ವಿಶ್ವ ಯೋಗ ದಿನದ ಪ್ರಾರ್ಥನೆ

ವಿಶ್ವ ಯೋಗ ದಿನದ ಪ್ರಾರ್ಥನೆ

ಕವನ

ಹೇ ಜನಾರ್ದನ  ನಿನ್ನ  ಪಾದವ

ನಂಬಿ  ಬದುಕುವ  ಭಕುತರು

ತಾವು  ಮಾಡಿದ  ಪಾಪವೆಲ್ಲವ

ಕಳೆದು. ಪದವಿಯ  ಪಡೆವರು

 

ನೊಂದ  ಜೀವರ ತಂದೆ ನಿನ್ನೊಳು

ಮಾಳ್ಪ  ಭಿನ್ನಹ  ಒಂದಿದೆ

ರಾಗ ಭೋಗದಿ  ಬಿಡಿಸಿ ಎಮ್ಮನು

ಕಾಯ್ವ  ಭಾರವು  ನಿನ್ನದೆ

 

ಕುಂದ  ಮನ್ನಿಸಿ  ಚಂದ  ದಿಂದಲಿ

ಪಾಲಿಸೆಮ್ಮನು  ಬಂಧುವೆ

ಮುಂದೆ  ಧರ್ಮದ  ದಾರಿ  ತೋರಿಸಿ

ನಡೆಸು  ಕರುಣಾ  ಸಿಂಧುವೆ

 

ಹರಕೆ ಕಾಣಿಕೆ ಏನ ಕೊಡುವೆವು

ಬಡವರೆಮ್ಮನು    ಮನ್ನಿಸು

ಭಕ್ತಿಭಾವದಿ  ನಿತ್ಯ  ಸ್ತುತಿಪೆವು

ಭಕ್ತವತ್ಸಲ  ರಕ್ಷಿಸು

 

ಮಂತ್ರ ತಂತ್ರವ  ಅರಿಯಲಾರೆವು

ರಾಮ  ಕೃಷ್ಣ  ಎನುವೆವು

ತ್ಯಾಗಜೀವನದರ್ಥ  ತಿಳಿಯಲು

ಯೋಗ  ಮಾರ್ಗದಿ ನಡೆವೆವು

 

ವಿಶ್ವನಾಯಕ ನಿನ್ನ  ನೇಮದಿ

ಜನರ ಸೇವೆಯ  ಗೈವೆವು

ವಿಶ್ವದೇಳಿಗೆಗಾಗಿ   ನಮ್ಮಯ

ಬದುಕ  ಮುಡಿಪಾಗಿಡುವೆವು.

 

ರಚನೆ: ರಾಮಕೃಷ್ಣ ರಾವ್ ಎರ್ಮಾಳು 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್