ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 3)

ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 3)

ಪಂಜಾಬಿನ ಹಸುರು ಕ್ರಾಂತಿಯ ದಾರುಣ ಕಥನ
೧೯೬೦ರ ದಶಕದಿಂದ “ಹಸುರು ಕ್ರಾಂತಿ”ಯ ಅಬ್ಬರದಲ್ಲಿ ಮಿಂದೆದ್ದ ಪಂಜಾಬಿನಲ್ಲಿ ಇಂದೇನಾಗಿದೆ? ಇದನ್ನು ತಿಳಿಯಬೇಕಾದರೆ, “ಗೂಗಲ್ ಸರ್ಚಿ”ನಲ್ಲಿ Cancer Train (ಕ್ಯಾನ್ಸರ್ ಟ್ರೇಯ್ನ್) ಎಂಬ ಎರಡೇ ಶಬ್ದಗಳನ್ನು ಟೈಪ್ ಮಾಡಿದರೆ ಸಾಕು. ಒಂದೇ ಸೆಕೆಂಡಿನೊಳಗೆ ೧೮ ಕೋಟಿ ವರದಿಗಳು ಮತ್ತು ದಾಖಲೆಗಳು ತೆರೆದುಕೊಳ್ಳುತ್ತವೆ. ಅವನ್ನು ಓದಲು ಒಂದು ವರುಷ ಸಾಕಾಗಲಿಕ್ಕಿಲ್ಲ!
ಗೋಧಿ ಹಾಗೂ ಭತ್ತಗಳ ಕಣಜವಾಗಿದ್ದ ಪಂಜಾಬ್ ಈಗ ಮೃತ್ಯುಕೂಪವಾಗಿದೆ. ಹತ್ತು ವರುಷಗಳ ಅವಧಿಯಲ್ಲಿ (೨,೦೦೦ದಿಂದ ೨೦೧೦) ೯,೯೨೬ ರೈತರು ಅಲ್ಲಿ ಆತ್ಮಹತ್ಯೆ ಮಾಡಿಕೊಂಡರೆಂದು ಪಂಜಾಬ್ ರಾಜ್ಯ ಸರಕಾರವೇ ಪ್ರಕಟಿಸಿದೆ.
ಇದಕ್ಕೆ ಕಾರಣಗಳೇನು? ಏರುತ್ತಿರುವ ಕೃಷಿವೆಚ್ಚದಿಂದಾಗಿ ಹೆಚ್ಚುತ್ತಿರುವ ಸಾಲ – ಇದುವೇ ಪ್ರಧಾನ ಕಾರಣ. ಅಲ್ಲಿನ ಭೂಮಿ ಬರಡಾಗಿದೆ ಎಂಬುದು ಸರಕಾರದ ವರದಿಯಲ್ಲೇ ಇದೆ. ೨೦೧೩ರ ಆ ವರದಿಯ ಅನುಸಾರ: ಪಂಜಾಬಿನ ಶೇ.೩೯ ಕೃಷಿಜಮೀನು ಬರಡು, ಅಂದರೆ ಕೃಷಿಗೆ ಯೋಗ್ಯವಲ್ಲ. ಅಲ್ಲಿನ ಶೇ.೫೦ ಕೃಷಿಜಮೀನಿನಲ್ಲಿ ಸಾರಜನಕದ ಅಂಶ ಕಡಿಮೆ; ಶೇ.೨೫ ಕೃಷಿಜಮೀನಿನಲ್ಲಿ ರಂಜಕದ ಅಂಶ ಕಡಿಮೆ. ಹಾಗಾಗಿ ಮಣ್ಣು ಫಲವತ್ತಾಗಿಲ್ಲ.
ಹಸುರುಕ್ರಾಂತಿಯ ಹೆಸರು ಉಳಿಸಿಕೊಳ್ಳಲು ನೀರೂ ಬೇಕು ತಾನೇ? ಅಲ್ಲಿನ ರೈತರಿಗೆ ಕಾಲುವೆನೀರು ಅಥವಾ ಅಂತರ್ಜಲ ಕೃಷಿಗೆ ಆಧಾರ. ಆದರೆ ಕಾಲುವೆನೀರು ವಿಷಪೂರಿತ. ಅಂತರ್ಜಲ ಮಟ್ಟ ಕುಸಿಯುತ್ತಿದೆ – ಈಗಾಗಲೇ ೫೦೦ ಅಡಿಗಿಂತ ಆಳಕ್ಕೆ ಕುಸಿದಿದೆ. ಹಾಗಾಗಿ ೫೦೦ – ೬೦೦ ಅಡಿ ಆಳದ ಬೋರ್-ವೆಲ್ ಕೊರೆಸಲು ತಲಾ ೨.೫ ಲಕ್ಷ ರೂಪಾಯಿ ಖರ್ಚು.
