ವಿಶ್ವ ಪುಸ್ತಕ ದಿನ
ಇಂದು ಅನೇಕ ಬರಹಗಾರರು, ಕಾದಂಬರಿಕಾರರು ಜನ್ಮತಾಳಿದ ಮತ್ತು ಮರಣಹೊಂದಿದ ದಿನವಾಗಿದ್ದು, ಯುನೆಸ್ಕೊವು ಎಪ್ರಿಲ್ 23 ನ್ನು ವಿಶ್ವಪುಸ್ತಕ ದಿನವನ್ನಾಗಿ ಆಚರಿಸುತ್ತಿದೆ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲಾ ನಾಳೆ ಫಲ ಕೊಟ್ಟೆ ಕೊಡುವುದು. ಪುಸ್ತಕವಿಲ್ಲದ ಮನೆ, ಜೀವವಿಲ್ಲದ ದೇಹ ಎರಡೂ ಒಂದೇ ಎಂಬ ಮಾತಿದೆ. ನಾಗರಿಕತೆಯ ನಾಗಾಲೋಟದಲ್ಲಿ ಕೇವಲ ಮೊಬೈಲ್, ಟಿವಿ, ಕಂಪ್ಯೂಟರ್ ಜೊತೆ ಕಾಲ ಕಳೆಯುವುದಕ್ಕಿಂತ, ಪುಸ್ತಕಗಳನ್ನು ಸಂಗ್ರಹಿಸುವ, ಓದುವ ಹವ್ಯಾಸಗಳು ನಮ್ಮನ್ನು ಹೆಚ್ಚು ವಿಚಾರವಂತರನ್ನಾಗಿ ಮಾಡುವುದರ ಜೊತೆಗೆ ಸಮಸ್ತ ವಿಶ್ವದ ಪರಿಚಯವನ್ನು ಮಾಡಿಕೊಡುವುದರ ಜೊತೆಗೆ ನಮ್ಮನ್ನು ನೈತಿಕ ಮಾರ್ಗದಲ್ಲಿ ನಡೆಯುವಂತೆ ಉತ್ತೇಜಿಸುತ್ತವೆ.
ಕೋಶ ಓದು, ದೇಶ ಸುತ್ತು ಎಂಬ ಗಾದೆಯಂತೆ ಕೋಶದ ಓದು ಇಂದಿನ ಕಾಲಕ್ಕೆ ಅತಿ ಅಗತ್ಯವಾಗಿದೆ. ಪುಸ್ತಕ ಪ್ರೀತಿಯು ನಮ್ಮ ವಿಚಾರ ಮತ್ತು ತಿಳುವಳಿಕೆಯನ್ನು ಗಟ್ಟಿಗೊಳಿಸುವುದರ ಜೊತೆಗೆ, ಇತರರ ಭಿನ್ನ ವಿಚಾರ ಮತ್ತು ಅಭಿಪ್ರಾಯಗಳನ್ನು ಪರಿಚಹಿಸುವ ವಾಹಕವೇ ಪುಸ್ತಕಗಳ ಓದು. ಈ ಬುಕ್,ಆಡಿಯೋ ಬುಕ್ ಗಳು ಪ್ರವರ್ಧಮಾನಕ್ಕೆ ಬಂದರೂ ಕೈಯಲ್ಲಿ ಪುಸ್ತಕಗಳನ್ನು ಹಿಡಿದು ಓದುವ ಮಜವೇ ಬೇರೆ. ನಮಗಿಷ್ಟ ವಾದ ಬರಹಗಾರರ ಪುಸ್ತಕಗಳನ್ನು ಓದುವಾಗ ಸಿಗುವ ಅಮಲು ಯಾವ ನಶೆಗೂ ಕಡಿಮೆ ಇರುವುದಿಲ್ಲಾ. ವಿಶ್ವಪುಸ್ತಕ ದಿನದೊಂದು ನಾವೆಲ್ಲರೂ ದಿನಕ್ಕೆ ಸ್ವಲ್ಪ ಸಮಯವನ್ನು ಓದುವುದಕ್ಕೋಸ್ಕರವೇ ಮಿಸಲಿಡುತ್ತೇವೆ ಎಂಬ ಪ್ರತಿಜ್ಞೆ ಮಾಡೋಣ, ನಮ್ಮ ಮನಸ್ಸುಗಳನ್ನು ಪುಸ್ತಕಗಳೆಂಬ ಕಿಟಕಿಯ ಮೂಲಕ ಜಗತ್ತಿಗೆ ಹಾರಿ ಬಿಡೋಣ.
ಒಂದು ಪುಸ್ತಕದ ಓದು ನಮಗೆ ಅನೇಕ ಗೆಳಯರನ್ನು ಕೊಡುವುದರ ಜೊತೆಗೆ, ಓದಿನ ಹವ್ಯಾಸವು ನಾವು ಬಯಸಿದ್ದು ನಮಗೆ ಸಿಗುವಂತಾಗುತ್ತದೆ. ನಾವು ಭೌತಿಕವಾಗಿ ಚಲಿಸದೆ ನಮಗೆ ಸುಖಕರ ಪ್ರಯಾಣದ ಅನುಭವವನ್ನು ನೀಡುತ್ತವೆ, ನಮ್ಮ ಮನಸ್ಸಿಗೆ ವ್ಯಾಯಾಮವಾಗುತ್ತದೆ. ಸಹೃದಯ ಪುಸ್ತಕ ಪ್ರೇಮಿಗಳಿಗೆ, ಓದುಗರಿಗೆ, ಪುಸ್ತಕ ಪ್ರಕಾಶಕರಿಗೆ, ನಾವಿಷ್ಟ ಪಟ್ಟ ಪುಸ್ತಕಗಳನ್ನು ನಮಗೆ ಸಕಾಲದಲ್ಲಿ ತಲುಪಿಸುವ ಎಲ್ಲ ಆತ್ಮೀಯರಿಗೆ ವಿಶ್ವ ಪುಸ್ತಕ ದಿನದ ಶುಭಾಶಯಗಳು.
-ಡಾ॥ ಹೇಮಂತ್ ಕುಮಾರ್.ಜಿ.ಎನ್. ಸಖರಾಯಪಟ್ಟಣ.
ಚಿತ್ರ ಕೃಪೆ: ಇಂಟರ್ನೆಟ್ ತಾಣ