ವಿಶ್ವ ಆಹಾರ ದಿನದ ಶುಭಾಶಯಗಳು

ವಿಶ್ವ ಆಹಾರ ದಿನದ ಶುಭಾಶಯಗಳು

" Take what you want - But eat what you took " ( ನಿನಗೆ ಏನು ಬೇಕೋ ಅದನ್ನು ತೆಗೆದುಕೋ - ಆದರೆ ಏನನ್ನು ತೆಗೆದುಕೊಂಡೆಯೋ ಅದನ್ನು ತಿನ್ನು... )ಊಟದ ಟೇಬಲ್ಲಿನ ಮೇಲೆ ಬರೆದಿದ್ದ  ಅಕ್ಷರಗಳು ನನ್ನನ್ನೇ ಅಣಕಿಸುತ್ತಿದ್ದವು. 

ನನಗೆ ಸ್ವಲ್ಪ ಕೋಪ ಬಂತು. ಹೋಟೆಲ್ ಮ್ಯಾನೇಜರ್ ಅನ್ನು ಕರೆದು ಕೇಳಿದೆ " ಇದು ಹೋಟೆಲ್ಲೋ ಅಥವಾ ಧರ್ಮ ಛತ್ರವೋ "

ಆತ ತಡವರಿಸುತ್ತಾ ಉತ್ತರಿಸಿದ " ಸಾರ್ ಇದು ಹೋಟೆಲ್ "

ನಾನು ಹೇಳಿದೆ " ನಾನು ನೀವು ಕೇಳಿದಷ್ಟು ದುಡ್ಡು ಕೊಟ್ಟು ನನಗೆ ಬೇಕಾದ ಊಟ ಕೊಂಡುಕೊಂಡಿದ್ದೇನೆ. ಇದು ಈಗ ನನ್ನ ವಸ್ತು. ಅದನ್ನು ತಿನ್ನುವ, ತಟ್ಟೆಯಲ್ಲೇ ಬಿಡುವ ಅಥವಾ ಬಿಸಾಡುವ ಅಧಿಕಾರ ನನಗಿದೆ. ನೀನು ಯಾರು ಅದನ್ನು ಕೇಳಲಿಕ್ಕೆ. ಈ ರೀತಿ ಬರೆದು ಹೋಟೆಲ್ಲಿನವರು ನನಗೆ ಅವಮಾನ ಮಾಡಿದ್ದೀರಿ " ಎಂದು ಸರಿಯಾಗಿ ದಬಾಯಿಸಿದೆ.

ಆಗ ಮ್ಯಾನೇಜರ್ " ಸರ್ ಅದು ವಿದ್ಯಾವಂತ ನಾಗರಿಕ ಮನುಷ್ಯರಿಗಾಗಿ ಮಾತ್ರ ಬರೆದದ್ದು. ನಿಮಗಲ್ಲ. ದಯವಿಟ್ಟು ಕ್ಷಮಿಸಿ. ನೀವು ಹಣ ನೀಡಿದ ಆಹಾರದ ಸಂಪೂರ್ಣ ಹಕ್ಕು ನಿಮ್ಮದೇ. ನೀವು ಅದನ್ನು ನಿಮ್ಮಿಷ್ಟದಂತೆ ಬಿಸಾಡಬಹುದು. ಮತ್ತೇನಾದರೂ ಆರ್ಡರ್ ಮಾಡುವಿರಾ " ಎಂದು ವಿನಯ ಪೂರ್ವಕವಾಗಿ ಕೇಳಿದ. 

