ವಿಶ್ವ ಮಹಿಳಾ ದಿನಾಚರಣೆಗೆ ಮನದಾಳದ ಮಾತುಗಳು

ವಿಶ್ವ ಮಹಿಳಾ ದಿನಾಚರಣೆಗೆ ಮನದಾಳದ ಮಾತುಗಳು

’ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು ಮಹಿಳೆ’ ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲ್ಲಿರಲಿ, ‘ಅಡುಗೆ’  ದೈವೀದತ್ತ ಕಲೆ ಅವಳ ಪಾಲಿಗೆ. ಓರ್ವ ಹೆಣ್ಣು ಮಗಳ ಸ್ಥಿತಿ ಗತಿ, ಅವಳ ಸ್ಥಾನಮಾನ, ಅವಳ ಮೇಲಾಗುವ ಲೈಂಗಿಕ ಶೋಷಣೆ, ಅತ್ಯಾಚಾರ, ಅನಾಚಾರ, ಅಮಾನವೀಯತೆ, ತಾರತಮ್ಯ, ಲಿಂಗಾನುಪಾತ ಈ ಎಲ್ಲವನ್ನೂ ಮನಗಂಡು ಮೂಡಿದ ಪದವೇ ‘ಮಹಿಳಾ ದಿನ’. ಮಹಿಳೆಗೆ ಸ್ಥಾನ ಸಮಾಜದಲ್ಲಿ ಕಲ್ಪಿಸುವುದು, ಅವಳಿಗೂ ನಾಯಕತ್ವದ ಅವಕಾಶ ನೀಡುವುದು ಈ ಹಿನ್ನೆಲೆಯಲ್ಲಿ ಇಂದು ‘ಮಹಿಳಾ ಮೀಸಲಾತಿ’ ಜಾರಿಗೆ ಬಂತು.

೧೯೭೫ರಲ್ಲಿ ‘ವಿಶ್ವಮಹಿಳಾ ದಿನ’ ವನ್ನಾಗಿ ಮೊದಲಬಾರಿಗೆ ಆಚರಿಸಲಾಯಿತು. ಮಹಿಳೆ ಅಥವಾ ಓರ್ವ ಹೆಣ್ಣು ಮಗಳು ಸಮಾಜದಲ್ಲಿ, ಆಡಳಿತ ಕ್ಷೇತ್ರದಲ್ಲಿ, ತನ್ನ ಮನೆಯಲ್ಲಿ, ಬಂಧು ಬಳಗದ ನಡುವೆ ತನ್ನದೇ ಆದ ದಿಟ್ಟ ಹೆಜ್ಜೆಗಳನ್ನು ಊರಲು, ಛಾಪನ್ನು ಮೂಡಿಸುವ ನಿಟ್ಟಿನಲ್ಲಿ, ಅನೇಕ ನಿಯಮಗಳನ್ನು ಜಾರಿಗೆ ತರಲಾಯಿತು. ಸಾಧಾರಣವಾಗಿ ಮಹಿಳೆ ನಾವು ನೋಡಿದ ಹಾಗೆ ಸಮಾಜದಲ್ಲಿ ಎರಡನೇ ದರ್ಜೆಯ ಪ್ರಜೆ. ಮಹಿಳೆಯ ಧೀರತನ,ದಿಟ್ಟ ನಿರ್ಧಾರಗಳು ಶ್ಲಾಘನೀಯವಾದರೂ, ಅದನ್ನು ವಿರೋಧಿಸುವ ಒಂದು ಬಣ ಇದ್ದೇ ಇದೆ. ‘ನಿಂತರೂ ತಪ್ಪು, ಕೂತರೂ ತಪ್ಪು’ ಹೇಳುವವರು ಬಹಳಷ್ಟು ಮಂದಿ ಕೇಳಿದ್ದೇನೆ, ನೋಡಿದ್ದೇನೆ ನನ್ನ ಬದುಕಿನ ಅನುಭವಗಳ ಹಾದಿಯಲ್ಲಿ. ‘ಒಲೆಯ ಬೂದಿ ತೋಡುವ ಇವಳಿಗೆ ಕೈಗೆ ಕೈಗಡಿಯಾರ ಯಾಕೆ?’

ನಾಚಿಕೆಯಿಲ್ಲದೆ ಗಂಡನಿಗಂಟಿ ನಡೆಯುವ ಬಜಾರಿ ಇವಳು ಹೇಳಲೂ ಹೇಸದವರಿದ್ದಾರೆ. ಮಹಿಳೆಯ ಸ್ವಾಭಿಮಾನಕ್ಕೆ ಪೆಟ್ಟು ಕೊಡುವುದು, ಇಂಚಿಂಚು ಸಾಯಿಸಲು ನೋಡುವುದು ಎಷ್ಟು ‌ಸರಿ? ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೇಳುವವರಿಗೂ ಮನೆಯಲ್ಲಿ ಹೆಣ್ಣುಮಕ್ಕಳು ಇಲ್ಲವೇ? ಮಹಿಳೆ ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆಯುವ ಕಾಲ ಬರಲಿ. ಲಿಂಗ ತಾರತಮ್ಯ ಹೋಗಲಾಡಿಸಿ, ಆಕೆಗೂ ಹೃದಯವಿದೆ, ಮನಸ್ಸಿದೆ, ದು:ಖ ದುಮ್ಮಾನಗಳಿವೆ, ಸುಖ ಸಂತೋಷಗಳಿವೆ ಎಂದು ಅರಿಯುವ, ತಿಳಿಯುವ, ಅರ್ಥವಿಸಿಕೊಳ್ಳುವ ಹೃದಯವಂತರು ಇಂದು ಬೇಕಾಗಿದ್ದಾರೆ. ಆದರೆ ಭೂಮ್ಯಾಕಾಶ ವ್ಯತ್ಯಾಸದಂತಾಗಿದೆ. ಎಲ್ಲವೂ ಅಯೋಮಯ. ಇನ್ನೂ ಉಸಿರುಗಟ್ಟಿಸುವ ವಾತಾವರಣ ಎಷ್ಟೋ ಮನೆಗಳಲ್ಲಿದೆ ಎಂಬುದೇ ಬೇಸರದ ವಿಚಾರ.

ಒಂದು ಮನೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಮಹಿಳೆ ಮತ್ತು ಪುರುಷ ಗಾಲಿಯ ಎರಡು ಚಕ್ರಗಳಿದ್ದಂತೆ. ಒಂದು ಚಕ್ರ ಸ್ವಲ್ಪ ವಾಲಿದರೂ ಅನಾಹುತ ತಪ್ಪಿದ್ದಲ್ಲ. ಮಗಳು, ಸಹೋದರಿ, ತಾಯಿ, ಪತ್ನಿ, ಗೆಳತಿ, ಸಖಿ, ಅಜ್ಜಿಯಾಗಿ, ಮನೆಯಲ್ಲಿ ಆಕೆ ನಿಭಾಯಿಸುವ ಪಾತ್ರ ಸಾಮಾನ್ಯವಲ್ಲ. ‘ಕ್ಷಮಯಾಧರಿತ್ರಿ’ ಆಕೆ. ಆಕೆಯ ದಿನನಿತ್ಯದ ದುಡಿಮೆಗೆ ಬೆಲೆಕಟ್ಟಲಾಗದು. ಮಹಿಳೆಯಿಲ್ಲದ ಮನೆ ‘ಸ್ಮಶಾನ’ ಕ್ಕೆ ಸಮ. ಮನೆಯಲ್ಲಿ ಮಾತು, ನಗು, ಕೈಬಳೆ ಝೇಂಕಾರ, ಗೆಜ್ಜೆನಿನಾದ, ಕಲರವ ಇದೆಲ್ಲ ಓರ್ವ ಮಹಿಳೆ ಇದ್ದಾಗ ಮಾತ್ರ ಸಾಧ್ಯ.

