ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ

ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ

ಪುಸ್ತಕದ ಲೇಖಕ/ಕವಿಯ ಹೆಸರು
ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು
ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು. ಮೊ: ೯೪೪೮೮೩೫೬೦೬
ಪುಸ್ತಕದ ಬೆಲೆ
ರೂ. ೧೫.೦೦, ಮುದ್ರಣ: ೨೦೨೨

ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು ಇವರ ‘ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ' ಮಾಲಿಕೆಯ ಎರಡನೇ ಪುಸ್ತಕವೇ ‘ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ'. ಇದನ್ನು ಬರೆದಿದ್ದಾರೆ ಅಡ್ಡೂರು ಕೃಷ್ಣ ರಾವ್ ಇವರು. ಇವರು ನಿವೃತ್ತ ಬ್ಯಾಂಕ್ ಅಧಿಕಾರಿ, ಬಳಕೆದಾರರ ವೇದಿಕೆಯ ಸಂಚಾಲಕರು, ಸಾವಯಕ ಕೃಷಿಕ ಗ್ರಾಹಕ ಬಳಗದ ಗೌರವ ಅಧ್ಯಕ್ಷರು ಹಾಗೂ ಸ್ವತಃ ಕೃಷಿಕರು. ವಿಷಮುಕ್ತ ಆಹಾರವನ್ನು ನಾವು ನಮ್ಮ ದಿನಬಳಕೆಯಲ್ಲಿ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಈ ಪುಟ್ಟ ಪುಸ್ತಕದಲ್ಲಿ ಬಹಳ ಸೊಗಸಾಗಿ ಬರೆದಿದ್ದಾರೆ. ಈ ವಿಷಯದಲ್ಲಿ ಬರೆಯಲು ಪುಟಗಟ್ಟಲೆ ವಿಷಯಗಳಿದ್ದರೂ, ಓದುಗರಿಗೆ ಸುಲಭದಲ್ಲಿ ಓದುವಂತಾಗಲು ಮತ್ತು ಲಭ್ಯವಾಗಲು ಈ ಪುಟ್ಟ ಪುಸ್ತಕವನ್ನು ಬಳಗದವರು ಹೊರತಂದಿದ್ದಾರೆ.

ಬಳಗದ ಅಧ್ಯಕ್ಷರಾದ ಜಿ ಆರ್ ಪ್ರಸಾದ್ ಇವರು ತಮ್ಮ 'ಮೊದಲ ಮಾತು' ಬರಹದಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾದದ್ದು “ನಮ್ಮ ಆರೋಗ್ಯದ ಗುಟ್ಟು ಮುಖ್ಯವಾಗಿ ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆ. ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೆ ನಮ್ಮ ಆಹಾರದಿಂದಾಗುವ ಸಾತ್ವಿಕ ಮತ್ತು ತಾಮಸಿಕ ಆಹಾರ ಎಂದು ವಿಂಗಡಿಸಿ ಉಪಯೋಗಿಸುತ್ತಿದ್ದುದು ನಾವು ಓದಿದ ವಿಚಾರ. ಇದು ಆಗಿನ ಕಾಲದಲ್ಲಿ  ನೈಸರ್ಗಿಕವಾಗಿ ಆಹಾರದ ಬೆಳೆಗಳನ್ನು ಬೆಳೆದು, ಫಸಲನ್ನು ಆಹಾರವನ್ನಾಗಿ ಸೇವಿಸುತ್ತಿದ್ದುದನ್ನು ಸೂಚಿಸುತ್ತದೆ.

ಕ್ರಮೇಣ ನಾವು ನೈಸರ್ಗಿಕ ಕೃಷಿಯನ್ನು ಕಡೆಗಣಿಸಿ, ಸಾವಯವ ಒಳಸುರಿಗಳನ್ನು ಕೈಬಿಟ್ಟಿದ್ದೇವೆ. ಕೇವಲ ಲಾಭದ ದೃಷ್ಟಿಯಿಂದ, ಹೆಚ್ಚೆಚ್ಚು ಇಳುವರಿ ಪಡೆಯಲಿಕ್ಕಾಗಿ ರಾಸಾಯನಿಕ ಗೊಬ್ಬರಗಳು, ವಿಷಪೂರಿತ ಕ್ರಿಮಿನಾಶಕ ಮತ್ತು ಇವೆರಡಕ್ಕೆ ಮಾತ್ರ ಉತ್ತಮವಾಗಿ ಸ್ಪಂದಿಸುವ ಹೈಬ್ರಿಡ್ ತಳಿಗಳನ್ನೇ ಬಳಕೆ ಮಾಡಿದ ಪರಿಣಾಮವಾಗಿ ನಮ್ಮ ಊಟದ ತಟ್ಟೆ ಇದೀಗ ಅಕ್ಷರಶಃ ವಿಷಯುಕ್ತವಾಗಿದೆ. 

