ವಿಷಕಾರಿ ಕೆಂಪಿರುವೆ ದಾಳಿ ಮತ್ತು ದನಗಳ ಗಡ್ಡೆಚರ್ಮ ರೋಗ
ಒರಿಸ್ಸಾದ ಚಂದ್ರದೀಪುರ್ ಪಂಚಾಯತ್‌ನ ಬ್ರಾಹ್ಮಣ್‌ಸಾಹಿ ಗ್ರಾಮದಲ್ಲಿ ಇತ್ತೀಚೆಗೆ ನೆರೆಬಂದು ಇಳಿಯುತ್ತಿದ್ದಂತೆ, ಲಕ್ಷಗಟ್ಟಲೆ ವಿಷಕಾರಿ ಕೆಂಪಿರುವೆಗಳು ದಾಳಿ ಮಾಡಿವೆ. ಅಲ್ಲಿನ ಮನೆಗಳಲ್ಲಿ, ರಸ್ತೆಗಳಲ್ಲಿ, ಮರಗಳಲ್ಲಿ, ಹೊಲಗಳಲ್ಲಿ ಎಲ್ಲಿ ಕಂಡರಲ್ಲಿ ವಿಷಕಾರಿ ಕೆಂಪಿರುವೆಗಳೇ ತುಂಬಿವೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಅವು ಕಚ್ಚಿದರೆ ಚರ್ಮ ಬಾತು ತುರಿಕೆ, ಉರಿ. ಇದನ್ನು ಸಹಿಸಲಾಗದೆ, ೧೦೦ ಮನೆಗಳಿರುವ ಆ ಹಳ್ಳಿಯಲ್ಲಿ ಹಲವರು ಈಗಾಗಲೇ ಮನೆ ತೊರೆದಿದ್ದಾರೆ. ಪಕ್ಕದ ಹಳ್ಳಿಗಳ ಬಂಧುಗಳ ಮನೆಗೆ ಹೋಗಿ ವಾಸ ಮಾಡತೊಡಗಿದ್ದಾರೆ.
ಹಳ್ಳಿಗರು ಸಾಕಿದ ಬೆಕ್ಕುನಾಯಿಗಳನ್ನು, ಮನೆಗಳಲ್ಲಿರುವ ಹಲ್ಲಿಗಳನ್ನು ಕೂಡ ಕೆಂಪಿರುವೆಗಳು ಬಿಟ್ಟಿಲ್ಲ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ, ಹಳ್ಳಿಗರು ತಾವು ಕುಳಿತುಕೊಳ್ಳುವಾಗ, ಮಲಗುವಾಗ ಕೀಟನಾಶಕ ಪುಡಿಯಿಂದ ವೃತ್ತ ಬಿಡಿಸಿ, ಅದರೊಳಗೆ ಇರಬೇಕಾಗಿದೆ.
ತನ್ನ ಜೀವಮಾನದಲ್ಲೇ ಇಂತಹ ಇರುವೆ ದಾಳಿ ಕಂಡಿಲ್ಲ ಎನ್ನುತ್ತಾರೆ ಆ ಹಳ್ಳಿಯ ಲೋಕನಾಥ ಡ್ಯಾಶ್. “ಕೆಂಪಿರುವೆಗಳಿಂದಾಗಿ ನಮ್ಮ ಬದುಕೇ ಹೈರಾಣಾಗಿದೆ. ನಾವು ಸರಿಯಾಗಿ ಕೂರುವಂತಿಲ್ಲ, ತಿನ್ನುವಂತಿಲ್ಲ, ಮಲಗುವಂತಿಲ್ಲ. ಮಕ್ಕಳು ಓದುವಂತಿಲ್ಲ" ಎನ್ನುತ್ತಾರೆ ರೇಣುಬಾಲಾ ಡ್ಯಾಶ್. ಅವರೀಗ ಇರುವೆಗಳ ಕಾಟದಿಂದ ಪಾರಾಗಲಿಕ್ಕಾಗಿ ತನ್ನ ಬಂಧುವಿನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
ಆ ಹಳ್ಳಿಯ ಗಡಿಯಲ್ಲಿ ನದಿಯೊಂದು ಹರಿಯುತ್ತಿದೆ. ಅದಲ್ಲದೆ, ಹಳ್ಳಿ ಕುರುಚಲು ಗಿಡಗಳಿಂದ ಆವೃತವಾಗಿದೆ. ಹಳ್ಳಿಗೆ ಭೇಟಿ ಇತ್ತಿರುವ ಒರಿಸ್ಸಾ ಕೃಷಿ ಮತ್ತು ತಂತ್ರಜ್ನಾನ ವಿಶ್ವವಿದ್ಯಾಲಯದ ಹಿರಿಯ ವಿಜ್ನಾನಿ ಸಂಜಯ ಮೊಹಾಂತೆ ಹೀಗೆನ್ನುತ್ತಾರೆ, “ನದಿದಡದಲ್ಲಿ, ಕುರುಚಲು ಗಿಡಗಳಲ್ಲಿ ವಾಸವಾಗಿದ್ದ ಕೆಂಪಿರುವೆಗಳ ವಾಸಸ್ಥಾನಗಳು ನೆರೆ ನೀರಿನಲ್ಲಿ ಮುಳುಗಿದ ಕಾರಣ ಅವು ಹಳ್ಳಿಗೆ ದಾಳಿಯಿಟ್ಟಿವೆ.” ರಾಣಿ ಇರುವೆಗಳನ್ನು ಪತ್ತೆ ಮಾಡಿ ಅವನ್ನು ಕೊಲ್ಲುವುದೇ ಕೆಂಪಿರುವೆಗಳ ನಿಯಂತ್ರಣಕ್ಕೆ ಪರಿಣಾಮಕಾರಿ ವಿಧಾನ ಎನ್ನುತ್ತಾರೆ ಅವರು.
