ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 2)

ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 2)

ಬೆಳೆಗಳಿಗೆ ಭಯಂಕರ ವಿಷ ಸುರಿಯುವ, ನಮ್ಮಕಣ್ಣು ತೆರೆಸಬೇಕಾದ ಪ್ರಕರಣಗಳು
ರೈತರು ಭತ್ತದ ಹೊಲಗಳಿಗೆ ಎಷ್ಟು ವಿಷ ರಾಸಾಯನಿಕ ಸುರಿಯುತ್ತಾರೆ ಎಂಬುದನ್ನು ೧೭ ಮಾರ್ಚ್ ೨೦೧೮ರ “ಪ್ರಜಾವಾಣಿ” ದಿನಪತ್ರಿಕೆಯಲ್ಲಿ ದಾಖಲಿಸಿರುವ ಒಂದು ವರದಿ: “ಎಣ್ಣಿ” ಉಣ್ಣುವ ಸಂಕಟದ ಕಥನ”. ಮಿತಿಮೀರಿದ ಪ್ರಮಾಣದಲ್ಲಿ ಕೀಟನಾಶಕಗಳ ಉಳಿಕೆ ಇರುವ ಕಾರಣಕ್ಕಾಗಿ ದಕ್ಷಿಣ ಭಾರತದಿಂದ ರಫ್ತಾದ ಅಕ್ಕಿಯನ್ನು ಯುರೋಪ್ ಒಕ್ಕೂಟ, ಇರಾನ್ ಮತ್ತು ಅಮೇರಿಕಾದ ಮಾರುಕಟ್ಟೆಗಳು ತಿರಸ್ಕರಿಸಿವೆ. ಹಸಿಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಕಾಳುಮೆಣಸು ಕೂಡ ಹಾಗೆಯೇ ತಿರಸ್ಕೃತವಾಗಿವೆ.
ಇದರ ಮೂಲ ಹುಡುಕಿಕೊಂಡು ಹೋದ ವರದಿಗಾರ ಶರತ್ ಹೆಗ್ಡೆ, ಕೊಪ್ಪಳ ತಾಲೂಕಿನ ಅಗಳಕೇರಾದ ರೈತ ಹನುಮಂತಪ್ಪನನ್ನು ಭೇಟಿಯಾಗುತ್ತಾರೆ. ಪ್ರತಿಯೊಂದು ರೋಗಕ್ಕೂ ಎಕರೆಗೆ ಒಂದು ಲೀಟರ್ ವಿಷರಾಸಾಯನಿಕ ಸಿಂಪಡಿಸುವ ಹನುಮಂತಪ್ಪ ಹೀಗೆನ್ನುತ್ತಾರೆ, “ಸಸಿ ನೆಟ್ಟು ಎಂಟು ದಿನ ಆಗೇತಿ. ಇನ್ನು ಎರಡು ದಿನ ಬಿಟ್ಟು ಎಣ್ಣಿ (ಪೀಡೆನಾಶಕ) ಹೊಡೀಬೇಕು. ಬೆಂಕಿ ರೋಗ, ಹುಳ ಬೀಳೋದು ಇದ್ದೇ ಇದೆ. ಇಲ್ಲೇ ಎಣ್ಣಿ ಅಂಗಡಿಯಿಂದ ತರ್ತೀವಿ. ಇಂಥ ರೋಗಕ್ಕೆ ಎಣ್ಣಿ ಕೊಡಪ್ಪಾ ಅಂದ್ರೆ ಸಾಕು, ಕೊಡ್ತಾರೆ. ಪ್ರತೀ ಎಕರೆಗೆ ಒಂದು ಲೀಟರ್ ಎಣ್ಣಿ ಹೊಡೀತೀವೆ. ಬೆಳೆ ಬರೋ ತನಕ ಅದೆಷ್ಟು ರೋಗ ಬರುತ್ತೋ ಅಷ್ಟೂ ಎಣ್ಣಿ ಹೊಡೆಯೋದೇ ಹೊಡೆಯೋದು…”
ಅದೇ ಅಗಳಕೇರಾದಲ್ಲಿ ಇನ್ನೊಂದು ಹೊಲದಲ್ಲಿ ವಿಷರಾಸಾಯನಿಕ ಸಿಂಪಡಿಸುತ್ತಿದ್ದ ಅಶೋಕನಿಗೂ ಅದರ ಹೆಸರು ಗೊತ್ತಿಲ್ಲ. ಅವರ ಪ್ರಕಾರ, “ಗಿಡ ಸೊರಗಿದರೆ ಎಣ್ಣಿ, ಕೀಟ ದಾಳಿ ಮಾಡಿದರೆ ಎಣ್ಣಿ, ನೀರಿನ ಕೊರತೆಯಾಗಿ ಸುಳಿ ಕೆಂಪಾದರೂ ಎಣ್ಣಿ, ಸಸಿಗಳಲ್ಲಿ ತೆನೆ ಕಟ್ಟದಿದ್ದಿರೂ ಎಣ್ಣಿ” – ಹೀಗೆ ಬಣ್ಣದ ಬಾಟಲಿಯಲ್ಲಿ ಹಳ್ಳಿ ಹತ್ತಿರದ ಅಂಗಡಿಯಲ್ಲಿ ಸಿಗುವ ಕಮಟು ವಾಸನೆಯ “ಎಣ್ಣಿ” ಸರ್ವರೋಗ ನಿವಾರಕ.
