ವಿಶ್ವ ಮಾನವ ದಿನದಂದು ರಾಷ್ಟ್ರಕವಿ ಕುವೆಂಪು ನೆನಪು

ವಿಶ್ವ ಮಾನವ ದಿನದಂದು ರಾಷ್ಟ್ರಕವಿ ಕುವೆಂಪು ನೆನಪು

ಡಿಸೆಂಬರ್ ೨೯ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನ. ಈ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುತ್ತಾರೆ. ಕನ್ನಡ ಭಾಷೆ, ನುಡಿಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದವರು ಕುವೆಂಪು. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ನಾಮಧೇಯದ ವ್ಯಕ್ತಿ ಕುವೆಂಪು ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದುದು ಬಹುತೇಕರಿಗೆ ತಿಳಿದಿರುವಂತದ್ದೇ. ೧೯೦೪ರ ಡಿಸೆಂಬರ್ ೨೯ರಂದು ವೆಂಕಟಪ್ಪ ಗೌಡ ಹಾಗೂ ಸೀತಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದವರು ಪುಟ್ಟಪ್ಪ. ಇವರದ್ದು ಸುಸಂಸ್ಕೃತ ಕುಟುಂಬವಾದುದರಿಂದ ಬಾಲ್ಯದಿಂದಲೇ ಕುವೆಂಪು ಅವರ ಮೇಲೆ ಸಾಹಿತ್ಯದ ಕಂಪು ಪ್ರಭಾವ ಬೀರಿತ್ತು. ಬಾಲ್ಯದಲ್ಲಿ ಮನೆಯಲ್ಲಿ ನಡೆಯುತ್ತಿದ್ದ ರಾಮಾಯಣ, ಮಹಾಭಾರತ ಮುಂತಾದ ಮಹಾಕಾವ್ಯದ ವಚನಗಳ ಪ್ರವಚನ ಕುವೆಂಪು ಅವರಲ್ಲಿ ಬಹಳಷ್ಟು ಪ್ರಭಾವ ಬೀರಿತ್ತು. ಕೂಲಿಮಠದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಕುವೆಂಪು ಅವರು ೧೯೧೮ರಲ್ಲಿ ಪ್ರೌಢ ಶಿಕ್ಷಣಕ್ಕಾಗಿ ಮೈಸೂರಿಗೆ ಬಂದರು. 

ಕುವೆಂಪು ಅವರು ಮೊದಲಿಗೆ ತಮ್ಮ ಕವನವನ್ನು ಆಂಗ್ಲ ಭಾಷೆಯಲ್ಲೇ ಬರೆದಿದ್ದರು. ಇಂದಿನ ಬಹುತೇಕರಿಗೆ ಆಂಗ್ಲ ಭಾಷೆಯೆಂದರೆ ಜಗತ್ತಿನ ಹೆಬ್ಬಾಗಿಲು ಎಂದು ತಿಳಿದಿರುತ್ತಾರಲ್ಲ ಹಾಗೆಯೇ ಕುವೆಂಪು ಅವರೂ ಆಂಗ್ಲ ಭಾಷೆಯಲ್ಲಿ ಬರೆದರೆ ತಮಗೆ ಹೆಚ್ಚಿನ ಮನ್ನಣೆ ಸಿಗುತ್ತದೆ ಎಂದು ಅಂದು ಭಾವಿಸಿದ್ದರು. ೧೯೨೨ರಲ್ಲಿ ಅವರು ‘ಬಿಗಿನರ್ಸ್ ಮೂರ್ಸ್' ಎಂಬ ತಲೆಬರಹದೊಂದಿಗೆ ಕವನಗಳನ್ನು ಬರೆದರು. ಒಮ್ಮೆ ಖ್ಯಾತ ಐರಿಷ್ ಕವಿಯಾದ ಕೆ.ಎಚ್. ಕಸಿನ್ಸ್ ಎಂಬವರು ಶ್ರೀರಂಗಪಟ್ಟಣಕ್ಕೆ ಬಂದಾಗ ತಮ್ಮ ಆಂಗ್ಲ ಕವನವನ್ನು ಅವರಿಗೆ ತೋರಿಸಿದಾಗ ಅವರು ನೀವು ನಿಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಯಾಕೆ ಬರೆಯ ಬಾರದು? ಎಂದರು. ಅದರಿಂದ ನಿಮ್ಮ ಭಾವನೆಗಳು ಸ್ಪಷ್ಟವಾಗಿ ಬರಹಗಳಲ್ಲಿ ಗೋಚರವಾಗುತ್ತವೆ ಎಂದು ಹುರಿದುಂಬಿಸಿದರು. ಈ ಮಾತಿನಿಂದ ಪ್ರಭಾವಿತರಾದ ಕುವೆಂಪು ಅವರು ಕನ್ನಡದಲ್ಲೇ ಬರೆಯಲು ಪ್ರಾರಂಭಿಸಿದರು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದಿದರು. ಆಧ್ಯಾತ್ಮದತ್ತ ಒಲವು ತೋರಿಸತೊಡಗಿದರು. 

