ವಿಶ್ವ ಯೋಗ ದಿನದ ಮಹತ್ವ

ವಿಶ್ವ ಯೋಗ ದಿನದ ಮಹತ್ವ

ಮಾನವ ದೇಹವು ಪಂಚ ತತ್ವಗಳಿಂದಾಗಿದೆ ಎಂಬುದನ್ನು ನಾವು ಈಗಾಗಲೇ ಅರಿತವರಿದ್ದೇವೆ. ಬ್ರಹ್ಮಾಂಡವೇ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ ಈ ಐದು ತತ್ವಗಳಿಂದ ಕೂಡಿದೆ. ಪಂಚತತ್ವಗಳಿಂದಾದ ದೇಹ ಉಸಿರು ನಿಂತಾಗ, ಇದೇ ಪಂಚಭೂತಗಳಲ್ಲಿ ಲೀನವಾಗುತ್ತದೆ. ಯಾವಾಗ ಪಂಚತತ್ವಗಳಲ್ಲಿ ಸಮತೋಲನವಿರುತ್ತದೋ ಆಗ ನಾವು ಸಕಲ ವ್ಯಾಧಿಗಳಿಂದ ಮುಕ್ತರು. ಎಲ್ಲಿ ‌ಸಮತೋಲನ ತಪ್ಪಿತೋ ಅಲ್ಲಿಗೆ ರೋಗರುಜಿನಗಳು ಪ್ರವೇಶವಾಗುವುದು ಸಹಜ. ನಮ್ಮ ಮೆದುಳು ಪಂಚಜ್ಞಾನೇಂದ್ರಿಯ ಪಂಚಕರ್ಮೇಂದ್ರಿಯಗಳಿಗೆ ಸಂಬಂಧಿಸಿದೆ. ನಮ್ಮ ಮನಸ್ಸು ಚೈತನ್ಯ ಶಕ್ತಿ ಯಾಗಿದೆ.ಇಡೀ ಶರೀರವನ್ನು ಮನಸ್ಸು ತನ್ನ ಅಂಕೆಯಲ್ಲಿಡುತ್ತದೆ.

‘ಆರೋಗ್ಯವೇ ಭಾಗ್ಯ’ ಎಂಬುದಾಗಿ ಓದಿದವರು, ತಿಳಿದುಕೊಂಡವರು ನಾವೆಲ್ಲ. ಪ್ರಾಚೀನ ಕಾಲದಿಂದಲೂ ಜ್ಞಾನದ ದೀಪ್ತಿಯಿಂದ ಜಗತ್ತನ್ನು ಎಚ್ಚರಿಸಿದ ಬೆಳಗಿದ ದೇಶ ಎಂದರೆ ಭಾರತ. ಯೋಗಿಗಳು ನೂರಾರು ವರ್ಷ ಬದುಕಿದ್ದರಂತೆ. ಕಾರಣ ಯೋಗ,ಧ್ಯಾನ, ಮುದ್ರೆ, ಹಿತಮಿತ ಆಹಾರ ಸೇವನೆ, ಗುಣನಡತೆಯೆಂದು ಹೇಳುತ್ತಾರೆ. ಯೋಗ ಮತ್ತು ಮುದ್ರೆಗಳು ‘ಸತ್, ಚಿತ್, ಆನಂದ’ ನೀಡುವಂಥದ್ದು.

ಆರೋಗ್ಯ ದೃಷ್ಟಿಯಿಂದ ಜೂನ್ ೨೧ನ್ನು ಮೊದಲು ಸಂಯುಕ್ತ ರಾಷ್ಟ್ರ ಸಂಸ್ಥೆ ‘ವಿಶ್ವ ಯೋಗ ದಿನ’ ವಾಗಿ ಘೋಷಿಸಿತು. ಸುಮಾರು ೬೦೦೦ ವರುಷಗಳ ಹಿಂದಿನ ಕಲ್ಪನೆ ಯೊಂದಿಗೆ ಈ ಯೋಗ ಆರಂಭವಾಯಿತು. ಭೌತಿಕ, ಮಾನಸಿಕ, ಆಧ್ಯಾತ್ಮಿಕ ಪರಿಪೂರ್ಣ ವಿಕಸನಕ್ಕೆ, ಧ್ಯಾನ, ಹಠ, ಯೋಗ, ಏಕಾಗ್ರತೆ, ಮನಸ್ಸಿನ ಮೇಲೆ ಹತೋಟಿ, ಸಕಾರಾತ್ಮಕ ಚಿಂತನೆ, ನಕಾರಾತ್ಮಕ ಧೋರಣೆಯ ಬಿಡುಗಡೆ ಈ ಎಲ್ಲದಕ್ಕೂ ಯೋಗ ಮತ್ತು ಧ್ಯಾನ ಬಹು ಮುಖ್ಯ ಎಂಬುದನ್ನು ಕಂಡುಕೊಂಡ ರಾಷ್ಟ್ರಗಳು ಯೋಗಕ್ಕೆ ಪ್ರಾಮುಖ್ಯತೆ ಕೊಡುವುದಕ್ಕಾಗಿಯೇ ವಿಶ್ವ ಯೋಗ ದಿನವನ್ನು ಜಾರಿಗೆ ತಂದವು.

