ವಿಶ್ವ ಪಾಲಕರ (ಪೋಷಕರ) ದಿನ
'ತಂದೆ ಆಕಾಶ-ತಾಯಿ ಭೂಮಿ' ನಾವು ಓದಿದ ಕೇಳಿದ ಮಾತುಗಳು. ಆಕಾಶ ಭೂಮಿ ಒಂದಾಗಲು ಸಾಧ್ಯವೇ? ಪ್ರಶ್ನೆ ಏಳಬಹುದು. ಇಲ್ಲಿ ಹೋಲಿಕೆ ಮಾತುಗಳು ಮಾತ್ರ. ಆಗಸವೆಂಬುದು ವಿಶಾಲ, ಅನಂತ. ಅದನ್ನು ಅಳೆಯಲು ಅಸಾಧ್ಯ. ಅದೇ ರೀತಿ ತಂದೆಯ ಮನಸ್ಸು, ಅಳತೆಗೆ ಸಿಗದೇ ಇರುವುದು. ತಾಯಿ 'ಕ್ಷಮಯಾಧರಿತ್ರಿ' ಕ್ಷಮೆ ನೆತ್ತರ ಹನಿ ಹನಿಯಲ್ಲಿ. ಸಹನಾ ಮೂರುತಿ ಆಕೆ. ಬುವಿಯನ್ನು ನಾವು ಏನೆಲ್ಲಾ ಮಾಡ್ತೇವೆ, ಆದರೂ ಸಹನಾಶೀಲೆ ಅಲ್ಲವೇ?
ಏನಿದು ಪೋಷಕರ, ಪಾಲಕರ ದಿನ. ಅವರಿಗೂ ಒಂದು ದಿನಬೇಕೇ? ಹೌದು, ಇಂದಿನ ಕಾಲಘಟ್ಟದಲ್ಲಿ ಅಗತ್ಯ. ಎಲ್ಲಿ ಕೂಡುಕುಟುಂಬ ಇದೆಯೋ ಅವರಿಗೆ ಬೇಡ. ಯಾವಾಗ 'ಪಾಲಕರು ನಮಗೆ ಹೊರೆ, ಅವರು ಬೇಡ, ನಮ್ಮಷ್ಟಕ್ಕೇ ನಾವು ಹಾಯಾಗಿರೋಣ, ಇವರಿಗೆ ಬೇರೆ ಖರ್ಚು, ಕಾಲಿಗೆ ತೊಡರುವವರು, ನಮ್ಮ ಎಲ್ಲಾ ಬದುಕಿನ ಹಂತಗಳಿಗೆ ತೊಂದರೆ ಇವರಿಂದ'ಎಂಬ ಭಾವನೆ ಮೂಡಿತೋ ಅಂದಿನಿಂದ ಇದು ಅಗತ್ಯ.
ಮಕ್ಕಳ ಪಾಲನೆ ಪೋಷಣೆ, ಜೊತೆಗೆ ರಕ್ಷಣೆ,ಕುಟುಂಬದ ಪ್ರೀತಿ, ಮಮತೆ, ವಾತ್ಸಲ್ಯ, ಆರೋಗ್ಯ ಎಲ್ಲಾ ರೀತಿಯ ಸುಖಸಂತೋಷಗಳನ್ನು ನೀಡುವ ಪಾಲಕರಿಗೆ ಕೃತಜ್ಞತಾ ಸಮರ್ಪಣೆ ಈ ದಿನ. ೧೯೯೩ರಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರಸ್ಥಾವನೆಯಾದರೂ ೧೯೯೪ರಲ್ಲಿ ಅಂಗೀಕಾರವಾಗಿ, ಪ್ರತೀವರುಷದ ಜುಲೈ ೪ನೇ ಭಾನುವಾರ 'ವಿಶ್ವ ಪಾಲಕರ ದಿನ' (Global Day for Parents) ಎಂಬುದಾಗಿ.