ಕೊಪ್ಪಳ – ಗಂಗಾವತಿ ರಸ್ತೆಯಲ್ಲಿ ಮುಂದೆ ಸಾಗಿದರೆ ಸಿಗುವ ಶಿವಪುರದ ರೈತರದ್ದೂ ಇಂತಹದೇ ಹೇಳಿಕೆ: “ಬೆಳೆಗೆ ಯಾವುದೇ ರೋಗ ಬಂದರೂ ಪ್ರತಿ ಎಕ್ರೆಗೆ ಕಾಲು ಲೀಟರ್ ಎಣ್ಣಿ ಸಿಂಪಡಿಸಿದರೆ ಸಾಕು.”
ಕೊಪ್ಪಳ ತಾಲೂಕಿನ ಹನಕಂಟಿಯ ರೈತ ಮುರಳಿ ರಾವ್ ಕೇಳುತ್ತಾರೆ, “ಎಣ್ಣಿ ಇಲ್ಲದೆ ಇಂದು ಯಾವುದಾದರೂ ಬೆಳೆ ಬೆಳೆಯೋದು ಸಾಧ್ಯವೇನ್ರೀ? ಈಗ ಬೆಳೆಗೆ ಬಾಧಿಸುವ ರೋಗ, ಇಳುವರಿ ಕಡಿಮೆಯಾಗೋದು ಇಂಥ ಸಮಸ್ಯೆಗಳಿಗೆ ಎಣ್ಣಿ ಬಿಟ್ಟರೆ ಬೇರೆ ಪರಿಹಾರವಿದೆಯೇನ್ರೀ?”
ರೈತರಿಗೆ ಪೀಡೆನಾಶಕಗಳೆಂಬ ವಿಷರಾಸಾಯನಿಕಗಳನ್ನು ಹೆಚ್ಚೆಚ್ಚು ಮಾರಾಟ ಮಾಡಲು ಏನೆಲ್ಲ ಮಾರಾಟ ತಂತ್ರಗಾರಿಕೆ ನಡೆದಿದೆ! ಹೊಲಗಳ ಬದಿಯ ಮರಗಳಲ್ಲಿ, ಹಾದಿಗಳ ವಿದ್ಯುತ್ ಕಂಬಗಳಲ್ಲಿ, ಗೂಡಂಗಡಿಗಳ ತಡಿಕೆಗಳಲ್ಲಿ, ಬಸ್ ನಿಲ್ದಾಣಗಳ ಗೋಡೆಗಳಲ್ಲಿ ವಿಷರಾಸಾಯನಿಕಗಳ ಆಕರ್ಷಕ ಜಾಹೀರಾತುಗಳು ರಾರಾಜಿಸುತ್ತಿವೆ. ಅವಲ್ಲದೆ, ವಾಹನಗಳಲ್ಲಿ ಎಲ್‍ಇಡಿ ಪರದೆ ಜೋಡಿಸಿ, ಹಳ್ಳಿಹಳ್ಳಿಗೆ ಹೋಗಿ, ವಿಷರಾಸಾಯನಿಕಗಳ ಅಬ್ಬರದ ಪ್ರಚಾರ.