ಆತನ ಮಾತಿನ ವ್ಯಂಗ್ಯ ಅರ್ಥವಾಯಿತು. ಮತ್ತಷ್ಟು ಕೋಪ ಬಂತು. " ಏಯ್ ನಾನು ಯಾರು ಗೊತ್ತಾ. ಮಂತ್ರಿಯ ಮಗ. ನಮ್ಮಪ್ಪ ಪವರ್ ಪುಲ್ ಮಿನಿಸ್ಟರ್. ಈ ಹೋಟೆಲ್ಲನ್ನೇ ಕೊಂಡುಕೊಳ್ಳುತ್ತಾರೆ. ಅರ್ಥವಾಯಿತ. ನಾನು ಅವರ ಮಗ. ಮೂರು ತಲೆಮಾರುಗಳಿಗೆ ಆಗುವಷ್ಟು ಹಣ ಆಸ್ತಿ ನಮ್ಮ ಬಳಿಯಿದೆ. ಪುಟಗೋಸಿ ಈ ಆಹಾರ ಯಾವ ಲೆಕ್ಕ " ಎಂದು ಇಡ್ಲಿ ತಟ್ಟೆಯನ್ನು ಇಡ್ಲಿಗಳ ಸಮೇತ ಆಚೆಗೆ ಎಸೆದೆ. ಆಗ ಅನಿರೀಕ್ಷಿತವಾಗಿ ಒಂದು ಘಟನೆ ನಡೆಯಿತು. ಆ ಹೋಟೆಲ್ ಮಾಣಿ ನನ್ನ ಕೆನ್ನೆಗೆ ಪಟೀರನೆ  ಹೊಡೆದ. ನೋವಿನಿಂದ ಚೀರಿದೆ. ಅಷ್ಟರಲ್ಲಿ ಎಚ್ಚರವಾಯಿತು ಕನಸಿನಿಂದ...

ಬಹುಶಃ ಎರಡು ದಿನದಿಂದ ಆಹಾರ ಸಂರಕ್ಷಣಾ ಜಾಗೃತಿಗಾಗಿ ಮಾಡಿದ ಪಾದಯಾತ್ರೆಯ ಪರಿಣಾಮ ಯಾವುದೋ ರೂಪದಲ್ಲಿ ಈ ಕನಸಾಗಿ ಪರಿವರ್ತನೆ ಹೊಂದಿರಬೇಕು. ‌ಆದರೆ ಸಂದೇಶ ಮಾತ್ರ ಆಹಾರ ಒಂದು ರಾಷ್ಟ್ರೀಯ ಸಂಪನ್ಮೂಲ. ಅದನ್ನು ಹಣ ಕೊಟ್ಟು ನಾವೇ ಕೊಂಡುಕೊಂಡರು ಅದನ್ನು  ವ್ಯರ್ಥ ಮಾಡುವುದು ಅಪರಾಧ. ಹಾಗೆ ಮಾಡಿದರೆ ನಮಗೆ ನಿರೀಕ್ಷಿಸದ ರೀತಿಯಲ್ಲಿ ಶಿಕ್ಷೆ ಖಂಡಿತ ಸಿಗುತ್ತದೆ ಎಂದು ಭಾವಿಸಬಹುದಾಗಿದೆ. ಎಲ್ಲರಿಗೂ ವಿಶ್ವ ಆಹಾರ ದಿನದ ಶುಭಾಶಯಗಳು. 

ಇದನ್ನು ಬರೆಯುತ್ತಿರುವಾಗಲೇ ವಿಶ್ವ ಹಸಿವಿನ ಮಾಪನದ ( Global Hunger Index ) ಅಧ್ಯಯನ ವರದಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಭಾರತದ ಹಸಿವಿನ ಪ್ರಮಾಣ ಅಧ್ಯಯನಕ್ಕೆ ಒಳಪಡಿಸಿದ 144 ದೇಶಗಳಲ್ಲಿ ‌107 ನೇ ಸ್ಥಾನ ಪಡೆದು ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದೆ. ಏಷ್ಯಾದಲ್ಲಿ ಆಫ್ಘನಿಸ್ಥಾನ ಮಾತ್ರ ಭಾರತಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಉಳಿದ ದೇಶಗಳು ಭಾರತಕ್ಕಿಂತ ಉತ್ತಮ ಎಂದು ವರದಿ ಹೇಳುತ್ತದೆ. ಇದು ಆಘಾತಕಾರಿ ಅಂಶ.

