ವಿಶ್ವ ಕುಟುಂಬ ದಿನ
*ಮೇ ೧೫ರಂದು ವಿಶ್ವ ಕುಟುಂಬ ದಿನ* ಎಂದು ಆಚರಿಸಲಾಗುತ್ತದೆ. ಇದು ಪರಮಾಶ್ಚರ್ಯವಲ್ಲವೇ? ಕುಟುಂಬ ಎಂಬುದು ಸನಾತನ ಸಂಸ್ಕೃತಿಯ ಧ್ಯೋತಕ. ಅದಕ್ಕೂ ಆಚರಣೆ ಮಾಡುವ ಕಾಲ ಬಂತಲ್ಲ ಅನ್ನಿಸ್ತದೆ. ಕುಟುಂಬದ ಅಗತ್ಯ ಈ ಪ್ರಸ್ತುತ ಸಮಯದಲ್ಲಿ ಮೊದಲಿಗಿಂತಲೂ ಅಧಿಕವಾಗಿದೆ.
ಹೌದು ಸ್ನೇಹಿತರೇ, ಅವಿಭಕ್ತ ಕುಟುಂಬಗಳು ಇಂದು ಬಹಳ ಅಪರೂಪ. ವಿಭಕ್ತ ಕುಟುಂಬ ಎಲ್ಲೆಡೆ ಕಾಣಸಿಗುತ್ತದೆ. ಈಗ ಅದೂ ಕಡಿಮೆಯಾಗಿ *ಲೀವಿಂಗ್ ಟುಗೆದರ್* ಶಾಸ್ತ್ರೋಕ್ತವಾಗಿ ಮದುವೆಯಾಗದೆ, ಗಂಡ ಹೆಂಡಿರಂತೆ ಇರುವುದಂತೆ. ಮದುವೆ ಎಂಬ ಬಂಧನ ಬೇಡ, ಮತ್ತೆಲ್ಲ ಬೇಕು.
ನಾವು ಭಾರತೀಯರು, ಸಂಸ್ಕೃತಿ, ಸಂಪ್ರದಾಯ, ಆಚರಣೆ, ಅನುಕರಣೆ, ನೈತಿಕ ಮೌಲ್ಯಗಳನ್ನು ಇನ್ನೂ ನಮ್ಮ ಬದುಕಿನ ಹೆಜ್ಜೆಗಳಲ್ಲಿ ಗುರುತಿಸಿಕೊಂಡವರು. ಮನೆ ಎಂದ ಮೇಲೆ, ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಅಣ್ಣ, ಅಕ್ಕ, ತಮ್ಮ,ತಂಗಿ ಇನ್ನೂ ಒಂದಷ್ಟು ಜನ ಒಟ್ಟಾಗಿ ವಾಸಿಸುವುದು ಸಾಮಾನ್ಯ. ಆದರೆ ಈಗ? ಯಾವುದೂ ಇಲ್ಲ. ಗಂಡ-ಹೆಂಡತಿ, ಒಂದೇ ಮಗು, ತಪ್ಪಿದರೆ ಎರಡು ಅಲ್ಲಿಗೆ ಒಂದು ಕುಟುಂಬ ಆಯಿತು.
ನಾವೆಲ್ಲ ಚಿಕ್ಕವರಿದ್ದಾಗ ಮನೆ ತುಂಬಾ ಜನ. ಅಣ್ಣತಮ್ಮಂದಿರ ಮಕ್ಕಳು, ಹಿರಿಯರು ಎಲ್ಲಾ ಸೇರಿ ನಮ್ಮ ಮನೆಯಲ್ಲಿ ೩೫ ಮಂದಿ ಇದ್ದೆವು. ಎಷ್ಟು ಖುಷಿ ಆಗ. ನನ್ನ ಗಂಡನ ಮನೆಯಲ್ಲಿ ೧೩ ಮಂದಿ. ಈಗ ಎಲ್ಲರೂ ಒಟ್ಟಾಗಿ ಸೇರಿದರೆ ೩೦ ಜನ ಆಗ್ತೇವೆ. ಎಲ್ಲರೂ ಅವರವರ ಬದುಕು ಕಟ್ಟಿಕೊಳ್ಳಲು ಗೂಡು ಬಿಟ್ಟ ಹಕ್ಕಿಗಳಾಗಲೇ ಬೇಕಾದ ಅನಿವಾರ್ಯತೆ ಈಗ ಕಾಡುತ್ತಿದೆ. ಪರಿಸ್ಥಿತಿ ಮತ್ತು ಅನಿವಾರ್ಯತೆಯ ಕಾರಣದಿಂದ, ಜೀವನಕ್ಕೊಂದು ದಾರಿಗೆ ಬೇಕಾಗಿ ಬೇರೆ ಬೇರೆ ವಾಸಿಸಲೇ ಬೇಕಾಗುತ್ತದೆ.
ಮನೆಯಲ್ಲಿ ಏನಾದರೂ ಕಾರ್ಯಕ್ರಮಗಳಿದ್ದಾಗ ಮನೆಯ ಸದಸ್ಯರು ಒಟ್ಟಾಗುತ್ತಾರೆ. ಒಟ್ಟು ಕುಟುಂಬದಲ್ಲಿ ಬೆಳೆಯುವ ಮಕ್ಕಳು ತುಂಬಾ ಸಮಯಪ್ರಜ್ಞೆ, ಚಾಕಚಕ್ಯತೆ, ಬುದ್ಧಿವಂತಿಕೆ ಹೊಂದಿರುತ್ತಾರೆ. ಅನುಕರಣೆ, ನೋಡಿ ಕಲಿಯುವುದು ಹೆಚ್ಚು.
