ವಿಶ್ವ ಪಶು ವೈದ್ಯಕೀಯ ದಿನ

ವಿಶ್ವ ಪಶು ವೈದ್ಯಕೀಯ ದಿನ

ನಾವೆಲ್ಲರೂ ಈ ಬುವಿಯಲ್ಲಿ ಜನಿಸಿ ಬಂದ ಪ್ರಾಣಿ ವರ್ಗದವರು. ಮಾನವ ಪ್ರಾಣಿಗಳಲ್ಲಿ ಶ್ರೇಷ್ಠ, ಬುದ್ಧಿವಂತ, ಮಾತು ಬರುವವ ಅಷ್ಟೇ ವ್ಯತ್ಯಾಸ. ಒಮ್ಮೊಮ್ಮೆ ಯೋಚಿಸಿದರೆ, ಮನುಷ್ಯನಿಗಿಂತ ಪ್ರಾಣಿಗಳಲ್ಲೇ ಮಾನವೀಯತೆ,ಬುದ್ಧಿವಂತಿಕೆ ಇದೆಯೋ ಎಂಬ ಸಂಶಯ ಬರುತ್ತಿದೆ. ಈ ವರ್ಷ ಎಪ್ರಿಲ್ ೨೪ ವಿಶ್ವ ಪಶು ವೈದ್ಯಕೀಯ ದಿನ (World Veterinary Day). ಈ ಕುರಿತಾಗಿ ಒಂದು ಪುಟ್ಟ ಲೇಖನ ಇಲ್ಲಿದೆ

ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಬಿಡಿಸಲಾರದ ಅನುಬಂಧ.ಅವಿನಾಭಾವ ಹೇಳಬಹುದು. ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು. ಹೇಗೆ ನಮ್ಮಲ್ಲಿ ವೈದ್ಯರು ಇರುವರೋ ಹಾಗೆ ಪ್ರಾಣಿಗಳ ಆರೋಗ್ಯ ಕಾಳಜಿಗೂ ವೈದ್ಯರಿರುವರು. ಅವರೇ *ಪಶುವೈದ್ಯರು*.ಪ್ರಾಣಿಗಳ ಪಾಲಿನ ದೇವರು. ಪ್ರತೀವರ್ಷ ಎಪ್ರಿಲ್ ತಿಂಗಳ ಕೊನೇ ಶನಿವಾರ ವನ್ನು *ವಿಶ್ವ ಪಶುವೈದ್ಯಕೀಯ ದಿನ*ಎಂಬುದಾಗಿ ಆಚರಿಸಲಾಗುತ್ತದೆ.

ನನ್ನ ಮನೆ ಹತ್ತಿರವೇ ಒಂದು ಹಾಲು ಉತ್ಪಾದಕರ ಸಹಕಾರಿ ಸಂಘ, ಒಂದು ಪಶು ವೈದ್ಯಕೀಯ ಆಸ್ಪತ್ರೆ ಇದೆ. ಬೆಳಗಿನಿಂದ ರಾತ್ರಿ ಮನೆಗೆ ಹೋಗುವವರೆಗೂ ಮತ್ತೂ ಒಂದು ನಿಮಿಷ ಬಿಡುವಿಲ್ಲ ಅಲ್ಲಿಯ ಕಾರ್ಯ ನಿರ್ವಾಹಕರಿಗೆ. ಅಷ್ಟೂ  ಕೇಸುಗಳು ಬರುತ್ತಿರುತ್ತದೆ. ಕರು ಈಯುವ ಸಂದರ್ಭದಲ್ಲಿ, ಕರುವನ್ನು ಉಳಿಸಿಕೊಳ್ಳಲಾಗದ್ದನ್ನು ಹೇಳುವಾಗ ಕಣ್ಣೀರು ಹಾಕುವುದು ನೋಡಿದ್ದೇನೆ. ಹಳ್ಳಿ ಗುಡ್ಡಗಾಡು ಪ್ರದೇಶ ಆದ ಕಾರಣ, ಆ ಸ್ಥಳಕ್ಕೆ ತಲುಪುವಾಗ ತಡ ಆಗಿ ಅನಾಹುತಗಳಾಗುವುದೂ ಇದೆ.