ಇರಲಿ, ವರದಿಯಲ್ಲಿ ಸಂಪೂರ್ಣ ಸತ್ಯವಿಲ್ಲ‌. ಅಂಕಿಅಂಶಗಳ ವ್ಯತ್ಯಾಸ ಸಾಕಷ್ಟು ಇರುತ್ತದೆ ಎಂದು ಆರೋಪಿಸಿದರು ನಮ್ಮದೇ ಸುತ್ತಮುತ್ತಲಿನ ಅನುಭವದಲ್ಲಿ ಹೇಳುವುದಾದರೆ ಕೊರೋನಾ ನಂತರ ಭಾರತದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಕಡು ಬಡತನದ ಪ್ರಮಾಣ ಏರಿಕೆಯಾಗಿದೆ. ಬೆಲೆಗಳಲ್ಲಿ - ನಿರುದ್ಯೋಗದಲ್ಲಿ ಅತ್ಯಂತ ಕೆಟ್ಟ ಬದಲಾವಣೆಯಾಗಿದೆ. ಭಾರತೀಯ ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿಗಿಂತ ಸಾಮಾಜಿಕ - ಧಾರ್ಮಿಕ ಸಂಘರ್ಷಕ್ಕೆ ಹೆಚ್ಚಿನ ಮಹತ್ವ ನೀಡಿ ಅತ್ಯಂತ ಕೆಟ್ಟ ದ್ವೇಷಮಯ ವಾತಾವರಣ ಸೃಷ್ಟಿ ಮಾಡಲಾಗಿದೆ. ಅದರ ಪರಿಣಾಮ ಈಗ ದೇಶ ಎದುರಿಸುತ್ತಿದೆ.

ಜನರ ಅರಿವಿಗೆ ಇದು ಇನ್ನೂ ಬಂದಿಲ್ಲ. ಅವರು ಇನ್ನೂ ಸೇಡಿನ ಮನೋಭಾವದಲ್ಲೇ ಮೈ ಮರೆತಿದ್ದಾರೆ. ದೇಶದಲ್ಲಿ ಕೆಲವೇ ಜನರ ಬಳಿ ಸಂಪತ್ತಿನ ಕ್ರೋಡೀಕರಣವಾಗುತ್ತಿದೆ. ಅದರ ಪರಿಣಾಮ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ. ಜನರು ತಮ್ಮ ಮೂಲಭೂತ ಅವಶ್ಯಕತೆಗಳ ಪೂರೈಕೆಗಾಗಿಯೇ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದುಡಿಯಬೇಕಾಗಿದೆ. ಇದರಿಂದಾಗಿ ಮತ್ತೆ ಅನೇಕರಲ್ಲಿ ಗುಲಾಮಿ ಮನೋಭಾವ ಬೆಳೆಯುತ್ತಿದೆ. ಹಣಕ್ಕಾಗಿ ಒಡೆಯನ ಬಳಿ ಪರೋಕ್ಷವಾಗಿ ಜೀತ ಮಾಡುತ್ತಾ ತಮ್ಮ ಸಾಮಾಜಿಕ ಜವಾಬ್ದಾರಿಯನ್ನೇ ಮರೆತಿದ್ದಾರೆ. ವ್ಯವಸ್ಥೆಗೆ ಬೇಕಾಗಿರುವುದೇ ಇದು. ಜನರನ್ನು ಶೋಷಿಸಿ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಅವರು ಸದಾ ಹವಣಿಸುತ್ತಿರುತ್ತಾರೆ ಮತ್ತು ಈ ಬಾರಿ ಯಶಸ್ವಿಯಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಇಂದು ವಿಶ್ವ ಆಹಾರದ ದಿನ. ದೇಶವನ್ನು ಹಸಿವು ಮುಕ್ತ ಮಾಡಲು ಪ್ರತಿಯೊಬ್ಬ ನಾಗರಿಕರು ತಮ್ಮ ತಮ್ಮ ನೆಲೆಯಲ್ಲಿ ಆಹಾರವನ್ನು ವ್ಯರ್ಥ ಮಾಡದೆ ಸದುಪಯೋಗ ಪಡಿಸಿಕೊಂಡು ಒಂದಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.

