ವಿಶ್ವ ಸಂಗೀತ ದಿನ

ವಿಶ್ವ ಸಂಗೀತ ದಿನ

ಸಂಗೀತ, ಗಾಯನ ಇಷ್ಟ ಇಲ್ಲದವರು ಯಾರೂ ಇರಲಾರರು. ಬಾಯಿ ಬಾರದ, ಮಾತನಾಡಲಾರದ ಜೀವಿಗಳೂ ಸಹ ಸಂಗೀತವನ್ನು ಆಲಿಸುವ ಅನುಭವ ನಮಗೆಲ್ಲರಿಗೂ ಆಗಿದೆ. ಶ್ರೀಕೃಷ್ಣನ ಕೊಳಲ ಗಾನಕ್ಕೆ ಗೋವುಗಳೆಲ್ಲ ಓಡಿ ಬರುತ್ತಿದ್ದವಂತೆ. ಹಟ್ಟಿಯ ದನಕರುಗಳು ಹಾಡಿಗೆ  ಕಿವಿಯನ್ನು ಎತ್ತರಿಸಿ,ಕಿವಿಗೊಟ್ಟು ಕೇಳುತ್ತವೆ. ಸಣ್ಣ ಮಗು ತಾಯಿಯ, ಮನೆಯವರ ಲಾಲಿ ಹಾಡಿಗೆ ನಿದ್ದೆಗೆ ಜಾರುತ್ತದೆ. ಅತ್ತಾಗ ಸಮಾಧಾನ ಪಡಿಸಲು ಹಾಡುಗಳನ್ನು ಹಾಕಿದರೆ ಮೌನವಾಗುವುದಿದೆ.

ಮನಸ್ಸಿನ ಬೇನೆ-ಬೇಸರಿಕೆ ಕಳೆಯಲು, ಶಾರೀರಿಕವಾಗಿ ಬಳಲಿದಾಗ ಸಂಗೀತ ಆಲಿಸುವುದು ಪರಿಣಾಮ ಕೊಡುತ್ತದೆ.ಸಂಗೀತ ಎನ್ನುವುದು ಕರ್ಣಾನಂದ, ಅಪ್ಯಾಯಮಾನ. ಸಂಗೀತದ ಕಾರ್ಯಕ್ರಮವನ್ನು ಫ್ರಾನ್ಸ್ ದೇಶದಲ್ಲಿ ಅಮೇರಿಕನ್ ಹಾಡುಗಾರನಾದ 'ಜೋಯೆಲ್ ಕೊಹೆನ್' ಎನ್ನುವ ಸಂಗೀತಗಾರನೊಬ್ಬ ಇಡೀ ರಾತ್ರಿ ಹಾಡುವುದರ ಮೂಲಕ ‘ವಿಶ್ವ ಸಂಗೀತ’ ಕ್ಕೆ ನಾಂದಿಯಾಯಿತೆಂದು ತಿಳಿದು ಬರುತ್ತದೆ. ಸಾಂಪ್ರದಾಯಿಕ, ಪಾಶ್ಚಿಮಾತ್ಯ ಸಂಗೀತವಿದೆ. ಅನಾದಿಕಾಲದಿಂದಲೂ ಸಂಗೀತಕ್ಕೆ ಅದರದ್ದೇ ಆದ ಇತಿಹಾಸವಿದೆ. ಭಾರತ ದೇಶ ಸಂಗೀತದ ತವರೂರು ಎನ್ನಬಹುದು. ಭಕ್ತಿ ಭಾವದಿಂದ ಕೂಡಿದ ಸಂಗೀತವನ್ನು 'ಗಾಂಧರ್ವ ವೇದ',ಗಾಂಧರ್ವ ಸಂಗೀತವೆನ್ನಬಹುದು. ಭಗವದ್ಗೀತೆಯಲ್ಲಿ ವೇದಾನಾಂ ಸಾಮವೇದೋಸ್ಮಿ ಎಂದು ಒಂದೆಡೆ ಉಲ್ಲೇಖವಿದೆ. ಗಂಧರ್ವರ ವಿದ್ಯೆ, ಅವರು ಪ್ರಸಿದ್ಧರೆಂದೂ, ಅವರಿಗೆ ಒಲಿದ ವಿದ್ಯೆಯೆಂದೂ ಪ್ರತೀತಿ. ಗಾಂಧರ್ವ ಗಾನಕ್ಕೆ ಸಾಮವೇದವೇ ಮೂಲವಂತೆ. ಧಾರ್ಮಿಕಕ್ಕೆ ಸಂಬಂಧಿಸಿದ ದೇವರ ನಾಮಗಳು, ಭಕ್ತಿಗೀತೆಗಳು, ಶ್ಲೋಕಗಳು ಇತ್ಯಾದಿ. ಶಾಸ್ತ್ರೀಯ ಸಂಗೀತ ದೈವೀಕವಾದದ್ದು. ಪರಶಿವನ ಡಮರುಗ, ಸರಸ್ವತಿಯ ವೀಣೆ, ನಾರದ ಮಹರ್ಷಿಗಳ ತಂಬೂರಿ, ಕೃಷ್ಣನ ಕೊಳಲು ಇದೆಲ್ಲ ಭಕ್ತಿಗೆ ಸಂಬಂಧಿಸಿದೆ.

