ವಿಶ್ವ ಜನಸಂಖ್ಯಾ ದಿನದ ಅರಿವು-ತಿಳಿವು

ವಿಶ್ವ ಜನಸಂಖ್ಯಾ ದಿನದ ಅರಿವು-ತಿಳಿವು

'ವಿಶ್ವ ಜನಸಂಖ್ಯಾ ದಿನ' ಜುಲೈ ೧೧, ೧೯೮೭ರಲ್ಲಿ ಮೊದಲ ಸಲ ಆಚರಿಸಲಾಯಿತು. ಜಾಗತಿಕ ದಿನಾಚರಣೆಯಾಗಿ ಆಚರಿಸಲು ಕಾರಣ, ಜನಸಂಖ್ಯೆಯ ಮಿತಿಮೀರಿ ಏರಿಕೆ. ಒಂದು ಅಂದಾಜಿನ ಪ್ರಕಾರ ಮೊದಲ ಆಚರಣೆಯಂದು ವಿಶ್ವದ ಜನಸಂಖ್ಯೆ  ೫ ಬಿಲಿಯನ್ ತಲುಪಿತೆಂದು ಸುದ್ಧಿಯಾಗಿದೆ. ಜನಸಂಖ್ಯೆಯ ಏರಿಕೆ ವರವೋ ಶಾಪವೋ ಒಂದು ಅರ್ಥೈಸಲಾರದ ಮಟ್ಟಿಗೆ ತಲುಪಿದೆ. ಮಾನವ ಸಂಪನ್ಮೂಲವನ್ನು ಉತ್ತಮವಾಗಿ ಮೌಲ್ಯವರ್ಧಿತ ಉತ್ಪನ್ನ ಕಾರ್ಯಗಳಲ್ಲಿ ತೊಡಗಿಸಿಕೊಂಡು,ಉದ್ಯೋಗ, ಕೃಷಿ, ಸ್ವಾವಲಂಬನೆ ಮೂಲಕ ಆರ್ಥಿಕವಾಗಿ ಎತ್ತರಿಸಿ, ಬದುಕಿನ ದಾರಿ ಕಂಡುಕೊಂಡರೆ ಜನಸಂಖ್ಯೆ ಖಂಡಿತಾ ಶಾಪವಲ್ಲ. ಅದಲ್ಲದೆ ಇಷ್ಟೊಂದು ಜನರ ಆರ್ಥಿಕ ಸ್ವಾವಲಂಬನೆ ದೊಡ್ಡ ಸವಾಲಲ್ಲವೇ? ಜನಾಂಗ, ಲಿಂಗಭೇದ, ಅಂಗವೈಕಲ್ಯ, ಮತ ಧರ್ಮಾಚರಣೆಗಳು ಇವುಗಳಿಂದಾಗಿ ಸಮಾನತೆ ಕನಸಿನ ಮಾತಾಗಿದೆ.

ಏನೂ ಮಾಡದೆ,ಕಾಲಹರಣ ಮಾಡಿಕೊಂಡು, ದಿವಸಗಳನ್ನು ದೂಡುವ,ಅಪರಾಧ ಚಟುವಟಿಕೆಗಳನ್ನು ಮಾಡುವ, ನಿರುದ್ಯೋಗ, ಅನಕ್ಷರತೆಯ ಪಿಡುಗು ಇವುಗಳೆಲ್ಲ ಜನಸಂಖ್ಯೆ ಹೆಚ್ಚಳದ ಶಾಪಗಳು. ಅತಿಯಾದ ಜನಸಂಖ್ಯೆಯಿಂದ ಉದ್ಯೋಗದ ತೊಡಕು, ಸಮಾಜದ ಮೇಲೆ ಒತ್ತಡ, ಅಪರಾಧಗಳ ಹೆಚ್ಚಳ, ಕಲೆ, ಸುಲಿಗೆ, (ಹಣಗಳಿಕೆಯ ದಾರಿಗಳು) ಮಾನವ ಕಳ್ಳ ಸಾಗಣೆ, ಚಿಕ್ಕ ಮಕ್ಕಳನ್ನು ಸಂಪಾದನೆಗೆ ಕಳುಹಿಸುವುದು, ವಿದ್ಯಾಭ್ಯಾಸದ ಕೊರತೆ ಇತ್ಯಾದಿಗಳೆಲ್ಲ ತಲೆದೋರುವುದು.