‘ಯೋಗಃ ಕರ್ಮಸು ಕೌಶಲಂ’ ಯೋಗಕ್ಕೆ ಜಾತಿ, ಮತ, ಪಂಥ, ವಯಸ್ಸು ಬಡವ, ಶ್ರೀಮಂತ ಯಾವುದೂ ಅಡ್ಡಿಯಾಗದು. ಪ್ರತಿನಿತ್ಯ ಒಂದು ಸರಿಯಾದ ಸಮಯವನ್ನು ಮಾಡಿಕೊಳ್ಳಬೇಕು. ಪ್ರಶಾಂತ ವಾತಾವರಣವಿದ್ದರೆ ಚಂದ. ಆಸನ, ಪ್ರಾಣಾಯಾಮ, ಧ್ಯಾನ, ಜೀವನ ಪದ್ಧತಿ, ಇವೆಲ್ಲವನ್ನೂ ಒಳಗೊಂಡಿರಬೇಕು. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಆರೋಗ್ಯಕರ. ನಡಿಗೆ, ಸರಳ ವ್ಯಾಯಾಮಗಳು. ಶರೀರ, ಮನಸ್ಸು, ಉಸಿರಾಟ ಎಲ್ಲಾ ಒಂದಕ್ಕೊಂದು ನೇರ ಸಂಬಂಧವಿದೆ. ನಮ್ಮ ಮನಸ್ಸಿಗೆ ನೋವಾದಾಗ ನಮ್ಮ ಶರೀರ ದುಃಖದಿಂದ ಕೃಶವಾಗುತ್ತದೆ. ಮನಸ್ಸಿನಲ್ಲಿ ಭಾವನೆಗಳ ತಾಕಲಾಟ ನಡೆದು ಆರೋಗ್ಯ ಹಾಳಾಗಬಹುದು. ಸೇವಿಸುವ ಆಹಾರ ಮತ್ತು ಮನಸ್ಸು ಆರೋಗ್ಯ ಒಂದಕ್ಕೊಂದು ಅವಲಂಭಿತವಾಗಿದೆ‌. ಇಂದ್ರಿಯಗಳ ನಿಯಂತ್ರಣ, ಮಾನಸಿಕ ಬಲವರ್ಧನೆಗೆ, ದೈಹಿಕ ಬಲ ಹೆಚ್ಚಿಸಲು, ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಯೋಗ ಅವಶ್ಯಕ. ಯೋಗನಿದ್ರೆ ನಮ್ಮ ತನುವನ್ನು ತಂಪಾಗಿಡುತ್ತದೆ. ಓಂಕಾರ ಎಂಬ ಬೀಜಮಂತ್ರ ಆತ್ಮ-ಪರಮಾತ್ಮನ ಸಮ್ಮಿಲನಕ್ಕೆ ರಹದಾರಿ. ನಮ್ಮ ಲ್ಲಿರುವ ರಜೋ, ತಮೋಗುಣಗಳು ಸರಿಯಲು ಸಹಕಾರಿ.

"ಶರೀರ ಮಾದ್ಯಂ ಖಲು ಧರ್ಮ ಸಾಧನಂ" ಎಂಬಂತೆ ಶರೀರ ಎಂಬ ಅಮೋಘ ಸಾಧನದಿಂದ ಯಾವ ಕಾರ್ಯ ವನ್ನು ಸಾಧಿಸಲು ,ಈ ಯೋಗ ಎಲ್ಲಾ ಆಯಾಮಗಳಲ್ಲೂ ‌ಸಹಕಾರಿಯಾಗಬಲ್ಲುದು.ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಗೂ 'ಬಲ'ಎಂಬುದು ಆತ್ಮರಕ್ಷಣೆ ಇದ್ದಂತೆ.ಬಲಹೀನರು ಇದ್ದೂ ಇಲ್ಲದಂತೆ.ಹಾಗಾದರೆ ನಾವು ಬಲಾಢ್ಯರಾಗಲು ದಾರಿ ನಮ್ಮ ನಮ್ಮಲ್ಲೇ ಇದೆ.

