ವಿಶ್ವ ತಂಬಾಕು ನಿಷೇಧ ದಿನ

ವಿಶ್ವ ತಂಬಾಕು ನಿಷೇಧ ದಿನ

ಮೇ ೩೧ ನ್ನು ಪ್ರತೀ ವರ್ಷ ‘ವಿಶ್ವ ತಂಬಾಕು ನಿಷೇಧ ದಿನ’ ಎಂದು ಘೋಷಿಸಲಾಗಿದೆ. ಇದು ಬರೇ ಘೋಷಣೆಯಲ್ಲಿ ಮಾತ್ರ ಎಂಬುದು ನೂರಕ್ಕೆ ನೂರು ಸತ್ಯ. ಯಾವುದು ಸಹ *ಘೋಷಣೆ* ಮಾಡಿದ ಮಾತ್ರಕ್ಕೆ ನಿವಾರಣೆ ಆದದ್ದನ್ನು ಈ ವರೆಗೂ  ನೋಡಿದ್ದಿಲ್ಲ.

ಸ್ವತಃ ಪ್ರತಿಯೊಬ್ಬರೂ ಆಚರಣೆ ಮಾಡಿದರೆ ಮಾತ್ರ ಏನಾದರೂ ೫೦% ಪ್ರಯೋಜನವಾಗಲೂ ಬಹುದು ಅಲ್ಲವೇ? ಅಂಗಡಿಗಳ, ಮಹಲುಗಳ ಎದುರು೪-೫ ವರುಷಗಳಿಂದ ಒಂದು ಫಲಕ ನೇತಾಡುವುದ ಕಂಡಿದ್ದೇವೆ "ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರಿಗೆ ದಂಡ ವಿಧಿಸಲಾಗುತ್ತದೆ. ಹತ್ತಿರ ಆರಕ್ಷಕ ಠಾಣೆಯ ದೂರವಾಣಿ ಆ ಫಲಕದಲ್ಲಿ ಇವರಿಗೆ ಮಾಹಿತಿ ನೀಡಿ" ಎಂಬುದಾಗಿ. ೫೦೦ರೂ ದಂಡ ಹಾಕಿದ್ದೂ ಇದೆಯಂತೆ. ಆದರೂ ಕ್ಯಾರೇ ಇಲ್ಲದಂತೆ ಬೀಡಿ ಸಿಗರೇಟು ಸೇದುವುದು ನೋಡಿದ್ದೇವೆ. ಎಷ್ಟೋ ಸಲ ಈ ವಿಷಯವಾಗಿ ಕಂಡಾಗ ಹೇಳಿದ್ದಕ್ಕೆ ಬೈಗುಳ ತಿಂದದ್ದೂ ಇದೆ . "ನಿಮಗೇನು ನಷ್ಟ, ನನ್ನ ಹಣ,ನಾನು ಸೇದುತ್ತೇನೆ"ಎಂಬುದಾಗಿ.

ತಂಬಾಕು ಸೇವನೆಯಿಂದಾಗುವ ಹಾನಿಗಳ ಬಗ್ಗೆ ಎಷ್ಟು ತಿಳಿಸಿ ಹೇಳಿದರೂ ಪ್ರಯೋಜನವಿಲ್ಲವಾಗಿದೆ. ಶ್ವಾಸಕೋಶದ  ಎಲ್ಲಾ ರೋಗಗಳೂ (ಟಿ.ಬಿ, ಅಸ್ತಮಾ, ಕ್ಯಾನ್ಸರ್) ಮುಂತಾದವುಗಳಿಗೆ ಈ ತಂಬಾಕೇ ಕಾರಣ. ವೀಳ್ಯದೊಂದಿಗೆ ತಂಬಾಕು ಬಾಯಿಯಲ್ಲಿಟ್ಟು ಜಗಿಯುವ ಅಭ್ಯಾಸ ಬಹಳ ಜನರಲ್ಲಿದೆ. ಬಾಯಿ, ನಾಲಿಗೆ, ದವಡೆ ಕ್ಯಾನ್ಸರ್ ಗೆ ಮೂಲ ಇದುವೇ ಆಗುತ್ತದೆ. ಒಂದು ಅಂಕೆ ಅಂಶಗಳ ಪ್ರಕಾರ ಪ್ರತೀ ವರ್ಷ ಜಗತ್ತಿನಲ್ಲಿ ೮೦% ಲಕ್ಷ ಜನರು ಈ ತಂಬಾಕು ಸೇವನೆಗೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ

ಹೃದ್ರೋಗ ಈಗ ನಡುವಯಸ್ಸಿನವರಲ್ಲಿ ಸಹ ಕಂಡು ಬರುತ್ತಿದೆ. ಬಾಯಿ, ಗಂಟಲು, ಅನ್ನನಾಳ, ಮೂತ್ರಪಿಂಡ, ಸ್ತನಗಳ ತೊಂದರೆ, ಪಿತ್ತಕೋಶ, ಇವೆಲ್ಲವೂ ತಂಬಾಕು, ತಂಬಾಕು ಉತ್ಪನ್ನಗಳ ಸೇವನೆಯಿಂದ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು?

