ವಿಶ್ವ ಫಿಲಾಸಫಿ ದಿನಾಚರಣೆ

ವಿಶ್ವ ಫಿಲಾಸಫಿ ದಿನಾಚರಣೆ

ಈ ವರ್ಷ ನಾವು ವಿಶ್ವ ಫಿಲಾಸಫಿ ದಿನವನ್ನು ‘ಭವಿಷ್ಯದ ಮನುಷ್ಯ’ ಎಂಬ ವಿಷಯದೊಂದಿಗೆ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ, UNESCO ಮತ್ತು Leifens Noy National Studio ಜಂಟಿಯಾಗಿ ಪ್ಯಾರಿಸ್‌ನಲ್ಲಿರುವ UNESCO ಪ್ರಧಾನ ಕಛೇರಿಯಲ್ಲಿ 16-18 ನವೆಂಬರ್ 2022 ರವರೆಗೆ ಮೂರು ದಿನಗಳ ಕಾಲ ಸಿಂಪೋಸಿಯಾ-ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಿದೆ. ಇದು ಯಾರಿಗೆ ಸಂಬಂಧಿಸಿದೆ ಎಂಬುದರ ಬಗ್ಗೆ ಯಾವುದೇ ಅನುಮಾನ ಬೇಡ. ಏಕೆಂದರೆ ಇದು ಎಲ್ಲರಿಗೂ ಎಲ್ಲೆಡೆ ಬೇಕಾಗಿದೆ. ಜೀವನ ಮತ್ತು ತತ್ತ್ವಶಾಸ್ತ್ರದ ಮೂಲಗಳ ಬಗ್ಗೆ ಯೋಚಿಸುವ ಯಾರಿಗಾದರೂ ಇದು ಪ್ರಪಂಚದಾದ್ಯಂತ ಅತ್ಯಗತ್ಯವಾಗಿರುತ್ತದೆ.

ಪ್ರತಿ ವರ್ಷ ನವೆಂಬರ್ ನಲ್ಲಿ ಮೂರನೇ ಗುರುವಾರ ವಿಶ್ವ ಫಿಲಾಸಫಿ ದಿನವನ್ನು ಆಚರಿಸಲಾಗುತ್ತಿದೆ. ಏಕೆಂದರೆ ಪ್ರಪಂಚದ ಪ್ರಜೆಗಳು ತಮ್ಮ ಸಂಸ್ಕೃತಿಗಳಿಗಿಂತ ಮೇಲೇರುತ್ತಾರೆ ಮತ್ತು ಪ್ರತಿಯೊಬ್ಬರೂ ಮಾನವೀಯವಾಗಿ ಯೋಚಿಸಿ, ಮಾನವ ಘನತೆಯನ್ನು ಹೆಚ್ಚಿಸಿಕೊಳ್ಳಲು, ಅದರಂತೆ ಅಭ್ಯಾಸ ಮಾಡಲು ಮತ್ತು ತಮ್ಮ ಸಮಾಜವನ್ನು ಇನ್ನಷ್ಟು ಉನ್ನತವಾಗಿ ರೂಪಿಸಲು ಪ್ರತಿ ವರ್ಷ ನವೆಂಬರ್ ಮೂರನೇ ಗುರುವಾರದಂದು ವಿಶ್ವ ತತ್ವಶಾಸ್ತ್ರ ದಿನವನ್ನು ಆಚರಿಸಲಾಗುತ್ತದೆ! ಜಗತ್ತಿನಲ್ಲಿರುವ ಬುದ್ಧಿಜೀವಿಗಳ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಬೇಕು ಎಂಬುದನ್ನು ನೆನಪಿಟ್ಟುಕೊಳ್ಳಲು ನಾವು ಈ ದಿನವನ್ನು ಆಚರಿಸುತ್ತೇವೆ!! ತರ್ಕಬದ್ಧ ಚರ್ಚೆ ಮತ್ತು ಸಮಾಲೋಚನೆಯೊಂದಿಗೆ ಮಾನವ ಕೇಂದ್ರಿತ ಪ್ರಯಾಣಕ್ಕೆ ಪ್ರಾಮಾಣಿಕತೆ, ಸ್ವಯಂ ತ್ಯಾಗ, ಜವಾಬ್ದಾರಿ, ತಾಳ್ಮೆ ಮತ್ತು ತಾತ್ವಿಕ ಪಾತ್ರವನ್ನು ನೆನಪಿಟ್ಟುಕೊಳ್ಳಲು ನಾವು ಇದನ್ನು ಆಚರಿಸುತ್ತಿದ್ದೇವೆ!