ಅವರು ಕನ್ನಡದಲ್ಲಿ ಅಮಲನ ಕಥೆ ಎಂಬ ಪುಸ್ತಕವನ್ನು ಮೊದಲಿಗೆ ಪ್ರಕಟಿಸಿದರು. ಕುವೆಂಪು ಅವರು ಮಹಾರಾಜಾ ಕಾಲೇಜಿನಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಕನ್ನಡದ ಮಹಾನ್ ಲೇಖಕರಾದ ಬಿ.ಎಂ.ಶ್ರೀಕಂಠಯ್ಯ, ಟಿ.ಎಸ್.ವೆಂಕಣ್ಣಯ್ಯ ಹಾಗೂ ಎ.ಆರ್.ಕೃಷ್ಣ ಶಾಸ್ತ್ರಿಗಳು ಇವರ ಗುರುಗಳಾಗಿದ್ದರು. ಇವರೆಲ್ಲರ ಸಾಂಗತ್ಯದಿಂದ ಕುವೆಂಪು ಅವರು ಮತ್ತಷ್ಟು ಪ್ರಖರವಾಗಿ ಬರಹಗಳನ್ನು ಬರೆದರು. ೧೯೨೭ರಲ್ಲಿ ಬಿ.ಎ. ಪದವಿಯನ್ನು ಮುಗಿಸಿ ವೆಂಕಣ್ಣಯ್ಯನವರ ಒತ್ತಾಯದ ಮೇರೆಗೆ ಕನ್ನಡದಲ್ಲಿ ಎಂ.ಎ.ಪದವಿಯನ್ನು ಪೂರೈಸಿದರು. ೧೯೨೯ರಲ್ಲಿ ಕೊಲ್ಕತ್ತಾಗೆ ತೆರಳಿದ ಕುವೆಂಪು ಅವರು ಸ್ವಾಮಿ ವಿವೇಕಾನಂದರ ಕೊಠಡಿಗೆ ಭೇಟಿ ನೀಡಿದ ಬಳಿಕ ಪ್ರೇರಣೆಗೊಂಡು ವಿವೇಕಾನಂದರಂತೆ ಬ್ರಹ್ಮಚಾರಿಯಾಗಬೇಕೆಂದು ನಿರ್ಧಾರ ಮಾಡಿದರು. ಆದರೆ ಅವರ ನಿರ್ಧಾರವು ಬಹಳ ಸಮಯ ಉಳಿಯಲಿಲ್ಲ. ಅವರ ಈ ನಿರ್ಧಾರವು ಅಚಲವಾಗದೇ ಇದ್ದುದರಿಂದ ಕನ್ನಡ ಸಾರಸ್ವತ ಲೋಕಕ್ಕೆ ಪೂರ್ಣಚಂದ್ರ ತೇಜಸ್ವಿಯವರಂತಹ ಅದ್ಭುತ ಪ್ರತಿಭಾವಂತ ಲೇಖಕರು ದೊರೆತರು. ೧೯೩೭ರಲ್ಲಿ ಹೇಮಾವತಿಯವರೊಡನೆ ವಿವಾಹವಾದ ಇವರು ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ನಾಲ್ಕು ಮಂದಿ ಮಕ್ಕಳ ತಂದೆಯಾದರು (೨ ಗಂಡು, ೨ ಹೆಣ್ಣು). ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ೧೯೬೦ರಲ್ಲಿ ಇವರ ಕನಸಿನ ಕೂಸಾದ ಮಾನಸ ಗಂಗೋತ್ರಿಯ ಸ್ಥಾಪನೆಯಾಯಿತು. 