2013ರಲ್ಲಿ ಬಿರುಗಾಳಿ ಫಾಯಿಲಿನ್ ಒರಿಸ್ಸಾ ತೀರಕ್ಕೆ ಅಪ್ಪಳಿಸಿದ ನಂತರ ಸದಾರ್ ತಾಲೂಕಿನ ದಂಡಾ ಗ್ರಾಮದಲ್ಲಿಯೂ ಇಂತಹದೇ ವಿದ್ಯಮಾನ ವರದಿಯಾಗಿತ್ತು. ಇದೀಗ, 20 ಸಪ್ಟಂಬರ 2022ರ ಪತ್ರಿಕಾ ವರದಿಯ ಅನುಸಾರ, ಆಂಧ್ರಪ್ರದೇಶದ ಶ್ರೀಕಾಕುಲಮ್ ಜಿಲ್ಲೆಯ ಅಮುದಾಲವಲಸ ಮಂಡಲದ ಎರಡು ಹಳ್ಳಿಗಳಲ್ಲಿಯೂ ಇದೇ ರೀತಿ ಕೆಂಪಿರುವೆಗಳ ಸಂಖ್ಯಾಸ್ಪೋಟವಾಗಿದೆ. ತೊಗರಮ್ ಗ್ರಾಮಪಂಚಾಯತಿನ ಇಸಾಕಲಪೇಟದ ವಾಸಿಗಳು ಕೆಂಪಿರುವೆಗಳ ದಾಳಿಯಿಂದಾಗಿ ಕಂಗಾಲಾಗಿದ್ದಾರೆ. ಈ ಸಣ್ಣ ಕೆಂಪಿರುವೆಗಳ ಉದ್ದ 3 - 4 ಮಿಮೀ. ಹಳ್ಳಿಯ ಜನವಸತಿ ಪ್ರದೇಶದಲ್ಲಿ ಇವು ತುಂಬಿಕೊಂಡಿವೆ.
ಈ ಕೆಂಪಿರುವೆಗಳು ಕಚ್ಚುವುದಿಲ್ಲ. ಆದರೆ, ಮನುಷ್ಯರ ಕಾಲು ಅಥವಾ ದೇಹದ ಮೇಲೆ ಹತ್ತಿದಾಗ, ಇವು ರಾಸಾಯನಿಕವೊಂದನ್ನು ಸ್ರವಿಸುತ್ತವೆ. ಇದಾಗಿ ಹತ್ತು ನಿಮಿಷಗಳೊಳಗೆ ವ್ಯಕ್ತಿಯ ದೇಹದಲ್ಲಿ ಬೊಬ್ಬೆಗಳು ಮೂಡುತ್ತವೆ. ಇದರಿಂದಾಗಿ ತಡೆಯಲಾಗದ ಉರಿ. ಕೆಲವರು ಖಾಸಗಿ ವೈದ್ಯರಿಂದ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಇದಕ್ಕೆ ಚಿಕಿತ್ಸೆ ಪಡೆಯಬೇಕಾಯಿತು.
ದನಗಳ ಗಡ್ಡೆಚರ್ಮ ರೋಗ
ಇನ್ನೊಂದು ಆತಂಕಕಾರಿ ವಿದ್ಯಮಾನ: ದನಗಳ ಗಡ್ಡೆಚರ್ಮ ರೋಗ (ಲಂಪಿ ಸ್ಕಿನ್ ಡಿಸೀಸ್). “ಈಗಾಗಲೇ 57,000 ದನಗಳು ಗಡ್ಡೆಚರ್ಮ ರೋಗದಿಂದ ಸತ್ತಿರುವ ಕಾರಣ ದನಗಳಿಗೆ ಲಸಿಕೆ ಹಾಕುವ ಕಾರ್ಯ ಚುರುಕಾಗಿಸಬೇಕು” ಎಂದು ಕೇಂದ್ರ ಸರಕಾರವು ಇತ್ತೀಚೆಗೆ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.
