ವಿಶ್ವ ಮಾನವ ಕುವೆಂಪು

ವಿಶ್ವ ಮಾನವ ಕುವೆಂಪು

ಪುಸ್ತಕದ ಲೇಖಕ/ಕವಿಯ ಹೆಸರು
ಕೆ. ವೈ.ನಾರಾಯಣಸ್ವಾಮಿ
ಪ್ರಕಾಶಕರು
ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು
ಪುಸ್ತಕದ ಬೆಲೆ
ನಮೂದಿಸಿಲ್ಲ. ಮುದ್ರಣ: ಅಕ್ಟೋಬರ್ ೨೦೧೮

ವಿಶ್ವ ಮಾನವ ಕುವೆಂಪು ಪುಸ್ತಕವನ್ನು ಕರ್ನಾಟಕ ಸರಕಾರದ ಅಧೀನದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿದೆ. ಪ್ರತೀ ವರ್ಷ ಕುವೆಂಪು ಅವರ ಜನ್ಮ ದಿನವನ್ನು ಕರ್ನಾಟಕ ಸರಕಾರ ‘ವಿಶ್ವ ಮಾನವ ದಿನಾಚರಣೆ' ಎಂದು ಆಚರಿಸುತ್ತದೆ. ಆ ಹಿನ್ನಲೆಯಲ್ಲಿ ಈ ಕಿರು ಹೊತ್ತಿಗೆಯನ್ನು ಹೊರತಂದಿದ್ದಾರೆ. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯಲ್ಲಿ ಕಂಡ ನುಡಿಗಳು “ಕುವೆಂಪುರವರು ನಮ್ಮ ಹೆಮ್ಮೆಯ ರಾಷ್ಟ್ರಕವಿ. ಅವರು ಕನ್ನಡ ಅಕ್ಷರ ಲೋಕದ ನವ ನವೋನ್ಮೇಷಶಾಲಿನಿ. ಕನ್ನಡ ಸಾಹಿತ್ಯವನ್ನು ಮೇರು ಶಿಖರಕ್ಕೆ ಏರಿಸಿದ ಮಹಾನ್ ಚೇತನ. ನಮ್ಮ ತಲೆಮಾರನ್ನು ವೈಚಾರಿಕ ಅಂಗಳಕ್ಕೆ ಕರೆದೊಯ್ದು ಪರಿಚಯಿಸಿದ ಅದ್ಭುತ ವಿಚಾರವಂತ. ಅವರು ನೀಡಿರುವ ‘ವಿಶ್ವ ಮಾನವ' ಸಂದೇಶ ಸದಾ ಕಾಲಕ್ಕೆ ಸಲ್ಲುತ್ತದೆ.

ಕನ್ನಡ ನೆಲದ ಇಂತಹ ಹೆಮ್ಮೆಯ ಪುತ್ರರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಗೌರವಾರ್ಥ ನಮ್ಮ ಕರ್ನಾಟಕ ಸರ್ಕಾರ ಕುವೆಂಪು ಅವರು ಹುಟ್ಟಿದ ದಿನವನ್ನು ‘ವಿಶ್ವಮಾನವ ದಿನಾಚರಣೆ'ಯ ಹೆಸರಿನಲ್ಲಿ ಪ್ರತಿವರ್ಷ ಆಚರಿಸುತ್ತದೆ. ಕರ್ನಾಟಕದ ವೈಚಾರಿಕ ವಲಯದ ಸಾಕ್ಷಿ ಪ್ರಜ್ಞೆಯಂತಿದ್ದ ಕುವೆಂಪುರವರು ಕನ್ನಡ ನಾಡು -ನುಡಿ ಕಟ್ಟುವ ಕಾಯಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು. ಭಾಷಾ ಸಮಸ್ಯೆ, ಗಡಿ ವಿವಾದ, ಆಡಳಿತ ಕನ್ನಡ ಇತ್ಯಾದಿ ವಿಷಯಗಳಲ್ಲಿ ನಮ್ಮ ಸರ್ಕಾರಗಳು ಕುವೆಂಪುರವರ ಒಲವು-ನಿಲುವುಗಳನ್ನು ಆಧರಿಸಿಯೇ ತಮ್ಮ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದರು. 