ಹಸುರುಕ್ರಾಂತಿಯ ಅತಿರೇಕಗಳಿಂದಾಗಿ, ಪರಿಸರ ಮಾಲಿನ್ಯವಂತೂ ಮನುಷ್ಯಕುಲಕ್ಕೇ ಮಾರಕವಾದ ಮಟ್ಟ ತಲಪಿದೆ. ಹೊಲಗಳಿಗೆ ಹೆಚ್ಚೆಚ್ಚು ರಾಸಾಯನಿಕ ಗೊಬ್ಬರ ಹಾಕಿದ್ದರಿಂದಾಗಿ, ಈಗ ಅಂತರ್ಜಲವೇ ವಿಷಮಯ. ಸವಾನಾ ಗ್ರಾಮದ ಮಾಲುಕ್ ಸಿಂಗ್, ತನ್ನ ೪ ಎಕ್ರೆಗೆ ವರುಷಕ್ಕೆ ಸುರಿಯುವ ಫಾಸ್ಪೇಟ್ ರಾಸಾಯನಿಕ ಗೊಬ್ಬರ ೪೦೦ ಕಿಲೋಗ್ರಾಮ್! ಗ್ರೀನ್ ಪೀಸ್ ಎಂಬ ಪರಿಸರ ರಕ್ಷಣಾ ಸಂಘಟಣೆಯ ೨೦೧೨ರ ವರದಿ ಅನುಸಾರ: ಪಂಜಾಬಿನ ಮಾಲ್ಟಾದಲ್ಲಿ ಅಂತರ್ಜಲದಲ್ಲಿ ನೈಟ್ರೇಟಿನ ಅಂಶ ಸಹನೀಯ ಮಿತಿಗಿಂತ ಶೇ.೨೦ ಜಾಸ್ತಿ! ಇದಕ್ಕೆ ಕಾರಣ, ರೈತರ ಅಚ್ಚುಮೆಚ್ಚಿನ ಯೂರಿಯಾವನ್ನು ಜಮೀನಿಗೆ ವರುಷವರುಷವೂ ಸುರಿದದ್ದು. ಇವೆಲ್ಲದರ ಒಟ್ಟು ಪರಿಣಾಮ: ಪಂಜಾಬಿನ ಭಟಿಂಡಾದಿಂದ ರಾಜಸ್ಥಾನದ ಬಿಕಾನೀರಿಗೆ ರಾತ್ರಿ ಸಾಗುವ ರೈಲಿನಲ್ಲಿ ಪ್ರತಿದಿನ ೬೦ಕ್ಕಿಂತ ಅಧಿಕ ಕ್ಯಾನ್ಸರ್ ರೋಗಿಗಳ ಪ್ರಯಾಣ! ಅಲ್ಲಿನ ಸರಕಾರಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ದಿನದಿನವೂ ಈ ರೋಗಿಗಳ ಪ್ರಯಾಣ. ಆದ್ದರಿಂದಲೇ ಆ ರೈಲು “ಕ್ಯಾನ್ಸರ್ ಟ್ರೇಯ್ನ್” ಎಂದು ಜಗತ್ಪ್ರಸಿದ್ಧ. ಪಂಜಾಬಿನ ಮುಖ್ಯಮಂತ್ರಿಯವರ ಕ್ಯಾನ್ಸರ್ ಪರಿಹಾರ ನಿಧಿಗೆ ೨೦೧೨ರಿಂದ ೨೦೧೭ರ ವರೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ೩೬,೭೮೮. ಅಲ್ಲಿ ಕ್ಯಾನ್ಸರಿನಿಂದಾಗಿ ಪ್ರತಿದಿನ ಸಾಯುವವರ ಸಂಖ್ಯೆ ಕನಿಷ್ಠ ೧೮.