ಇತ್ತೀಚೆಗೆ ನಾವು ಕಂಡಂತೆ, ಸಣ್ಣ ಹೆಣ್ಣು ಮಗುವನ್ನು ಸಹ ಲೈಂಗಿಕ ಶೋಷಣೆಗೆ ಒಳಗಾಗಿಸಿ, ಸಾಯಿಸುವುದು  ಸರ್ವೇಸಾಮಾನ್ಯವಾಗಿದೆ. ಹಾಗಾದರೆ ಇದು ಯಾರ ತಪ್ಪು? ಆ ಮಗುವಿನದೇ, ಕಾಮುಕರದೇ, ತಿಳುವಳಿಕೆಯ ಕೊರತೆಯೇ? ಆಕೆಗೆ ಬದುಕುವ ಹಕ್ಕಿಲ್ಲವೇ?

ಹೆಣ್ಣು ಮಗುವಿನ ಭ್ರೂಣಹತ್ಯೆ ಸಾರಾಸಗಟಾಗಿ ನಡೆಸುವುದು ಕಂಡು, ಲಿಂಗಾನುಪಾತ ತಲೆದೋರಿದಾಗ, ಆಡಳಿತಪಕ್ಷಗಳು ಎಚ್ಚೆತ್ತವು. ಆದರೂ ಅಲ್ಲೊಂದು ಇಲ್ಲೊಂದು ಪ್ರಕರಣ ಆಗುತ್ತಿದೆ ಅದೂ ವಿದ್ಯಾವಂತರಲ್ಲಿ. ತಾಯಗರ್ಭದಲ್ಲೇ ಅವಳನ್ನು ಸಾಯಿಸುವುದರಿಂದ ಶೋಷಣೆ ಆರಂಭ. ‘ಹೆಣ್ಣಿಗೆ ಹೆಣ್ಣೇ ಶತ್ರು’ ತಾಯಿ ಮನಸ್ಸು ಮಾಡಿದರೆ ಭ್ರೂಣಹತ್ಯೆ ತಡೆಗಟ್ಟಬಹುದು. ಆಕೆಗೆ ಸ್ಥಿರ ಮನಸ್ಥಿತಿ ಇಲ್ಲದಾಗ ಇಂಥ ಪ್ರಕರಣ ತಲೆದೋರುವುದು ಸಹಜ ಒಂದು ಕಾರಣ. ಇನ್ನೊಂದು ಆಕೆಯನ್ನು ಬಾಯಿ ಮುಚ್ಚಿಸುವ ಕೆಲಸ ಮನೆಯವರೇ ಮಾಡಿ, ಶೋಷಣೆಗೆ ಒಳ ಪಡಿಸುತ್ತಿದ್ದಾರೆ ಎಂದರೂ ತಪ್ಪಾಗಲಾರದು.

