ವಿಶ್ವ ಸಂಗೀತ ಮತ್ತು ಜಲ ವಿಜ್ಞಾನ ದಿನ

ವಿಶ್ವ ಸಂಗೀತ ಮತ್ತು ಜಲ ವಿಜ್ಞಾನ ದಿನ

ನಿನ್ನೆ (ಜೂನ್ ೨೧) ಅಂತಾರಾಷ್ಟ್ರೀಯ ಯೋಗ ದಿನ ಅದ್ದೂರಿಯಾಗಿ ವಿಶ್ವದೆಲ್ಲೆಡೆ ಜರುಗಿತು. ಈ ದಿನ ಇನ್ನೂ ಎರಡು ವಿಶೇಷತೆಗಳನ್ನು ಹೊಂದಿದ ದಿನವಾಗಿದೆ. ಜೂನ್ ೨೧ನ್ನು ವಿಶ್ವ ಸಂಗೀತ ದಿನ ಮತ್ತು ಜಲ ವಿಜ್ಞಾನ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಈ ಬಗ್ಗೆ ಕೊಂಚ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.

ವಿಶ್ವ ಸಂಗೀತ ದಿನ (World Music Day): ಇಂದು ಜಗತ್ತೆಲ್ಲಾ ಸಂಗೀತ ಮಯ. ಏಕೆಂದರೆ ಇಂದು ವಿಶ್ವ ಸಂಗೀತ ದಿನ. ಮನಸನ್ನು ಹಚ್ಚ ಹಸಿರಾಗಿಸಲು, ಭಾವನೆಗಳಿಗೆ ಉಲ್ಲಾಸ ತುಂಬಲು ಸಂಗೀತ ಬೇಕೆ ಬೇಕು. ಎಲ್ಲ ವರ್ಗ, ವಯೋಮಾನದವರನ್ನೂ ವಿಭಿನ್ನ ಮನೋಭಾವದವರನ್ನು ಸೆಳೆಯುತ್ತೆ ಈ ಸಂಗೀತ.

ಸಂಗೀತ ಕ್ಷೇತ್ರಕ್ಕೆ ದೊಡ್ಡ ಉಡುಗೊರೆಗಾಗಿರುವ ಸಂಗೀತಗಾರರು ಮತ್ತು ಗಾಯಕರನ್ನು ಗೌರವಿಸಲು ಪ್ರತಿವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಸಂಗೀತವಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಸಂಗೀತವನ್ನು ಇಷ್ಟಪಡದವರೇ ಇಲ್ಲ. ಈ ಕಲೆಯ ಶಕ್ತಿಯನ್ನು ಅರಿಯಲೇ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ.

ಸಂಗೀತ ದಿನದ ಇತಿಹಾಸ:ವಿಶ್ವ ಸಂಗೀತ ದಿನವನ್ನು ಮೊದಲ ಬಾರಿಗೆ 1982 ರಲ್ಲಿ ಫ್ರಾನ್ಸ್‌ನಲ್ಲಿ ಆಚರಿಸಲಾಯಿತು. ಆಗಿನ ಫ್ರೆಂಚ್ ಕಲೆ ಮತ್ತು ಸಂಸ್ಕೃತಿ ಸಚಿವರಾಗಿದ್ದ ಜ್ಯಾಕ್ ಲ್ಯಾಂಗ್ ಮತ್ತು ಮಾರಿಸ್ ಫ್ಲೆರೆಟ್ ಅವರು ಪ್ಯಾರಿಸ್ನಲ್ಲಿ ಫೆಟೆ ಡೆ ಲಾ ಮ್ಯೂಸಿಕ್ ಅನ್ನು ಪ್ರಾರಂಭಿಸಿದರು. ಸಂಗೀತವನ್ನು ಆಚರಿಸಲು ಪ್ರತ್ಯೇಕ ಒಂದು ದಿನವನ್ನು ಪ್ರಾರಂಭಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮಾರಿಸ್ ಫ್ಲೆರೆಟ್, ಫ್ರೆಂಚ್ ಸಂಯೋಜಕ, ಸಂಗೀತ ಪತ್ರಕರ್ತ ಮತ್ತು ರೇಡಿಯೋ ನಿರ್ಮಾಪಕರಾಗಿದ್ದಾರೆ. ಅಂದಿನಿಂದ, ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿ ಸಂಗೀತವು ಬಹಳ ಜನಪ್ರಿಯವಾಗಿದೆ. ಹಾಗೂ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಸಂಗೀತ ದಿನದ ಮಹತ್ವ: ಎಲ್ಲಾ ಸಂಗೀತ ಪ್ರಿಯರಿಗೆ ಉಚಿತ ಸಂಗೀತ ಕೂಟವನ್ನು ಉಣ್ಣಬಡಿಸುವ ಮತ್ತು ಹವ್ಯಾಸಿ, ವೃತ್ತಿಪರ ಸಂಗೀತಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ವೇದಿಕೆಯನ್ನು ಒದಗಿಸಲು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಸಂಗೀತದ ಮಹತ್ವವನ್ನು ಮತ್ತು ಅದು ಮಾನವನ ಮನಸ್ಸು ಮತ್ತು ದೇಹಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಈ ದಿನ ಎತ್ತಿ ತೋರಿಸಲಾಗುತ್ತದೆ.

