ವಿಶ್ವ ಬಾಲಕಾರ್ಮಿಕ ವಿರೋಧಿ ದಿನ

ಪುಟ್ಟ ಮಕ್ಕಳು ಹೆತ್ತವರೊಂದಿಗೆ ಕೆಲಸ ಮಾಡುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಸಣ್ಣಪುಟ್ಟ ಸಹಕಾರ ಮನೆಯಲ್ಲೇ ಅಭ್ಯಾಸವಾಗಬೇಕಾದ್ದು ಸರಿ. ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಲು ಕಲಿಸುವುದು ಆರೋಗ್ಯದಾಯಕ. ಸ್ವಕಲಿಕೆ ಸಹ. ಮುಂದೆ ಶಾಲೆಗೆ ಸೇರಿದ ಮೇಲೆ, ಅಲ್ಲಿಯೂ ಸ್ವಚ್ಛತೆಯ, ಕೈತೋಟದ, ತಾನು ಊಟ ಮಾಡಿದ ತಟ್ಟೆ (ಈಗ ಬಿಸಿಯೂಟ ಇದೆ)ಯನ್ನು ತೊಳೆದು ಇಡುವುದು, ತರಗತಿಯನ್ನು ಸ್ವಚ್ಛವಾಗಿಡುವುದು, ತನ್ನ ಶಾಲಾ ಪುಸ್ತಕ, ಚೀಲ, ತನ್ನ ವಸ್ತುಗಳನ್ನು ಜಾಗೃತೆಯಾಗಿಡುವುದು ಮುಂತಾದವುಗಳನ್ನು ಮಗು ಬೆಳೆದಂತೆ ಕಲಿಯುವುದು, ಹಿರಿಯರ, ಶಿಕ್ಷಕರ ಮಾರ್ಗದರ್ಶನದಲ್ಲಿ.
ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಹಣ ಸಂಪಾದನೆಗಾಗಿ ದುಡಿಸುವುದು, ಶಾಲಾ ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡುವುದು, ಹೇಯ ಕೃತ್ಯಗಳಿಗೆ ಒಳಪಡಿಸುವುದು, ಇತ್ಯಾದಿಗಳಿಂದಾಗಿ ಮಗುವಿಗೆ ಸಿಗಬೇಕಾದ ವಯಸ್ಸಿನಲ್ಲಿ ಯಾವುದೂ ಸಿಗದೆ, ಅವನು/ಅವಳು ಬೆಳೆದಂತೆ ಸಮಾಜಬಾಹಿರ ಚಟುವಟಿಕೆಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ‘ಸರಿಯಾದ ವಯಸ್ಸಿಗೆ, ಸಮರ್ಪಕವಾಗಿ ವಿದ್ಯೆ ಕಲಿಯುವುದು ಮಗುವಿನ ಹಕ್ಕು’ ಉತ್ತಮ ಕೌಟುಂಬಿಕ ಜೀವನ, ಬದುಕುವ, ಬೆಳೆಯುವ, ಉಲ್ಲಸಿತ ವಾತಾವರಣ, ಆರೋಗ್ಯ, ರಕ್ಷಣೆ ಇವೆಲ್ಲವೂ ಹುಟ್ಟಿದ ಪ್ರತಿ ಮಗುವಿಗೂ ಸಿಗಬೇಕು.
‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ’ಯಡಿ ೧೪ ವರುಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣ ಉಚಿತವಾಗಿ ಪಡೆಯಲೇ ಬೇಕೆಂಬ ಕಾಯ್ದೆ ಜಾರಿಗೆ ತರಲಾಯಿತು. ೧೪ ವರುಷದೊಳಗಿನ ಮಕ್ಕಳನ್ನು ಯಾವುದೇ ದುಡಿತಕ್ಕೆ ಕಳುಹಿಸಬಾರದು, ೧೮ ವರುಷದೊಳಗಿನ ಮಕ್ಕಳನ್ನು ಕಿಶೋರ ವಯಸ್ಸು ಎಂದು ಸಾರಲಾಯಿತು. ಕಷ್ಟದ ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಳ್ಳಬಾರದು. ೧೯೮೬ರ ಕಾಯ್ದೆಗೆ ಬದಲಾವಣೆ ತಂದು ೨೦೧೬ರ ಜೂನ್ ೧೨ರಂದು ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣದಡಿ ತಿದ್ದುಪಡಿ ಮಾಡಲಾಯಿತು. ಈ ದಿನವನ್ನು ಪ್ರತೀ ವರ್ಷ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಎಂದು ಆಚರಿಸಲಾಗುತ್ತಿದೆ.