ಯಾಕೆಂದರೆ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಈ ಅಪಾಯಕಾರಿ ರೋಗ ದನಗಳಲ್ಲಿ ವೇಗವಾಗಿ ಹರಡುತ್ತಿದೆ. ಸೊಳ್ಳೆ, ನೊಣ, ಹೇನು ಮತ್ತು ಕಣಜದ ಹುಳಗಳ ಮೂಲಕ ನೇರ ಸಂಪರ್ಕದಿಂದ ಹಾಗೂ ಸೋಂಕು ತಗಲಿದ ಆಹಾರ ಮತ್ತು ನೀರಿನ ಮೂಲಕ ಈ ರೋಗ ಪಸರಿಸುತ್ತಿದೆ.
ಈಗಾಗಲೇ ಸತ್ತಿರುವ ದನಗಳಲ್ಲಿ ರಾಜಸ್ಥಾನ ರಾಜ್ಯವೊಂದರಲ್ಲೇ ಸಾವಿಗೀಡಾದ ದನಗಳ ಸಂಖ್ಯೆ 37,000. ಇದನ್ನು ನಿಯಂತ್ರಿಸದಿದ್ದರೆ, ದೇಶದಲ್ಲಿ ಹಾಲಿನ ಕೊರತೆ ಉಂಟಾಗುವ ಅಪಾಯವಿದೆ. ಯಾಕೆಂದರೆ, ದೇಶದ ಒಟ್ಟು ಹಾಲಿನ ಉತ್ಪಾದನೆಯಲ್ಲಿ ಶೇಕಡಾ 18ರಷ್ಟು ಉತ್ತರಪ್ರದೇಶದ ಕೊಡುಗೆ. ಅಲ್ಲಿ ರೋಗ ನಿಯಂತ್ರಣ ಆಗದಿದ್ದರೆ, ಹಾಲಿನ ಉತ್ಪಾದನೆ ಕುಸಿಯುವುದು ಖಂಡಿತ.
ಮತ್ತೆಮತ್ತೆ ಪ್ರಕೃತಿಯ ಎಚ್ಚರಿಕೆ
ಅಂತೂ, ಪ್ರಕೃತಿಯ ಮೇಲೆ ಮನುಷ್ಯನ ದಾಳಿ ಅತಿರೇಕವಾಗಿದೆ. ಅದಕ್ಕಾಗಿ, ಹವಾಮಾನ ವೈಪರೀತ್ಯಗಳ ಮೂಲಕ ಮತ್ತು ಇಂತಹ ಪ್ರಾಕೃತಿಕ ವಿದ್ಯಮಾನಗಳ ಮೂಲಕ ಪ್ರಕೃತಿ ಮನುಷ್ಯನನ್ನು ಮತ್ತೆಮತ್ತೆ ಎಚ್ಚರಿಸುತ್ತಲೇ ಇದೆ. ಕೊರೋನಾ ವೈರಸ್ (ಕೋವಿಡ್ 19) ಸ್ಫೋಟದ ಮೂಲಕ 2020ರಿಂದೀಚೆಗೆ ಮನುಷ್ಯನಿಗೆ ಪ್ರಕೃತಿ ನೀಡಿರುವುದು ತೀವ್ರ ಎಚ್ಚರಿಕೆ! ಆದರೆ, ತನಗೆ ಯಾರೂ ಎದುರಿಲ್ಲ ಎಂಬಂತೆ ಮಾನವ ವರ್ತಿಸುತ್ತಿದ್ದಾನೆ. ಇನ್ನಾದರೂ ತನ್ನ ತಪ್ಪನ್ನು ತಿದ್ದಿಕೊಂಡು, ಎಲ್ಲ ಜೀವ ಸಂಕುಲವನ್ನೂ ಸಂರಕ್ಷಿಸಿ, ಪಾಕೃತಿಕ ಸಮತೋಲನ ಕಾಯ್ದುಕೊಂಡರೆ ಮಾತ್ರ ಮಾನವ ಕುಲಕ್ಕೆ ಉಳಿಗಾಲ, ಅಲ್ಲವೇ?
ಫೋಟೋ 1: ಕೆಂಪಿರುವೆಗಳು … ಕೃಪೆ: ಡ್ರೀಮ್ಸ್ ಟೈಮ್.ಕೋಮ್
ಫೋಟೋ 2: ಗಡ್ಡೆಚರ್ಮ ರೋಗ ಪೀಡಿತ ದನ … ಕೃಪೆ: ಟೈಮ್ಸ್ ಆಫ್ ಇಂಡಿಯಾ.ಕೋಮ್