ತತ್ತ್ವಶಾಸ್ತ್ರ/ತತ್ವಜ್ಞಾನವು ಮನುಷ್ಯನ ಬುದ್ಧಿವಂತಿಕೆಯ ಮೇಲಿನ ಪ್ರೀತಿ ಎಂದು ನಾವು ಭಾವಿಸಬಹುದು- ವಿಶಾಲವಾಗಿ ಹೇಳುವುದಾದರೆ, ತತ್ವಶಾಸ್ತ್ರವು ಒಂದು ಜೀವನ ವಿಧಾನವಾಗಿದೆ, ಇದರಲ್ಲಿ ಜನರು ತಮ್ಮ ಬಗ್ಗೆ- ತಮ್ಮ ಸುತ್ತಲಿನ ಪ್ರಪಂಚದ ಬಗ್ಗೆ- ಅವರ ಸಂಬಂಧದ ಬಗ್ಗೆ ಕೆಲವು ಮೂಲಭೂತ ಸತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ರೂಪಿಸುತ್ತಾರೆ! ಮತ್ತೆ ಈ ತತ್ವಶಾಸ್ತ್ರವು ಹಲವು ರೂಪಗಳನ್ನು ಪಡೆಯುತ್ತದೆ. ಮೆಟಾಫಿಸಿಕ್ಸ್/ಎಪಿಸ್ಟೆಮಾಲಜಿ; ಪ್ರಾಯೋಗಿಕವು ವಾಸ್ತವದಿಂದ ಹೊರಬರುವ ಒಂದು ತತ್ತ್ವಶಾಸ್ತ್ರವಾಗಿದೆ – ಅಂದರೆ ನೈತಿಕ, ಸಾಮಾಜಿಕ, ರಾಜಕೀಯ ಮತ್ತು ಸೌಂದರ್ಯದ ಪರಿಕಲ್ಪನೆಗಳಂತಹ ಅಂಶಗಳನ್ನು ಒಳಗೊಂಡಿರುವ ತತ್ವಶಾಸ್ತ್ರ. ಇಲ್ಲದಿದ್ದರೆ ಅದು ವೈಯಕ್ತಿಕ ನಂಬಿಕೆಗಳು, ಜೀವಮಾನದ ಮೌಲ್ಯಗಳು ಮತ್ತು ಅಭ್ಯಾಸ ಮಾಡುವ ನೈತಿಕ ತತ್ವಗಳ ಆಧಾರದ ಮೇಲೆ ಅವರ ವೈಯಕ್ತಿಕ ತತ್ವವಾಗುತ್ತದೆ. ಅದು ಉತ್ತಮವಾಗಿದ್ದು ಮತ್ತು ಇತರರಿಗೆ ಸ್ಫೂರ್ತಿ ನೀಡಿದಾಗ – ಅದನ್ನು ಒಂದು ಪ್ರದೇಶದ ಸಮಾಜವು ಅಭ್ಯಾಸ ಮಾಡಿದರೆ ಅದು ಸಮಾಜದ ತತ್ವವಾಗುತ್ತದೆ. ಅದನ್ನು ದೇಶ ಅನುಸರಿಸಿದರೆ ಅದು ಆ ದೇಶದ ಫಿಲಾಸಫಿಯಾಗುತ್ತದೆ. ಹೇಗಾದರೂ, ಅಂತಿಮವಾಗಿ ಮಾನವೀಯತೆಗೆ ಮಾನವ ಕೇಂದ್ರಿತ ಸಾಮಾನ್ಯ ತತ್ವಶಾಸ್ತ್ರದ ಅಗತ್ಯವಿದೆ.

ತಾತ್ವಿಕ ದೃಷ್ಟಿಕೋನವು ಯಾವಾಗಲೂ ಗೌರವಯುತ ಸಮಾಜವನ್ನು ನಿರ್ಮಿಸಲು ಉಪಯೋಗವಾಗಬೇಕು. ಸವಾಲುಗಳನ್ನು ಸಂಯಮದಿಂದ ಎದುರಿಸುವ ಶಕ್ತಿಯನ್ನೂ ನೀಡಬೇಕು. ಸಮಾಜದ ಎಲ್ಲರನ್ನೂ ಇದರಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಜಗತ್ತಿನಲ್ಲಿ ಹಲವು ಭಾಷೆಗಳಿವೆ. ಆದರೆ, ಆ ಭಾಷೆಗಳಲ್ಲಿ ತಾತ್ವಿಕ ದೃಷ್ಟಿಕೋನವಿಲ್ಲದಿದ್ದರೆ, ಅವು ಬರಡು ಭೂಮಿಯಾಂತಾಗುತ್ತದೆ. ಅದರಲ್ಲಿ ಹಸಿರು ಜೀವನ ತತ್ವವನ್ನು ಮೈಗೂಡಿಸಿಕೊಳ್ಳಬೇಕು.

ಮಾನವೀಯತೆಯು ವಿಶಾಲ ದೃಷ್ಟಿಕೋನದಿಂದ ಅರಳಬೇಕು – ಎಲ್ಲಾ ಮಾನವರು ಒಂದೇ ಎಂದು ಘೋಷಿಸಬೇಕು! ಜಗತ್ತಿನ ಪ್ರಜೆಗಳೆಲ್ಲರೂ ಮಾನವೀಯತೆಯ ಪ್ರಗತಿಗಾಗಿ ದುಡಿಯುವ ಪಣ ತೊಡಬೇಕು!! ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ಎಲ್ಲೆಡೆ ಆಯೋಜಿಸಬೇಕು. ಅದು 17 ನವೆಂಬರ್ 2022 ರಂದು ಆಚರಿಸಲಾದ ತತ್ವಶಾಸ್ತ್ರದ ದಿನದ ಉದ್ದೇಶವಾಗಿದೆ!

ದೇವರಾಜು ಮಹಾರಾಜು, ಖ್ಯಾತ ಸಾಹಿತಿ, ಜೀವಶಾಸ್ತ್ರಜ್ಞರು.

ಅನುವಾದ : ರೇಣುಕಾ ಭಾರತಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