ಅನೇಕ ಅಧ್ಯಯನಗಳು ಮತ್ತು ತಜ್ಞರು ಹೇಳುವ ಪ್ರಕಾರ ಸಂಗೀತವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ನಿದ್ರೆಯನ್ನು ನೀಡುತ್ತದೆ ಮತ್ತು ನಮ್ಮ ಮನಸ್ಸಿಗೆ ಶಾಂತಿ, ಉಲ್ಲಾಸ ನೀಡಿ ಮುಂದೆ ಸಾಗಲು ಸಹಾಯ ಮಾಡುತ್ತದೆ. ಇನ್ನು ಸಂಗೀತ ಚಿಕಿತ್ಸೆಯು ಮಾನಸಿಕ ಸಮಸ್ಯೆಗಳೊಂದಿಗೆ ಹೋರಾಡುವ ಜನರಿಗೆ ಅದ್ಭುತಗಳನ್ನು ಮಾಡಿದೆ. ಹಿತವಾದ ಸಂಗೀತ ಜನರಿಗೆ ಮೂಡ್ ಫ್ರೇಶ್ ಮಾಡುತ್ತೆ. ಇದರಿಂದ ತಮ್ಮ ಉದ್ಯೋಗಗಳತ್ತ ಗಮನ ಹರಿಸಲು ಮತ್ತು ಉತ್ತಮ ಪ್ರದರ್ಶನ ನೀಡಲು ಸಹಾಯಕವಾಗಿದೆ.

***

ವಿಶ್ವ ಜಲವಿಜ್ಞಾನ ದಿನ (World Hydrography Day): ಜೂನ್ 21 ರಂದು ವಿಶ್ವ ಜಲ ವಿಜ್ಞಾನ ದಿನ ಆಚರಿಸಲಾಗುತ್ತದೆ. ಈ ದಿನವನ್ನು ಅಂತರರಾಷ್ಟ್ರೀಯ ಹೈಡ್ರೋಗ್ರಾಫಿಕ್ ಸಂಸ್ಥೆ (ಐಎಚ್‌ಒ) ವಾರ್ಷಿಕ ಆಚರಣೆಯಾಗಿ ಹೈಡ್ರೋಗ್ರಾಫರ್‌ಗಳ ಕೆಲಸ ಮತ್ತು ಹೈಡ್ರೋಗ್ರಫಿಯ ಮಹತ್ವವನ್ನು ಪ್ರಚಾರ ಮಾಡಲು ಅಂಗೀಕರಿಸಿತು. ಇದು ಸುರಕ್ಷಿತ ಸಂಚರಣೆ ಮತ್ತು ಸಮುದ್ರ ಜೀವ ರಕ್ಷಣೆಯ ಬಗ್ಗೆ ಅರಿವು ಹೆಚ್ಚಿಸುತ್ತದೆ.

ಈ ದಿನವನ್ನು ಯಾರು ಪ್ರಾರಂಭಿಸಿದರು?:  ಮೊನಾಕೊ ಮೂಲದ ಅಂತರರಾಷ್ಟ್ರೀಯ ಹೈಡ್ರೋಗ್ರಾಫಿಕ್ ಸಂಸ್ಥೆ (ಐಎಚ್‌ಒ) ಯ ಉಪಕ್ರಮದ ಮೇಲೆ ವಿಶ್ವ ಜಲವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.

ಅಂತರರಾಷ್ಟ್ರೀಯ ಹೈಡ್ರೋಗ್ರಾಫಿಕ್ ಸಂಸ್ಥೆ (ಐಎಚ್‌ಒ) ಎಂದರೇನು ?:  ಇಂಟರ್ನ್ಯಾಷನಲ್ ಹೈಡ್ರೋಗ್ರಾಫಿಕ್ ಆರ್ಗನೈಸೇಶನ್ (ಐಹೆಚ್ಒ) 1921 ರಲ್ಲಿ ಸ್ಥಾಪನೆಯಾದ ಇಂಟರ್ನ್ಯಾಷನಲ್ ಹೈಡ್ರೋಗ್ರಾಫಿಕ್ ಬ್ಯೂರೋ (IHB) ಆಗಿದೆ. ಸುರಕ್ಷಿತ ನ್ಯಾವಿಗೇಷನ್, ತಾಂತ್ರಿಕ ಮಾನದಂಡಗಳು ಮತ್ತು ರಕ್ಷಣೆ ಮುಂತಾದ ವಿಷಯಗಳ ಬಗ್ಗೆ ಸರ್ಕಾರಗಳ ನಡುವೆ ಸಮಾಲೋಚನೆ ನಡೆಸಲು ಯಾಂತ್ರಿಕ ವ್ಯವಸ್ಥೆಯನ್ನು ಒದಗಿಸಲು IHB (1970 ರಲ್ಲಿ ಐಹೆಚ್ಒ ಎಂದು ಮರುನಾಮಕರಣ ಮಾಡಲಾಯಿತು) ಸ್ಥಾಪಿಸಲಾಯಿತು.

ವಿಶ್ವ ಜಲವಿಜ್ಞಾನ ದಿನದ ಇತಿಹಾಸ 2005 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಪ್ರತಿ 21 ಜೂನ್‌ನಲ್ಲಿ ವಿಶ್ವ ಜಲವಿಜ್ಞಾನ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. ಈ ದಿನದ ಬಗ್ಗೆ ಜಾಗತಿಕ ಆಚರಣೆಗಳು 2006 ರಲ್ಲಿ ಪ್ರಾರಂಭವಾದವು. ಪ್ರತಿಯೊಬ್ಬರ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಹೈಡ್ರೋಗ್ರಫಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅವಕಾಶವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

***

ಮಾಹಿತಿ ಸಂಗ್ರಹ ಮತ್ತು ಬರಹ: ಅರುಣ್ ಡಿ'ಸೋಜ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