" ವಿಶ್ವ ಜಲ ದಿನ ಮತ್ತು ಜಲಕ್ಷಾಮ "

" ವಿಶ್ವ ಜಲ ದಿನ ಮತ್ತು ಜಲಕ್ಷಾಮ "


ವಿಶ್ವದ ಸಮಸ್ತ "ಜೀವಜಂತು" ಗಳಿಗೆ "ಜೀವತಂತು" ಈ ಜಲ. ೭೦೦ ಕೋಟಿ  ಮಾನವ ಪ್ರಾಣಿಗಳು ಮತ್ತು ಅದೆಷ್ಟೋ ಲೆಕ್ಕವಿರದ ಸಂಖ್ಯೆಯ ಮಾನವೇತರ ಜೀವಿಗಳಿಗೆ ನೀರು ಜೀವನಾಧಾರ. ಮಾನವನ ದೇಹದ ಒಟ್ಟೂ ತೂಕದಲ್ಲಿ ೬೦-೬೫% ಭಾಗ ನೀರೇ ಎಂಬುದು ವೈಜ್ಞಾನಿಕ ಸತ್ಯ. ಮಾನವನಿರಬಹುದು, ಇತರೆ ಪ್ರಾಣಿ ಪಕ್ಷಿಗಳಿರಬಹುದು,ಇಲ್ಲವೇ ಸಸ್ಯ ಸಂಕುಲವಿರಬಹು ಇವೆಲ್ಲವುದಕ್ಕೂ ನೀರು ಅತ್ಯಮೂಲ್ಯ.

ವರ್ತಮಾನದಲ್ಲಿ ಸಂಶೋಧನೆಗಳು ಹೇಳಿರುವಂತೆ ಈ "ಕ್ಷೀರಪಥ ತಾರಾಗಣ"ದಲ್ಲಿ (milkyway galaxi ) ಭೂಮಿಮಾತ್ರ ಮಾನವ ವಾಸಯೋಗ್ಯ ತಾಣ  ಮತ್ತು  ಶುದ್ಧ ಸಿಹಿನೀರು ಸಿಗುವ ಏಕೈಕ ಗ್ರಹ. ಆದರೆ ಇದನ್ನು ಅರ್ಥೈಸಿಕೊಳ್ಳದ ನಾವು ನೀರನ್ನು ಯತೆಚ್ಚವಾಗಿ ಬಳಸಿ ನೈಸರ್ಗಿಕ ಸಂಪತ್ತನ್ನು ಹಾಳುಗೆಡವುತ್ತಿದ್ದೇವೆ. ನೈಸರ್ಗಿಕ ಸಂಪತ್ತನ್ನು ದುರ್ವಿನಿಯೋಗ ಮಾಡುತ್ತಿದ್ದೇವೆ.

ನಮಗೆ ೧ಕೆಜಿ ಗೋಧಿ  ಉತ್ಪಾದಿಸಲು ಸುಮಾರು 1500 ಲೀಟರ್ ನೀರು ಬೇಕಾದರೆ, ಗೋಮಾಂಸ 1kg ಉತ್ಪಾದಿಸಲು 10 ಪಟ್ಟು ಹೆಚ್ಚು ನೀರು ಬೇಕಾಗುತ್ತದೆ ! ಜಾನುವಾರುಗಳ ಮೇವಿನ ಬೆಳೆಗಳನ್ನು ಉತ್ಪಾದಿಸುವ ಕತ್ತರಿಸುವುದು ಮತ್ತು ಮಾಂಸ, ಹಾಲು ಮತ್ತು ಇತರ ಹಾಲಿನ ಉತ್ಪನ್ನಗಳ ಸಂಸ್ಕರಣೆಗೆ ನೀರು ದೊಡ್ಡ ಪ್ರಮಾಣದಲ್ಲಿ ಅಗತ್ಯ. (ಆಧಾರ: www.unwater.org ). ಸರ್ಕಾರ ತನ್ನ ಬಜೆಟ್ಟಿನಲ್ಲಿ ಎಷ್ಟೇ ಬೋಬ್ಬಿರಿದರೂ, ಎಷ್ಟೇ ಯೋಜನೆಗಳನ್ನು ಜಾರಿಗೆ ತಂದರೂ,ನಾವು ಮಾತ್ರ ಕಿವುಡರಾಗಿ ಕುಳಿತಿದ್ದೇವೆ. ಕೃಷಿ, ಕೈಗಾರಿಕೆ, ಹೈನುಗಾರಿಕೆ, ಮತ್ತು ನಮ್ಮ ದಿನನಿತ್ಯದ ಬಳಕೆಗಾಗಿ , ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ದಿನವೊಂದಕ್ಕೆ ಸಾವಿರಾರು ಲೀಟರ್ ನೀರು  ನಮ್ಮಿಂದ ವ್ಯಯಿಸಲ್ಪಡುತ್ತಿದೆ.