ಈ ದಿನ ಪ್ರಪಂಚದ ಎಲ್ಲಾ ಹೆತ್ತವರಿಗೂ ಕೃತಜ್ಞತೆ ಸಲ್ಲಿಸುವ ದಿನ. ನಮ್ಮನ್ನು ಈ ಬುವಿಗೆ ತಂದು, ಬದುಕುವ ದಾರಿ ಹೇಳಿ ತೋರಿಸಿಕೊಟ್ಟ, ಕಣ್ಣಿಗೆ ಕಾಣಿಸುವ ದೇವರುಗಳು ನಮ್ಮ ಹೆತ್ತವರು.ನಮ್ಮ ಬದುಕಿಗೆ ನೆಲೆ-ಬೆಲೆ--ಸ್ಫೂರ್ತಿಯ ಸೆಲೆ ಒದಗಿಸಿದ ಮಹಾನ್ ಚೇತನರು. ಮಗು ಮತ್ತು ಪಾಲಕರ ಮಧ್ಯೆ ಇರುವ ಅಸ್ತ್ರ ಎಂದರೆ ಪ್ರೀತಿ, ವಾತ್ಸಲ್ಯ, ಮಮಕಾರದ ಸೆಳೆತ. ಅದೇ ಅಲ್ಲವೇ ಕರುಳ ಸಂಬಂಧ.
ಹೀಗೆ ಒಂದು ಸಲ ಕಾರ್ಯಕ್ರಮದಲ್ಲಿ ಓರ್ವರು ಹೇಳಿದ ವಿಷಯ ಕರುಳು ಹಿಂಡುವಂತಹುದು. ೨೪ರಹರೆಯದ ಮಗ ಕುಡಿದ ಮತ್ತಿನಲ್ಲಿ ಹೆತ್ತಮ್ಮನಿಗೆ ಕೆನ್ನೆಗೆ ಬಾರಿಸಿ, ಹೊರಗೆ ಹಾಕಿದನಂತೆ ಪದೇಪದೇ ಇದು ಮರುಕಳಿಸಿದಾಗ ಆ ಮಾತೆ ಆರಕ್ಷಕ ಠಾಣೆಗೆ ದೂರು ನೀಡಿದಳಂತೆ. ಕಳೆದ ವಾರ ಪತ್ರಿಕೆಯಲ್ಲಿ ಓದಿದೆ ೨೪ರ ಮಗ ಕುಡಿದು ಬಂದವ ತಾಯಿಯ ಮೇಲೆಯೇ ಎರಗಿದ ಎಂಬುದಾಗಿ. ಅಯ್ಯೋ ಆಕೆಯ ಸ್ಥಿತಿಯನ್ನು ಊಹಿಸಲಾಗದಲ್ಲವೇ? ಇಂಥ ಮಕ್ಕಳು ಹುಟ್ಟದಿದ್ದರೂ ಆದೀತು ಅನ್ನಿಸಿತು. ಸುಮಾರು ೨೫-೩೦ ವರುಷಗಳ ಹಿಂದೆ ನಮ್ಮ ಪಕ್ಕದ ಊರಿನಲ್ಲೊಬ್ಬ ನೆರೆಪರಿಹಾರ ಸಿಕ್ಕುವುದೆಂದು ೭೫ ರ ಹೆತ್ತಮ್ಮನನ್ನು ಕರಕೊಂಡು ಬಂದು ತುಂಬಿ ಹರಿಯುವ ಹೊಳೆಗೆ ದೂಡಿದ. ಊರಿನವರು ಆಕೆಯನ್ನು ಕಾಪಾಡಿದರು. ರಕ್ಷಣೆಯೇ ಇಲ್ಲದ ಬಡಪಾಯಿಗಳಾದರೆ?
ಈ ಕೊರೊನಾ ಸಮಯದಲ್ಲಿ ಪಾಲಕರ ಜವಾಬ್ದಾರಿ ಬಹಳ ಗುರುತರವಾದ್ದು. ತಮ್ಮ ಜೊತೆಗೆ ತಮ್ಮ ಸಂತಾನಗಳ ಕೊಂಡಿಯನ್ನು ಉಳಿಸಲು ಹೋರಾಟ ನಡೆಸಿದ್ದಾರೆ. ಮಾನಸಿಕ ಬಲ, ದೃಢತೆ ತುಂಬಲು, ಆರೋಗ್ಯ ಕಾಪಾಡಿಕೊಳ್ಳಲು ಪಟ್ಟಪಾಡು ಅಳತೆಗೂ ಸಿಗದು. ಒಂದೆಡೆ ಕೆಲಸವಿಲ್ಲ, ಹೊಟ್ಟೆಗೆ ಅನ್ನವಿಲ್ಲ, ಅದನ್ನು ಗಳಿಸಲು ಮನೆಯಿಂದ ಹೋಗುವಹಾಗಿಲ್ಲ, ಎಷ್ಟೋ ದಿನ ನೀರೇ ಗತಿ ಅಂಥ ಸಂಕಷ್ಟದಲ್ಲೂ ತಮ್ಮ ಕುಡಿಗಳಿಗೆ ನೋವಾಗದಂತೆ ನೋಡಿಕೊಂಡವರು ಪಾಲಕರು. ಕೃತಜ್ಞತೆ ಬೇಕಲ್ಲವೇ?
