ವಿಶ್ವ ರಂಗಭೂಮಿ ದಿನ

ವಿಶ್ವ ರಂಗಭೂಮಿ ದಿನ

೨೭ ಮಾರ್ಚ್ ೨೦೨೨ನ್ನು ವಿಶ್ವ ರಂಗಭೂಮಿ ದಿನ (WORLD THEATRE DAY) ಎಂದು ಕರೆಯುತ್ತಾರೆ. ಈ ಕುರಿತಾದ ಪುಟ್ಟ ಬರಹ ಇಲ್ಲಿದೆ.

“ರಂಗಭೂಮಿ ಎಂದರೆ ನಿಜವಾದ ಅರ್ಥದಲ್ಲಿ ನಮ್ಮ ಅನುಭವ ದಾಟಿಸಬಲ್ಲ ಪ್ರಬಲ  ಮಾಧ್ಯಮ” - ಪೀಟರ್ ಸೆಲ್ಲರ್ಸ್

೨೦೨೨ರ ವಿಶ್ವ ರಂಗಭೂಮಿ ದಿನಾಚರಣೆಯ ಈ ಮೇಲ್ಕಂಡ ಸಂದೇಶವನ್ನು  ವಿಶ್ವ ರಂಗಭೂಮಿಯ ಪರವಾಗಿ ಜಗತ್ತಿಗೆ ಸಾರುವ ಈ ಬಾರಿಯ ಗೌರವಕ್ಕೆ ಪಾತ್ರರಾದವರು ಅಮೆರಿಕ ಸಂಯುಕ್ತ ಸಂಸ್ಥಾನದ ಪೆನ್ಸಿಲ್ವೇನಿಯಾ ರಾಜ್ಯದ  ಪಿಟ್ಸ್ ಬರ್ಗ್ ನಿವಾಸಿಯಾದ ರಂಗಕರ್ಮಿ ಪೀಟರ್ ಸೆಲ್ಲರ್ಸ್. ಅವರು ಒಪೇರಾ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತ ನಿರ್ದೇಶಕರಾಗಿ ಜೊತೆಗೆ ವಿಶ್ವ ಮಟ್ಟದ ಸಾಂಸ್ಕೃತಿಕ ಉತ್ಸವದ ನಿರ್ದೇಶಕರಾಗಿ ದುಡಿದು ಜಾಗತಿಕ ಮಟ್ಟದಲ್ಲಿ ರಂಗಭೂಮಿ ವಲಯದಲ್ಲಿ ದೊಡ್ಡ ಖ್ಯಾತಿ ಗಳಿಸಿದ್ದಾರೆ. ಪೀಟರ್ ಸೆಲ್ಲರ್ಸ್ ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ರಂಗಕರ್ಮಿಗಳ ಪರವಾಗಿ ಜಗತ್ತಿಗೆ ಕರೆಕೊಟ್ಟ  ಕೆಲವು ಆಯ್ದ ಪ್ರಮುಖ ಸಾಲುಗಳು ಹೀಗಿವೆ,

ಪ್ರಿಯ ಸಂಗಾತಿಗಳೇ...

ಇಡೀ ಜಗತ್ತು ಕ್ಷಣಕ್ಷಣದ ಸುದ್ದಿ ಪ್ರವಾಹದಲ್ಲಿ ಮುಳುಗಿದೆ, ನಾವೀಗ ಮನುಕುಲದ ಚರಿತ್ರೆಯ ಮಹಾನ್ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ, ಈ ಅವಧಿಯಲ್ಲಿ ನಮ್ಮೊಳಗೆ ಆಗುತ್ತಿರಬಹುದಾದ ತೀವ್ರ ಹಾಗೂ ಮುಖ್ಯ ಬದಲಾವಣೆಗಳನ್ನು ನಮ್ಮ ನಡುವಿನ ಸಂಬಂಧಗಳನ್ನು ಗ್ರಹಿಸಬೇಕಾಗಿದೆ, ಅವುಗಳನ್ನು, ಆ ಗ್ರಹಿಕೆಗಳನ್ನು ಮಾತು - ಭಾವದ ಮೂಲಕ ಪ್ರಕಟಿಸಬೇಕಾಗಿದೆ, ಪ್ರಕಟನೆ ಈ ಹೊತ್ತಿಗೆ ಸುಲಭವಾದ ಕೆಲಸವಲ್ಲ, ಒಂದು ರೀತಿ ನಾವೆಲ್ಲ ಕಾಲದ ಅಂಚಿನಲ್ಲಿ ಇರುವಂತೆ ಜೀವಿಸುತ್ತಿದ್ದೇವೆ, ಸುದ್ದಿ ಚಕ್ರದಲ್ಲಿ ಸಿಲುಕಿರುವ ನಾವು, ರಂಗಭೂಮಿಯನ್ನು, ರಂಗಭೂಮಿಯ ಗಾಢತೆಯನ್ನು, ಅದರ ಅನುಭವವನ್ನು ತಿಳಿಸಲು ದಿನಪತ್ರಿಕೆಗಳು, ಇತರೆ ಮಾಧ್ಯಮಗಳು ಯಾಕೋ ಏನೋ ಸಿದ್ಧವಾಗಿಲ್ಲ,