ಪಂಜಾಬಿನಲ್ಲಿ ಪೀಡೆನಾಶಕಗಳ ಉಳಿಕೆಯಿಂದಾಗಿ ಹೆಚ್ಚುತ್ತಿರುವ ಕ್ಯಾನ್ಸರ್
ಪಂಜಾಬಿನಲ್ಲಿ ಕ್ಯಾನ್ಸರಿಗೆ ಬಲಿಯಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ಅನೇಕ ಅಧ್ಯಯನ ವರದಿಗಳು ಖಚಿತ ಪಡಿಸಿವೆ. ಇತ್ತೀಚೆಗೆ ಇನ್ನೂ ಎರಡು ಅಧ್ಯಯನಗಳು ಈ ಸತ್ಯವನ್ನು ಧೃಢೀಕರಿಸಿವೆ:
-ಪಾಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದ ಅಧ್ಯಯನ ವರದಿಯ ಅನುಸಾರ ರಾಸಾಯನಿಕ ಪೀಡೆನಾಶಕಗಳಿಂದಾಗಿ ರೈತರಲ್ಲಿ ಡಿಎನ್‍ಎ ನ್ಯೂನತೆ (DNA Damage) ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
-ಪಂಜಾಬ್ ಸರಕಾರವೇ ವೆಚ್ಚ ಭರಿಸಿದ ಇನ್ನೊಂದು ಅಧ್ಯಯನ ವರದಿಯ ಪ್ರಕಾರ: ಕುಡಿಯುವ ನೀರಿನಲ್ಲಿ ವ್ಯಾಪಕವಾಗುತ್ತಿರುವ ರಾಸಾಯನಿಕ ಪೀಡೆನಾಶಕಗಳ ಉಳಿಕೆ ಮತ್ತು ಭಾರಲೋಹಗಳ ಮಾಲಿನ್ಯವು ಕ್ಯಾನ್ಸರ್ ಮತ್ತು ಇತರ ರೋಗಗಳಿಗೆ ಕಾರಣವಾಗುತ್ತಿದೆ.
ಗಮನಿಸಿ: ಮನುಷ್ಯರ ಡಿಎನ್‍ಎ ನ್ಯೂನತೆಯು ಕ್ಯಾನ್ಸರಿನ ಅಪಾಯ ಮತ್ತು ಜೀನ್-ಬದಲಾವಣೆ (ಮ್ಯುಟೇಷನ್) ಅಪಾಯ ಹೆಚ್ಚಿಸುತ್ತದೆ. ಪಂಜಾಬಿನಲ್ಲಿ ಹಸುರು ಕ್ರಾಂತಿಯಿಂದಾಗಿ ಆಗಿರುವ ಅನಾಹುತಗಳ ಬಗ್ಗೆ ಹೆಚ್ಚಿನ ವಿವರಗಳನ್ನು ವಂದನಾ ಶಿವ ಬರೆದಿರುವ “ವಯಲೆನ್ಸ್ ಆಫ್ ಗ್ರೀನ್ ರೆವ್ಯೂಲೂಷನ್” (ಹಸುರುಕ್ರಾಂತಿಯ ಹಿಂಸೆ) ಎಂಬ ಪುಸ್ತಕದಿಂದ ತಿಳಿದುಕೊಳ್ಳಬಹುದು.
ಜಗತ್ತಿನಲ್ಲೇ ಸಾಟಿಯಿಲ್ಲದ ಎಂಡೋಸಲ್ಫಾನ್ ಸಾವುಗಳು