ಕಾಯ್ದೆ ಉಲ್ಲಂಘಿಸಿದಲ್ಲಿ ಮಾಲೀಕರಿಗೆ ೨೦,೦೦೦ ರೂಪಾಯಿ ದಂಡ ಮತ್ತು ೬ ತಿಂಗಳಿನಿಂದ ೨ ವರ್ಷಗಳ ಜೈಲುಶಿಕ್ಷೆ, ಪುನರಾವರ್ತಿತವಾದಲ್ಲಿ ೧ ವರುಷದಿಂದ ೩ವರ್ಷಗಳ ಶಿಕ್ಷೆ. ಪೋಷಕರಿಗೆ ೧೦,೦೦೦ ದಂಡ ವಿಧಿಸಲಾಗುವುದು ಎಂಬ ಕಾಯ್ದೆ ಜಾರಿಗೆ ತರಲಾಯಿತು. ಶಿಕ್ಷಣ ಇಲಾಖೆಯ ಮೂಲಕ ಜಾಗೃತ ದಳಗಳನ್ನು ಮಾಡಿ ಈ ಬಗ್ಗೆ ಹೋಟೆಲ್, ಗ್ಯಾರೇಜ್, ಕಲ್ಲುಕೋರೆಗಳಲ್ಲಿ, ಗುಜರಿ ಅಂಗಡಿಗಳಲ್ಲಿ, ಕ್ಷಷಿ ಭೂಮಿ, ಹೊಲಗಳಲ್ಲಿ ಇನ್ನಿತರ ಪುಟ್ಟ ಮಕ್ಕಳು ೧೮ ವರುಷದೊಳಗಿನವರು ದುಡಿಯುತ್ತಿರುವ ಎಲ್ಲಾ ಸ್ಥಳಗಳಲ್ಲೂ ಧಾಳಿ ಮಾಡಿ ದಂಡ ಹಾಕಲಾಯಿತು. ಇತ್ತೀಚಿನ ವರ್ಷಗಳಲ್ಲಿ ಹೋಟೆಲ್ ಗಳಲ್ಲಿ ನಮಗೆ ಮಕ್ಕಳು ಕಾಣಸಿಗದಿರಲು ಇದೇ ಕಾರಣ.
ಬಾಲಕಾರ್ಮಿಕರಾಗಲು ಕಾರಣವನ್ನು ಹುಡುಕಿದರೆ ಹಸಿವು, ಬಡತನ, ಅನಕ್ಷರಸ್ಥ ಹೆತ್ತವರು, ಮುಖ್ಯವಾಗಿ ವಲಸೆ, ಹಣಸಂಪಾದನೆಯ ಆಸೆ ಇವೆಲ್ಲವೂ ಸೇರುತ್ತದೆ. ಪ್ರಕೃತಿಕ ವಿಕೋಪ, ರೋಗರುಜಿನಗಳಿಂದ ಜನರು ವಲಸೆ ಹೋಗುವುದು ಸಹ ಒಂದು ಕಾರಣವಾಯಿತು. ಸಾಮಾನ್ಯವಾಗಿ ಕಟ್ಟಡ ಕಾರ್ಮಿಕರ ಬಿಡಾರಗಳಲ್ಲಿ ಇಂಥ ಮಕ್ಕಳನ್ನು, ಅಲೆಮಾರಿ ಜನಾಂಗದಲ್ಲಿ ನಾವು ನೋಡಬಹುದು. ಹಳ್ಳಿಯಲ್ಲಿ ಸಹ ಅಲ್ಲಲ್ಲಿ ಬಾಲಕಾರ್ಮಿಕರನ್ನು ಕಾಣಬಹುದು. ಇತ್ತೀಚೆಗೆ ಕಡ್ಡಾಯ ಎಂದು ಕಾಯ್ದೆ ಬಂದ ಮೇಲೆ ಪೋಷಕರಿಗೆ ,ಮಾಲೀಕರಿಗೆ ಸಾಕಷ್ಟು ಬಿಸಿ ಮುಟ್ಟಿದ ಕಾರಣ ಅವರು ಎಚ್ಚೆತ್ತುಕೊಂಡಿದ್ದಾರೆ.