ಪರಿಸರದ ಮೇಲೆ ಪರಿಣಾಮ, ನೆಲ, ಜಲ, ಭೂಮಿಯ ಮೇಲೆ ಒತ್ತಡ, ಮಾಲಿನ್ಯ ಆಹಾರ, ಬಟ್ಟೆ, ವಸತಿ ಸಮಸ್ಯೆ ಈ ಎಲ್ಲದಕ್ಕೂ ಪರಿಹಾರ ಕಂಡುಹಿಡಿದು ಮುನ್ನಡೆಯಲು, ಅಭಿವೃದ್ಧಿ ಸಾಧಿಸಲು ಪ್ರಯತ್ನಪಡಲು 'ವಿಶ್ವಜನಸಂಖ್ಯಾ ದಿನ'ವೆಂದು ಆರಂಭಿಸಲಾಯಿತು.

ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ, ಬೀದಿನಾಟಕ, ಜಾಹೀರಾತುಗಳ ಮೂಲಕ, ಬ್ಯಾನರ್, ಪೋಷ್ಟರ್ ಮೂಲಕ, ದೂರದರ್ಶನ, ರೇಡಿಯೋ ಮೂಲಕ ಪ್ರಚಾರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಇವೆಲ್ಲವನ್ನೂ ಪ್ರಚಾರ ಮಾಡುವುದರ ಮೂಲಕ  ಜನರಲ್ಲಿ ತಿಳುವಳಿಕೆ ಮೂಡಿಸಲಾಯಿತು. ಆರೋಗ್ಯ ಇಲಾಖೆ ಮೂಲಕ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮನೆಮನೆ ಭೇಟಿ ಮಾಡಿ ಗಂಡು ಮಗುವಾಗಲಿ, ಹೆಣ್ಣಾಗಲಿ ಎರಡೇ ಮಕ್ಕಳನ್ನು ಹೊಂದುವ ಅಗತ್ಯವನ್ನು ತಿಳಿ ಹೇಳಲಾಯಿತು. ಮೌಢ್ಯತನ, ಧಾರ್ಮಿಕ ಕಟ್ಟುಪಾಡುಗಳ ಬಗ್ಗೆ ಮಾಹಿತಿ ನೀಡಲಾಯಿತು. ಅತಿಯಾದ ಜನಸಂಖ್ಯೆ ದೇಶದ ಅಭಿವೃದ್ಧಿ ಗೆ ಮಾರಕವೆಂಬ ವಿಷಯವನ್ನು ಬಹಿರಂಗ ಹೇಳಿಕೆಗಳ ಮೂಲಕ ಪ್ರಚಾರ ಮಾಡಲಾಯಿತು.

ಮುಖ್ಯವಾಗಿ ಆರೋಗ್ಯ ಕರ ಜೀವನ, ನೆಮ್ಮದಿ, ಚಿಕ್ಕ ಕುಟುಂಬದ ಅರಿವು, ಲಿಂಗ ತಾರತಮ್ಯ ಹೋಗಲಾಡಿಸುವುದು ಇತ್ಯಾದಿಗಳಿಗೆ ಆದ್ಯತೆ ನೀಡಲಾಯಿತು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕಾನೂನಿನ ಬಿಗಿಯನ್ನು ಸಡಿಲಿಸಲಾಯಿತು. ಆಕೆಯ ಆರೋಗ್ಯ, ನೆಮ್ಮದಿ, ಹಕ್ಕುಗಳ ರಕ್ಷಣೆಗಾಗಿ ಮಾರ್ಪಾಡು ತರಲಾಯಿತು. ಹತ್ತಿರ ಹತ್ತಿರ ೧೪೦ಕೋಟಿ ಜನರ ನೆಮ್ಮದಿಯ ಜೀವನ ಕಲ್ಪಿಸುವ ಸಂಕಲ್ಪ ಮಾಡಲಾಯಿತು.ನಮ್ಮಿಂದಾದ ಅಳಿಲ ಸೇವೆ ಸಲ್ಲಿಸೋಣ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