ವಿಶ್ವ ಮಾದಕ ವಸ್ತು ವಿರೋಧಿ ದಿನ
ಜೂನ್ ೨೬ನ್ನು ‘ಅಂತರಾಷ್ಟ್ರೀಯ ಮಾದಕ ದೃವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ’ ವನ್ನಾಗಿ ಆಚರಿಸಲಾಗುತ್ತದೆ. ೧೯೮೯ರ ಜೂನ್ ೨೬ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅನುಮತಿಯೊಂದಿಗೆ ಈ ಆಚರಣೆ ಜಾರಿಗೆ ಬಂತು. ವಿಶ್ವದಾದ್ಯಂತ ಮಾದಕ ದ್ರವ್ಯ (ಡ್ರಗ್ಸ್) ಬಳಕೆ ಮತ್ತು ಸಾಗಾಟದ ನಿಷೇಧವೇ ಇದರ ಗುರಿ. ವಿಶ್ವಸಂಸ್ಥೆಯು ೧೯೯೭ರಲ್ಲಿ ‘ಮಾದಕ ದ್ರವ್ಯ ಮತ್ತು ಅಪರಾಧ ವಿಭಾಗ'ವನ್ನು ಪ್ರತ್ಯೇಕವಾಗಿ ಪ್ರಾರಂಭಿಸಿ, ಪ್ರತೀ ವರ್ಷ ಈ ಮಾದಕ ವ್ಯಸನದ ಜಾಗತಿಕ ವರದಿಯನ್ನು ಬಿಡುಗಡೆಗೊಳಿಸುತ್ತಾ ಬಂದಿದೆ. ೨೦೨೧ರ ವರದಿಯ ಪ್ರಕಾರ ಜಗತ್ತಿನ ಸುಮಾರು ೨೮ ಕೋಟಿಯಷ್ಟು ಜನರು ಈ ಮಾದಕ ದ್ರವ್ಯಗಳ ದಾಸರಾಗಿದ್ದಾರೆ.
ಮಾದಕವಸ್ತುಗಳ ವಿರೋಧಿ ದಿನ ಅಂದರೆ ಅದನ್ನು ವಿರೋಧಿಸುವುದು, ಆ ನಿಟ್ಟಿನಲ್ಲಿ ನಾವು ಏನು ಮಾಡಬಹುದೆಂಬ ಚಿಂತನ-ಮಂಥನವನ್ನು ನಾವು ಈ ಸಮಯದಲ್ಲಿ ಮಾಡಲೇ ಬೇಕಾಗಿದೆ. ಪ್ರಾರಂಭದಲ್ಲಿದ್ದ ಅಭ್ಯಾಸ ನಂತರ ಚಟವಾಗಿ ಬದಲಾಗುತ್ತದೆ ಈ ಬಗ್ಗೆಯೂ ನಾವು ಚಿಂತಿಸಬೇಕಲ್ಲವೇ? ಯಾವುದೋ ಸಿನಿಮಾ, ನಾಟಕ, ಧಾರಾವಾಹಿಗಳ ಪ್ರಪಂಚದಲ್ಲಿ ಸರ್ವೇ ಸಾಮಾನ್ಯವಾಗಿ ಕಷ್ಟ ಬಂದಾಗ, ಹೆಚ್ಚು ಕೋಪ ಬಂದಾಗ, ಮನಸ್ಸಿಗೆ ಬೇಸರವಾದಾಗ ಮದ್ಯವನ್ನು ಕುಡಿಯುವ, ಬೀಡಿ ಸಿಗರೇಟು ಸೇದುವ ದೃಶ್ಯಗಳು ಕಾಣಿಸುತ್ತವೆ. ಕೆಲವು ಜನ ಅದನ್ನೇ ಅನುಕರಣೆ ಮಾಡಬಹುದು. ಮನೆಯ ವಾತಾವರಣದಲ್ಲಿ ಇಂಥ ಅಭ್ಯಾಸವಿದ್ದರೆ ಮಕ್ಕಳು ಅದನ್ನು ಹಿರಿಯರಿಗೆ ಗೊತ್ತಾಗದ ಹಾಗೆ ಅನುಸರಿಸುವರು.
