ಅಂಗನವಾಡಿಗಳ ಮೂಲಕ ಗರ್ಭಿಣಿ ಬಾಣಂತಿಯರಿಗೆ, ೬ ವರುಷದೊಳಗಿನ ಮಕ್ಕಳಿಗೆ ಪೋಷಕಾಂಶಭರಿತ ಆಹಾರ ವಿತರಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ನಡೆಯುತ್ತಿದೆ.
ನಮ್ಮ ದೇಹದ ಆರೋಗ್ಯಕ್ಕೆ ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳು, ನಾರಿನಪದಾರ್ಥಗಳು, ಹಾಲು, ಹಾಲಿನ ಉತ್ಪನ್ನಗಳು, ಹಾಗೆ ಕೆಲವು ಮಾಂಸಾಹಾರಿ ಪದಾರ್ಥಗಳು ಬೇಕು. ಪುಟ್ಟ ಮಕ್ಕಳಿರುವಾಗಲೇ ಒಳ್ಳೆಯ ಆಹಾರದ ಬಗ್ಗೆ ತಿಳುವಳಿಕೆ, ಜಾಗೃತಿ ಮೂಡಿಸುವ ಕೆಲಸವಾಗಬೇಕು. ಯಾವಾಗಲೂ ಜಂಕ್ ಫುಡ್ ಖರೀದಿಸಿ ಸೇವಿಸುವುದು ಅಷ್ಟು ಹಿತವಲ್ಲ. ಎಲ್ಲದಕ್ಕೂ ಹಿತಮಿತವಿರಬೇಕು. ಸಾಮಾನ್ಯವಾಗಿ ಬಾಳೆಹಣ್ಣು ಎಲ್ಲಾ ಕಾಲದಲ್ಲೂ ದೊರೆಯುತ್ತದೆ. ಆಯಾಯ ಋತುಮಾನದಲ್ಲಿ ದೊರಕುವುದನ್ನು ಸಂಗ್ರಹಿಸಿ ಸೇವಿಸುವುದು ಜಾಣತನ.ಕೆಲವಾರು ಸೊಪ್ಪು, ಹಸಿರು ತರಕಾರಿಗ ಸಿಪ್ಪೆಯಿಂದ ತಂಬುಳಿ, ಚಟ್ನಿ ಮಾಡಬಹುದು. ನಾವು ಇದನ್ನೆಲ್ಲಾ ಬಿಸಾಡುತ್ತೇವೆ. ಆರೋಗ್ಯ ದೃಷ್ಟಿಯಿಂದ ಅದನ್ನೆಲ್ಲಾ ಉಪಯೋಗಿಸಿದರೆ ಉತ್ತಮ.
ಆಹಾರದಲ್ಲಿ ಜಾಗತಿಕ ಬಿಕ್ಕಟ್ಟನ್ನು ನಿವಾರಿಸಲು, ಕೃಷಿ ಕೆಲಸಗಳಿಗೆ ಉತ್ತೇಜನ ನೀಡಲು, ಆಹಾರವು ಮನುಷ್ಯನ ಮೂಲಭೂತ ಹಕ್ಕೆಂದು ಅರಿಯಲು, ರೈತನ ಬೆವರ ಹನಿಗಳ ಪರಿಶ್ರಮ ತಿಳಿಯಲು ೧೯೪೫ ಅಕ್ಟೋಬರ ೧೬ರಂದು ಯುನೈಟೆಡ್ ನೇಷನ್ಸ್ ಫುಡ್ ಆಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್ ಸ್ಥಾಪನೆಯಾಯಿತಂತೆ. ಈ ಮಾಹಿತಿಯನ್ನು, ಆಹಾರದ ಬಗ್ಗೆ ಮಾಹಿತಿಯನ್ನು ಕೆಲವು ನಿರ್ದಿಷ್ಟ ಸಂಸ್ಥೆಗಳ ಮೂಲಕ ಪ್ರಚುರ ಪಡಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುವುದು. ಸಭೆ ಸಮಾರಂಭಗಳಲ್ಲಿ ಆಹಾರ ಖಾದ್ಯಗಳು ಹೆಚ್ಚಾಗಿ ಪೋಲಾಗದಂತೆ ಜಾಗೃತಿ ಮೂಡಿಸುವುದೂ ಇದರಲ್ಲೊಂದು. ಇತಿಮಿತಿಯಿದ್ದರೆ ಚಂದವಲ್ಲವೇ? ಹೊಟ್ಟೆ ತುಂಬಲಿರುವ ಆಹಾರದಲ್ಲಿ ಗತ್ತು, ಅಹಂ, ದೊಡ್ಡಸ್ತಿಕೆ ಬೇಡ ಅಲ್ಲವೇ? ಬೀದಿ ಬದಿಯ ಪುಟ್ಟ ಮಕ್ಕಳು ಗಟಾರದಿಂದ ಆಹಾರವನ್ನು ಹೆಕ್ಕಿ ತಿನ್ನುವುದನ್ನು ಕಂಡಾಗ ಕರುಳು ಚುರುಕ್ ಎನುವುದು ಸಹಜ. ನಮ್ಮ ಮನೆಯ ಮಕ್ಕಳಿಗೆ ನೆಲಕ್ಕೆ ಬಿದ್ದ ಅಗುಳನ್ನು ಹೆಕ್ಕಿ ತಿನ್ನಲು ನಾವು ಬಿಡುವುದಿಲ್ಲ.