ಇನ್ನು ಕೆಲವು ಮನೆಗಳಲ್ಲಿ ಬೆಳಗಿನಿಂದ ರಾತ್ರಿಯವರೆಗೆ ತಮ್ಮ ಮಕ್ಕಳನ್ನು ಅನಿವಾರ್ಯವಾಗಿ *ಪ್ಲೇ ಹೋಮ್*
ಮಕ್ಕಳನ್ನು ನೋಡಿಕೊಳ್ಳುವ ಕೇಂದ್ರಗಳಲ್ಲಿ ಬಿಡುತ್ತಾರೆ. ಕಾರಣ ಅವರಿಗೆ ಅವರ ಕೆಲಸ ಮುಖ್ಯ. ಎಷ್ಟೋ ಉದ್ಯೋಗದಲ್ಲಿರುವ ಮಹಿಳೆಯರ ಹತ್ತಿರ ಮಾತನಾಡುವಾಗ ಅವರು ಹೇಳಿದ ಮಾತುಗಳು "ಮೊದಲು ಉದ್ಯೋಗ, ಹಣ ಸಂಪಾದನೆ, ಸ್ವಂತ ಮನೆ, ಮನೆಗೆ ವಾಹನ (ಕಾರು, ಬೈಕು, ಸ್ಕೂಟಿ) ಇಷ್ಟೆಲ್ಲಾ ಆದ ಮೇಲೆ ಮಗುವಿನ ಆಲೋಚನೆ" ಎಂಬುದಾಗಿ. ಆಗ ಮಧ್ಯವಯಸ್ಸು ದಾಟಿರುತ್ತದೆ. ಬೇಕು ಎಂದು ಬಯಸಿದರೂ ಮಕ್ಕಳಭಾಗ್ಯ ಇಲ್ಲ ಕೆಲವು ಮಂದಿಗೆ. ಆಗ ಈ ಸಂಪಾದನೆ ಯಾರಿಗೆ ಹೇಳಿ?
ಆಯಾಯ ಕಾಲಕ್ಕೆ ಏನಾಗಬೇಕೋ ಅದು ಆಗಲೇ ಬೇಕು. ಇಲ್ಲದಿದ್ದರೆ ಮತ್ತೆ ಒಟ್ಟು ಗೋಳು, ತಲೆಬಿಸಿ, ಇಲ್ಲದ ರೋಗಗಳಿಗೆ ಆಹ್ವಾನ ನೀಡಿದಂತೆ. ಮಗುವನ್ನು ಎಲ್ಲರೊಂದಿಗೆ ಬೆರೆತು ಬದುಕಲು ಕಲಿಸೋಣ. ಇಂದು ಹೆಚ್ಚಿನ ಮಕ್ಕಳು ಒಂಟಿತನ ಅನುಭವಿಸುವುದು ಸಾಮಾನ್ಯವಾಗಿದೆ. ಮುಂದೆ ದೊಡ್ಡವನಾದಾಗಲೂ ಅವನು ಒಂಟಿಯಾಗಿಯೇ ಇರಬಯಸುತ್ತಾನೆ. ಪರಿಸರ, ಮನೆಯ ವಾತಾವರಣ, ಶಾಲಾ ಜೀವನ ಮಗುವಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮಗುವಿಗೆ ಲೋಕಜ್ಞಾನ, ಜೀವನಾನುಭವ ಕಲಿಸುವುದು ಹೆತ್ತವರ ಕರ್ತವ್ಯ ಸಹ.
ರಜಾಕಾಲದಲ್ಲಿ ಆದರೂ ಹಳ್ಳಿಯ ಮನೆಗಳಲ್ಲಿ ಹೋಗಿ ಇದ್ದು ಒಟ್ಟಾಗಿ ಇರುವುದನ್ನು ರೂಢಿಸಿಕೊಳ್ಳೋಣ. ಇಂದು ಹಳ್ಳಿಯ ಮನೆ ತೋಟ ಗದ್ದೆಗಳು, ಹಿರಿಯರು ಮಾತ್ರ ಇರುವ ಹಾಗಾಗಿದೆ. ಪೇಟೆಯ ಐಷಾರಾಮಿ ಜೀವನದ ಆಕರ್ಷಣೆ ಯುವಕ ಯುವತಿಯರನ್ನು ತನ್ನತ್ತ ಸೆಳೆಯುತ್ತಿದೆ. ಹೆತ್ತವರ ಬದುಕು ಅರಣ್ಯ ರೋಧನವಾಗಿದೆ. ಇದೆಲ್ಲಾ ನಾವೇ ಮಾಡಿಕೊಂಡ ಅನಾಹುತಗಳು ಎಂದೇ ಹೇಳಬೇಕಷ್ಟೆ.
ಈ ಎಲ್ಲಾ ಗೊಂದಲಗಳ ಎಡೆಯಲ್ಲಿ *ವಿಶ್ವಕುಟುಂಬದ* ಪರಿಕಲ್ಪನೆ ಬಂದದ್ದಿರಬಹುದು. ಈ ಒಂದು ದಿನವಾದರೂ ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಕೂಡಿ ಆಡಿ ನಲಿದು, ಉಂಡು ತಿಂದು ಸಂತೋಷವಾಗಿದ್ದು, ತಮ್ಮ ಮುಂದಿನ ಪೀಳಿಗೆಗೆ ಆದರ್ಶ ಪ್ರಾಯರಾಗಿರಲಿ ಎಂದು ಆಶಿಸೋಣ. *ವಸುದೈವ ಕುಟುಂಬಕಂ* ಸಾರ್ಥಕ ಪಡಿಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಅಂತರ್ಜಾಲ ತಾಣ