ಪುರುಷಪ್ರಧಾನ ಸಮಾಜದ ದಬ್ಬಾಳಿಕೆ ಒಮ್ಮೊಮ್ಮೆ ಕಾಣಿಸಿಕೊಳ್ಳಲೂ ಬಹುದು. ಸಮಾಜ ಎಷ್ಟೇ ಮುಂದುವರಿದರೂ ಆಕೆ ಭೋಗದವಸ್ತು, ಪುರುಷನ ಕಾಮನೆಗಳ ಬಲಿಪಶು, ಅಡುಗೆ ಮನೆಗೆ ಸೀಮಿತ, ಮಕ್ಕಳನ್ನು ಹೆರುವ ಯಂತ್ರ, ಮನೆಯ ಸದಸ್ಯರ ಬೇಕು ಬೇಡಗಳನ್ನು ಪೂರೈಸುವವಳು ಈ ರೀತಿಯ ಮನೋಭಾವ ಇನ್ನೂ ಇದೆ. ಒಳ್ಳೆಯ ವಿದ್ಯಾಭ್ಯಾಸ ನೀಡಿ ಮೊದಲು ಸಮಾಜದಲ್ಲಿ ನಿಲ್ಲುವ, ನಡೆಯುವ, ನಾಲ್ಕು ಜನರೊಂದಿಗೆ ವ್ಯವಹರಿಸುವ, ತಲೆಯೆತ್ತಿ ಉತ್ತರಿಸುವ ಕೌಶಲವನ್ನು ಆಕೆಗೆ ಕಲಿಸಬೇಕು. ಹಾಗೆಂದು ಸ್ವೇಚ್ಛಾಚಾರ ಸಲ್ಲದು, ತನ್ನ ಇತಿ-ಮಿತಿಗಳ ಬಗ್ಗೆ ಅರಿತಿರಬೇಕು. ಸಂಸ್ಕಾರ, ಸಂಪ್ರದಾಯ, ನೈತಿಕ ಮೌಲ್ಯಗಳ ಚೌಕಟ್ಟು, ತನ್ನ ಮನೆತನ, ಗುರುಹಿರಿಯರು ಎಂಬುದನ್ನು ಮರೆತು ವ್ಯವಹರಿಸಬಾರದು. ಇತ್ತೀಚೆಗೆ ಸಮಾಜದ ಎಲ್ಲಾ ಸ್ತರಗಳಲ್ಲೂ ಆಕೆ ತನ್ನದೇ ಛಾಪನ್ನು ಮೂಡಿಸಿ ‘ಸೈ’ ಅನಿಸಿಕೊಂಡಿದ್ದಾಳೆ. ಆದರೆ ಶೋಷಣೆ, ಅತ್ಯಾಚಾರಗಳು ಕಡಿಮೆಯಾಗಿಲ್ಲ.

ಮಕ್ಕಳ ಕಳ್ಳಸಾಗಣೆಯಂತಹ ಕೆಟ್ಟ ಚಾಳಿ ದಿನಾ ನಡೆಯುತ್ತಿದೆ. ಅಲ್ಲೂ ತಾರತಮ್ಯ, ಗಂಡುಮಗುವಿನ ಮಾರಾಟಕ್ಕೆ ಬೆಲೆ ಹೆಚ್ಚು, ಹೆಣ್ಣು ಮಗುವಿಗೆ ಕಡಿಮೆ..ಛೇ ಎಂಥ ಅಮಾನವೀಯತೆ ಇದು. ಇದಕ್ಕೆ ಕುಮ್ಮಕ್ಕು ಕೊಡುವವರು ನಾವೇ ಅಲ್ಲವೇ? ನಮ್ಮ ಮನೆಯ ಮಹಿಳೆಯರನ್ನು  ಪ್ರೀತಿಸೋಣ, ಗೌರವಿಸೋಣ, ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸೋಣ, ಹೆಣ್ಣು ಗಂಡು ತಾರತಮ್ಯ ಬೇಡ, ಗಂಡುಮಗುವಿಗೂ ಕೆಲಸ ಬೊಗಸೆ ಕಲಿಸೋಣ,ಜೊತೆಜೊತೆಯಾಗಿ ಬೆಳೆಸೋಣ ಆಗದೇ?

