ವಿಶ್ವ ಕುಟುಂಬ ದಿನಕ್ಕೊಂದು ಝಲಕ್!

ವಿಶ್ವ ಕುಟುಂಬ ದಿನಕ್ಕೊಂದು ಝಲಕ್!

‘ಮನುಷ್ಯತ್ವಂ ಹಿ ದುರ್ಲಭಮ್*’ಎಲ್ಲಾ ಜೀವಿಗಳಲ್ಲಿ ಮಾನವ ಜನ್ಮವೇ ದುರ್ಲಭವಾದುದು, ಶ್ರೇಷ್ಠವಾದುದೆಂದು ನಾವು ತಿಳಿದವರಿದ್ದೇವೆ. ಮನುಷ್ಯರಾಗಿ ಜನಿಸಿದ ನಾವುಗಳು ಜನ್ಮದ ತಿರುಳನ್ನು ಸಾರ್ಥಕಪಡಿಸಿಕೊಳ್ಳಬೇಕು. ಧರ್ಮಾಚರಣೆಯೊಂದಿಗೆ ಮಾನವತೆಯ ನೆರಳಿನಡಿಯಲ್ಲಿ ಬದುಕಿ ಬಾಳುವುದು ನಮ್ಮ ಕರ್ತವ್ಯ ಸಹ. ಒಂದು ಕುಟುಂಬ, ಮನೆ ಎಂದಾಗ ಹಿರಿಯರು-ಕಿರಿಯರು ಸೇರಿ ಇರುವುದು ಸಹಜ. ಸುಮಾರು ೩೦-೪೦ ವರುಷಗಳ ಹಿಂದಕ್ಕೆ ನೋಡಿದರೆ ಎಲ್ಲೆಡೆಯು ಅವಿಭಕ್ತ ಕುಟುಂಬಗಳೇ. ಸಣ್ಣ ಸಣ್ಣ ಕುಟುಂಬ ಬಹಳ ಅಪರೂಪ. ಕೂಡು ಕುಟುಂಬದಲ್ಲಿ ೪-೫ ಹಿರಿಯ ದಂಪತಿಗಳು, ಅವರ ಹೆತ್ತವರು, ಪುಟ್ಟ ಪುಟ್ಟ ಮಕ್ಕಳು. ಆಗಿನ ಜೀವನ ಪದ್ಧತಿಯೇ ಬೇರೆ. ನಾಲ್ಕು ಗಂಟೆಗೆಲ್ಲ ಎದ್ದು, ಹಟ್ಟಿ ದನಕರುಗಳ ಕೆಲಸ, ದೇವರ ಪೂಜೆ,‌ ಸ್ವತ: ತರಕಾರಿ ಕೈತೋಟದ ಕೆಲಸ ಬೊಗ‌ಸೆ ಮುಗಿಸುತ್ತಿದ್ದರು. ಮಕ್ಕಳೆಲ್ಲ ಆರು ಗಂಟೆಗೆದ್ದು ಸಣ್ಣಪುಟ್ಟ ಸಹಕಾರ (ತೋಟವಿದ್ದವರು ಬೆಳಿಗ್ಗೆ ಅಡಿಕೆ ಹೆಕ್ಕಿ ತರುವುದು, ಹಸುಗಳಿಗೆ ಹುಲ್ಲು ಇತ್ಯಾದಿ) ಸಹಕಾರ. ತಿಂಡಿ ಆಗಿ ಶಾಲೆಯತ್ತ ಪಯಣ. ಈಗಿನ ಹಾಗೆ ಹತ್ತಿರ ಶಾಲೆಯಿರದು. ೨-೩ ಮೈಲು ದೂರ ನಡೆದೇ ಹೋಗಬೇಕು. ದೊಡ್ಡವರು ತೋಟದ ಕೆಲಸ. ಮನೆಯ ಹೆಂಗಳೆಯರು ಮನೆಕೆಲಸದೊಂದಿಗೆ ಕೃಷಿಕಾರ್ಯಗಳಲ್ಲೂ ಸಹಕರಿಸುತ್ತಿದ್ದರು. ಈಗಂತೂ ಇದೆಲ್ಲ ಕೇವಲ ಬೆರಳೆಣಿಕೆ ಮನೆಗಳಲ್ಲಿ ಕಾಣಬಹುದಷ್ಟೆ.