ಒಂದೆಡೆ, ಹೊಲಕ್ಕೆ ಬುತ್ತಿ ಬಂದಾಗ, ವಿಷ ಸಿಂಪಡಿಸಿದ ಅದೇ ಹೊಲದ ನೀರಿನಲ್ಲಿ ಕೈ ತೊಳೆದು, ಬುತ್ತಿ ಬಿಚ್ಚಿ ತಿನ್ನುವ ರೈತರು ಹಾಗೂ ಕೆಲಸಗಾರರು. ಇನ್ನೊಂದೆಡೆ, ವಿಷ ಸಿಂಪಡಿಸುವ ಕೆಲಸಗಾರ ವಿಷದ ಘಾಟಿನಿಂದಾಗಿ ಮೂರ್ಛೆ ತಪ್ಪಿ ಬಿದ್ದರೆ, ಕೂಡಲೇ ಅಂಬುಲೆನ್ಸಿನಲ್ಲಿ ಅವನನ್ನು ಹತ್ತಿರದ ಆಸ್ಪತ್ರೆಗೆ ಒಯ್ದು “ಡ್ರಿಪ್” ಔಷಧಿ ಕೊಡಿಸಿ, ಅವನನ್ನು ರಕ್ಷಿಸುವ ವ್ಯವಸ್ಥೆ – ಯಾಕೆಂದರೆ, ಚಿಕಿತ್ಸೆಯಿಂದ ಚೇತರಿಸಿಕೊಂಡು ಮರುದಿನ ವಿಷ ಸಿಂಪಡಿಸಲಿಕ್ಕೆ ಹೊಲಕ್ಕೆ ಪುನಃ ಅವನೇ ಬರಬೇಕಲ್ಲ!
ಒಂದೆಡೆ, ತುಂಗಭದ್ರಾ ಬಯಲಿನಲ್ಲಿ ಸಾವಿರಾರು ಎಕ್ರೆಯಲ್ಲಿ ಸಾವಿರಾರು ಲೀಟರ್ ವಿಷರಾಸಾಯನಿಕ ಸುರಿದು ಬೆಳೆಸಿದ “ಸೋನಾ ಮಸೂರಿ” ಅಕ್ಕಿ ಬಹಳ ಚೆನ್ನಾಗಿದೆಯೆಂದು ಖರೀದಿಸಿ, ಬೇಯಿಸಿ, ಚಪ್ಪರಿಸಿ ಉಣ್ಣುವ ಜನರು. ಇನ್ನೊಂದೆಡೆ, ಆಹಾರದಲ್ಲಿ ವಿಷ ಸೇರಲು, ಸೂಚಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಷರಾಸಾಯನಿಕಗಳನ್ನು ಸುರಿಯುವ ರೈತರೇ ಕಾರಣರೆಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೃಷಿ ಇಲಾಖೆಯ ಅಧಿಕಾರಿಗಳು, ಪೀಡೆನಾಶಕಗಳ ಮಾರಾಟಗಾರರು ಮತ್ತು ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಶೋಧನಾ ಕೇಂದ್ರಗಳ ಪರಿಣತರು ಮತ್ತು ವಿಜ್ನಾನಿಗಳು.
ಆರ್ಗನೋಫೋಸ್ಪೇಟ್ ಕೀಟನಾಶಕಗಳಿಂದ ಡಯಬಿಟಿಸ್ ಅಪಾಯ
 ೨೦೧೧ರಲ್ಲಿ ಮಧುರೆಯ ೧೫ ವರುಷದ ಹುಡುಗಿಗೆ ಡಯಬಿಟಿಸ್ ಕಿಟೊ ಅಸಿಡೊಸಿಸ್ ರೋಗವಿದೆಯೆಂದು ಪತ್ತೆ. ಇದು, ಇನ್‍ಸುಲಿನ್ ಕೊರತೆಯಿಂದಾಗಿ ಶರೀರದ ಜೀವಕೋಶಗಳಿಗೆ ಅತ್ಯಗತ್ಯವಾದ ಗ್ಲುಕೋಸ್ ಸಿಗದಿರುವ ರೋಗ. ಆಗಲೇ, ಮೈಸೂರಿನಲ್ಲಿಯೂ ಇದೇ ವೈದ್ಯಕೀಯ ಸಮಸ್ಯೆಯಿಂದ ೧೨ ವರುಷದ ಹುಡುಗನೊಬ್ಬ ಬಳಲುತ್ತಿದ್ದ.