ಕರ್ನಾಟಕ ರಾಜ್ಯವನ್ನು ಇವರು ಭಾರತ ಮಾತೆಯ ಸುಪುತ್ರಿ ಎಂದು ತಮ್ಮ ಕವನದಲ್ಲಿ ಬಣ್ಣಿಸಿದರು. ‘ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ' ಎಂದು ಬರೆದ ಇವರು ಕನ್ನಡ ಪ್ರೇಮವನ್ನೂ ಎತ್ತಿ ಹಿಡಿದರು.’ ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು' ಎಂಬ ಪಾಠವನ್ನು ನಮಗೆ ಹೇಳಿಕೊಟ್ಟರು. ಶ್ರೀ ರಾಮಾಯಣ ದರ್ಶನಂ, ಚಿತ್ರಾಂಗದಾ, ಕೊಳಲು, ನವಿಲು, ಅಗ್ನಿಹಂಸ, ಪ್ರೇಮ ಕಾಶ್ಮೀರ, ಕೃತ್ತಿಕೆ, ಪಕ್ಷಿಕಾಶಿ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಎಂಬೆಲ್ಲಾ ಅದ್ಭುತ ಪುಸ್ತಕಗಳನ್ನು ಬರೆದರು. ಇವೆಲ್ಲಾ ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳು ಎಂದೇ ಖ್ಯಾತವಾಗಿವೆ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಇವರಿಗೆ ೧೯೬೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂತು. ಕುವೆಂಪು ಅವರಿಗೆ ಸಂದ ಪ್ರಶಸ್ತಿ ಸನ್ಮಾನಗಳು ಅನೇಕ. ೧೯೫೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೫೮ರಲ್ಲಿ ಪದ್ಮಭೂಷಣ, ೧೯೬೪ರಲ್ಲಿ ರಾಷ್ಟ್ರ ಕವಿ, ೧೯೮೮ರಲ್ಲಿ ಪಂಪ ಪ್ರಶಸ್ತಿ, ೧೯೯೨ರಲ್ಲಿ ಪದ್ಮವಿಭೂಷಣ, ೧೯೯೨ರಲ್ಲಿ ಕರ್ನಾಟಕ ರತ್ನ ಹೀಗೆ ಹಲವಾರು ಪ್ರಶಸ್ತಿಗಳು ಕುವೆಂಪು ಅವರ ಮುಡಿಗೇರಿವೆ. ೧೯೫೭ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಅವರು ಆಯ್ಕೆಯಾಗಿದ್ದರು.

ಕುವೆಂಪು ಅವರದ್ದು ಬಹುಮುಖ ಪ್ರತಿಭೆ. ಅವರು ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಕನ್ನಡ ವಿಶ್ವವಿದ್ಯಾನಿಲಯವು ಕುವೆಂಪು ಅವರ ಸಮಗ್ರ ಬರಹಗಳ ೧೨ ಸಂಪುಟಗಳನ್ನು ಹೊರತಂದಿದ್ದಾರೆ. ಇದನ್ನು ಕೂಲಂಕುಶವಾಗಿ ಗಮನಿಸಿದಾಗ ಅವರ ಬರವಣಿಗೆಯ ಆಳ ತಿಳಿಯುತ್ತದೆ. ಕಂಪ್ಯೂಟರ್ ನಂತಹ ಆಧುನಿಕ ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಅವರು ಸುಮಾರು ೭೦ ವರ್ಷಗಳನ್ನು ಕೈಬರವಣಿಗೆಯಲ್ಲೇ ಬರೆದು ಕಳೆದಿದ್ದಾರೆ ಎಂದರೆ ದಾಖಲೆಯೇ ಸರಿ ಅಲ್ಲವೇ? ಕುವೆಂಪು ಅವರು ೧೯೯೪ ನವೆಂಬರ್ ೧೧ರಂದು ಇಹಲೋಕ ತ್ಯಜಿಸಿದರೂ ಅವರು ಸಾಹಿತ್ಯಲೋಕಕ್ಕೆ ಬಿಟ್ಟು ಹೋದ ಕಾಣಿಕೆ ಅಪಾರ. ೨೦೧೫ರಲ್ಲಿ ಕರ್ನಾಟಕ ಸರಕಾರವು ಕುವೆಂಪು ಅವರ ಜನ್ಮದಿನವಾದ ಡಿಸೆಂಬರ್ ೨೯ನ್ನು ‘ವಿಶ್ವ ಮಾನವ ದಿನ' ಎಂದು ಆಚರಿಸುವುದಾಗಿ ಘೋಷಣೆ ಮಾಡಿತು. ವಿಶ್ವ ಮಾನವ, ರಸ ಋಷಿ ಕುವೆಂಪು ಅವರನ್ನು ಇಂದು ಅವರ ಜನ್ಮದಿನದಂದು ನಾವು ಸ್ಮರಣೆ ಮಾಡಲೇಬೇಕು.  

ಚಿತ್ರ : ಅಂತರ್ಜಾಲ ತಾಣ ಸಂಗ್ರಹ