ಸಂಗೀತವನ್ನು ಆಲಿಸುವುದರಿಂದ ರೋಗಶಮನವಾಗುವುದು. ಉತ್ತಮ ವ್ಯಕ್ತಿತ್ವ ನಿರ್ಮಾಣ, ವೇದಿಕೆಯ ಕಾರ್ಯಕ್ರಮಗಳಿಂದ ಹಿಂಜರಿಕೆ, ಕೀಳರಿಮೆ, ಸಂಕುಚಿತ ಮನೋಭಾವ ನಿವಾರಣೆ, ಧೈರ್ಯ ಮೂಡುವುದು. ಅಭಿವ್ಯಕ್ತಿಗೆ ಪ್ರೇರಕಶಕ್ತಿ. ಶಾಲೆಗಳಲ್ಲಿ ಭಾಷಾಪಠ್ಯ ಚಟುವಟಿಕೆಗಳಲ್ಲಿ ರಾಗವಾಗಿ, ಸ್ಪಷ್ಟವಾಗಿ ಶಿಕ್ಷಕರು ಹಾಡಿದಾಗ ಮಕ್ಕಳ ಮನಸ್ಸು ಅರಳುತ್ತದೆ, ಅರ್ಥೈಸಿಕೊಳ್ಳುವರು, ಅನುಕರಣೆ ಮಾಡುವರು. ಅದ್ಭುತ ಶಕ್ತಿ ಸಂಗೀತಕ್ಕಿದೆ.

ಅಂತರಾಷ್ಟ್ರೀಯ ಯೋಗ ದಿನದ (ಜೂನ್ ೨೧) ಜೊತೆಗೆ ವಿಶ್ವ ಸಂಗೀತ ದಿನ, ವಿಶ್ವ ಜಿರಾಫೆ ದಿನ, ವಿಶ್ವ ಮಾನವ ಸ್ನೇಹಿ ದಿನ ಎಲ್ಲವೂ ಬರುತ್ತದೆ. ಕರ್ನಾಟಕ ಮತ್ತು ಹಿಂದೂಸ್ತಾನಿ ಶೈಲಿ ಪ್ರಚಲಿತದಲ್ಲಿದೆ. ಅನೇಕ ಸಂಗೀತ ದಿಗ್ಗಜರ ಹಾಡುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಮನೆಯ ಮಕ್ಕಳಿಗೆ ‌ಸಾಧ್ಯವಾದಲ್ಲಿ ಸಂಗೀತ ಕಲಿಕೆ ಒಳ್ಳೆಯದು. ವಿಶ್ವದಲ್ಲಿ ಆಗಿಹೋದ,ಈಗಲೂ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಂಗೀತ ಕಲಿಸುವ ಗುರುವೃಂದದವರಿಗೂ ಹೃನ್ಮನ ನಮನಗಳು

(ಸಂಗ್ರಹ:ಹೇಳಿದ್ದು,ಕೇಳಿದ್ದು,ಓದಿದ್ದು)

-ರತ್ನಾ ಕೆ ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