ಈ ಹಿನ್ನಲೆಯಲ್ಲಿ ಮಂಗಳೂರಿನ ‘ಸಾವಯವ ಕೃಷಿಕ ಗ್ರಾಹಕ ಬಳಗ' ಕಳೆದ ಏಳು ವರುಷಗಳಿಂದ ಜನರ ಆರೋಗ್ಯ ಹದಗೆಡುತ್ತಿರುವ ವಾಸ್ತವದ ಬಗ್ಗೆ ಜನಸಮುದಾಯದಲ್ಲಿ ಅರಿವು ಮೂಡಿಸುತ್ತಾ ಬಂದಿದೆ. ಜೊತೆಗೆ ಸಾವಯವ ಕೃಷಿಕರನ್ನು ಮತ್ತು ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿಸಿ, ಸಾವಯವ ಕೃಷಿ ಉತ್ಪನ್ನಗಳ ಕೂಡುಕೊಳ್ಳುವಿಕೆಗೆ ಪ್ರೋತ್ಸಾಹ ನೀಡುತ್ತಿದೆ.”

ವಿಷಮುಕ್ತ ಆಹಾರಕ್ಕೆ ಅಗತ್ಯವಾಗಿ ಬೇಕಾದ ತಿನ್ನುವ ಅರಿವನ್ನು ಮೂಡಿಸಲು ಲೇಖಕರಾದ ಅಡ್ಡೂರು ಕೃಷ್ಣ ರಾವ್ ಈ ಪುಸ್ತಕದಲ್ಲಿ ಪ್ರಯತ್ನ ಪಟ್ಟಿದ್ದಾರೆ ಮತ್ತು ಬಹಳಷ್ಟು ಯಶಸ್ವಿಯೂ ಆಗಿದ್ದಾರೆ. ಅವರು ತಮ್ಮ ಬರಹಗಳಿಗೆ ಪುರಾವೆಯನ್ನು ಕೇಳುವವರಿಗೂ ಮಾಹಿತಿ ನೀಡಿದ್ದಾರೆ. ತಮ್ಮ ಲೇಖನವನ್ನು ೫ ಭಾಗಗಳಲ್ಲಿ ವಿಂಗಡಿಸಿದ್ದಾರೆ.

ಮೊದಲ ಭಾಗದಲ್ಲಿ ‘ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ' ಅಧ್ಯಾಯದಲ್ಲಿ ಕೊರೋನಾದ ಸಮಸ್ಯೆಯಿಂದ ಭಾರತದಲ್ಲಿ ಮೃತಪಟ್ಟವರ ಬಗ್ಗೆ, ಜನಜಾಗೃತಿಯ ಕೊರತೆ, ಆಹಾರದಲ್ಲಿ ವಿಷವಿದೆ ಎಂಬುವುದಕ್ಕೆ ಪುರಾವೆಗಳನ್ನು ನೀಡಿದ್ದಾರೆ. ಅಧ್ಯಾಯ ಎರಡರಲ್ಲಿ ನಮ್ಮ ದಿನನಿತ್ಯದ ಆಹಾರ ಹೇಗಿರಬೇಕು? ಎಂಬ ವಿಷಯ ತಿಳಿಸಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ ಏನು ಮಾಡಬೇಕು ಎಂದು ಸೊಗಸಾದ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಬೆಳಗ್ಗೆಯ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಉಪಹಾರ ಮತ್ತು ರಾತ್ರಿಯ ಊಟದ ಬಗ್ಗೆ ಸವಿವರವಾದ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಆಹಾರ ರಕ್ಷಣೆಗಾಗಿ ಆಹಾರ ಸೇವನೆಯ ನಿಯಮಗಳನ್ನೂ ನೀಡಿದ್ದಾರೆ.