ಸಾಮೂಹಿಕ ಜಾಗೃತಿ ಮೂಡಿಸುವುದು, ತೊಂದರೆಗಳನ್ನು ಆರೋಗ್ಯ ಕಾರ್ಯಕರ್ತರ ಮೂಲಕ ಹೇಳಿಸುವುದು, ಪ್ರಚಾರ ಮಾಡುವುದು, ಚಿಕಿತ್ಸಾಲಯಗಳನ್ನು ತೆರೆದು ಸೂಕ್ತ ಚಿಕಿತ್ಸೆ ನೀಡುವುದು, ತಂಬಾಕಿನಲ್ಲಿರುವ *ನಿಕೋಟಿನ್* ನಿಧಾನವಾಗಿ ಸಾಯಿಸುವ ವಿಷಕಾರಿ ಅಂಶ ಎಂಬ ಮಾಹಿತಿ ನೀಡುವುದು. ತಂಬಾಕು ಸೇವನೆ ಇತ್ತೀಚೆಗಿನ ಕೊರೋನಾದ  ಜೊತೆ ಥಳುಕು ಹಾಕುತ್ತಿದೆ.ಕೊರೋನಾ ಉಲ್ಬಣವಾಗುತ್ತಿದೆ ಎಂಬ ಮಾಹಿತಿಯು ಪತ್ರಿಕೆಯಲ್ಲಿ ಬಂದಿದೆ. ಆ ಬಗ್ಗೆ ಸಂಶೋಧನೆ ಸಹ ಮಾಡುತ್ತಾ ಇದ್ದಾರಂತೆ. ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಮಾಡಿದರೆ ಜನಸಾಮಾನ್ಯರಿಗೆ ಪ್ರಯೋಜನವಾದೀತು. *ತಂಬಾಕು ತ್ಯಜಿಸಲು ಸಿದ್ಧರಾಗಿ* ಈ ವರ್ಷದ ಧ್ಯೇಯವಾಕ್ಯ. ನಾವೆಲ್ಲರೂ ಕೈಜೋಡಿಸೋಣವಲ್ಲವೇ?.

ಧೂಮಪಾನ ಮಾಡುವಾಗ, ಆ ಹೊಗೆಯು ಹತ್ತಿರ ಇದ್ದವನಿಗೆ ಹೆಚ್ಚು ಪರಿಣಾಮ ಬೀರುತ್ತದೆ. *ಧೂಮಪಾನ ತುಂಬಾ ಕೆಟ್ಟ ಚಟ, ಒಮ್ಮೆ ಅಭ್ಯಾಸ ಆದರೆ ಬಿಡಲು ಕಷ್ಟ*. ಧೂಮಪಾನಿಗಳ ಮನಸ್ಸನ್ನು ಒಲಿಸಿ ಪರಿವರ್ತಿಸುವುದೊಂದೇ ಇದಕ್ಕಿರುವ ದಾರಿ. ಇದರಲ್ಲಿ ಪ್ರತಿಷ್ಠೆ ಬೇಡ. ತಮ್ಮೊಂದಿಗೆ ತಮ್ಮನ್ನು ನೆಚ್ಚಿಕೊಂಡಿರುವವರನ್ನೂ ನಾಶಮಾಡುವ, ಸಂಕಷ್ಟಕ್ಕೆ ದೂಡುವ ಈ ಚಟವನ್ನು ಸಾಮಾಜಿಕವಾಗಿ, ಸಾಮೂಹಿಕವಾಗಿ ಬಹಿಷ್ಕರಿಸಲೇ ಬೇಕು.ತಂಬಾಕು ಉತ್ಪನ್ನಗಳಿಗೆ ಪರ್ಯಾಯ ದಾರಿ ಬೇರೆ ಕಂಡುಹಿಡಿಯಬೇಕು. ಇತ್ತೀಚೆಗೆ ನಡೆಸಿದ ಸಮೀಕ್ಷೆಯಂತೆ ಹೆಣ್ಣು ಮಕ್ಕಳು ಸಹ ಈ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆಯಂತೆ. ಅವರಿಗೆ ಜನಿಸುವ ಮಕ್ಕಳ ಗತಿ ಏನಾದೀತು? ಅಲ್ಲವೇ?

ಮುಂದಿನ ಪೀಳಿಗೆಗೆ ಮಾರಕವಲ್ಲವೇ? ತಂಬಾಕು ನಿಷೇಧದ  ಉದ್ದೇಶ ಬರುವ ರೋಗ, ನಿವಾರಣೆ, ಸಾವು ನೋವುಗಳನ್ನು ಪ್ರಚುರಪಡಿಸುವುದಕ್ಕಾಗಿ ೧೯೮೭ರ ಮೇ ೩೧ಕ್ಕೆ ಮೊದಲ ಆಚರಣೆ ಮಾಡಲಾಯಿತು.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