ಕೇರಳದ ಪಡ್ರೆಯ ಸ್ವರ್ಗ ನರಕವಾದದ್ದನ್ನು ಕಂಡಿದ್ದೀರಾ? ಕರ್ನಾಟಕದ ಬೆಳ್ತಂಗಡಿಯ ಪಟ್ರಮೆ ಮತ್ತು ಕೊಕ್ಕಡ ಪ್ರದೇಶಗಳು ಮೃತ್ಯುಕೂಪವಾದದ್ದನ್ನು ಕಂಡಿದ್ದೀರಾ? ಅಲ್ಲಿನ ಎಂಡೋಸಲ್ಫಾನ್ ಪೀಡಿತರನ್ನು ಕಂಡಾಗ, ಅದಕ್ಕೆ ಕಾರಣರಾದವರ ಬಗ್ಗೆ ನಮ್ಮಲ್ಲಿ ನುಗ್ಗಿ ಬರುವ ಉದ್ಗಾರ, “ದೇವರೇ, ಇವರಿಗೂ ಕ್ಷಮೆ ಇದೆಯೇ?” ಮನುಷ್ಯರನ್ನು ಭೀರರವಾಗಿ ಕೊಂದು ಹಾಕುವ ಮಹಾವಿಷ ಎಂಡೋಸಲ್ಫಾನ್. ಅಲ್ಲಿ ಗೇರು ಅಭಿವೃದ್ಧಿ ನಿಗಮದ ಗೇರುತೋಟಗಳಿವೆ. ಆ ತೋಟಗಳಲ್ಲಿ “ಟಿ-ಮೊಸ್ಕಿಟೋ” ಎಂಬ ಗೇರುಮರದ ಕೀಟ ನಿಯಂತ್ರಣಕ್ಕಾಗಿ ಹೆಲಿಕಾಪ್ಟರಿನಿಂದ ಎಂಡೋಸಲ್ಫಾನನ್ನು ನಿರಂತರವಾಗಿ ಸಿಂಪಡಿಸಲಾಯಿತು; ಒಂದೆರಡಲ್ಲ, ೨೦ ವರುಷಗಳ ದೀರ್ಘ ಅವಧಿ! ಅದನ್ನು ವೈಮಾನಿಕವಾಗಿ ಸಿಂಪಡಿಸುವ ವ್ಯವಸ್ಥೆ ಮಾಡಿದ ನಿಗಮದ ಅಧಿಕಾರಿಗಳಿಗೂ, ಸರಕಾರದ ಮಂತ್ರಿಗಳಿಗೂ ಮನುಷ್ಯರ ಜೀವಕ್ಕಿಂತ ಗೇರುಬೀಜದ ದುಡ್ಡು ದೊಡ್ಡದಾಗಿತ್ತು! ಅದರಿಂದಾಗಿ, ಅಲ್ಲಿ ಬದುಕುತ್ತಿದ್ದವರ ಬದುಕೇ ನರಕವಾಯಿತು. ವಿಚಿತ್ರ ರೋಗಗಳಿಗೆ ಅಲ್ಲಿ ಬಲಿಯಾದವರು ಸಾವಿರಾರು ಜನರು: ಮೈಯಲ್ಲಿ ಕಜ್ಜಿ, ಮಾನಸಿಕ ರೋಗಗಳು, ಬುದ್ಧಿಮಾಂದ್ಯ, ಅಂಗವಿಕಲತೆ ಇತ್ಯಾದಿ. ಇವನ್ನೆಲ್ಲ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡವರು ಹಲವರು. ಅಲ್ಲಿನ ಹಸುಳೆಗಳಿಗೆ ಭವ್ಯ ಭವಿಷ್ಯ ಬರಲೇ ಇಲ್ಲ- ಅವರ ಬದುಕೇ ಕತ್ತಲಾಯಿತು. ಯಾಕೆಂದರೆ, ಹುಟ್ಟುವಾಗಲೇ ಸತ್ತ ಶಿಶುಗಳು, ಎರಡು ಫುಟ್‍ಬಾಲ್ ಗಾತ್ರಕ್ಕೆ ಉಬ್ಬಿದ ತಲೆಯ ಮಕ್ಕಳು, ಅಂಗವಿಕಲ ಎಳೆಯರು – ಇವೆಲ್ಲ ಅಲ್ಲಿನ ಮನೆಮನೆಯ ಕಣ್ಣೀರ ಸತ್ಯಕತೆಗಳು. ಅಲ್ಲಿ ಮಣ್ಣು, ನೀರು, ನಿವಾಸಿಗಳ ರಕ್ತ, ತಾಯಂದಿರ ಎದೆಹಾಲು ಎಲ್ಲದರಲ್ಲಿಯೂ ಎಂಡೋಸಲ್ಫಾನಿನ ಭಯಂಕರ ವಿಷ!