ಕೃತಕ ಗರ್ಭ ಧಾರಣೆ, ರೋಗ ನಿರೋಧಕ ಚುಚ್ಚುಮದ್ದು, ಹಟ್ಟಿ ಕೊಟ್ಟಿಗೆಗಳಿಗೆ ಸಾಂಕ್ರಾಮಿಕ ರೋಗ ಹಬ್ಬದಂತೆ ಔಷಧಿ ಸಿಂಪಡಣೆ, ಇತ್ಯಾದಿ ಪ್ರತಿನಿತ್ಯ ಇರುವಂಥ ಜವಾಬ್ದಾರಿಗಳು. ಕುಕ್ಕುಟ, ಹಂದಿ, ಕುರಿ, ಮೇಕೆ, ಮೊಲ ಇಂಥ ಉದ್ಯಮಗಳನ್ನು ಜನಸಾಮಾನ್ಯರು ಕೈಗೊಳ್ಳುತ್ತಿದ್ದಾರೆ, ಸರಕಾರ ಇವುಗಳನ್ನು ಪ್ರೋತ್ಸಾಹಿಸುತ್ತಾ ಇದೆ, ಸಬ್ಸಿಡಿ ಸಹ ನೀಡುತ್ತಾ ಇದೆ.

ನಾವು ಕೇಳಿದ ಹಾಗೆ *ಹಕ್ಕಿ ಜ್ವರ* ಬಂದಾಗ ಕೋಳಿಗಳ ನಾಶವನ್ನು ಸಾಮೂಹಿಕವಾಗಿ ಮಾಡಿ ಹತೋಟಿಗೆ ತರಲಾಯಿತು.ಹಕ್ಕಿ ಜ್ವರ ಬಂದವರೊಬ್ಬರನ್ನು ನಾನು ನೋಡಿದ್ದೆ (3ವರ್ಷ ಹಿಂದೆ). ಅವರ  ಗುರುತೇ ನನಗೆ ಸಿಗದಷ್ಟು ಬಲಹೀನರಾಗಿದ್ದರು. ಕೈಕಾಲು ಸಪೂರ, ಮುಖದಲ್ಲಿ ಜೀವ ಕಳೆಯೂ ಇಲ್ಲ, ಸುಮಾರು ಒಂದು ವರ್ಷ ಮನೆಯಿಂದ ಹೊರಗೆ ಬಂದಿಲ್ಲ ಅವರು.ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

ಹಂದಿಜ್ವರ, ಇಲಿಜ್ವರ, ಕಾಲುಬಾಯಿ ರೋಗ, ಗಂಟಲುಬಾವು, ಕಾಲುಗಳ ಗೊರಸುಗಳಲ್ಲಿ ಹುಣ್ಣು, ಚರ್ಮದ ಕಾಯಿಲೆಗಳು, ಬಂಜೆತನ, ರೇಬೀಸ್ ಹೀಗೆ ಹತ್ತು ಹಲವು ರೋಗಗಳು ಪ್ರಾಣಿ ಸಮೂಹದಲ್ಲಿ ಬಾಧಿಸುತ್ತದೆ. ಈ ಎಲ್ಲಾ ಸಂದರ್ಭದಲ್ಲೂ ತಮ್ಮ ಕರ್ತವ್ಯವನ್ನು ಮಾಡುತ್ತಿರುವ ಎಲ್ಲಾ ಪಶುವೈದ್ಯರಿಗೂ ನಮ್ಮೆಲ್ಲರ ಶುಭಹಾರೈಕೆಗಳು.

ಈ ಕೊರೋನಾ ದ ಕಾಲದಲ್ಲೂ ಉತ್ತಮ ಸಲಹೆಗಾರರಾಗಿ, ವೈದ್ಯಕೀಯ ವಿಭಾಗದಲ್ಲೂ ದುಡಿದ ಎಲ್ಲಾ (ತಮ್ಮ ಪ್ರಾಣದ ಹಂಗು ತೊರೆದು) ಪಶುವೈದ್ಯರನ್ನೂ ಈ ಸಂದರ್ಭದಲ್ಲಿ ನೆನಪಿಸುತ್ತಾ, ಎಲ್ಲರಿಗೂ ಭಗವಂತನ ಅನುಗ್ರಹ ಇರಲೆಂಬ ಹಾರೈಕೆ.

(ಕೇಳಿ ತಿಳಿದ ನೆನಪಿನ ಬುತ್ತಿಯಿಂದ)

-ರತ್ನಾ ಕೆ.ಭಟ್, ತಲಂಜೇರಿ