ಇವರಿಬ್ಬರ ದೇಹದಲ್ಲಿಯೂ ಅಧಿಕ ಪ್ರಮಾಣದ ಆರ್ಗನೋಫೋಸ್ಪೇಟ್ ಕೀಟನಾಶಕದ ಉಳಿಕೆ ಪತ್ತೆ! ಆ ಹುಡುಗಿಯನ್ನು ಪರೀಕ್ಷಿಸಿದವರು ಕೃಷ್ಣನ್ ಸ್ವಾಮಿನಾಥನ್, ಎಂಡೋಕ್ರಿನೋಲೊಜಿಸ್ಟ್. ಅವರು ಕೊಯಂಬತ್ತೂರಿನ ಕೂವಾಯಿ ಮೆಡಿಕಲ್ ಸೆಂಟರ್ ಮತ್ತು ಆಸ್ಪತ್ರೆಯ ಅಧ್ಯಕ್ಷರು. ಈ ಪ್ರಕರಣಗಳ ಆಧಾರದಿಂದ ರೋಗದ ಕಾರಣಗಳ ಅಧ್ಯಯನ ಮಾಡಬೇಕೆಂದು ಮಧುರೈ ಕಾಮರಾಜ್ ವಿಶ್ವವಿದ್ಯಾಲಯದ ಪರಿಣತರ ತಂಡವನ್ನು ವಿನಂತಿಸಿದರು.
ಆ ಅಧ್ಯಯನದ ವರದಿ ಜನವರಿ ೨೦೧೭ರ “ಜಿನೋಮ್ ಬಯೋಲಜಿ” ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಅಧ್ಯಯನ ತಂಡದ ಗಣೇಶನ್ ವೆಲುಮುರುಗನ್ ಆ ವರದಿಯ ಪ್ರಧಾನ ಲೇಖಕರು. ಕೀಟನಾಶಕಗಳು ಮತ್ತು ಡಯಬಿಟಿಸ್‍ಗೆ ನೇರ ಸಂಬಂಧವಿದೆ ಎಂದು ಘೋಷಿಸಿದ ಮೊತ್ತಮೊದಲ ವೈಜ್ನಾನಿಕ ಅಧ್ಯಯನ ವರದಿ ಇದು.
ಆರ್ಗನೋಫೋಸ್ಪೇಟ್ ಕೀಟನಾಶಕಗಳು ಶರೀರದಲ್ಲಿ ಸೇರಿಕೊಂಡರೆ ಮನುಷ್ಯರಲ್ಲಿ ಮತ್ತು ಇಲಿಗಳಲ್ಲಿ ಡಯಬಿಟಿಸ್ ಮತ್ತು ಕಡಿಮೆ ಗ್ಲುಕೋಸ್ ಟಾಲರೆನ್ಸಿಗೆ ಕಾರಣವಾಗುತ್ತವೆ ಎಂದು ಆ ಅಧ್ಯಯನ ವರದಿ ಮಾಡಿದೆ. ಮಧುರೈ ಜಿಲ್ಲೆಯ ತಿರುಪ್ಪರನ್ ಕುಂದ್ರಮ್ ತಾಲೂಕಿನ ೩,೦೮೦ ಜನರ ಸರ್ವೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಅವರೆಲ್ಲರ ವಯಸ್ಸು ೩೫ ವರುಷಗಳಿಗಿಂತ ಜಾಸ್ತಿ; ಅವರಲ್ಲಿ ಶೇ.೫೫ ಜನರು ಕೃಷಿ ಸಮುದಾಯದವರು. ಅವರ ರಕ್ತದ ಪರೀಕ್ಷಾ ಫಲಿತಾಂಶಗಳ ಆಧಾರದಿಂದ ತಿಳಿದು ಬಂದ ಸಂಗತಿ: ಡಯಬಿಟಿಸ್ ಬಾಧಿತರ ಪ್ರಮಾಣ ಕೃಷಿಯೇತರ ಸಮುದಾಯದ ವ್ಯಕ್ತಿಗಳಿಗಿಂತ (ಶೇ.೬.೨) ಕೃಷಿ ಸಮುದಾಯದ ವ್ಯಕ್ತಿಗಳಲ್ಲಿ (ಶೇ.೧೮.೩) ಮೂರು ಪಟ್ಟು ಜಾಸ್ತಿ!
ಡಯಬಿಟಿಸ್ ನಗರವಾಸಿಗಳನ್ನು ಜಾಸ್ತಿ ಬಾಧಿಸುತ್ತದೆ ಎಂದು ಈ ವರೆಗೆ ಪರಿಗಣಿಸಲಾಗಿತ್ತು. ಈ ಅಧ್ಯಯನವು ಆ ಸಂಗತಿಯನ್ನು ಬುಡಮೇಲು ಮಾಡಿದೆ. ಜಗತ್ತಿನ “ಡಯಬಿಟಿಸ್ ರಾಜಧಾನಿ” ಎಂದು ಕರೆಯಲಾಗುತ್ತಿರುವ ಭಾರತದಲ್ಲಿ ೨೦೧೫ರಲ್ಲೇ ಡಯಬಿಟಿಸ್ ಬಾಧಿತರ ಸಂಖ್ಯೆ ೬೯ ಲಕ್ಷ ಎಂದು ಅಂದಾಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಈಗ ಆರ್ಗನೋಫೋಸ್ಪೇಟ್ ಕೀಟನಾಶಕಗಳ ಬಳಕೆ, ಅದರಲ್ಲೂ ವಿವೇಚನಾರಹಿತ ಬಳಕೆ ಹೆಚ್ಚುತ್ತಿರುವಾಗ ಗ್ರಾಮೀಣ ಭಾರತದಲ್ಲಿ ಡಯಬಿಟಿಸ್ ಸ್ಫೋಟ ಸಾಧ್ಯತೆ ನಿಜವೆನಿಸುತ್ತಿದೆ!
