ವಿಶ್ವ ಮಹಿಳಾ ದಿನಾಚರಣೆಗೆ ಮನದಾಳದ ಮಾತುಗಳು (ಭಾಗ 2)

ವಿಶ್ವ ಮಹಿಳಾ ದಿನಾಚರಣೆಗೆ ಮನದಾಳದ ಮಾತುಗಳು (ಭಾಗ 2)

ಈ ಪ್ರಪಂಚದಲ್ಲಿ ಆಕೆ ಶಕ್ತಿ ಸ್ವರೂಪಿಣಿ, ಮಾತೆ ಎಂಬುದನ್ನು ಅರಿಯೋಣ. ಅತ್ಯಂತ ಪೂಜನೀಯ ಸ್ಥಾನಮಾನವಿದೆ. ಮತ್ಯಾಕೆ ಹೀಗೆ? ಆಕೆಯನ್ನು ಕಾಲಕಸ ಮಾಡುತ್ತಿರುವುದು ಎಷ್ಟೋ ಮನೆಗಳಲ್ಲಿ, ಆಡುವ ಮಾತುಗಳಲ್ಲಿ ಕಾಣುತ್ತಿದೆ. ನಾವಿನ್ನೂ ಹೋರಾಟದಲ್ಲಿಯೇ ಮುಳುಗಿದ್ದೇವೆ ಎಂದರೆ ಇದು ನಾಚಿಕೆಗೇಡೇ ಸರಿ. ಅಲ್ಲ ದೌರ್ಬಲ್ಯವೇ? ‘ತಾಯಿ’ ಭಗವಂತನ ಪ್ರತಿರೂಪ. ಕಣ್ಣಿಗೆ ಕಾಣದ ಶಕ್ತಿ ಅವನಾದರೆ ‘ಅಮ್ಮ' ಕಣ್ಣಿಗೆ ಕಾಣುವವಳು. ಅವಳೇನು ಕೊರತೆ ಮಾಡುತ್ತಾಳೆ? ಮನೆಯ ಎಲ್ಲಾ ಸದಸ್ಯರನ್ನೂ ನೋಡಿಕೊಂಡು, ಹೊರಗೆ ಸಹ ದುಡಿಯುತ್ತಾ (ಇಂದು ಗಳಿಕೆ ಅನಿವಾರ್ಯ) ಮಕ್ಕಳನ್ನೂ ಬೆಳೆಸುತ್ತಾ ಅಬ್ಬಬ್ಬಾ ಅವಳ ಸಾಮರ್ಥ್ಯವೇ ಅನ್ನುವುದು ಬಿಟ್ಟು ‘ಹಣೆಪಟ್ಟಿ’ ಬೇರೆಯೇ ಕಟ್ಟುವುದು ಯಾವ ನ್ಯಾಯ?

ಸರಕಾರದ ಮಹಿಳಾ ಮೀಸಲಾತಿ, ವಿದ್ಯಾಭ್ಯಾಸದಲ್ಲಿ ಉಚಿತ ಸೌಲಭ್ಯಗಳು, ಮುಂದೆ ಕೆಲಸಕ್ಕೆ ದಾಖಲಾಗುವಾಗ ಅಲ್ಲೂ ಮೀಸಲಾತಿ, ಈ ರೀತಿ ಅವಳ ಸೌಲಭ್ಯಗಳನ್ನು ಕಸಿಯದೆ ಅವಳಿಗೆ ನೀಡಿದಾಗ ಸ್ವಲ್ಪ ಉನ್ನತಿ ಸಾಧ್ಯ. ಯಾರಿಗೇ ಆಗಲಿ ಸ್ವಾತಂತ್ರ್ಯ ನೀಡೋಣ, ಸ್ವೇಚ್ಛಾಚಾರ ಬೇಡ, ದುರುಪಯೋಗವಾಗದಂತೆ ನೋಡಿಕೊಳ್ಳೋಣ. ಆಕೆ ಮನೆಯ ಅವಿಭಾಜ್ಯ ಅಂಗವಾಗಿರುವಂತೆ ಬೆಳೆಸೋಣ. ಹೆಣ್ಣು ಗಂಡು ಭೇದವೆಣಿಸದೆ. ಉತ್ತಮ ಪ್ರಜೆಯನ್ನಾಗಿ ರೂಪಿಸುವುದು ಹೆತ್ತವರ ಕರ್ತವ್ಯ.

ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ೯೫% ಧಾರಾವಾಹಿ, ಕಥೆಗಳಲ್ಲಿ ಹೆಣ್ಣೇ ಹೆಣ್ಣಿಗೆ ಕೊಡುವ ಕಿರುಕುಳ ನೋಡ್ತಾ ಇದ್ದೇವೆ. ಇದು ಯಾರಿಗೆ ಬುದ್ಧಿಕಲಿಸಲು ಅಥವಾ ತಿದ್ದಲು ಅಂಥ ಗೊತ್ತಿಲ್ಲ. ಹೆಣ್ಣು ಮಗಳ ತಾಯ್ತನ ಅಂದರೆ ಸಂತಸದ ಕ್ಷಣ. ಆದರೆ ವಿಷಪ್ರಾಶನ ಮಾಡಿಸುವುದು, ಮಹಡಿಯಿಂದ ದಬ್ಬುವುದು ಇದೆಲ್ಲ ಸಮಾಜದ ಮೇಲೆ ಘೋರ ಪರಿಣಾಮ ಬೀರಬಹುದು. ಎಲ್ಲಾ ತೆರೆದ ಪುಸ್ತಕವಾಗಿದೆ. ಗೌಪ್ಯತೆ ಎಂಬುದೇ ಇಲ್ಲವಾಗಿದೆ. ನಿನ್ನೆ ಒಂದು ಕಥಾ ಸನ್ನಿವೇಶದಲ್ಲಿ ನೋಡಿದೆ, ಬಡ ವಿಧವೆ ಕೆಲಸ ಕೇಳಿಕೊಂಡು ಬಂದರೆ ಆತ ಆಕೆಯ ಅಡಿಯಿಂದ ಮುಡಿಯವರೆಗೆ ಕುಕ್ಕಿ ತಿನ್ನುವ ಹಾಗೆ ನೋಡ್ತಾನೆ. ಆಕೆ ಅವನ ನೋಟಕ್ಕೆ ಹಿಡಿಯಾಗ್ತಾಳೆ ಮತ್ತು ಬೆನ್ನು ಹಾಕಿ ಮಾನ ಕಾಪಾಡಲು ಓಡಿ ತಪ್ಪಿಸಿಕೊಳ್ತಾಳೆ. ಈಗಲೂ ಇಂತಹ ಸಂದೇಶಗಳು ನಮಗೆ ಬೇಕೇ? ಅವಳಿಗೊಂದು ಕೆಲಸ ಕೊಟ್ಟರೆ ಮರ್ಯಾದೆಯಲ್ಲಿ ದುಡಿಯಲಾರಳೇ? ಹಾಗಾದರೆ ಹೆಣ್ಣಾಗಿ ಜನಿಸಿದ್ದು ಅವಳ ತಪ್ಪೇ? ಉತ್ತಮ ಸಂದೇಶಗಳಿರುವ ಕಥೆಗಳು, ಮನೆಮಂದಿಯೆಲ್ಲ ಕುಳಿತು ವೀಕ್ಷಿಸುವ ಹಾಗೆ ಕಥಾವಸ್ತುಗಳು ಇರಬಾರದೇ? ಒಳ್ಳೆಯದೇ ಮೂಡಿಬರಲೆಂಬ ಆಶಯ.

ಸುಖಾಸುಮ್ಮನೆ ಹೆಣ್ಣು ಮಕ್ಕಳ ಅಭಿವೃದ್ಧಿ ಎನುವ ಬಾಯಿಮಾತು ಯಾಕೆ? ಬರಿಯ ಕಡತಗಳಲ್ಲಿ ಇದ್ದರೆ ಸಾಕೇ? ಇಲಾಖಾ ಮಟ್ಟದಲ್ಲಿಯೂ ಜಾರಿಗೆ ತರಬೇಕು. ಸಮಾಜದಲ್ಲಿ,ಕುಟುಂಬದಲ್ಲಿ ಆಕೆಗೆ ಸಿಗಬೇಕಾದ ಮರ್ಯಾದೆ, ಸ್ಥಾನಮಾನಗಳು ಸಿಗಲೇ ಬೇಕು.ಹೆಣ್ಣು ಹುಟ್ಟಿದಾಗ ಮೂಗು ಮುರಿಯದಿರಿ.