ಆ ಕೂಡು ಕುಟುಂಬದ ಆನಂದ, ನಲಿವು, ವೈಭೋಗ ಮತ್ತೆಂದೂ ಕಾಣಸಿಗದು ಅನ್ನಿಸ್ತದೆ. ಹಾಗಾದರೆ ಅಲ್ಲಿ ಅವರುಗಳ ನಡುವೆ ಜಗಳ, ಮನಸ್ತಾಪ, ಅಸಹನೆ, ಕೋಪ, ಸಿಟ್ಟುಗಳಿಗೇನು ಕಡಿಮೆಯಿರಲಿಲ್ಲ. ಎಲ್ಲವೂ ಬೂದಿಮುಚ್ಚಿದ ಕೆಂಡವಾಗಿತ್ತು ಎನ್ನುವುದು ಒಪ್ಪತಕ್ಕ ಮಾತು. ಆದರೆ ಮನೆಯ ಹಿರಿಯರಿಗೆ ಎದುರು ನಿಂತು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ, ಯಾರೂ ಎದುರುತ್ತರ ಕೊಡುತ್ತಿರಲಿಲ್ಲ .ತಂದೆಯೆದುರು ಕುಳಿತು ಆತ್ಮೀಯತೆಯಲ್ಲಿ ಮಾತುಕತೆಯಾಡುವ ಗಂಡು ಮಕ್ಕಳು ಬಹಳ ಅಪರೂಪ. ಹೆಣ್ಣು ಮಕ್ಕಳು ಸಲುಗೆಯಿಂದ ಮಾತನಾಡುವುದನ್ನು ನೋಡಿದ್ದೇವೆ. ಇದೇನು ಹೆದರಿಕೆ, ಅಂಜಿಕೆ, ಭೀತಿಯಲ್ಲ. ಗೌರವದ ಪ್ರತೀಕ ಅಷ್ಟೆ.

ನಮ್ಮ ಭಾರತೀಯ ಕುಟುಂಬ ವ್ಯವಸ್ಥೆಯೇ ಹಾಗಿದೆ. ಕುಟುಂಬದಿಂದ ನಾವೇನು ಪಡೆದಿದ್ದೇವೆಂದು ಅವಲೋಕಿಸಿದರೆ ಪ್ರೀತಿ, ವಾತ್ಸಲ್ಯ, ಮಮಕಾರ, ತಿಳುವಳಿಕೆ, ಜ್ಞಾನ, ಬದುಕಿನ ದಾರಿ, ಸ್ವಂತ ಕಾಲಮೇಲೆ ನಿಲ್ಲುವ ಸಾಮರ್ಥ್ಯ, ಧೈರ್ಯ, ಭಯ-ಭಕ್ತಿ, ಎಲ್ಲದಕ್ಕಿಂತ ಹೆಚ್ಚು ಪರಸ್ಪರ ಸಂಬಂಧಗಳ ಮೌಲ್ಯ. ಆದರೆ ಇಷ್ಟೆಲ್ಲ ಪಡೆದ ನಾವುಗಳು ಕುಟುಂಬಕ್ಕಾಗಿ ಏನು ತ್ಯಾಗ ಮಾಡಿದ್ದೇವೆಂದು ಅರೆಕ್ಷಣ ಯೋಚಿಸಿದ್ದೇವೆಯೇ? ಬೆನ್ನು ತಿರುಗಿಸಿ ಹೋಗಿಯೇ ಬಿಡುತ್ತೇವೆ. ಸ್ವಾರ್ಥದ ಮನಸ್ಸು ಶರೀರ ಹೊಕ್ಕರೆ ಮತ್ತಾರು, ಮತ್ತಾವುದೂ ಬೇಡ. ತಾನು, ತನ್ನ ಹೆಂಡತಿ-ಗಂಡ, ಮಕ್ಕಳು ಮಾತ್ರ. ಉಳಿದ ಎಲ್ಲಾ ನಗಣ್ಯ.