ಮೂರನೇ ಅಧ್ಯಾಯದಲ್ಲಿ ಮಾರಕ ಕ್ಯಾನ್ಸರ್ ರೋಗದ ವಿಷಯವಾಗಿ ‘ಆರೋಗ್ಯ ಪೂರ್ಣ ಬದುಕಿಗಾಗಿ ಕ್ಯಾನ್ಸರ್ ಬಗ್ಗೆ ಕಟ್ಟೆಚ್ಚರ’ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ಗೆ ಕಾರಣವಾಗುವ ರಾಸಾಯನಿಕ ವಸ್ತುಗಳು, ಬ್ರಾಯ್ಲರ್ ಕೋಳಿಯ ಮಾಂಸ, ಎಣ್ಣೆಯಲ್ಲಿ ಕರಿದ ತಿಂಡಿತಿನಸುಗಳು, ಆಪತ್ತಿಗೆ ಆಹ್ವಾನ ನೀಡುವ ಸಕ್ಕರೆ, ನೋಡಲು ಆಕರ್ಷಕವಾಗಿ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಮೈದಾ, ಈಗಿನ ಕಾಲದ ಮಹಾಮಾರಿ ಪ್ಲಾಸ್ಟಿಕ್ ಮತ್ತು ಆಹಾರದಲ್ಲಿ ಕೃಷಿಯ ವಿಷರಾಸಾಯನಿಕಗಳ ಉಳಿಕೆಯಿಂದ ಕ್ಯಾನ್ಸರ್ ಹೆಚ್ಚಳ ಬಗ್ಗೆ ಸವಿವರವಾದ ಮಾಹಿತಿಯಿದೆ. 

ನಾಲ್ಕನೇ ಅಧ್ಯಾಯದಲ್ಲಿ ಇದರಿಂದ (ರೋಗ, ವಿಷ) ಪಾರಾಗಲು ಜನಸಾಮಾನ್ಯರಾದ ನಾವು ಏನು ಮಾಡಬಹುದು? ಎಂಬ ಬಗ್ಗೆ ಉತ್ತಮ ಮಾಹಿತಿಗಳನ್ನು ಲೇಖಕರು ನೀಡಿದ್ದಾರೆ. ಮತ್ತೆ ಕೊನೆಯ ಐದನೇ ಅಧ್ಯಾಯದಲ್ಲಿ ಆರೋಗ್ಯಪೂರ್ಣ ಜೀವನಕ್ಕಾಗಿ ೮ ಆಹಾರ ಸೂತ್ರಗಳನ್ನು ಕೊಟ್ಟಿದ್ದಾರೆ. ಈ ಎಂಟು ಸೂತ್ರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತಕ್ಕೂ ಆರೋಗ್ಯಕರವಾದ ಜೀವನ ನಿಮ್ಮದಾಗಲಿದೆ ಎಂದು ಲೇಖಕರು ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ೩೨ ಪುಟಗಳ ಈ ಪುಟ್ಟ ಪುಸ್ತಕವನ್ನು ಒಂದೇ ಗುಟುಕಿನಲ್ಲಿ ಓದಿ ಮುಗಿಸಿದರೂ ಇದರಲ್ಲಿರುವ ವಿಷಯಗಳು ಅಷ್ಟು ಬೇಗನೇ ನಮ್ಮ ಮನಸ್ಸಿನಲ್ಲಿ ಜೀರ್ಣವಾಗಲಾರವು. ಇದೊಂದು ಸಂಗ್ರಹ ಯೋಗ್ಯ ಪುಸ್ತಕ. ಮತ್ತೆ ಮತ್ತೆ ಓದಿ ವಿಷಯವನ್ನು ಮನನ ಮಾಡಿಕೊಂಡರೆ ವಿಷಮುಕ್ತ ಜೀವನ ನಿಮ್ಮದಾಗುತ್ತದೆ.

ಅಡ್ಡೂರು ಕೃಷ್ಣ ರಾವ್ ಸಂಪರ್ಕ: ೯೪೪೮೧೫೨೬೨೦