ಅವರ ನೆನಪನ್ನು ಸ್ಮರಣೀಯವಾಗಿಸಲು ಕುವೆಂಪುರವರ ಹೆಸರಿನಲ್ಲಿ ಕುಪ್ಪಳ್ಳಿಯ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಕುವೆಂಪು ಜೀವ ವೈವಿಧ್ಯ ಸಂರಕ್ಷಿತ ವಲಯವೆಂದು ಘೋಷಿಸಿದೆ. ಅವರ ಶತಮಾನೋತ್ಸವ ಸಂಭ್ರಮದಲ್ಲಿ ಪ್ರತಿ ಜಿಲ್ಲೆಯಲ್ಲಿ ಕುವೆಂಪು ಮಾದರಿ ಸರ್ಕಾರಿ ಶಾಲೆಗಳನ್ನು ನಿರ್ಮಿಸಿದೆ. ನಮ್ಮ ಹೆಮ್ಮೆಯ ಮಹಾಕವಿ ಕುವೆಂಪುರವರ ಸಂಕ್ಷಿಪ್ತ ಜೀವನ ಚಿತ್ರಣದ ಈ ಕಿರುಹೊತ್ತಿಗೆಯನ್ನು ಪ್ರಕಟಿಸುವ ಮೂಲಕ ವಾರ್ತಾ ಇಲಾಖೆ ರಾಷ್ಟ್ರಕವಿಗೆ ತನ್ನ ಗೌರವವನ್ನು ಸಲ್ಲಿಸುತ್ತಿದೆ.” ಎಂದಿದ್ದಾರೆ. 

ಪುಸ್ತಕವನ್ನು ಕೆ ವೈ ನಾರಾಯಣಸ್ವಾಮಿ ಇವರು ಬರೆದಿದ್ದಾರೆ. ಅವರು ಕುವೆಂಪು ಅವರನ್ನು ‘ಕನ್ನಡಿಗರ ಎದೆಯ ದನಿ’ ಎಂದು ಕರೆದಿದ್ದಾರೆ. ಈ ೪೦ + ೪ ಪುಟಗಳ ಪುಟ್ಟ ಪುಸ್ತಕದಲ್ಲಿ ಕುವೆಂಪು ಅವರ ಹುಟ್ಟಿನಿಂದ ನಿಧನದವರೆಗಿನ ಸಂಗತಿಗಳನ್ನು ಬಹಳ ಸಂಕ್ಷಿಪ್ತವಾಗಿ ಛಾಯಾ ಚಿತ್ರಗಳ ಸಮೇತ ವಿವರಿಸಲಾಗಿದೆ. ಬಹಳ ಅಪರೂಪದ ಕೆಲವು ಚಿತ್ರಗಳೂ ಈ ಪುಸ್ತಕದಲ್ಲಿವೆ. ಲೇಖಕರು ಒಂದೆಡೆ ಬರೆಯುತ್ತಾರೆ “ ನಿಸ್ಸಂದೇಹವಾಗಿ ಕುವೆಂಪು ಅವರು ನಮ್ಮ ಕಾಲದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಭಾರತ ದೇಶದ ಸಾಹಿತ್ಯ ಕಲೆ ಸಂಸ್ಕೃತಿಗಳನ್ನು ರೂಪಿಸಿದ ಪ್ರತಿಭಾವಂತರನ್ನು ಅವಲೋಕಿಸಿದರೆ ಕುವೆಂಪು ಅವರು ವಿಶ್ವಕವಿ ರವೀಂದ್ರನಾಥ ಠಾಗೂರ್ ಅವರಿಗೆ ಸರಿಸಾಟಿಯಾಗಿ ನಿಲ್ಲುತ್ತಾರೆ. ಇದು ಕುವೆಂಪು ತಮ್ಮ ಬದುಕು ಬರಹದಲ್ಲಿ ತಲುಪಿದ ಎತ್ತರಕ್ಕೆ ಹಿಡಿದ ಮಾಪಕವಾಗಿದೆ. ಕುವೆಂಪು ಎಂಬ ಹೆಸರು ಕೂಡ ಇಂದು ಕನ್ನಡಿಗರಿಗೆ ಮಂತ್ರವೂ ಹೌದು ಶಕ್ತಿಯೂ ಹೌದು" ಎಂದಿದ್ದಾರೆ.