ವಿಶ್ವ ಪುಸ್ತಕ ದಿನದ ಕವನಗಳು...

ವಿಶ್ವ ಪುಸ್ತಕ ದಿನದ ಕವನಗಳು...

ಕವನ

ಪುಸ್ತಕ - ಮಸ್ತಕ

ಪುಸ್ತಕಗಳನೋದದೆ

ಮಸ್ತಕದಲಿದ್ದುದನು

ಬರೆಯುತ್ತಾ ಹೋದಲ್ಲಿ

ಬರೆದುದು ಎಷ್ಟು ಜನರಿಗೆ

ತಲುಪೀತು ಛಲವಾದಿಯೆ ||

 

ಕಲಿತು ಬಂದರೆ ಸಾಲದಯ್ಯಾ

ಜ್ಞಾನಿಗಳು ಬರೆದಿರುವ ಪುಸ್ತಕವ ತಿರುವು 

ಮತ್ತಷ್ಟು ಮೊಗೆದಷ್ಟು ತಿಳುವಳಿಕೆ ಹೆಚ್ಚಿ

ಬರಹವಾಗುವದು ಸುಂದರ ಛಲವಾದಿಯೆ||

 

ಪುಸ್ತಕದ ಸಂಗ್ರಹ ಮಾಡುತಲಿ ಮನೆಯೊಳಗೆ

ಮನೆಯ ಮಕ್ಕಳಿಗೆ ಓದುವುದ ಕಲಿಸಿ

ಜ್ಞಾನ ಪ್ರಭೆಯನೆಲ್ಲ ಮನದೊಳಗೆ ಬೆಳಗಿ

ಮಹಾಮಹಿಮನಾಗುತಲಿ ಛಲವಾದಿಯೆ||

 

-ಹಾ ಮ ಸತೀಶ ಬೆಂಗಳೂರು

***

ಪುಸ್ತಕವ ತೆರೆಯು

ಪುಸ್ತಕವ ತೆರೆದು ಓದುತಲಿ

ಕಲಿತ ವಿಷಯ ಮಸ್ತಕದಲಿರಲಿ

ಜ್ಞಾನವದು ತುಂಬುತಲಿ ಹೋದಂತೆ

ಪುಸ್ತಕದ ರೂಪದಲಿ ಹೊರಬರಲಿ

 

ಮೊದಲು ತಲೆಯ ತಗ್ಗಿಸಿ ಓದು

ಮತ್ತೆ ಲೋಕದೊಳು ತಲೆಯೆತ್ತಿ ಬಾಳು

 ಸನ್ಮಾನ ಗೌರವಗಳು ತಾನಾಗಿ ಬರುವುದು

ಬದುಕು ಬಂಗಾರವಾಗುವುದು ಕೇಳು

 

‘ವಿಶ್ವ ಪುಸ್ತಕದ ದಿನ’ ಜೈಕಾರ ಹಾಕಿನ್ನು

ಕೊಂಡು ಓದುವೆ ಪುಸ್ತಕವ ಅನುದಿನವುಯೆನ್ನು

ಪುಸ್ತಕದ ಕೃತಿಸ್ವಾಮ್ಯ ಇರಲಿ ಎಂದೆಂದೂ

ಬರಲಿ ಪ್ರಕಟಿಸಿದ ಪುಸ್ತಕಕೆ ಬೆಲೆಯೆಂದು

 

ದೇಶ ಸುತ್ತುತಲೆ ಪುಸ್ತಕವ ನೋಡು

ಜ್ಞಾನ ಭಂಡಾರದೊಳು ಮುಂದೆ ಸಾಗು

ನಿನ್ನ ಪ್ರತಿಭೆಯನೆಲ್ಲ ಹಂಚುತಲಿ ಬೀಗು

ವಿಖ್ಯಾತನಾಗುತಲಿ ಸವಿಯಿಂದ ಬಾಗು

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್