ಬರಿಯ ಆಚರಣೆ, ಭಾಷಣಗಳಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಈ ಪ್ರಪಂಚದಲ್ಲಿ ಆಕೆ ಶಕ್ತಿ ಸ್ವರೂಪಿಣಿ, ಮಾತೆ ಎಂಬುದನ್ನು ಅರಿಯೋಣ. ಅತ್ಯಂತ ಪೂಜನೀಯ ಸ್ಥಾನಮಾನವಿದೆ. ಮತ್ಯಾಕೆ ಹೀಗೆ? ಆಕೆಯನ್ನು ಕಾಲಕಸ ಮಾಡುತ್ತಿರುವುದು ಎಷ್ಟೋ ಮನೆಗಳಲ್ಲಿ, ಆಡುವ ಮಾತುಗಳಲ್ಲಿ ಕಾಣುತ್ತಿದೆ. ನಾವಿನ್ನೂ ಹೋರಾಟದಲ್ಲಿಯೇ ಮುಳುಗಿದ್ದೇವೆ ಎಂದರೆ ಇದು ನಾಚಿಕೆಗೇಡೇ ಸರಿ. ಅಲ್ಲ ದೌರ್ಬಲ್ಯವೇ? ‘ತಾಯಿ’ ಭಗವಂತನ ಪ್ರತಿರೂಪ.ಕಣ್ಣಿಗೆ ಕಾಣದ ಶಕ್ತಿ ಅವನಾದರೆ ಅಮ್ಮ ಕಣ್ಣಿಗೆ ಕಾಣುವವಳು. ಅವಳೇನು ಕೊರತೆ ಮಾಡುತ್ತಾಳೆ? ಮನೆಯ ಎಲ್ಲಾ ಸದಸ್ಯರನ್ನೂ ನೋಡಿಕೊಂಡು, ಹೊರಗೆ ಸಹ ದುಡಿಯುತ್ತಾ (ಇಂದು ಗಳಿಕೆ ಅನಿವಾರ್ಯ) ಮಕ್ಕಳನ್ನೂ ಬೆಳೆಸುತ್ತಾ ಅಬ್ಬಬ್ಬಾ ಅವಳ ಸಾಮರ್ಥ್ಯವೇ ಅನ್ನುವುದು ಬಿಟ್ಟು ಹಣೆಪಟ್ಟಿ ಬೇರೆಯೇ ಕಟ್ಟುವುದು ಯಾವ ನ್ಯಾಯ?

ಸರಕಾರದ ಮಹಿಳಾ ಮೀಸಲಾತಿ, ವಿದ್ಯಾಭ್ಯಾಸದಲ್ಲಿ ಉಚಿತ ಸೌಲಭ್ಯಗಳು, ಮುಂದೆ ಕೆಲಸಕ್ಕೆ ದಾಖಲಾಗುವಾಗ ಅಲ್ಲೂ ಮೀಸಲಾತಿ, ಈ ರೀತಿ ಅವಳ ಸೌಲಭ್ಯಗಳನ್ನು ಕಸಿಯದೆ ಅವಳಿಗೆ ನೀಡಿದಾಗ ಸ್ವಲ್ಪ ಉನ್ನತಿ ಸಾಧ್ಯ. ಯಾರಿಗೆ ಆಗಲಿ ಸ್ವಾತಂತ್ರ್ಯ ನೀಡೋಣ, ಸ್ವೇಚ್ಛಾಚಾರ ಬೇಡ, ದುರುಪಯೋಗವಾಗದಂತೆ ನೋಡಿಕೊಳ್ಳೋಣ. ಆಕೆ ಮನೆಯ ಅವಿಭಾಜ್ಯ ಅಂಗವಾಗಿರುವಂತೆ ಬೆಳೆಸೋಣ. ಹೆಣ್ಣು ಗಂಡು ಭೇದವೆಣಿಸದೆ. ಉತ್ತಮ ಪ್ರಜೆಯನ್ನಾಗಿ ರೂಪಿಸುವುದು ಹೆತ್ತವರ ಕರ್ತವ್ಯ.

ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ೯೫% ಧಾರಾವಾಹಿ ಕಥೆಗಳಲ್ಲಿ ಹೆಣ್ಣೇ ಹೆಣ್ಣಿಗೆ ಕೊಡುವ ಕಿರುಕುಳ ನೋಡ್ತಾ ಇದ್ದೇವೆ. ಇದು ಯಾರಿಗೆ ಬುದ್ಧಿಕಲಿಸಲು ಅಥವಾ ತಿದ್ದಲು ಅಂಥ ಗೊತ್ತಿಲ್ಲ. ಹೆಣ್ಣು ಮಗಳ ತಾಯ್ತನ ಅಂದರೆ ಸಂತಸದ ಕ್ಷಣ. ಆದರೆ ವಿಷಪ್ರಾಶನ ಮಾಡಿಸುವುದು, ಮಹಡಿಯಿಂದ ದಬ್ಬುವುದು ಇದೆಲ್ಲ ಸಮಾಜದ ಮೇಲೆ ಘೋರ ಪರಿಣಾಮ ಬೀರಬಹುದು. ಎಲ್ಲಾ ತೆರೆದ ಪುಸ್ತಕವಾಗಿದೆ. ಗೌಪ್ಯತೆ ಎಂಬುದೇ ಇಲ್ಲವಾಗಿದೆ. ನಿನ್ನೆ ಒಂದು ಕಥಾ ಸನ್ನಿವೇಶದಲ್ಲಿ ನೋಡಿದೆ, ಬಡತನ ವಿಧವೆ ಕೆಲಸ ಕೇಳಿಕೊಂಡು ಬಂದರೆ ಆತ ಆಕೆಯ ಅಡಿಯಿಂದ ಮುಡಿಯವರೆಗೆ ಕುಕ್ಕಿ ತಿನ್ನುವ ಹಾಗೆ ನೋಡ್ತಾನೆ. ಆಕೆ ಅವನ ನೋಟಕ್ಕೆ ಕಿಡಿಯಾಗ್ತಾಳೆ ಮತ್ತು ಬೆನ್ನು ಹಾಕಿ ಮಾನ ಕಾಪಾಡಲು ಓಡಿ ತಪ್ಪಿಸಿಕೊಳ್ತಾಳೆ. ಈಗಲೂ ಇಂತಹ ಸಂದೇಶಗಳು ನಮಗೆ ಬೇಕೇ? ಅವಳಿಗೊಂದು ಕೆಲಸ ಕೊಟ್ಟರೆ ಮರ್ಯಾದೆಯಲ್ಲಿ ದುಡಿಯಲಾರಳೇ? ಹಾಗಾದರೆ ಹೆಣ್ಣಾಗಿ ಜನಿಸಿದ್ದು ಅವಳ ತಪ್ಪೇ? ಉತ್ತಮ ಸಂದೇಶಗಳಿರುವ ಕಥೆಗಳು, ಮನೆಮಂದಿಯೆಲ್ಲ  ಕುಳಿತು ವೀಕ್ಷಿಸುವ ಹಾಗೆ ಕಥಾವಸ್ತುಗಳು ಇರಬಾರದೇ? ಒಳ್ಳೆಯದೇ ಮೂಡಿಬರಲೆಂಬ ಆಶಯ.

ಸುಖಾಸುಮ್ಮನೆ ಹೆಣ್ಣು ಮಕ್ಕಳ ಅಭಿವೃದ್ಧಿ ಎನುವ ಬಾಯಿಮಾತು ಯಾಕೆ? ಬರಿಯ ಕಡತಗಳಲ್ಲಿ ಇದ್ದರೆ ಸಾಕೇ? ಇಲಾಖಾ ಮಟ್ಟದಲ್ಲಿಯೂ ಜಾರಿಗೆ ತರಬೇಕು. ಸಮಾಜದಲ್ಲಿ,ಕುಟುಂಬದಲ್ಲಿ ಆಕೆಗೆ ಸಿಗಬೇಕಾದ ಮರ್ಯಾದೆ, ಸ್ಥಾನಮಾನಗಳು ಸಿಗಲೇ ಬೇಕು. ಹೆಣ್ಣು ಹುಟ್ಟಿದಾಗ ಮೂಗು ಮುರಿಯದಿರಿ.