ವ್ಯಸನಗಳಿಂದ ನಮ್ಮನ್ನು ಮುಕ್ತ ಮಾಡಲು ಯೋಗ ಒಳ್ಳೆಯ ದು. "ಅವಿದ್ಯಾಸ್ಮಿತಾ ರಾಗ ದ್ವೇಷಾ ಭಿನಿವೇಷಾ ಕ್ಲೇಶಾ" ಎಂಬಂತೆ ಅಜ್ಞಾನ, ಅಹಂಕಾರ, ರಾಗ, ದ್ವೇಷ, ಮೋಹ, ಮತ್ಸರ ಈ ಎಲ್ಲಾ ಅವಗುಣಗಳನ್ನು ಹೋಗಲಾಡಿಸಿ, ಸತ್ಯ, ಶಾಂತಿ, ದಯೆ, ಕ್ಷಮೆ, ವಾತ್ಸಲ್ಯ, ಪ್ರೀತಿ, ಅಹಿಂಸೆ, ಪ್ರೇಮ ಇವುಗಳನ್ನು ಮೂಡಿಸಲು ಯೋಗದ ಅಗತ್ಯವಿದೆ. ‘ಈಶವಾಸ್ಯಮಿದಂ ಸರ್ವಂ' ಎಂಬಂತೆ ಈ ಚರಾಚರ ಸೃಷ್ಟಿಯಲ್ಲಿ ಭಗವಂತ ವ್ಯಾಪಿಸಿ, ನೆಲೆಸಿದ್ದಾನೆ. ಇದನ್ನು ಅರಿಯಲು ದಿವ್ಯ ದೃಷ್ಟಿ ಬೇಕು.ಆ ದಿವ್ಯ ದೃಷ್ಟಿ ಯೋಗ, ಪ್ರಾಣಾಯಾಮದಿಂದ ಲಭ್ಯ.

ಯೋಗ ಎಂಬುದು ಮಕ್ಕಳಾಟಿಕೆಯಲ್ಲ ಅಥವಾ ಯಾರನ್ನೋ ಮೆಚ್ಚಿಸಲೂ ಅಲ್ಲ. ನಮಗೆ ಬೇಕಾಗಿ ನಾವೇ ಮಾಡುವ ಆರೋಗ್ಯಕರ ಚಟುವಟಿಕೆ. ಚಂಚಲ ಮನಸ್ಸಿನ ಭಾವನೆಗಳನ್ನು ಕಟ್ಟಿಹಾಕಲು ಯೋಗ ಧ್ಯಾನ ಎರಡೂ ಅವಶ್ಯ. ದೇಹದ ಚಿಂತನೆಗಳಿಗೆ ಕಡಿವಾಣ ಹಾಕಲು ಸಹಕಾರಿ. ಯೋಗವು ಮನಸ್ಸು ಮತ್ತು ದೇಹಕ್ಕೆ ಮಾಧ್ಯಮವಾಗಿ ಸಂಪರ್ಕಿಸುವ ಸೇತುವೆ ಎಂದರೂ ತಪ್ಪಾಗಲಾರದು. ನಮ್ಮ ಶರೀರದ ಎಲ್ಲಾ ಅಂಶಗಳ ಸಮತೋಲನ ಸಾಧಿಸಲು ಯೋಗ ಅಗತ್ಯ. ಸರಳ ಉಸಿರಾಟ, ಶಾರೀರಿಕ ಭಂಗಿಗಳ ಅಳವಡಿಕೆ ವಯಸ್ಸಿಗೆ ತಕ್ಕಂತೆ ಮಾಡಬಹುದು. ಸೂರ್ಯನಮಸ್ಕಾರ ಅತ್ಯಂತ ಶ್ರೇಯಸ್ಕರ. ನಮ್ಮ ಸಾಮಾಜಿಕ ಆರೋಗ್ಯ ಕಾಪಾಡುವಲ್ಲಿ ಯೋಗದ ಚಟುವಟಿಕೆ ಸಹಕರಿಸಬಲ್ಲುದು. ಮಾನಸಿಕ ಸ್ವಸ್ಥ ಮತ್ತು ದೈಹಿಕ ಆರೋಗ್ಯ ಲಭಿಸುತ್ತದೆ.

ಒತ್ತಡ ನಿವಾರಣೆಗೆ,ಹೃದಯದ ಆರೋಗ್ಯಕ್ಕೆ,ಶಕ್ತಿಯ ಸಮತೋಲನಕ್ಕೆ, ಜಂಜಾಟದ ಜೀವನ ಕ್ರಮಗಳಿಗೆ ಕಡಿವಾಣ ಹಾಕಲು ಧ್ಯಾನವೊಂದೇ ಮದ್ದು, ಯೋಗವೊಂದೇ ಚಿಕಿತ್ಸೆ. ನಾವೆಲ್ಲರೂ ಅನುಕೂಲವಿದ್ದಂತೆ ಅನುಸರಿಸಿ ಉತ್ತಮ ಆರೋಗ್ಯ ಹೊಂದೋಣ. ‘ಓಂ ಶಾಂತಿಃ ಶಾಂತಿಃ ಶಾಂತಿಃ’

(ಧ್ಯಾನ ಮತ್ತು ಚಿಕಿತ್ಸೆ ಆಕರ ಗ್ರಂಥ)

-ರತ್ನಾ ಕೆ.ಭಟ್, ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