ತಂದೆ ಪರ್ವತದ ಹಾಗೆ, ತಾಯಿ ಸಮುದ್ರದ ಆಳದಂತೆ ಹೇಳ್ತಾರೆ. ಖಂಡಿತಾ ಸತ್ಯ. ಅಪ್ಪನ ಒಳಗುದಿ ಅರ್ಥವಾಗುವುದು ನಾವು ಅಪ್ಪ ಅನಿಸಿದಾಗ. ಅಪ್ಪ ಯಾವತ್ತೂ ಮೌನಿ. ಆತ ಬಾಯಿಬಿಟ್ಟು ನುಡಿಯಲಾರ. ಹೃದಯ ಕಲ್ಲೆಂದು ನಮಗನಿಸಬಹುದು, ಆದರೆ ಮನದೊಳಗೆ ಬೆಣ್ಣೆಯ ಮೃದುತ್ವವಿದೆ. ಅಮ್ಮ ದು:ಖವನ್ನು ಹೇಳಿಕೊಳ್ಳಬಹುದು, ಕಣ್ಣೀರಿನ ರೂಪದಲ್ಲಿ ಭಾವನೆಗಳನ್ನು ಹೊರಗೆಡಹಬಹುದು. ಕಂದಮ್ಮಗಳಿಗಾಗಿ ಮರುಗುವ ಜೀವಗಳೆಂದರೆ ಹೆತ್ತವರು, ನೆನಪಿರಲಿ. ಸಂಗಾತಿ ಬಂದಾಗ ಕೈಹಿಡಿದು ಮುಂದೆ ಸಾಗೋಣ, ಆದರೆ ಹಿಂದಿರುಗಿ ನೋಡೋಣ ಹೆಜ್ಜೆ ಹಾಕಲು ಕಲಿಸಿದವರನ್ನು, ಮುಂದೆ ಹೋಗಲು ಹುರಿದುಂಬಿಸಿದವರನ್ನು.
ವೃದ್ಧಾಶ್ರಮಗಳು ಯಾಕಾಯಿತು ಎಂಬ ಪ್ರಶ್ನೆ ಕಣ್ಣೆದುರು ಬರುವುದು ಸಹಜ. ಐದೂ ಬೆರಳುಗಳು ಒಂದೇ ಹಾಗಿಲ್ಲವಲ್ಲ. ವಿದೇಶಕ್ಕೆ ಹೋಗಿ ಸಂಪಾದಿಸುವ ಭರಾಟೆಯಲ್ಲಿ ಹೆತ್ತವರ ನೆನಪು ದೂರವಾಗುತ್ತದೆ. ಹಣದೆದುರು ಎಲ್ಲಾ ಗೌಣ. ಯಾರೂ ಇಲ್ಲದವರಿಗೆ ಅಥವಾ ಧಾರಾಳ ಇದ್ದೂ ಅನಾಥರಾದವರಿಗೆ ಇದೇ ಆಸರೆಯ ತಾಣ.
ಪಾಲಕರ ದಿನದ ಬಾಬ್ತು, ಈ ಒಂದು ದಿನವಾದರೂ ಅವರ ತ್ಯಾಗಕ್ಕೆ, ಜಗತ್ತನ್ನು ಪರಿಚಯಿಸಿದ ಮಹಾಚೇತನ ಶಕ್ತಿಗಳಿಗೆ, ಬೆಲೆಕಟ್ಟೋಣ, ಗೌರವ ಸಲ್ಲಿಸೋಣ. 'ಹೆತ್ತವರ ಮಡಿಲು ಪ್ರೀತಿಯ ಕಡಲು' ಮರೆಯದಿರೋಣ. ಯಾರೂ ಕೈಬಿಟ್ಟರೂ ಬನ್ನಿ ಎಂದು ಬಾಚಿ ತಬ್ಬಿ ಸಂತೈಸುವ ಹಿರಿಯ ಚೇತನರು ನಮ್ಮ ಹೆತ್ತವರನ್ನು ಮರೆಯದಿರೋಣ.
-ರತ್ನಾ ಕೆ. ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