ಓರ್ವ ಹೆಣ್ಣುಮಗಳಿಗೆ ಅವಳ ದೇಹದ ಬದಲಾವಣೆ, ಪ್ರಹರಗಳು, ತೊಂದರೆಯಿಂದಾಗುವ ದೇಹದ ವ್ಯತ್ಯಾಸಗಳು, ಲೈಂಗಿಕವಾದ  ಶೋಷಣೆಗೆ ಒಳಗಾದಾಗ ವಹಿಸಬೇಕಾದ ಎಚ್ಚರಿಕೆಗಳು ಈ ಎಲ್ಲವನ್ನೂ ತಿಳಿಸಿ ಹೇಳಿ ಮನದಟ್ಟು ಮಾಡಬೇಕು. ಶೋಷಣೆಗೆ ಒಳಗಾದರೆ ಅದನ್ನು ಎದುರಿಸಿ ನ್ಯಾಯ ಪಡೆಯುವಲ್ಲಿ ಎಲ್ಲರ ಸಹಕಾರವಿರಬೇಕು. ಸಂಸ್ಕಾರ, ಸಂಪ್ರದಾಯದ ಚೌಕಟ್ಟಿನಲ್ಲಿ ಬಂಧಿಸಬೇಡಿ. ತಿಳಿ ಹೇಳುವ ಕೆಲಸವಾಗಬೇಕು. ಹೇಳುವ ರೀತಿ-ನೀತಿ ಆರೋಗ್ಯಪೂರ್ಣವಾಗಿ, ಧನಾತ್ಮಕವಾಗಿರಬೇಕು. ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ, ವಿಮರ್ಶಿಸುವ, ಧ್ವನಿಯೆತ್ತುವ ಆಚರಣೆಗಳು ಆಗಲಿ. ಎಲ್ಲಿ ತಪ್ಪುಗಳಿವೆಯೋ ಅಲ್ಲಿ ಸರಿಪಡಿಸಿ ಮುನ್ನೆಡೆವ ಹಾದಿಯು ತೆರೆಯಲಿ. ಅವಳ ಸ್ವಾಭಿಮಾನವ ಕೆಣಕುವ, ಧಕ್ಕೆ ತರುವ ಕೆಲಸಗಳು ಬೇಡ, ಅದಕ್ಕೆ ಕುಮ್ಮಕ್ಕು ಸಹ ಕೊಡಬಾರದು. ಮೊದಲು ಹೆಣ್ಣೇ ಹೆಣ್ಣಿಗೆ ಶತ್ರುವಾಗದೇ, ಸಹಕಾರಿಯಾಗಿ, ಪ್ರೋತ್ಸಾಹದಾಯಕಳಾಗಿ, ಬೆನ್ನೆಲುಬಾಗಿ ನಿಲ್ಲಬೇಕು. ಆಕೆಗೆ ಚಿನ್ನದ ಕಿರೀಟ ತೊಡಿಸಿ, ಹೊನ್ನ ಹರಿವಾಣದಿ ಊಟ ಬಡಿಸಿ ಎಂದು ಕೇಳುವುದಿಲ್ಲ, ಅವಳಷ್ಟಕ್ಕೇ ಬದುಕಲು ಬಿಡಿ. ಅವಳಿಗೆ ಮಾನ-ಪ್ರಾಣದರಿವಿದೆ. ಹೀಗಾದರೆ ಮಾತ್ರ ಮಹಿಳಾ ದಿನಕ್ಕೊಂದು ಅರ್ಥವಿದೆ. ‘ಹೆಣ್ಣ ಬಾಳು ಹೊನ್ನಾಗಲಿ’ ಎಂಬುದೇ ಈ ಲೇಖನದ ಆಶಯ.

-ರತ್ನಾ ಕೃಷ್ಣ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