ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 4)
ಮಹಾಮಾರಿ ಕಳೆನಾಶಕ, ಮನುಕುಲಕ್ಕೆ ಮಾರಕ: ಗ್ಲೈಫೊಸೇಟ್
೧೯೭೪ರಲ್ಲಿ ಈ ಅತಿ ಭಯಂಕರ ವಿಷರಾಸಾಯನಿಕವನ್ನು ಬಿಡುಗಡೆ ಮಾಡಿದಾಗಿನಿಂದ ೨೦೧೫ರ ವರೆಗೆ ಜಾಗತಿಕವಾಗಿ ೮.೬ ಬಿಲಿಯನ್ ಕಿಲೋಗ್ರಾಮ್ ಗ್ಲೈಪೊಸೇಟನ್ನು ಮಾರಾಟ ಮಾಡಲಾಗಿದೆ ಎನ್ನುತ್ತದೆ “ಎನ್ವೈರೊನ್ಮೆಂಟಲ್ ಸೈನ್ಸಸ್ ಯುರೋಪ್” ಎಂಬ ನಿಯತಕಾಲಿಕದ ಫೆಬ್ರವರಿ ೨೦೧೬ರ ಒಂದು ಲೇಖನ. ಜಾಗತಿಕವಾಗಿ, ಇದರ ಒಟ್ಟು ಮಾರಾಟ: ೧೯೯೫ರಲ್ಲಿ ೫೧ ದಶಲಕ್ಷ ಕಿಲೋಗ್ರಾಮ್ ಇದ್ದದ್ದು ೨೦೧೪ರಲ್ಲಿ ೭೫೦ ದಶಲಕ್ಷ ಕಿಲೋಗ್ರಾಮುಗಳಿಗೆ ಏರಿದೆ! ಅಂದರೆ ೧೯ ವರುಷಗಳಲ್ಲಿ ೧೫ ಪಟ್ಟು ಹೆಚ್ಚಳ!
ಇದು, ಅಧಿಕ ಲಾಭ ಗಳಿಕೆಗೆ ರೈತರ ಅಚ್ಚುಮೆಚ್ಚಿನ ಕಳೆನಾಶಕ. ಉದಾಹರಣೆಗೆ, ಚಹಾತೋಟಗಳ ಇಳುವರಿ ಕಳೆಗಳಿಂದಾಗಿ ಶೇ.೭೦ ಕಡಿಮೆ ಆದೀತು. ಅದನ್ನು ತಪ್ಪಿಸಲಿಕ್ಕಾಗಿ ಚಹಾತೋಟಗಳಲ್ಲಿ ಇದರ ಭರ್ಜರಿ ಸಿಂಪಡಣೆ.
ಇದರಿಂದಾಗಿ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಒಂದೆರಡಲ್ಲ. ಇದೆಲ್ಲ ಗೊತ್ತಿದ್ದರೂ, ಇದರ ಬಳಕೆ ಕೈಬಿಡಲು ಎಲ್ಲ ರೈತರು ತಯಾರಿಲ್ಲ. “ಗ್ಲೈಫೊಸೇಟ್ ಇಲ್ಲದೆ ನಾನು ಬೇಸಾಯ ಮಾಡಲು ಸಾಧ್ಯವಿಲ್ಲ” ಎನ್ನುತ್ತಾರೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಜರಾಂಗ್ ಗ್ರಾಮದ ವಸುದೇವೊ ರಾಥೋಡ್ (೪೦ ವರುಷ). ಅವರು ತನ್ನ ೧೩ ಹೆಕ್ಟೇರ್ ಹೊಲದಲ್ಲಿ ಬೆಳೆಯೋದು ಹತ್ತಿ ಬೆಳೆ. ಕೆಲಸದಾಳುಗಳಿಂದ ಕಳೆ ತೆಗೆಸುವ ಬದಲಾಗಿ, ಈ ವಿಷಕಳೆನಾಶಕ ಸಿಂಪಡಿಸುವುದೇ ಅನುಕೂಲ ಎನ್ನುತ್ತಾರೆ ಅವರು; ಯಾಕೆಂದರೆ ಕೆಲಸದಾಳುಗಳ ಮಜೂರಿ ವೆಚ್ಚ ಮೂರು ಪಟ್ಟು ಜಾಸ್ತಿ.
ರೈತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಯವತ್ಮಾಲಿನ ಲಾಭರಹಿತ ಸಂಘಟನೆ “ಶೇತ್ಕರಿ ನ್ಯಾಯ ಹಕ್ಕು ಆಂದೋಲನ ಸಮಿತಿ”ಯ ಸಂಚಾಲಕ ದೇವಾನಂದ ಪವಾರ್ ಇನ್ನಷ್ಟು ಆತಂಕಕಾರಿ ಹೇಳಿಕೆ ನೀಡುತ್ತಾರೆ: “ರಾಸಾಯನಿಕದ ದೀರ್ಘಕಾಲಿಕ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಬಗ್ಗೆ ಯೋಚಿಸುತ್ತ ಕೂರಲು ರೈತರಿಂದಾಗದು. ಅವರು ಇವತ್ತಿನ ದಿನ ಬದುಕುವುದು ಹೇಗೆಂದು ನೋಡುತ್ತಾರೆ.”