ಹಿರಿಯರ ತ್ಯಾಗಕ್ಕೆ ಬೆಲೆಕಟ್ಟಲಾಗದು. ಮಾನವತೆಯ ದೃಷ್ಟಿಯನ್ನಾದರೂ ಬೀರಲೇ ಬೇಕು. ಓರ್ವ ಹಿರಿಯರು ಒಮ್ಮೆ ಹೇಳಿದ ಮಾತು 'ಫಲವಸ್ತುಗಳನ್ನು ನೆಟ್ಟು ಬೆಳೆಸುವುದು ನಾವೇ ತಿನ್ನಬೇಕೆಂದು, ಆದರೆ ತಿನ್ನಲು ಆಗದಿದ್ದರೆ ನಮ್ಮ ಮುಂದಿನವರಾದರೂ ಫಲವನ್ನು ಅನುಭವಿಸುವರಲ್ಲ ಅದೇ ಸಂತೋಷ'. ಸತ್ಯವಾದ ಮಾತು. ಏನೇ ಕಷ್ಟವಾಗಲಿ ಹೊಂದಿ ಬಾಳುವುದರಿಂದಾಗಿ ಕುಟುಂಬಗಳು ಛಿದ್ರವಾಗದೆ ಉಳಿಯಿತು. ಇತ್ತೀಚೆಗೆ ನಾವು ನೋಡಿದ ಹಾಗೆ ಹೊಂದಾಣಿಕೆ ಕೊರತೆ, ಪರಸ್ಪರ ರಾಗ-ದ್ವೇಷಗಳು, ನಾನು-ನನ್ನದೆಂಬ ಮನೋಭಾವನೆ, ಐಷಾರಾಮಿ ಜೀವನದ ಕನಸು, ಯಾರೂ ಅಡ್ಡಿಯಾಗಬಾರದೆಂಬ ಸಂಕುಚಿತ ಧೋರಣೆ, ಮಾಡಿದ್ದೇ ಜೀವನ, ಆಡಿದ್ದೇ ಆಟ, ಪಟ್ಟಣದ ಕೆಲಸ, ಈ ಎಲ್ಲದರಿಂದಾಗಿ ಪ್ರತ್ಯೇಕವಾಗಲು ಆರಂಭವಾಗಿ ಅವಿಭಕ್ತ ವಿಭಕ್ತವಾಯಿತು. ಊರಲ್ಲಿರುವ ಹಿರಿಯರು ಅನಾಥರಾದರು, ಏಕಾಂಗಿಗಳಾದರು. ನೆರೆಹೊರೆಯವರು ನೋಡಿಕೊಳ್ಳುವ ಸ್ಥಿತಿ ಬಂದೊದಗಿತು. ಸಾಕಷ್ಟು ಜೀವನದ ಹಾದಿಗೆ ಸಂಪತ್ತಿದ್ದರೂ ನೆಮ್ಮದಿ ಕನಸಿನ ಮಾತಾಯಿತು. ವೃದ್ಧಾಶ್ರಮ, ಅನಾಥಾಶ್ರಮ, ಅಭಯಧಾಮಗಳಲ್ಲಿ ಹಿರಿಯರು ಆಸರೆ ಪಡೆಯುವಂತಾಯಿತು. ಯಾಕೆ ಹೀಗೆ? ಹೆತ್ತವರೆದುರು ಹಣವೇ ಮುಖ್ಯವಾಯಿತೆಂಬುದು ಸ್ಪಷ್ಟ. ಹೊರ ದೇಶಕ್ಕೆ ಹೋದವರು ಅಲ್ಲಿಯೇ ನೆಲೆ ನಿಲ್ಲುವುದು ಸಾಮಾನ್ಯವಾಗಿ ಹೋಯಿತು. ಹಿರಿಯರ ಆಸೆ-ಆಕಾಂಕ್ಷೆಗಳು ಗಾಳಿಗೆ ತೂರಲ್ಪಟ್ಟಿತು.

ನವ ಪೀಳಿಗೆಯವರು ಹೆತ್ತವರ ನೋವನ್ನು, ಪಟ್ಟ ಕಷ್ಟವನ್ನು ಒಂದು ಕ್ಷಣ ಕಣ್ಣ ಮುಂದೆ ತಂದು ವ್ಯವಹರಿಸಿ, ತುಡಿಯುವ, ಮಿಡಿಯುವ ಜೀವಗಳ ಬಗ್ಗೆ ಯೋಚಿಸಿ. ನಿಮಗೆ ಬೇಕೆಂದಾಗ ಎಲ್ಲವನ್ನೂ ಕಳೆದುಕೊಳ್ಳುತ್ತೀರಿ. ಮತ್ತೆ ಶೋಕಿಸಿ ಮರುಗದಿರಿ.