ಆರ್ಗನೋಫೋಸ್ಪೇಟ್ ಕೀಟನಾಶಕಗಳು ಅಧಿಕ ಪ್ರಮಾಣದಲ್ಲಿ ಶರೀರ ಸೇರಿದರೆ ಈ ಕೆಳಗಿನಂತಹ ತೀವ್ರ ಅನಾರೋಗ್ಯಗಳಿಗೆ ಕಾರಣ ಎಂದು ಹಲವು ವೈಜ್ನಾನಿಕ ಅಧ್ಯಯನಗಳು ತೋರಿಸಿ ಕೊಟ್ಟಿವೆ:
-ಪಾರ್ಕಿನ್‍ಸನ್ಸ್ ರೋಗ ಮತ್ತು ಅಲ್ಜಿಮೇರ್ಸ್ ರೋಗ ಇಂತಹ ನರದೌರ್ಬಲ್ಯ ರೋಗಗಳು
-ಶಿಶುಗಳಲ್ಲಿ ಮತ್ತು ಎಳೆಯ ಮಕ್ಕಳಲ್ಲಿ ನರದೌರ್ಬಲ್ಯಗಳು
ಎಲ್ಲದಕ್ಕಿಂತ ಮಿಗಿಲಾಗಿ,೨೦೧೫ರಲ್ಲಿ “ಇಂಟರ್‍ನ್ಯಾಷನಲ್ ಏಜೆನ್ಸಿ ಫಾರ್ ಕ್ಯಾನ್ಸರ್ ರೀಸರ್ಚ್” ಹೀಗೆಂದು ಘೋಷಿಸಿದೆ:
ಟೆಟ್ರಾಕ್ಲೊರ್‍ವಿನ್‍ಫಾಸ್, ಪಾರಾಥಿಯಾನ್, ಮಲಾಥಿಯಾನ್, ಡೈಯಾಜಿನೊನ್ ಮತ್ತು ಗ್ಲೈಫೊಸೇಟ್ – ಈ ಆರ್ಗನೋಫೋಸ್ಪೇಟ್ ಕೀಟನಾಶಕಗಳು ಕ್ಯಾನ್ಸರಿಗೆ ಕಾರಣ. (ಗ್ಲೈಫೊಸೇಟ್ ಬಗ್ಗೆ ಮುಂದೆ ವಿವರಿಸಲಾಗಿದೆ)

(ದಕ್ಷಿಣ ಕನ್ನಡ ಜಿಲ್ಲೆಯ ಕಾಂತಾವರದ “ಅಲ್ಲಮಪ್ರಭು ಪೀಠ”ದ ಆಶ್ರಯದಲ್ಲಿ ನೀಡಿದ ಈ ಉಪನ್ಯಾಸ. ಅಲ್ಲಮಪ್ರಭು ಪೀಠದ ೨೦೨೦ರ ಪ್ರಕಟಣೆ “ಕರಣ ಕಾರಣ - ೭”ರಲ್ಲಿ ಪ್ರಕಟವಾಗಿದೆ. ೨೬ ಜನವರಿ ೨೦೨೧ರಿಂದ ೫ ದಿನ ಈ ಉಪನ್ಯಾಸ ೫ ಭಾಗಗಳಾಗಿ “ಸಂಪದ"ದಲ್ಲಿ ಪ್ರಕಟವಾಗುತ್ತಿದೆ.)

ಫೋಟೋ ೧: ಎಂಡೋಸಲ್ಫಾನ್ ಬಾಧಿತ ಶಿಶು ಮತ್ತು ತಾಯಿ, ಫೋಟೋ ೨: ಎಂಡೋಸಲ್ಫಾನ್ ಬಾಧಿತ ಮಗು

ಫೋಟೋಗಳು: "ಡೌನ್ ಟು ಅರ್ತ್" ಪಾಕ್ಷಿಕದ ಜಾಲತಾಣದಿಂದ