ವಿಶ್ವ ಯೋಗ ದಿನದ ಸಂದರ್ಭದಲ್ಲಿ...
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ದಿಯ ಫಲವೇ ಈ ಯಾಂತ್ರಿಕ ಬದುಕು. ಇಂದಿನ ಅಭಿವೃದ್ದಿಯ ಈ ಯಾಂತ್ರಿಕ ಬದುಕಿನಲ್ಲಿ ಮನುಷ್ಯ ಅದೆಷ್ಟು ಬಿಡುವಿಲ್ಲದವನಂತವನಾಗಿದ್ದಾನೆಂದರೆ ಅವನು ತನ್ನ ಆರೋಗ್ಯದತ್ತ ಸ್ವಲ್ಪವೂ ಗಮನ ನೀಡುತ್ತಿಲ್ಲ. ಆರೋಗ್ಯ ಎಂಬುದು ಅಂಗಡಿಯಿಂದ ಕೊಂಡು ತರುವುದಲ್ಲ. ಆತ್ಮ ವಿಶ್ವಾಸ ಸ್ವಯಂ ನಿಯಂತ್ರಣದಿಂದ ಪಡೆಯುವಂತದ್ದು "A SOUND MIND IN A SOUND B0DY " ಎನ್ನುವ ಸ್ವಾಮಿ ವಿವೇಕಾನಂದರ ಈ ವಾಣಿ ಆರೋಗ್ಯಕರ ಶರೀರದ ಮಹತ್ವ ತಿಳಿಸುತ್ತದೆ. ಆರೋಗ್ಯ ಪರಸ್ಪರರ ನಡುವೆ ಪ್ರೀತಿ ಸಂತೋಷಗಳುಂಟಾಗುವಂತೆ ಪ್ರೇರೇಪಿಸುತ್ತದೆ. ಆರ್ಥಿಕ ಸಂಪತ್ತು ಎಲ್ಲರಿಗೂ ಸಂಪತ್ತನ್ನು ಸೃಷ್ಟಿಸುತ್ತದೆ. ಒಬ್ಬ ವ್ಯಕ್ತಿ ಸಂಪತ್ತನ್ನು ಹೊಂದಿದ್ದರೆ ಅವನ ಇಡೀ ಕುಟುಂಬ ಉನ್ನತ ಜೀವನಮಟ್ಟ ಮತ್ತು ಉತ್ತಮ ಆರ್ಥಿಕ ಸ್ಥಿತಿ ಅನುಭವಿಸಬಹುದು.
ಒಳ್ಳೆಯ ಆದಾಯ, ಸಂಪತ್ತು - ಹೊಂದಿದ ವ್ಯಕ್ತಿಗೆ ಆತ್ಮ ವಿಶ್ವಾಸವು ಹೆಚ್ಚಾಗಿದ್ದು ಅವನ ಸಂಪತ್ತನ್ನು ವೃದ್ದಿಗೊಳಿಸುತ್ತದೆ. ಮೇಲಿನ ಅಂಶಗಳನ್ನು ಗಮನಿಸಿದಾಗ ತಿಳಿಯುವುದೇನೆಂದರೆ, ಉನ್ನತ ಗುಣಮಟ್ಟದ ಜೀವನ ನಡೆಸಲು "ಆರೋಗ್ಯ ಮತ್ತು ಸಂಪತ್ತು" ಎರಡು ಅತ್ಯವಶ್ಯಕ. ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಶ್ರೇಷ್ಠ. ಎಲ್ಲಾ ಭಾಗ್ಯಗಳನ್ನು ಅನುಭವಿಸಬೇಕಾದರೆ, ಆರೋಗ್ಯ ಭಾಗ್ಯದಿಂದ ಮಾತ್ರ ಸಾಧ್ಯ. ಇಂಥ ಆರೋಗ್ಯ ಭಾಗ್ಯದ ಜ್ಞಾನದ ಮಹತ್ವವನ್ನು ೮೦೦೦ ವರ್ಷಗಳಿಗಿಂತಲೂ ಹಿಂದೆ ನಮ್ಮ ಋಷಿಮುನಿಗಳು ತಮ್ಮ ದಿವ್ಯ ಧ್ಯಾನದ ಶಕ್ತಿಯಿಂದ ಉದ್ಭವಾದಂತಹ ಅಪರೂಪ ಮತ್ತು ಪರಿಣಾಮಕಾರಿದ ಯೋಗಾಸನ, ಪ್ರಾಣಾಯಾಮ, ಧ್ಯಾನ, ಕ್ರಿಯೆ, ಪರ್ಯಾಯ ಚಿಕಿತ್ಸೆ, ಪರಬ್ರಹ್ಮ ಚಿಕಿತ್ಸೆ, ಸಮ್ಮೋಹನಾ ಚಿಕಿತ್ಸೆ, ಪೂರ್ವ ಜನ್ಮದ ಚಿಕಿತ್ಸೆ ಹಾಗೂ ಇನ್ನೂ ಇತರೆ ಅನರ್ಘ್ಯ ರತ್ನಗಳನ್ನು ವಿಶ್ವಮಾನವ ಸಂಕುಲಕ್ಕೆ ಭಾರತೀಯರು ನೀಡಿದ್ದಾರೆ.
ಮನುಷ್ಯ ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ನಾನು ಎಲ್ಲರಿಗಿಂತಲೂ ಮುಂದೆ ಬರಬೇಕೆಂಬ ಹಂಬಲದಿಂದ ಒತ್ತಡಕ್ಕೆ ಒಳಗಾಗಿ ಅವನು ಮಾನಸಿಕ ಹಾಗೂ ದೈಹಿಕ ವ್ಯಾದಿಗಳಿಗೆ ಒಳಗಾಗುತ್ತಿದ್ದಾನೆ. ಮಾನಸಿಕ ಒತ್ತಡದಿಂದಾಗಿ ಬಿ.ಪಿ. ಸಕ್ಕರೆ ಕಾಯಿಲೆ, ಅಸ್ತಮ, ಸಂದಿವಾತ, ನರಗಳ ದೌರ್ಬಲ್ಯ ಮುಂತಾದ ವ್ಯಾದಿಗಳು ಹಾಗೂ ಮನೋವಿಕಾರದ ಕಾಯಿಲೆಗಳಿಗೆ ತುತ್ತಾಗುತ್ತಾ ಇದ್ದಾನೆ. ಮಾನವ ಸೇವಿಸುವಂತಹ ಆಹಾರ, ನೀರು, ಗಾಳಿ ಇವೆಲ್ಲವೂ ಸಹ ಕಲುಷಿತವಾಗಿ ಅವನ ಶರೀರದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿದೆ. ರೈತ ತಾನು ಹೆಚ್ಚು ಹಣಗಳಿಸಬೇಕೆಂಬ ಆಸೆ- ಆಕಾಂಕ್ಷೆಗಳಿಂದ ಸಾವಯವ ಗೊಬ್ಬರಕ್ಕೆ ಬದಲಾಗಿ ರಾಸಾಯನಿಕ ಗೊಬ್ಬರಗಳನ್ನು ಹಾಗೂ ರಾಸಾಯನಿಕ ಔಷಧಿಗಳನ್ನು ಬಳಸಿ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದಾನೆ. ಇಂತಹ ಆಹಾರ ಪದಾರ್ಥಗಳನ್ನು ತಿಂದಂತಹ ನಮಗೆ ಅದರಿಂದ ಅನಾರೋಗ್ಯ ಬರುತ್ತಿದೆ. ಇದರಿಂದ ಮನುಷ್ಯನ ಶಕ್ತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ಕಾರ್ಖಾನೆಗಳು ತಮ್ಮ ರಾಸಾಯನಿಕ ತ್ಯಾಜ್ಯ ವಸ್ತುಗಳನ್ನು ನದಿಗಳಿಗೆ ಬಿಡುತ್ತಿದ್ದು ಅಂತಹನೀರನ್ನು ನಾವು ಕುಡಿಯುತ್ತಿರುವುದರಿಂದ ನಮಗೆ ಅದೇ ಕಾಯಿಲೆಗಳು ಬರುತ್ತಿವೆ.