ಹಾಗಾದರೆ  ನೀರನ್ನು ಬಳಸದೆ ಬದುಕುವುದು ಹೇಗೆ? ಎಂಬ ಪ್ರಶ್ನೆ  ಉದ್ಭವಿಸಬಹುದು. ಹೌದು,ಜಲವಿರದೆ ಈ ಜೀವವಿರದು ಎಂಬುದು ಪ್ರತ್ಯಕ್ಷ  ಸತ್ಯ. ಆದರೆ  ಅದರ ಬಳಕೆಗೆ ಒಂದು ಇತಿ ಮಿತಿಯನ್ನು  ಗುರುತಿಸಬಹುದಲ್ಲವೇ?. ನೀರನ್ನು ವಿನಾಕಾರಣ ಪೋಲು ಮಾಡುವ ಬದಲು ಅದನ್ನು ಸದ್ವಿನಿಯೋಗಪಡಿಸಿಕೊಳ್ಳ ಬೇಕೆಂಬುದೇ ನಮ್ಮ ಉದ್ದೇಶವಾಗಬಾರದೇಕೆ?.

ಭೂಮಿಯ ಅಂತರಾಳದಲ್ಲಿರುವ ಜಲಮೂಲ ಖಾಲಿಯಾದರೆ ಉಳಿಯುವುದು ಸಾಗರದ ಉಪ್ಪುನೀರು ಮಾತ್ರ. ಅದು ಹೇರಳವಾಗಿ ಇದೆಯಾದರೂ, ಅದನ್ನು ಸಂಸ್ಕರಿಸಿ, ಶುದ್ಧಗೊಳಿಸಿ, ಸಿಹಿನೀರಾಗಿ ಪರಿವರ್ತಿಸುವುದು ಅಷ್ಟೇನೂ ಸುಲಭವಲ್ಲ  ಮತ್ತು ವೆಚ್ಚದಾಯಕವೂ ಹೌದು. ಅಂತ ಪರಿಸ್ಯ್ಹಿತಿ ಬಂದರೆ  ೧ ಲೀಟರ್ ನೀರಿನ ಬೆಲೆ ೧ ಲೀಟರ್ ಪೆಟ್ರೋಲ್ ಬೆಲೆಗಿಂತ ಜಾಸ್ತಿಯಾದೀತು!!.