ಕೈತುಂಬಾ ಸಂಪಾದನೆ ಮಾಡುವವರು ಸಹಜವಾಗಿ ಒಮ್ಮೊಮ್ಮೆ ತಮ್ಮ ‘ಸ್ಟೇಟಸ್' ಸಲುವಾಗಿ ಈ ಚಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಸ್ನೇಹಿತರ ಒತ್ತಾಯಕ್ಕೆ ಒಳಗಾಗಲೂ ಸಾಕು. ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಸಹ ಅಭ್ಯಾಸವಾಗಬಹುದು. ಮೊದಮೊದಲು ಸ್ವಲ್ಪ ಅಭ್ಯಾಸವಾಗಿ ನಂತರ ಅದರಲ್ಲೇ ಮುಳುಗುವವರೂ ಇದ್ದಾರೆ. ಡ್ರಗ್ಸ್ ನ್ನು ಪೂರೈಕೆ ಮಾಡುವ ಜನರು ಮೊದಲಿಗೆ ಶಾಲಾ,ಕಾಲೇಜುಗಳಿಗೆ ಹೋಗುವ ಯುವ ಜನಾಂಗವನ್ನೇ ಗುರಿಯಾಗಿಸುತ್ತಾರೆ. ಮೊದಲಿಗೆ ಉಚಿತವಾಗಿಯೇ ನೀಡಿ ಕಿಕ್ ಹತ್ತಿಸುವ ಇವರು ನಂತರ ಕ್ರಮೇಣ ಹಣವನ್ನು ಪೀಕಿಸತೊಡಗುತ್ತಾರೆ. ಯುವಕರೂ ಮೊದಲಿಗೆ ತಮ್ಮ ಪಾಕೆಟ್ ಮನಿಯಿಂದ ನಂತರ ಮನೆಯಿಂದ ಹಣವನ್ನು ಕದ್ದು ಇವರಿಗೆ ಕೊಡುತ್ತಾರೆ. ನಿಧಾನವಾಗಿ ಇದು ಚಟವಾಗಿ ಬದಲಾಗುತ್ತದೆ. ಕ್ರಮೇಣ ಆರೋಗ್ಯ ಸಮಸ್ಯೆಯೂ ಕಾಡತೊಡಗುತ್ತದೆ.
ಮನುಷ್ಯನ ಜೀವನವನ್ನು ಪೂರ್ತಿ ನಾಶ ಮಾಡುವುದು ಗೊತ್ತಿದ್ದೂ ಯಾಕೆ ಹೀಗೆ ಮಾಡುತ್ತಾರೋ ಗೊತ್ತಾಗುವುದಿಲ್ಲ. ವಿದ್ಯಾವಂತರೇ ಹೀಗಾದರೆ ಉಳಿದವರ ಪಾಡೇನು? ಹೆಚ್ಚಾಗಿ ವಿದ್ಯಾರ್ಥಿಗಳು ಅಂದರೆ ಯುವ ಜನಾಂಗವೇ ಈ ಚಟಕ್ಕೆ ಬಿದ್ದಿದ್ದಾರೆ ಎನ್ನುವುದು ದುರಂತವೇ ಸರಿ. ಅದಿಲ್ಲದಿದ್ದರೆ ಇನ್ನು ಬದುಕೇ ಶೂನ್ಯ ಎನ್ನುವವರು, ಡ್ರಗ್ಸ್ ಸಿಗದೇ ಇದ್ದಾಗ ಜೀವ ಕೊನೆಗಾಣಿಸುವುದೂ ಇದೆ.
ಮಾದಕ ವ್ಯಸನ ನಮ್ಮ ಇಡೀ ದೇಹವನ್ನು ಆವರಿಸಿ, ನಿತ್ರಾಣ, ನರದೌರ್ಬಲ್ಯ, ಮಿದುಳಿಗೆ ಹಾನಿ, ಶ್ವಾಸಕೋಶ, ಯಕೃತ್ತು ಎಲ್ಲವನ್ನೂ ನುಂಗಿ ನೊಣೆಯುತ್ತದೆ. ಲೈಂಗಿಕ ದೌರ್ಬಲ್ಯ ಸಹ ಉಂಟಾಗುವ ಸಾಧ್ಯತೆಯಿದೆ. ಆಧುನೀಕರಣದ ಭರಾಟೆಯಲ್ಲಿ ಕಿಟ್ಟಿ ಪಾರ್ಟಿಗಳೆಂಬ ಮೋಹದಿಂದ ಮಹಿಳೆಯರೂ ಸಹಾ ಈಗ ಈ ವ್ಯಸನಕ್ಕೆ ಗುರಿಯಾಗುತ್ತಿದ್ದಾರೆ. ಮೊದಲಿಗೆ ಶೋಕಿಗಾಗಿ ಪ್ರಾರಂಭವಾಗುವ ಈ ಅಭ್ಯಾಸ ಕ್ರಮೇಣ ಚಟವಾಗಿ ಬದಲಾಗುತ್ತದೆ. ಮಹಿಳೆಯರು ಈ ದುಶ್ಚಟಗಳಿಗೆ ಬೀಳುವುದರಿಂದ ಅವರಿಗೆ ಭವಿಷ್ಯದಲ್ಲಿ ಹುಟ್ಟುವ ಮಕ್ಕಳಿಗೆ ತೊಂದರೆಯಾಗುವುದು ಖಂಡಿತಾ.
ಇದಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸಂಘಸಂಸ್ಥೆಗಳು, ಆಸ್ಪತ್ರೆಗಳು, ಪೋಷಕರ ಸಭೆಗಳಲ್ಲಿ ತಿಳುವಳಿಕೆ ನೀಡಬೇಕು. ಪಂಚಾಯತ್ ಮಟ್ಟದಲ್ಲೂ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಔಷಧಗಳ ದುರ್ಬಳಕೆ ಮಾಡಬಾರದು. ವೈದ್ಯರ ಶಿಫಾರಸ್ಸು ಇಲ್ಲದೆ ಯಾವುದೇ ಮತ್ತು ತರಿಸುವಂತಹ ಔಷಧಿಗಳನ್ನು ಮೆಡಿಕಲ್ ಅಂಗಡಿಗಳಲ್ಲಿ ಕೊಡಲೇ ಬಾರದು.
ಶಾಲಾಮಕ್ಕಳಲ್ಲಿ ಕಲಿಕಾ ನ್ಯೂನತೆ ಉಂಟಾಗಲು ಇದು ಕಾರಣವಾಗಿರಲೂ ಬಹುದು. ಮನೆಯಲ್ಲಿ ನಿತ್ಯವೂ ಜಗಳ, ಸರಿಯಾದ ಮಾರ್ಗದರ್ಶನ ಇಲ್ಲದೆ ಮಗು ಹಿಂದುಳಿಯುತ್ತದೆ. ಮೂಲಕಾರಣವನ್ನು ಶಿಕ್ಷಕರು ಕಂಡು ಹಿಡಿದು ಆ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. ಮಗನೋ/ಮಗಳೋ ಮನೆಯಲ್ಲಿ ಅನ್ಯಮನಸ್ಕರಾಗಿರುವುದು, ಸದಾ ನಿದ್ರೆಯ ಮಂಪರಿನಲ್ಲಿರುವಂತೆ ಕಾಣಿಸುವುದು, ಮಾತಾಡಿದಾಗ ಸಿಟ್ಟು ಮಾಡಿಕೊಳ್ಳುವುದು, ಹಣ, ವಸ್ತುಗಳು ಕಳವಾಗುವುದು ಇವೆಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದರೆ ನೀವು ಎಚ್ಚರವಾಗುವುದು ಒಳ್ಳೆಯದು. ನುರಿತ ವೈದ್ಯರ ಜೊತೆ ಮಾತನಾಡಿ ಆಪ್ತ ಸಮಾಲೋಚನೆ ಮಾಡಿಸುವುದು ಉತ್ತಮ.
ಕುಡಿತ, ಪಾನ್ ಪರಾಗ್, ಗಾಂಜಾ, ಅಫೀಮು ಮತ್ತು ಕೆಲವು ಮತ್ತು ತರಿಸುವ ಮಾತ್ರೆಗಳು ಇತ್ಯಾದಿಗಳ ಅಭ್ಯಾಸದ ದುಷ್ಪರಿಣಾಮಗಳನ್ನು ಕಣ್ಣಾರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡಿರುತ್ತೇವೆ. ಅವರ ಮನೆಯವರು ಕಷ್ಟ ಪಡುವುದನ್ನು ನೋಡುತ್ತಿರುತ್ತೇವೆ. ಇದಕ್ಕೆ ಸಾಧ್ಯವಾದಷ್ಟು ವ್ಯಸನಿಗಳ ಮನಸ್ಸು ಪರಿವರ್ತನೆ ಮಾಡುವುದೊಂದೇ ದಾರಿ.