ಪ್ರಸ್ತುತ ವಾಹನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಿದ್ದು ಆ ವಾಹನಗಳು ಮತ್ತು ಕಾರ್ಖಾನೆಗಳು ವಿಸರ್ಜಿಸುವ ಹೊಗೆಯಿಂದ ಹಾಗೂ ಅರಣ್ಯ ನಾಶದಿಂದ ಪರಿಸರದ ಶುದ್ದ ಗಾಳಿ ಕಲ್ಮಶವಾಗುತ್ತಿದೆ. ಅಂತಹ ಕಲ್ಮಶ ಗಾಳಿಯನ್ನು ನಾವು ಸೇವಿಸುತ್ತಿರುವುದರಿಂದ ನಮ್ಮ ಆರೋಗ್ಯ ಕೆಡುತ್ತದೆ. ಹೀಗೆ ನಾವು ಸೇವಿಸುವುದರಿಂದ ಆಹಾರ, ನೀರು, ಗಾಳಿ ಎಲ್ಲವೂ ಸಹ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿ ನಾವು ಕೇಳಿ ಅರಿಯದಂತಹ ಚಿತ್ರ- ವಿಚಿತ್ರವಾದಂತಹ ಅನೇಕ ಕಾಯಿಲೆಗಳು ಮನುಷ್ಯನಿಗೆ ಬರುತ್ತಿವೆ. ಇಂತಹ ಎಲ್ಲಾ ಕಾಯಿಲೆಗಳಿಂದ ಮುಕ್ತಿ ಪಡೆಯಬೇಕಾದರೆ ತನ್ನ ಆರೋಗ್ಯವನ್ನು ತಾನು ಕಾಪಾಡಿಕೊಂಡು ಉತ್ತಮ ಜೀವನವನ್ನು ನಡೆಸಬೇಕಾದರೆ, ಅವನಿಗೆ ಯೋಗಾಸನ, ಪ್ರಾಣಾಯಾಮ, ಧ್ಯಾನ, ಪರಬ್ರಹ್ಮ ಚಿಕಿತ್ಸೆ, ಪರ್ಯಾಯ ಚಿಕಿತ್ಸೆ ಹಾಗೂ ಇತರ ಕ್ರಿಯೆಗಳ ಅಭ್ಯಾಸ ಅತ್ಯಂತ ಅವಶ್ಯವಾದುದು. ಯೋಗ ಸರ್ವ ರೋಗ ನಿರೋಧಕ. ಯೋಗ ಒಂದು ಪ್ರಯೋಗಶಾಲೆ. ಯೋಗ ವಾಮನನಿಂದ ಮಹಾ ಮಾನವನನ್ನಾಗಿಸುವ ಒಂದು ಸಮಗ್ರ ಆಧ್ಯಾತ್ಮಿಕ ವಿದ್ಯೆಯಾಗಿದೆ.ಯೋಗ ಮಾನವನ ಸರ್ವಾಂಗೀಣ ಆರೋಗ್ಯವನ್ನು ನೀಡುವಂತಹ ಸಾಧನವಾಗಿದೆ.
ಚಿತ್ರದಲ್ಲಿ ಯೋಗಪಟು, ಬಾಲನಟಿ ಆನ್ಯಳು ನಿಮ್ಮಗೆಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳನ್ನು ಹಾರೈಸುತ್ತಿದ್ದಾಳೆ.
-ಸತೀಶ್ ಶೆಟ್ಟಿ ಚೇರ್ಕಾಡಿ