(ಈ ಬಗ್ಗೆ ಹೆಚ್ಚಿನ ವಿವರಗಳು ಈ ಪತ್ರಿಕಾ ಲೇಖನಗಳಲ್ಲಿ ದಾಖಲಾಗಿವೆ: (೧) ವಿಜ್ನಾನ ಲೋಕ ಮಾಸಪತ್ರಿಕೆ, ಜನವರಿ ೧೯೮೦ –ಅಂಗವಿಕಲ ಕರುಗಳು: ಕೀಟನಾಶಕದ ಶಾಪ? ಮತ್ತು ಡಿಡಿಟಿಯ ಅನಾಹುತಗಳು (೨) ಬಳಕೆದಾರರ ವೇದಿಕೆ ಪಾಕ್ಷಿಕ, ೧೫ ಜೂನ್ ೧೯೮೨ –ಪೀಡೆನಾಶಕಗಳ ಬಗ್ಗೆ ಎಚ್ಚರ (೩) ಬಳಕೆದಾರರ ವೇದಿಕೆ ಪಾಕ್ಷಿಕ, ೧೫ ನವಂಬರ್ ೧೯೮೨ – ಎಳನೀರು ವಿಷವಾದೀತು, ಎಚ್ಚರಿಕೆ! (೪) ವಿಜ್ನಾನ ಲೋಕ ಮಾಸಪತ್ರಿಕೆ, ಮಾರ್ಚ್ ೧೯೮೩ – ಏಜೆಂಟ್ ಆರೆಂಜ್‍ನ ಮಾರಕ ಪರಿಣಾಮ (೫) ಅಡಿಕೆ ಪತ್ರಿಕೆ ಮಾಸಪತ್ರಿಕೆ, ಮಾರ್ಚ್ ೧೯೯೧ – ನಿಮ್ಮ ಊಟದ ಬಟ್ಟಲಲ್ಲಿ ವಿಷ – ಈ ಆರು ಲೇಖನಗಳ ಲೇಖಕರು ಅಡ್ಡೂರು ಕೃಷ್ಣ ರಾವ್ (೬) ದ ಎವಿಡೆನ್ಸ್ ವೀಕ್ಲಿ, ೨೫-೩೧ ಡಿಸೆಂಬರ್ ೧೯೮೧ – ಏರಿಯಲ್ ಸ್ಪ್ರೇ ಆಫ್ ಪೆಸ್ಟಿಸೈಡ್ಸ್ ಮೇಕ್ಸ್ ಲೈಫ್ ಚೀಪರ್ ದ್ಯಾನ್ ಕಾಶ್ಯೂ – “ಶ್ರೀ” ಪಡ್ರೆ (೭) ದ ಹಿಂದೂ, ೨೨ ಜುಲಾಯಿ ೨೦೦೧ ಪುರವಣಿ - ಕ್ಯಾಶ್ಯೂಸ್ ಫೊರ್ ಹ್ಯೂಮನ್ ಲೈಫ್? – ನಿರ್ಮಲಾ ಲಕ್ಷ್ಮಣ್ (೮) ಡೌನ್ ಟು ಅರ್ತ್ ಪಾಕ್ಷಿಕ, ೧೬-೩೧ ಡಿಸೆಂಬರ್ ೨೦೧೦ – ಸ್ಟೇಟ್ ಆಫ್ ಎಂಡೋಸಲ್ಫಾನ್ –ಸಾವ್ವಿ ಸೌಮ್ಯ ಮಿಸ್ರಾ  (೯) ತರಂಗ, ೨೪ ಮಾರ್ಚ್ ೨೦೧೧ ಮುಖಪುಟ ಲೇಖನ - ಎಂಡೋಸಲ್ಫಾನ್ ವಿಷವರ್ತುಲ (೧೦) ಡೌನ್ ಟು ಅರ್ತ್ ಪಾಕ್ಷಿಕ, ೧೩ ಜನವರಿ ೨೦೧೭ - ಟ್ರಾಕಿಂಗ್ ಡಿಕೇಡ್ಸ್ ಲಾಂಗ್ ಎಂಡೋಸಲ್ಫಾನ್ ಟ್ರಾಜಿಡಿ ಇನ್ ಕೇರಳ - ಸಾವ್ವಿ ಸೌಮ್ಯ ಮಿಸ್ರಾ ಮತ್ತು ಸೊಪನ್ ಜೋಷಿ)

(ದಕ್ಷಿಣ ಕನ್ನಡ ಜಿಲ್ಲೆಯ ಕಾಂತಾವರದ “ಅಲ್ಲಮಪ್ರಭು ಪೀಠ”ದ ಆಶ್ರಯದಲ್ಲಿ ನೀಡಿದ ಈ ಉಪನ್ಯಾಸ. ಅಲ್ಲಮಪ್ರಭು ಪೀಠದ ೨೦೨೦ರ ಪ್ರಕಟಣೆ “ಕರಣ ಕಾರಣ - ೭”ರಲ್ಲಿ ಪ್ರಕಟವಾಗಿದೆ. ೨೬ ಜನವರಿ ೨೦೨೧ರಿಂದ ೫ ದಿನ ಈ ಉಪನ್ಯಾಸ ೫ ಭಾಗಗಳಾಗಿ “ಸಂಪದ"ದಲ್ಲಿ ಪ್ರಕಟವಾಗುತ್ತಿದೆ.)

ಫೋಟೋ ೧ ಮತ್ತು ೨: ಕೇರಳದ ಕಾಸರಗೋಡಿನ ಇಬ್ಬರು ಎಂಡೋಸಲ್ಫಾನ್ ವಿಷಬಾಧಿತರು

ಫೋಟೋ ೧: ತನಾಲ್-ಕೊ-ಇನ್, ಫೋಟೋ ೨: ದಹಿಂದೂ-ಡಾಟ್-ಕೋಮ್ ಜಾಲತಾಣದಿಂದ