ವಿಶ್ವ ಮಾನವತೆ ಸಾರಿದ ಮೇರು ವ್ಯಕ್ತಿ

ವಿಶ್ವ ಮಾನವತೆ ಸಾರಿದ ಮೇರು ವ್ಯಕ್ತಿ

ಕವನ

ವೆಂಕಪ್ಪಗೌಡ ಸೀತಮ್ಮ ದಂಪತಿಗಳ ಸುಕುಮಾರ

ಶಿವಮೊಗ್ಗದ ತೀರ್ಥಹಳ್ಳಿಯ ಕುಪ್ಪಳ್ಳಿಯ ಕುವರ

ಸ್ನಾತಕೋತ್ತರ ಓದಿದ ಸಭ್ಯತೆಯ ಧೀಮಂತರು

ಪ್ರಾಧ್ಯಾಪಕ ವೃತ್ತಿಯಲಿ ಬದುಕು ಸವೆಸಿದವರು

 

ಮಲೆನಾಡಿನ ಸಾಹಿತ್ಯ ಲೋಕದ ಘಮಲ ಪುಷ್ಪ

ಸಮಕಾಲೀನ ಸೃಜನಶೀಲತೆ ವಾಸ್ತವತೆ ಸಾರಿದ ಕೀರ್ತಿ

ವಿಶ್ವಮಾನವತೆಯ ‌ಸಂದೇಶದ ಹರಿಕಾರರು

'ಮನುಜಮತ ವಿಶ್ವಪಥ' ಸಕಲಕಾಲಕೂ ಬೇಕೆಂದರು

 

ಜಾತಿಮತದ ಕಟ್ಟುಪಾಡುಗಳ ಸರಿಸಿರೆಂದರು

ಬುದ್ಧ ಬಸವರ ಹಾಗೆ ಯೋಚಿಸಿರೆಂದರು

ಹುಟ್ಟುವ ಪ್ರತಿ ಮಗುವಿನಲೂ ಮಾನವತೆಯ ಬಿಂಬಿಸಿರೆಂದರು

ವೈಚಾರಿಕ ದೃಷ್ಟಿಕೋನದ ಪರಿಧಿ ಬೆಳೆಸಿರೆಂದರು

 

ವಿದ್ಯೆ ಸಂಸ್ಕೃತಿ ನಾಗರಿಕತೆಯ ತಳಪಾಯವಿರಲಿ

ಕಾಲಕ್ಕೆ ಅನ್ವಯಿಸಿ ಬದಲಾವಣೆಯಿರಲಿ

ಮತಮೌಢ್ಯತನ ವಿನಾಶಕ್ಕೆ ದಾರಿಯೆಂದರು

'ಮನುಷ್ಯಜಾತಿ ತಾನೊಂದೆವಲಂ' ಸಾರಿದರು

 

ಜಾತಿ ಮತಗಳು ಗುಂಪುಗಾರಿಕೆಗೆ ರಹದಾರಿಯೆಂದರು

ಸಮನ್ವಯ,ಸಮಾನತೆ,ಸರ್ವೋದಯ,ವಿಶ್ವಪಥವಿರಲೆಂದರು

ಕನ್ನಡಮ್ಮನ ಮಡಿಲ ಕೂಸು ದಾರ್ಶನಿಕರಾಗಿ ಮೆರೆದರು

ಚಿಂತಕ ಸಾಹಿತಿ ಕಾದಂಬರಿಕಾರ ನಾಟಕಕಾರರಾಗಿ ಶ್ರೇಷ್ಠರೆನಿಸಿದರು

 

ಗೌರವ ಡಾಕ್ಟರೇಟ್ ಪದ್ಮವಿಭೂಷಣ ಪಂಪ, ಜ್ಞಾನಪೀಠ ಪ್ರಶಸ್ತಿಗಳ ಕಿರೀಟ

ರಾಷ್ಟ್ರಕವಿ ರಸ ಋಷಿ ಬಿರುದುಗಳು ಬಗಲಿಗೆ

'ಶ್ರೀರಾಮಾಯಣದರ್ಶನಂ'ಮಹಾಕಾವ್ಯದ ರೂವಾರಿಯವರು

ಎಲ್ಲಾದರು ಇರು ಎಂತಾದರು ಇರು ಕನ್ನಡವಾಗಿರೆಂದರು

 

ನಾಡಿನ ನೆಲಜಲದಿ ಅಪಾರ ಪ್ರೀತಿ ಹೊಂದಿದ ಪ್ರಕೃತಿಪ್ರಿಯರು

ಜನ್ಮದಿನವನ್ನು *ವಿಶ್ವಮಾನವ ದಿನದಾಚರಣೆ* ಘೋಷಣೆ

ಸಾಹಿತಿವರೇಣ್ಯ ಕುವೆಂಪುರವರಿಗೆ ನೀಡಿದ ಗೌರವಾದರ

'ವಿಶ್ವ ಮಾನವ ಪರಿಕಲ್ಪನೆ'ಗೆ ಸಂದ ಕೀರ್ತಿ ಸಮ್ಮಾನವಿದು

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್