ಇತ್ತೀಚೆಗೆ ಹೆಚ್ಚಿನ ದಂಪತಿಗಳಿಗೆ ಒಂದೋ ಎರಡೋ ಮಕ್ಕಳು. ಇರುವ ಮಕ್ಕಳನ್ನು ಜೋಪಾನಮಾಡಬೇಕೆಂದು ಮಿತಿಮೀರಿದ ಅಕ್ಕರೆ, ಪ್ರೀತಿ, ಕಾಳಜಿ ಎಲ್ಲಾ ಪರಿಣಾಮ ಬೀರುವುದು ಆ ಮಕ್ಕಳ ಬದುಕಿನ ಮೇಲೆ ಎಂಬ ಅರಿವು ಹೆತ್ತವರಿಗಿಲ್ಲ. ಮನೆಯಲ್ಲಿ ಹಿರಿಯ ಜೀವಗಳು ಗದರಿಸಿದರೆ, ಶಾಲೆಯಲ್ಲಿ ಶಿಕ್ಷಕರು ಏನಾದರೂ ಹೇಳಿದರೆ ಹೇಳಿದವರ ಮೇಲೆಯೇ ಹರಿಹಾಯುವ ಹೆತ್ತವರು. ಇದನ್ನೆಲ್ಲ ಗಮನಿಸುವ ಮಗುವಿಗೆ ಹೆದರಿಕೆ, ಭಯ ಯಾವುದೂ ಇಲ್ಲ. 'ಆನೆ ನಡೆದದ್ದೇ ದಾರಿ' ಎಂಬ ಹಾಗೆ 'ತಾನು ಹೇಳಿದ್ದು, ತಾನು ಮಾಡಿದ್ದೇ ಸರಿ' ಎಂಬ ಧೋರಣೆ ಮಕ್ಕಳದು.
ಬೆಳೆದ ಮಕ್ಕಳು ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಹಾಗಾಗಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನೀಡೋಣ, ಬದುಕಲು ಬೇಕಾದ ಜೀವನ ಶಿಕ್ಷಣ ನೀಡೋಣ. ಇಲ್ಲದಿದ್ದರೆ ಮುಂದೊಂದು ದಿನ ಸಮಾಜ ಕಂಟಕರಾಗಬಹುದು. ಇದು ಒಂದು ರೀತಿಯಲ್ಲಿ ದುಶ್ಚಟಗಳಿಗೆ ದಾರಿ ಮಾಡಿಕೊಟ್ಟ ಹಾಗೆ ಆಗುವುದು, ತಾನು ಏನು ಮಾಡಿದರೂ ಕೇಳುವವರು ಯಾರೂ ಇಲ್ಲ ಎಂಬ ಭಾವನೆ.
ಆದಷ್ಟೂ ಈ ನಿಟ್ಟಿನಲ್ಲಿ ತಡೆಯುವಂಥ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವುದೇ ಇದಕ್ಕಿರುವ ದಾರಿ. ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ ತಿಳುವಳಿಕೆ ನೀಡಬಹುದು. ಅಂಗನವಾಡಿ, ಶಾಲೆ, ಆಶಾಕಾರ್ಯಕರ್ತೆಯರ ಮೂಲಕ ಸಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಇತ್ತೀಚೆಗೆ ಮದ್ಯವರ್ಜನ ಶಿಬಿರಗಳನ್ನು ಅಲ್ಲಲ್ಲಿ ಏರ್ಪಡಿಸಿ , ಈ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಸಂಘಸಂಸ್ಥೆಗಳು ಇದಕ್ಕೆ ಸಹಕರಿಸುತ್ತಿವೆ. ದುಶ್ಚಟಗಳಿಂದಾಗುವ ಹಾನಿಗಳ ಬಗ್ಗೆ ಸಮಗ್ರ ಆಂದೋಲನವಾದರೆ ಮಾತ್ರ ತಡೆಗಟ್ಟಬಹುದು ಹೊರತು ಇಲ್ಲದಿರೆ ಅಸಾಧ್ಯ.