ಬಾಯಿಯಲ್ಲಿ ಹೇಳಿದರೆ ಸಾಲದು, ಅನುಷ್ಠಾನಕ್ಕೆ ಬರಬೇಕು, ಅರಿವಿನ ಕಾರ್ಯಕ್ರಮ ಸರಕಾರ, ಸರಕಾರೇತರ ಸಂಸ್ಥೆ, ಪಂಚಾಯತ್ ಮಟ್ಟದಲ್ಲಿ ನಡೆಸಬೇಕು. ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ದುಡಿಯುವ ಸ್ಥಳದಲ್ಲಿ ಮಕ್ಕಳಿಗೆ ಅಕ್ಷರ ಕಲಿಸುವ ವ್ಯವಸ್ಥೆಯಾಗಬೇಕು. ‘ಎಲ್ಲಿ ಟೆಂಟೋ ಅಲ್ಲೇ ಶಾಲೆ’ ಮೇಲುಸ್ತುವಾರಿ ಅಲ್ಲಿಯೇ ಆಗುವಂತಿರಬೇಕು. ಕಡ್ಡಾಯ ಶಿಕ್ಷಣದ ಮಹತ್ವವನ್ನು ತಿಳಿಸುವ ಕೆಲಸವಾಗಬೇಕು. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಆರಕ್ಷಕ ಇಲಾಖೆ ಜಂಟಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತೀ ವರ್ಷ ಸರ್ವೇ ಕಾರ್ಯಕ್ರಮ ಮಾಡಿ ಅಂಕಿ ಅಂಶಗಳನ್ನು ಕ್ರೋಢೀಕರಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಪರಿಸರದಲ್ಲಿ ಬಾಲಕಾರ್ಮಿಕರನ್ನು ಕಂಡು ಬಂದರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಮಕ್ಕಳನ್ನು ಹೊತ್ತು ಹೆತ್ತರೆ ಸಾಲದು, ಕಾಲಕಾಲಕ್ಕೆ ಅವರಿಗೆ ನೀಡಬೇಕಾದ ಸಂಸ್ಕಾರ, ಸಂಪ್ರದಾಯ, ಬದುಕಿಗೆ ಬೇಕಾದ ಜೀವನಶಿಕ್ಷಣ ನೀಡಿ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಬೇಕಾದ ಅತಿ ದೊಡ್ಡ ಜವಾಬ್ದಾರಿ ಹೆತ್ತವರದು. ಇಲ್ಲದಿದ್ದರೆ ಅಪ್ರಾಪ್ತ ವಯಸ್ಸಿನಲ್ಲಿ ಮಾಡಬಾರದ ಹೇಯಕೃತ್ಯಗಳನ್ನು ಮಾಡುವರು. ಈ ಬಗ್ಗೆ ಮಾಧ್ಯಮಗಳಲ್ಲಿ ದಿನನಿತ್ಯ ಓದುತ್ತಿದ್ದೇವೆ.ಇನ್ನಾದರೂ ಎಚ್ಚೆತ್ತು ಪ್ರತಿಮನೆಯ ಕುಡಿಗಳನ್ನು (ಇರುವುದೇ ಒಂದೆರಡು ಮಕ್ಕಳು) ಸಮರ್ಪಕವಾಗಿ, ಸರಿಯಾದ ದಾರಿಯಲ್ಲಿ ಹೋಗುವಂತೆ ಮಾಡುವುದು ಎಲ್ಲರ ಕರ್ತವ್ಯ. ‘ಮಕ್ಕಳು ನಮ್ಮ ಅಮೂಲ್ಯ ಸಂಪತ್ತು’. ಬೆಳೆಸುವಲ್ಲಿ ಅಸಡ್ಡೆ ಸಲ್ಲದು. ‘ಮಗು ಮನೆಯ ಬೆಳಕು, ಆರಲು ಬಿಡದೆ ಜ್ಯೋತಿಯಾಗಿ ಬೆಳಗಲು ಪ್ರೋತ್ಸಾಹಿಸೋಣ’
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