ಓರ್ವ ಹೆಣ್ಣುಮಗಳಿಗೆ ಅವಳ ದೇಹದ ಬದಲಾವಣೆ, ಪ್ರಹರಗಳು, ತೊಂದರೆಯಿಂದಾಗುವ ದೇಹದ ವ್ಯತ್ಯಾಸಗಳು, ಲೈಂಗಿಕವಾಗಿ ಶೋಷಣೆಗೆ ಒಳಗಾದಾಗ ವಹಿಸಬೇಕಾದ ಎಚ್ಚರಿಕೆಗಳು ಈ ಎಲ್ಲವನ್ನೂ ತಿಳಿಸಿ ಹೇಳಿ ಮನದಟ್ಟು ಮಾಡಬೇಕು. ಶೋಷಣೆಗೆ ಒಳಗಾದರೆ ಅದನ್ನು ಎದುರಿಸಿ ನ್ಯಾಯ ಪಡೆಯುವಲ್ಲಿ ಎಲ್ಲರ ಸಹಕಾರವಿರಬೇಕು. ಸಂಸ್ಕಾರ, ಸಂಪ್ರದಾಯದ ಚೌಕಟ್ಟಿನಲ್ಲಿ ಬಂಧಿಸಬೇಡಿ. ತಿಳಿ ಹೇಳುವ ಕೆಲಸವಾಗಬೇಕು. ಹೇಳುವ ರೀತಿ-ನೀತಿ ಆರೋಗ್ಯಪೂರ್ಣವಾಗಿ, ಧನಾತ್ಮಕವಾಗಿರಬೇಕು. ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ, ವಿಮರ್ಶಿಸುವ, ಧ್ವನಿಯೆತ್ತುವ ಆಚರಣೆಗಳು ಆಗಲಿ. ಎಲ್ಲಿ ತಪ್ಪುಗಳಿವೆಯೋ ಅಲ್ಲಿ ಸರಿಪಡಿಸಿ ಮುನ್ನೆಡೆವ ಹಾದಿಯು ತೆರೆಯಲಿ. ಅವಳ ಸ್ವಾಭಿಮಾನವ ಕೆಣಕುವ, ಧಕ್ಕೆ ತರುವ ಕೆಲಸಗಳು ಬೇಡ, ಅದಕ್ಕೆ ಕುಮ್ಮಕ್ಕು ಸಹ ಕೊಡಬಾರದು. ಮೊದಲು ಹೆಣ್ಣೇ ಹೆಣ್ಣಿಗೆ ಶತ್ರುವಾಗದೇ, ಸಹಕಾರಿಯಾಗಿ, ಪ್ರೋತ್ಸಾಹದಾಯಕಳಾಗಿ, ಬೆನ್ನೆಲುಬಾಗಿ ನಿಲ್ಲಬೇಕು. ‘ಆಕೆಗೆ ಚಿನ್ನದ ಕಿರೀಟ ತೊಡಿಸಿ, ಹೊನ್ನ ಹರಿವಾಣದಿ ಊಟ ಬಡಿಸಿ ಎಂದು ಕೇಳುವುದಿಲ್ಲ, ಅವಳಷ್ಟಕ್ಕೇ ಬದುಕಲು ಬಿಡಿ’. ಅವಳಿಗೆ ಮಾನ-ಪ್ರಾಣದರಿವಿದೆ. ಹೀಗಾದರೆ ಮಾತ್ರ ಮಹಿಳಾ ದಿನಕ್ಕೊಂದು ಅರ್ಥವಿದೆ. ‘ಹೆಣ್ಣ ಬಾಳು ಹೊನ್ನಾಗಲಿ’ ಎಂಬ ಆಶಯ.

(ಮುಗಿಯಿತು)

-ರತ್ನಾ ಕೃಷ್ಣ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