ನಾವು ಸೇವಿಸುವ ಆಹಾರದ ವಸ್ತುಗಳನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬುದನ್ನು ಸರಿಯಾಗಿ ಮಾಹಿತಿ ಸಂಘಸಂಸ್ಥೆಗಳು ನೀಡಬಹುದು. ಶಾಲೆಗಳಲ್ಲಿ, ಅಂಗನವಾಡಿಯ ಪೋಷಕರ ಸಭೆಯಲ್ಲಿ ನೀಡಿದರೆ ಹೆಚ್ಚು ಪ್ರಯೋಜನವಾಗಬಹುದು. ನಿಗದಿತ ತಾರೀಕು ಮೀರಿದ ಆಹಾರ ವಸ್ತುಗಳನ್ನು ಖರೀದಿಸಬಾರದು. ಫ್ರಿಡ್ಜ್ ನಲ್ಲಿಟ್ಟ ಆಹಾರವನ್ನು ತೆಗೆದು ಸ್ವಲ್ಪ ಹೊತ್ತು ಹೊರಗಿಟ್ಟು ಬಳಸಬೇಕು. ಬಿಸಿಯಾದ ಆಹಾರವನ್ನು ಫ್ರಿಡ್ಜ್ ಒಳಗೆ ಇಡಬಾರದು. ಕೈಗಳನ್ನು ಚೆನ್ನಾಗಿ ತೊಳೆದು ಪ್ರತಿಯೊಂದನ್ನು ಮುಟ್ಟುವುದು ಒಳ್ಳೆಯದು. ಅಕ್ಕಿ, ಬೇಳೆ, ದವಸಧಾನ್ಯಗಳನ್ನು ಹುಳಹುಪ್ಪಡಿಗಳು ಆಗದಂತೆ ಜಾಗೃತೆ ವಹಿಸಬೇಕು.
ಕಳಪೆ ಆಹಾರದ ಬಗ್ಗೆ ಜಾಗ್ರತರಾಗಿರಬೇಕು.ಆಹಾರದ ಸುರಕ್ಷತೆ ,ಗುಣಮಟ್ಟದ ಬಗ್ಗೆ ವಿಶೇಷ ಕಾಳಜಿ ವಹಿಸುವ ಸಲುವಾಗಿಯೇ ಗುಣಮಟ್ಟ ನೋಡುವ ತಂಡಗಳು ತಪಾಸಣೆ ಮಾಡುತ್ತವೆ. ಕಾಫಿ, ಟೀ, ಮಸಾಲೆ ವಸ್ತುಗಳು, ಪುಡಿಗಳು, ಎಣ್ಣೆ, ಮನೆಯಲ್ಲಿ ತಯಾರಿಸಿ ಮಾರಾಟ ಮಾಡುವ ತಿಂಡಿಗಳು, ಸಂಸ್ಕರಿಸಿದ ಆಹಾರ ವಸ್ತುಗಳು, ಪಾನೀಯ, ಬೆಲ್ಲ, ಸಕ್ಕರೆ, ಮಾಂಸಾಹಾರಿ ವಸ್ತುಗಳು ಎಲ್ಲದರಲ್ಲೂ ಕಲಬೆರಕೆ ಸರ್ವೇಸಾಮಾನ್ಯ ಅರಿವು ಮೂಡಿಸುವ ಚಟುವಟಿಕೆಗಳು ಇಂಥ ಸಂದರ್ಭದಲ್ಲಿ ಅತಿ ಅಗತ್ಯ.
