ವಿಶ್ವ ಪ್ರಾಣಿ ಸಂರಕ್ಷಣೆಯ ದಿನದ ಮಹತ್ವ

ವಿಶ್ವ ಪ್ರಾಣಿ ಸಂರಕ್ಷಣೆಯ ದಿನದ ಮಹತ್ವ

ಜೀವ ಜಗತ್ತಿನಲ್ಲಿ ಖಗ-ಮೃಗಗಳಿಗೂ ನಮಗೂ ಅವಿನಾಭಾವ ಸಂಬಂಧವಿದೆ. ಅನಾದಿ ಕಾಲದಿಂದಲೂ ವೈವಿಧ್ಯಮಯವಾದ ಪ್ರಾಣಿಗಳನ್ನು ಮಾನವ ತನ್ನ ಉಪಯೋಗಕ್ಕೂ ಬಳಸಿಕೊಂಡವನೇ ಆಗಿದ್ದಾನೆ. ಪ್ರತಿಯೊಂದು ಪ್ರದೇಶದಲ್ಲಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಪ್ರಾಣಿಗಳಿರುವುದು ಸಹಜ. ಇಂತಹ ಪ್ರಾಣಿ ಸಂಕುಲವು ಇತ್ತೀಚೆಗೆ ಮಾನವನ ಸ್ವಾರ್ಥಕ್ಕೆ ಬಲಿಯಾಗಿ ಒಂದೆಡೆ ನಾಶವಾಗುತ್ತಿದೆ. ಇನ್ನೊಂದೆಡೆ ಆಹಾರವನ್ನು ಅರಸುತ್ತಾ ನಾಡೊಳಗೆ ಬರುವುದು ಸಹಜವಾಗಿದೆ. ಪ್ರಾಣಿಗಳ ಸಂರಕ್ಷಣೆ, ವಾಸದ ಸ್ಥಳದ ರಕ್ಷಣೆ, ಸಂಕುಲದ ಉಳಿವಿಗಾಗಿ ‘ವಿಶ್ವ ಪ್ರಾಣಿ ಸಂರಕ್ಷಣಾ ದಿನ’ ಜಾರಿಗೆ ತರಲಾಯಿತು. ನಮ್ಮ ಹಾಗೆ ಅವುಗಳಿಗೂ ಸುರಕ್ಷತೆ ಬೇಕಲ್ಲವೇ? ಕೆಲವು ವನ್ಯ ಜೀವಿಗಳು ಅಳಿವಿನಂಚಿಗೆ ಬಂದಿವೆ. ಪ್ರೀತಿ, ಮಮತೆ, ವಾತ್ಸಲ್ಯ ತೋರಿಸಿದರೆ ಪ್ರಾಣಿಗಳೂ ಪ್ರೀತಿ ತೋರಿಸುವುದು ಸಹಜ.

ಸಂಘ-ಸಂಸ್ಥೆಗಳ ಮೂಲಕ, ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ಮಾಹಿತಿ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಾರೆ. ನಮ್ಮ ಮನೆಗಳಲ್ಲಿ ಸಾಕುವ ಬೆಕ್ಕು, ನಾಯಿ, ಹಸು, ಎಮ್ಮೆ, ಕೋಣ, ಎತ್ತು, ಮೊಲ, ಕುರಿ, ಆಡು, ಹಂದಿ ಮುಂತಾದ ಪ್ರಾಣಿಗಳಿಗೂ ಕಾಲಕಾಲಕ್ಕೆ ಆಹಾರ, ನೀರು, ಔಷಧಿ ನೀಡಬೇಕು. ಕಾಡು ಪ್ರಾಣಿಗಳು ಸಂಚರಿಸಲು ಕಾಡುಗಳಿರಬೇಕು, ಆಹಾರದ ವ್ಯವಸ್ಥೆಯಿರಬೇಕು. ರಕ್ಷಣಾ ಬೇಲಿ ಬೇಕು. ಕೆಲವೊಂದು ಕಡೆ ಕಾದಿರಿಸಿದ ಕಾಡುಗಳಿವೆ. ಸುರಕ್ಷತೆಯ ಅನುಭವ ಅಲ್ಲಿರುವ ಪ್ರಾಣಿಗಳಿಗಿರುವಂತೆ ನೋಡಿಕೊಳ್ಳುತ್ತಾರೆ. ಬೇಕಾಬಿಟ್ಟಿ ಪ್ರಾಣಿಗಳನ್ನು ಬೇಟೆಯಾಡಬಾರದು. ಪ್ರಾಣಿ ದಯಾ ಸಂಘ, ಪ್ರಾಣಿ ರಕ್ಷಣಾ ಸಂಘ, ಪ್ರಾಣಿ ಪ್ರಿಯರು ಎಂದು ಹಲವಾರು ಸಂಸ್ಥೆಗಳಿವೆ. ನಮ್ಮಂತೆ ಬೇನೆ ಬೇಸರಿಕೆಯಿರುವ ಮೂಕಪ್ರಾಣಿಗಳನ್ನು ನೋವು ಕೊಡದೆ ರಕ್ಷಿಸೋಣ.

-ರತ್ನಾ ಕೆ ಭಟ್, ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