“ರಂಗಭೂಮಿ ಎಂದರೆ ನಿಜವಾದ ಅರ್ಥದಲ್ಲಿ ನಮ್ಮ ಅನುಭವ ದಾಟಿಸಬಲ್ಲ ಮಾಧ್ಯಮ”

ಕಳೆದ ಎರಡು ವರ್ಷಗಳ ಕೋವಿಡ್ ಮಹಾಮಾರಿ ಜನರ ಮನಸ್ಸನ್ನು ಮುದುರಿಸಿದೆ, ಬದುಕನ್ನು ಸಂಕುಚಿತ ಗೊಳಿಸಿದೆ, ಸಂಬಂಧಗಳನ್ನು ಮುರಿದಿದೆ ಮತ್ತು ನಮ್ಮನ್ನೆಲ್ಲ ಮರಳಿ ಸೊನ್ನೆಯಾಗಿಸಿದೆ, ಹಲವರು ಅಂಚಿನಲ್ಲಿ ಬದುಕುತ್ತಿದ್ದಾರೆ, ಹಿಂಸೆ ಎಂಬುದು  ಅತಾರ್ಕಿಕವಾಗಿ ತಾಂಡವವಾಡುತ್ತಿದೆ, ಇದಕ್ಕೆ  ವ್ಯವಸ್ಥೆಯ ಹಲವು ಅಂಗಗಳು ಮೂಕ ಸಾಕ್ಷಿಗಳಾಗಿವೆ, ಚರಿತ್ರೆಯ ಒಂದು ಮರು ಓದಿನೊಂದಿಗೆ... ಭವಿಷ್ಯವನ್ನು  ಹೊಸದಾಗಿ ರೂಪಿಸಬೇಕಾಗಿದೆ, ಹಾಗಾಗಿ ನಾವೆಲ್ಲರೂ ಕೈಜೋಡಿಸಬೇಕು, ಎಲ್ಲರೂ ಒಂದಾಗಿ ರಂಗಭೂಮಿಯನ್ನು ಹಸನುಗೊಳಿಸಬೇಕಾಗಿದೆ, ಈವರೆಗೆ ರಂಗಭೂಮಿಗಾಗಿ ದುಡಿದವರಿಗೆ ಧನ್ಯವಾದ ತಿಳಿಸುತ್ತಾ, ರಂಗಭೂಮಿಯನ್ನು ಹೊಸದಾಗಿ ಹಸನುಗೊಳಿಸೋಣ ಎಂದು  ಅಹ್ವಾನ ನೀಡುತ್ತಿದ್ದೇನೆ. ಮತ್ತೊಮ್ಮೆ ‘ವಿಶ್ವ ರಂಗಭೂಮಿ ದಿನ’ದ ಶುಭಾಶಯಗಳೊಂದಿಗೆ-ಪೀಟರ್ ಸೆಲ್ಲರ್ಸ್

೨0೨೨ರ ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ಸಾರುವ ಗೌರವಕ್ಕೆ ಪಾತ್ರರಾದ ಅಮೆರಿಕ ಸಂಯುಕ್ತ ಸಂಸ್ಥಾನದ ವಿಶ್ವದ ಖ್ಯಾತ ರಂಗಕರ್ಮಿ ಪೀಟರ್ ಸೆಲ್ಲರ್ಸ್ ಅವರಿಗೆ ಭಾರತೀಯ ರಂಗಭೂಮಿ ಮತ್ತು ವಿಶೇಷವಾಗಿ  ಕನ್ನಡ ರಂಗಭೂಮಿಯ ಪರವಾಗಿ ಕೃತಜ್ಞತೆಗಳು- ಅಭಿನಂದನೆಗಳು

-ಡಿ. ಎಂ. ಮಂಜುನಾಥಸ್ವಾಮಿ, ಚಿಕ್ಕಮಗಳೂರು,

ಚಿತ್ರ ಕೃಪೆ: ಇಂಟರ್ನೆಟ್ ತಾಣ