ಒಂದು ಕಡೆ ಬೆಳೆಯುವ ಹಂತದಿಂದ ಮನೆ ತಲುಪುವವರೆಗೆ, ಇನ್ನೊಂದು ಕಡೆ ಆಹಾರ ತಯಾರಿಕಾ ಹಂತದಿಂದ ತಿನ್ನುವ ಹಂತದವರೆಗೆ ಆಹಾರ ವ್ಯರ್ಥವಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ. ಇಲ್ಲದಿದ್ದರೆ ಈಗಿನ ಪ್ರಾಕೃತಿಕ ಮತ್ತು ಕೃಷಿ ವಾತಾವರಣದಲ್ಲಿ ಮುಂದಿನ ದಿನಗಳಲ್ಲಿ ಆಹಾರದ ತೀವ್ರ ಕ್ಷಾಮ ಎದುರಿಸಬೇಕಾಗಬಹುದು. ಜೊತೆಗೆ ರಾಸಾಯನಿಕ ಮುಕ್ತ ಗುಣಮಟ್ಟದ ಆಹಾರ ಸಹ ಬಹಳ ಮುಖ್ಯ. ರಾಸಾಯನಿಕಯುಕ್ತ ಆಹಾರ ಈಗಾಗಲೇ ನಮ್ಮೆಲ್ಲರ ಆರೋಗ್ಯದಲ್ಲಿ ಏರು ಪೇರು ಉಂಟುಮಾಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಈ ಸಂದರ್ಭದಲ್ಲಿ ಆಹಾರವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳುತ್ತೇವೆ ಮತ್ತು ಇದರ ಬಗ್ಗೆ ನಮ್ಮ ಸುತ್ತಮುತ್ತ ಜಾಗೃತಿ ಮೂಡಿಸುತ್ತೇವೆ ಎಂದು ಮನಸ್ಸಿನಲ್ಲಿಯೇ ಪ್ರತಿಜ್ಞೆ ಮತ್ತು ಸಂಕಲ್ಪ ಮಾಡಿಕೊಳ್ಳೋಣ. ಇದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ.......

***

ನಿನ್ನೆ ದಿನಾಂಕ 15/10/2022 ಶನಿವಾರ ಆಹಾರ ಸಂರಕ್ಷಣಾ ಜಾಗೃತಿಯ ಎರಡನೆಯ ದಿನ ಚಾಮರಾಜಪೇಟೆಯ ಕನ್ನಡ ತಿಂಡಿ ಕೇಂದ್ರದಿಂದ ಪಾದಯಾತ್ರೆ ಪ್ರಾರಂಭಿಸಿ ಬಸವನಗುಡಿ - ಗಾಂಧಿ ಬಜಾರ್ ಮತ್ತು ಸುತ್ತಮುತ್ತಲಿನ ಹೋಟೆಲ್,  ಟ್ರಾಫಿಕ್ ಸಿಗ್ನಲ್, ಶಾಲಾ ಕಾಲೇಜುಗಳಲ್ಲಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸುತ್ತಾ ಒಂದಷ್ಟು ಸಂವಾದ ಮಾಡುತ್ತಾ, ಘೋಷಣೆ ಕೂಗುತ್ತಾ ಸಾಧ್ಯವಾದಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿದೆವು. ಇದು ಒಂದು ಸಣ್ಣ ಪ್ರಯತ್ನ ಅಷ್ಟೆ. ಸರ್ಕಾರಗಳು ಈ ನಿಟ್ಟಿನಲ್ಲಿ ದೊಡ್ಡ ಪ್ರಯತ್ನ ಮಾಡಿದರೆ ಮಾತ್ರ ಸ್ವಲ್ಪ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