ಅದೆಲ್ಲ ಹೋಗಲಿ, ನಮ್ಮ ವಿಜ್ಞಾನಿಗಳು ಬಿಟಿ ಬದನೆ,ಬಿಟಿ ಹತ್ತಿ, ಹೈಟೆಕ್ ಸಲಕರಣೆಗಳನ್ನು ಕಂಡುಹಿಡಿದಂತೆ, ನಮ್ಮ ಕಳ್ಳ ಡೈರಿಗಳು ಒಂದೂ ಹಸುವನ್ನೂ ಸಾಕದೆ ಸಾವಿರಾರು ಲೀಟರ್ ಹಾಲು(ಹಾಲಲ್ಲ ಹಾಲಾಹಲ ?) ಉತ್ಪಾದಿಸುವಂತೆ, ಮುಂದೊಂದುದಿನ "artificial water" ಉತ್ಪಾದನೆ ಆಗಬಹುದೆಂದು ಅಂದುಕೊಂಡಿರ? ಸಾವಿರಾರು ಲೀಟರ್ ಹಾಗಿರಲಿ, ೧ ತೊಟ್ಟು ನೀರನ್ನೂ  ಇದುತನಕ ಯಾರಿಂದಲೂ ಉತ್ಪಾದಿಸಲು ಸಾಧ್ಯವಾಗಿಲ್ಲ ಎಂದರೆ ನಂಬಲೇಬೇಕು!!

ಇದೆಲ್ಲವುದರ ಅರಿವುಗಳ ನಡುವೆ, ಮತ್ತದೇ ಗೊಣಗಾಟಗಳ ನಡುವೆ, ಇನ್ನೊಂದು "ವಿಶ್ವ ಜಲ ದಿನ" ಸದ್ದಿಲ್ಲದೇ ಆಗಮಿಸಿ, ಸರಿದು ಹೋಗುತ್ತಿದೆ. ಹೌದು ಇಂದು ಮಾರ್ಚ್ ೨೨ "ವಿಶ್ವ ಜಲ ದಿನ". ನಿಜವಾದ ಅರ್ಥದಲ್ಲಿ ಪ್ರತಿಯೊಬ್ಬ ನಾಗರೀಕನಿಗೂ ಇದರ ಮಹತ್ವವನ್ನು ಸಾರಿ ಹೇಳುವ, ಅರ್ಥಮಾಡಿಸುವ ಅಗತ್ಯವಿದೆ. ಈ ನೈಸರ್ಗಿಕ ಸಂಪತ್ತುಗಳು ನಮ್ಮ ಭವಿಷ್ಯದ ನಾಗರೀಕತೆಯ ಸೊತ್ತು ಎನ್ನುವುದನ್ನೂ ತಿಳಿಸಬೇಕಿದೆ. ಒಬ್ಬ ಸಾಧಾರಣ ನಾಗರೀಕನಾಗಿ "ಜಲ ಸಂಪತ್ತನ್ನು ಉಳಿಸಲು" ನಾವೇನು ಮಾಡಬಹುದೆಂದು ಅರಿಯುವ ಕಾರ್ಯವಾಗಬೇಕಿದೆ.

ಜಗತ್ತಿನ ದೊಡ್ಡಣ್ಣ ಭಯೋತ್ಪಾದನೆ ನಿರ್ಮೂಲನೆಯ ಹೆಸರಲ್ಲಿ, ಸ್ವಾರ್ಥ ಸಾಧನೆಗಾಗಿ , ತೈಲ ನಿಕ್ಷೇಪಗಳನ್ನು ಕೊಳ್ಳೆ ಹೊಡೆಯಲು, ಮಹಾಯುದ್ದಗಳನ್ನು , ಭೀಕರ ಕಾದಾಟಗಳನ್ನು ನಡೆಸಿದಂತೆ, ಮುಂದೊಂದು ದಿನ ಜಗತ್ತಿನ ಎಲ್ಲ ದೇಶಗಳೂ ಹನಿ ನೀರಿಗಾಗಿ ಹೊಡೆದಾಡಬಹುದು. ಜಲಕ್ಷಾಮ ಎಂಬುದು ಮನುಕುಲದ ಕ್ಷಯವಾಗುವುದಕ್ಕೆ ದಾರಿಯಾಗಬಹುದು.ಅಂತ:ದಿನಗಳು ಬರುವಮೊದಲೇ ಎಚ್ಚೆತ್ತುಕೊಂಡು, ಕಾರ್ಯತತ್ಪರವಾಗುವುದು ಜಾಣತನವಲ್ಲವೇ?

Comments