ಖರೀದಿಸಿದ ಸೊಪ್ಪು ತರಕಾರಿ, ಹಣ್ಣುಗಳನ್ನು ಅರಶಿನ ಮತ್ತು ಉಪ್ಪು ಸೇರಿಸಿದ ನೀರಿನಲ್ಲಿ ತೊಳೆಯಬಹುದು. ಧಾನ್ಯಗಳನ್ನು ಬಿಸಿಲಿಗೆ ಹಾಕಿ ಇಟ್ಟರೆ ಕೆಡುವುದಿಲ್ಲ. ಅಕ್ಕಿಯ ದಾಸ್ತಾನು ಪಾತ್ರೆಯೊಳಗೆ ಒಣಮೆಣಸು, ಬೆಳ್ಳುಳ್ಳಿ ಎಸಳು, ಒಣಗಿಸಿದ ಕಹಿಬೇವಿನೆಲೆಗಳನ್ನು ಹಾಕಿಡಬಹುದು. ಹೋಟೆಲಿನಲ್ಲಿ ತಯಾರಿಸುವ ಆಹಾರದ ಗುಣಮಟ್ಟ ಪರೀಕ್ಷೆ ಮಾಡಬೇಕು.ಕಾಯಿಸಿದ ಎಣ್ಣೆಯಲ್ಲಿ ಪದೇಪದೇ ತಿಂಡಿಗಳನ್ನು ತಯಾರಿಸಿದಾಗ ಗುಣಮಟ್ಟ ಕಡಿಮೆಯಾಗಿ, ರೋಗಕ್ಕೆ ದಾರಿಯಾಗಬಹುದು. ಬೀದಿಬದಿಯ ಆಹಾರ ಸೇವಿಸುವಾಗ ಜಾಗ್ರತೆ, ಜಾಗೃತಿ ಎರಡೂ ಬೇಕು. ಸ್ವಚ್ಛತೆ, ಎಲ್ಲಾ ಆಹಾರವಸ್ತುಗಳಿಗೂ ನಿಗದಿತ ಮಾನದಂಡ ಇವೆಲ್ಲವೂ ಅಗತ್ಯ. ತಯಾರಿ, ಸಂಗ್ರಹ, ವಿತರಣೆ,ಮಾರಾಟ, ಎಲ್ಲವೂ ಕ್ರಮ ಮತ್ತು ನಿಯಮದಡಿಯೇ ಇರಬೇಕು. ಆದಷ್ಟೂ ನೈಸರ್ಗಿಕ ಬೆಳೆದ ವಸ್ತುಗಳು ಒಳ್ಳೆಯದು. ಕಲಬೆರಕೆ ಆಹಾರ ಸೇವನೆಯಿಂದ ಮಾರಕ ರೋಗಗಳು ಇತ್ತೀಚೆಗೆ ಹೆಚ್ಚಾಗಿದೆ. ಮಧುಮೇಹ, ಕ್ಯಾನ್ಸರ್, ಅಸ್ತಮಾ,ಅಲರ್ಜಿ, ಚರ್ಮದ ರೋಗಗಳು, ನರಸಂಬಂಧಿ ಕಾಯಿಲೆಗಳು, ಕಿಡ್ನಿ ಸಮಸ್ಯೆ ಇತ್ಯಾದಿ ಹೆಚ್ಚಾಗಿದೆ.
ಒಟ್ಟಿನಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಲಿ, ಉತ್ತಮ ಆಹಾರವನ್ನು ಸೇವಿಸಿ ಸದೃಢರಾಗೋಣ. ಸ್ವಚ್ಛ ಆಹಾರವನ್ನೇ ಸೇವಿಸೋಣ. ಆದಷ್ಟೂ ಬೀದಿ ಬದಿಯ ಆಹಾರ ಸೇವಿಸುವುದು ಕಡಿಮೆ ಮಾಡಿದರೆ ಉತ್ತಮ. ಹಸಿದವನಿಗೆ ಮಾತ್ರ ಗೊತ್ತು ಹಸಿವಿನ ಬೆಲೆ. ಚೆಲ್ಲುವವರಿಗೆ ಗೊತ್ತಿರಲಾರದು. ಹಸಿದು ಬಂದವಗೆ ಒಂದು ತುತ್ತು ಅನ್ನ ನೀಡಿ ಧನ್ಯರಾಗೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