ಭಾರತದಂತಹ ದೇಶದಲ್ಲಿ ಮಾದಕ ವ್ಯಸನಿಗಳನ್ನು ಗುರುತಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಾಗೂ ಅಂಕಿ ಅಂಶಗಳು ಕಂಡುಬರುತ್ತಿಲ್ಲ. ಆದರೆ ಭಾರತದ ಒಳಗೆ ಹಲವಾರು ರೀತಿಯ ಮಾದಕ ಪದಾರ್ಥಗಳು ವಿದೇಶದಿಂದ ಕಳ್ಳ ಸಾಗಾಣಿಕೆಯ ಮೂಲಕ ಭಾರತಕ್ಕೆ ಬರುತ್ತಿದೆ. ಉರುಗ್ವೇ, ಕೊಲಂಬಿಯಾ ಮುಂತಾದ ದೇಶಗಳಲ್ಲಿ ಗಾಂಜಾ ಮಾರಾಟವನ್ನು ಕಾನೂನು ಬದ್ಧವನ್ನಾಗಿ ಮಾಡಿರುವುದು ದುರಂತವೇ ಸರಿ. ಅವೆಲ್ಲಾ ಬಡದೇಶಗಳು. ಹಣದ ಅಗತ್ಯತೆ ಅವರಿಂದ ಇಂತಹ ಕೆಲಸಗಳನ್ನು ಮಾಡಿಸುತ್ತದೆ.
ಯಾವುದೇ ವ್ಯಕ್ತಿ ಡ್ರಗ್ಸ್ ಅಥವಾ ಮಾದಕ ದ್ರವ್ಯದ ದಾಸನಾದರೆ ಅದರಿಂದ ಹೊರಗೆ ಬರಲು ಸಮಾಜವೂ ಅವನಿಗೆ ಸಹಾಯ ಮಾಡಬೇಕು. ಸಮಾಜದಿಂದ ತಿರಸ್ಕೃತನಾದ ವ್ಯಕ್ತಿ ಇನ್ನಷ್ಟು ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯನ್ನು ಅಪರಾಧಿಯಂತೆ ಕಾಣದೇ ಓರ್ವ ಸಾಮಾನ್ಯ ರೋಗಿಯ ಹಾಗೆ ಕಾಣಬೇಕು. ಸರಕಾರವೂ ಮಾದಕ ದ್ರವ್ಯ ಸೇವನೆಗೆ ಗುರಿಯಾದವರಿಗಾಗಿ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವತ್ತ ಗಮನ ಹರಿಸಬೇಕು. ನುರಿತ ಮಾನಸಿಕ ವೈದ್ಯರನ್ನು ಹಾಗೂ ಆಪ್ತ ಸಮಾಲೋಚನೆ ಮಾಡುವವರನ್ನು ನೇಮಕ ಮಾಡಬೇಕು. ‘ಕುಟುಂಬ ಥೆರಪಿ’ ಎಂಬ ಚಿಕಿತ್ಸಾ ಕ್ರಮದೊಂದಿಗೆ ಕುಟುಂಬದ ಓರ್ವ ಸದಸ್ಯರನ್ನೇ ಆರಿಸಿ ಅವರಿಗೆ ತರಭೇತಿ ನೀಡಿ, ಈ ರೋಗಿಗೆ ಚಿಕಿತ್ಸೆ ನೀಡುವಂತೆ ಪ್ರೇರೇಪಿಸಬೇಕು. ರೋಗಿಯ ಮನಸ್ಸಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಕ್ರಮಗಳನ್ನು ಕೈಗೊಳ್ಳಬೇಕು. ನಿಧಾನವಾಗಿ ವ್ಯಸನಿಯು ಸಮಾಜದ ಮುಖ್ಯವಾಹಿನಿಗೆ ಮರಳುವಂತೆ ಮಾಡಬೇಕು. ಎಲ್ಲರೂ ಇರುವುದರಲ್ಲಿಯೇ ಆರೋಗ್ಯವಾಗಿ ಸಂತೃಪ್ತಿಯ ಬದುಕು ನಡೆಸುವಂತಾಗಲಿ ಎಂಬ ಹಾರೈಕೆ, ಆಶಯ ನಮ್ಮದು.
ಸಹಕಾರ: ರತ್ನಾ ಕೆ ಭಟ್,ತಲಂಜೇರಿ
ಚಿತ್ರ ಕೃಪೆ: ಅಂತರ್ಜಾಲ ತಾಣ