ಪರಿಚಯದ ಬಂಧುವೊಬ್ಬರು ಧಾರಾಳ ಬದುಕಿನ ದಾರಿಯಿದ್ದರೂ ಹೊರದೇಶಕ್ಕೆ ನಡೆದರು. ಅಪ್ಪ ಅಮ್ಮ ಕಣ್ಣುಮುಚ್ಚಿದಾಗಲೂ ಬಾರದೆ, ನಂತರ ಬಂದು ಕಣ್ಣೀರು ಹಾಕಿದರು. ನಮ್ಮ ಬಂಧುವೋರ್ವರು ವಿದೇಶೀ ವ್ಯಾಮೋಹದ ಮಗ-ಸೊಸೆಯಿಂದಾಗಿ ಬದುಕಿಗೇ ಇತಿಶ್ರೀ ಹಾಡಿದ್ದಾರೆ. ಯಾರಿಗೂ ಅಂಥವರ ಮೇಲೆ ಕನಿಕರ ಬಾರದು. ಕೊರೊನಾ ಕಾಲಘಟ್ಟದಲ್ಲಿ ಎಲ್ಲರು ಇದ್ದೂ ಇಲ್ಲದಂತಾಯಿತು .ಅದು ಅನಿವಾರ್ಯವೂ ಹೌದು.

ಇಂದಿನ ಸ್ಥಿತಿಗತಿ ಅವಲೋಕಿಸಿದಾಗ ಇದು ಎಲ್ಲಿಗೆ ತಲುಪಬಹುದೆಂದು ಅರ್ಥವಾಗುತ್ತಿಲ್ಲ. ಬೆಕ್ಕಿನ ಬಿಡಾರ ಬೇರೆ ಎಂಬಂತೆ ಒಂದೇ ಕುಟುಂಬ ಒಡೆದು ಹಲವಾರು ಮನೆಗಳಾಯಿತು. ಏನೇ ಕಷ್ಟ-ನಷ್ಟಗಳಾದರೂ ಅವರವರ ಬದುಕು ಅವರವರಿಗೆ ಎಂಬಂತಾಯಿತು. ಕೆಲವರಿಗಂತೂ ತಮ್ಮ ಮನೆಗಳಿಗೆ ಯಾರೂ ಬರುವುದು ಬೇಡ ಎಂಬ ಧೋರಣೆ, ‘ನಾನು ಯಾರನ್ನೂ ನನ್ನ ಮನೆಗೆ ಬರಹೇಳಲಾರೆ’ ಎಂದದ್ದೂ ಇದೆ. ಸೋತು ಬಿದ್ದ ಕಾಲಕ್ಕೆ ದೇವರೇ ಗತಿ. ಆತ ಸಹ ದೂರದಿಂದಲೇ ನೋಡಿ ಹೋದಾನು ಅನ್ನಿಸ್ತದೆ. ಬಂಧು ಬಳಗ ಎಲ್ಲ ಸುಖ-ದು:ಖದಲ್ಲಿ ಬೆರೆಯುವುದೇ ಜೀವನವಲ್ಲವೇ? ಹಣ ಸೇರಿದಂತೆ ಮಾನವತೆ ಓಡಿಹೋಗುವುದಂತೆ, ಇದು ಸತ್ಯ ಎಂದು ಮನಸ್ಸು ಹೇಳುವುದುಂಟು. ಸೋತಾಗ ಯಾರ ಮನೆಗಾದರೂ ಹೋದರೆ ಒಳಗೆ ಗುಸುಗುಸು -ಪಿಸು ಪಿಸು ಮಾತುಗಳು, ಇವರೆಲ್ಲಿಯಾದರೂ ಹಣದ ಸಹಾಯ ಕೇಳಲು ಬಂದಿರಬಹುದೆಂದು. ಈತ ಹೋದದ್ದು ತನ್ನ ಮನೆಯ ದೇವತಾಕಾರ್ಯಕ್ಕೆ ಆಹ್ವಾನಿಸಲು. ಐಶ್ವರ್ಯ ಮತ್ತು ಮನುಷ್ಯತ್ವ ಒಟ್ಟಿಗೆ ಬಲು ಅಪರೂಪ.

