ವಿಶ್ವ ಪರಿಸರ ದಿನದ ಕವನಗಳು
ಇಂದಿನ ನನ್ನ ಕಲ್ಪನೆಯ ಸಾಲುಗಳಿಗೆ
ಹತ್ತಿಯಷ್ಟೂ ಭಾರವಿಲ್ಲ....!
ಎಲ್ಲಿಂದಲೋ ಸಂಗ್ರಹಿಸಿ ತಂದ
ಉತ್ತಮ ತಳಿಯ ಗಿಡ ತಂದು ನೆಟ್ಟು ದಿನಾ ನೀರೆರೆಯುವಾಗ
ನನ್ನಪ್ಪನ ಬಳಿ ಫೋಟೋ ಕ್ಲಿಕ್ಕಿಸಲು ಏನೂ ಇರಲಿಲ್ಲ....!
ಸಾಗುವಾನಿಯ ಚಿಗುರುಚಿವುಟಿ
ಅಂಗೈ ಮದ್ಯೆ ಇರಿಸಿ ತಿಕ್ಕಿ
ಮದರಂಗಿಯ ಸೊಬಗು
ಸವಿದಿದ್ದೆ...ಬೆಚ್ಚಿದ್ದೆ
ಬೆತ್ತ ಹಿಡಿದು
ಗದರಿದಾಗ ಮುಖ ಊದಿದಷ್ಟೇ ನೆನಪು ...
ಅಪ್ಪನ ವೃಕ್ಷ ಪ್ರೀತಿ ಅರಿವಾಗಲೇ ಇಲ್ಲ!
ಇಂದಿನ ನನ್ನ ಕಲ್ಪನೆಯ ಪದಗಳಿಗೆ ಮಾಧುರ್ಯವೇ ಇಲ್ಲ
ಹಿತ್ತಿಲು ತುಂಬಿರುವ ತೆಂಗು.ಹಲಸು ಅಂಬಟೆಮಾವುಗಳಲಿ
ಅಪ್ಪನ ಪ್ರೀತಿ ಅಂಟಿರುವಾಗ!
- ‘ಪದ್ಮ’ ಬೆಂಗಳೂರು
***
ದಿನದಿನವು ಪರಿಸರ ದಿನ
ದಿನದಿನವು ಆಚರಿಸಿ ಪರಿಸರದ ದಿನವನ್ನು
ವನಸುಮವ ಬೆಳೆಸುತಲಿ ಸುತ್ತಮುತ್ತ
ಕನಸಲ್ಲು ಕಡಿಯಿದಲೆ ಉಳಿಸುತಲಿ ಮರವನ್ನು
ಜನಮನದಿ ಉಳಿಯಯ್ಯ ರಾಮಚಂದ್ರ
ಪರಿಸರದ ದಿನವನ್ನು ಬೀಜವನು ಬಿತ್ತನೆಯ
ಸರಿಯಾಗಿ ಹದವರಿತು ಮಾಡುತ್ತಲಿ
ಪರಿಪರಿಯ ತೋಷದಲಿ ಆಚರಿಸಿ ಖುಷಿಪಡುವ
ಸುರಿಸದಲೆ ಭಾಷಣವ ರಾಮಚಂದ್ರ
ಹಸಿರೆ ಉಸಿರೆಂಬ ನುಡಿಯಂತೆ ಈ ದಿನ ನಾವು
ಹೆಸರಿಗಾಗಿಯೆ ಮಾಡದಲೆಯೆ ಜಗದ
ಬಸಿರನ್ನು ಉಳಿಸುವಾ ಸಲುವಾಗಿ ನಾವುಗಳು ಕೆಸರಲ್ಲು ಗಿಡಬೆಳಸು ರಾಮಚಂದ್ರ
ಗಿಡಮರವ ಉಳಿಸುವುದೆ ಪರಿಸರದಿನಾಚರಣೆ
ತಡಬೇಡ ಗಿಡಬೆಳಸಿ ನಾಡು ಉಳಿಸಿ
ಕಡಿಬೇಡಿ ಉಸಿರನ್ನು ಕೊಡುವಂತ ಹಸಿರನ್ನು
ನಡೆಯಲ್ಲಿ ಹಸಿರುಳಿಸು ರಾಮಚಂದ್ರ
ಮಾತೇಕೆ? ನೀನೋಡು ಸಾಲು ಮರ ತಿಮ್ಮಕ್ಕ
ಕೂತು ಕೊಳೆಯದಲೆ ನೀ ಬೆಳೆಸು ಮರವ
ಜೋತುಬೀಳದಲೆ ಒಣ ಭಾಷಣಕೆ ಅನುಸರಿಸು
ನೀತಿಯನು ಪರಿಸರಕೆ ರಾಮಚಂದ್ರ
-ಬಂದ್ರಳ್ಳಿ ಚಂದ್ರು, ತುಮಕೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