ನಮ್ಮ ಬಂಧುವೋರ್ವರು ಹೇಳಿದ್ದುಂಟು ಕೃಷಿಭೂಮಿ ಮಾರಾಟ ಮಾಡಿ ಅನಾಥಾಶ್ರಮದಲ್ಲಿ ನೆಮ್ಮದಿಯಾಗಿರುತ್ತೇನೆಂದು. ಉಸಿರು ನಿಂತ ಮೇಲೆ ದೇಹದಿಂದ ಸಹ ಯಾರಿಗೂ ತೊಂದರೆ ಬೇಡ, ಆಸ್ಪತ್ರೆಗೆ ದೇಹದಾನ ಮಾಡ್ತೇನೆ ಎಂಬುದಾಗಿ, ನಾಲ್ಕಾರು ಮಕ್ಕಳಿದ್ದೂ ಹೀಗಾದರೆ ಏನು ಹೇಳೋಣ? ಅಣ್ಣತಮ್ಮಂದಿರು, ಹತ್ತಿರದ ಬಂಧುಗಳು ಕಡುಕಷ್ಟದಲ್ಲಿ ಸಂಕಟ ಪಡುತ್ತಿರುವಾಗ, ತಾನು ಮಾತ್ರ ಏನೂ ಆಗದವನಂತೆ ನಿಶ್ಚಿಂತೆಯಿಂದ ಉಂಡುಟ್ಟು  ನಿದ್ರಸಿದರೆ ಆತನ ಜನ್ಮಕ್ಕೊಂದು ಅರ್ಥವಿದೆಯೇ? ಆತ ಮಹಾಸ್ವಾರ್ಥಿ. ಎತ್ತ ಸಾಗುತ್ತಿದೆ ಕುಟುಂಬ ವ್ಯವಸ್ಥೆ, ಪರಸ್ಪರ ಸಂಬಂಧಗಳು. ಕಳೆದದ್ದು ಹೋಗಲಿ.

*ಗತೇ ಶೋಕೋ ನ ಕರ್ತವ್ಯೋ ಭವಿಷ್ಯಂ ನೈವ ಚಿಂತಯೇತ್/*

*ವರ್ತಮಾನೇನ ಕಾಲೇನ ವರ್ತಯಂತಿ ವಿಚಕ್ಷಣಾ://*

ಹಿಂದೆ  ಆಗಿಹೋದದ್ದು ಬೇಡ.ಅದಕ್ಕಾಗಿ ಶೋಕಿಸಿ, ಚಿಂತಿಸಿ ಕಾಲಹರಣ ಮಾಡಬಾರದು. ಮುಂದೆ ಏನಾಗುವುದೋ ನಂತರದ ಪ್ರಶ್ನೆ. ಪ್ರಕೃತ ವರ್ತಮಾನದಲ್ಲಿ ಏನಾದರೂ ಮಾಡಬಹುದೇ ಎಂದು ವಿವೇಕಿಗಳು ಆಲೋಚಿಸುವರು. ಇಲ್ಲಿಂದಲೇ ಹೊಸತನ, ಹೊಸಹೆಜ್ಜೆ ಹಿಂದಿನ ಸಂಪ್ರದಾಯ, ಸಂಸ್ಕಾರ ,ಆಚಾರ-ವಿಚಾರದಡಿಯಲ್ಲಿ ಇಡುವಂತಾಗಲಿ ಎಂಬ ಸದಾಶಯ.ಮನೆ-ಮನಗಳನ್ನು ಒಗ್ಗೂಡಿಸಲಿ.

ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಅಲವೇ? ಪರಸ್ಪರ ಅಹಂನ್ನು ಬಿಟ್ಟು ಹೊಂದಾಣಿಕೆಯೆಂಬ ಪುಷ್ಪದಿಂದ ಮಾಲೆ ಹೆಣೆದು, ಸಂಬಂಧಗಳಿಗೆ ಮುಡಿಸೋಣ. ಬೆಸೆಯೋಣ.ಘಮಲ ಹರಿಸೋಣ ಸ್ನೇಹಿತರೇ. ಹಿರಿಯ-ಕಿರಿಯ ಭೇದ ಬೇಡ. ಅರಿತು-ಕಲೆತು ಬಾಳೋಣ. ನಮ್ಮಿಂದಲೇ ಬದಲಾವಣೆಯ ಹೆಜ್ಜೆ ಊರಲ್ಪಡಲಿ.

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ :ಸಂಸ್ಕೃತಿ ಗುಚ್ಛ)

ಚಿತ್ರ ಕೃಪೆ: ಇಂಟರ್ನೆಟ್ ತಾಣ