ರೌಂಡಪ್ ಹೆಸರಿನಲ್ಲಿ ಮಾರಾಟವಾಗುತ್ತಿರುವ ಗ್ಲೈಫೊಸೇಟ್ ಮಾನವಕುಲಕ್ಕೆ ಮಾರಕ ಎಂಬುದರ ಬಗ್ಗೆ ಅನುಮಾನವೇ ಬೇಡ. ಮೂತ್ರಕೋಶ ಮತ್ತು ಲಿವರಿಗೆ ಹಾನಿ, ಕರುಳಿನ ಸೂಕ್ಷ್ಮಜೀವಿಗಳಲ್ಲಿ ಬದಲಾವಣೆಗಳು, ಎಂಡೋಕ್ರೈನಿಗೆ ತೊಂದರೆ, ನರಜಾಲಕ್ಕೆ ಹಾನಿ, ಶರೀರದ ರೋಗನಿರೋಧ ವ್ಯವಸ್ಥೆಯ ಸೋಲು ಮತ್ತು ಕ್ಯಾನ್ಸರ್ಕಾರಕ – ಇವೆಲ್ಲ ಗ್ಲೈಫೊಸೇಟಿನ ಭೀಕರ ದುಷ್ಪರಿಣಾಮಗಳು ಎಂಬುದು ೧೯೭೪ರ ಮುಂಚೆಯೇ ಇದರ ಪೇಟೆಂಟ್ ಹೊಂದಿದ್ದ ದೈತ್ಯ ಕಂಪೆನಿ ಮೊನ್ಸಾಂಟೋಗೆ ತಿಳಿದಿತ್ತು. (೭ ಜೂನ್ ೨೦೧೮ರಂದು ಮೊನ್ಸಾಂಟೋವನ್ನು ಜರ್ಮನಿಯ ಫಾರ್ಮಾ ಕಂಪೆನಿ ಬೇಯರ್ ಖರೀದಿಸಿದೆ.)
ಆದರೆ ಮೊನ್ಸಾಂಟೋ ಕಂಪೆನಿ ಈ ಮಾಹಿತಿಯನ್ನೆಲ್ಲ ಗುಟ್ಟಾಗಿ ಇಟ್ಟಿತ್ತು. ಆದ್ದರಿಂದಲೇ, ಮೊನ್ಸಾಂಟೋ ಕಂಪೆನಿ ವಿರುದ್ಧ ೪,೦೦೦ಕ್ಕಿಂತ ಅಧಿಕ ದಾವೆಗಳು ಯುಎಸ್ಎ ದೇಶದಲ್ಲಿ ತೀರ್ಪಿಗಾಗಿ ಕಾಯುತ್ತಿವೆ. ಅವುಗಳಲ್ಲಿ ಮೊದಲ ದಾವೆಯ ಚಾರಿತ್ರಿಕ ತೀರ್ಪು, ಕ್ಯಾನ್ಸರ್ ರೋಗಿ ದೆವೇನ್ ಜಾನ್ಸನ್ ಪರವಾಗಿ ಬಂದಿದೆ.
ತಾನು ಕ್ಯಾನ್ಸರಿಗೆ ತುತ್ತಾಗಲು ರೌಂಡಪ್ ಕಳೆನಾಶಕವೇ ಕಾರಣ ಎಂಬ ದೆವೇನ್ ಜಾನ್ಸನರ (೪೬ ವರುಷ) ವಾದವನ್ನು ಸ್ಯಾನ್ಫ್ರಾನ್ಸಿಸ್ಕೋ ಕೋರ್ಟ್ ಎತ್ತಿ ಹಿಡಿದಿದೆ. ಈ ಪ್ರಕರಣದಲ್ಲಿ ಜಾನ್ಸನರಿಗೆ ಬರೋಬ್ಬರಿ ೨೮೯ ಮಿಲಿಯನ್ ಡಾಲರ್ ದಂಡ ಪಾವತಿಸಬೇಕೆಂದು ಮೊನ್ಸಾಂಟೋ ಕಂಪೆನಿಗೆ ಕೋರ್ಟ್ ಆದೇಶಿಸಿದೆ.
ಗ್ಲೈಫೊಸೇಟ್ ಅಥವಾ ರೌಂಡಪ್ ಕಳೆನಾಶಕ ಉತ್ಪಾದಿಸುವ ಮೊನ್ಸಾಂಟೋ ಕಂಪೆನಿಯ ಕೆಲವು ಆಂತರಿಕ ದಾಖಲೆಗಳನ್ನೇ ಈ ಪ್ರಕರಣದಲ್ಲಿ ಪುರಾವೆಯಾಗಿ ಕೋರ್ಟಿನ ಎದುರು ಇಡಲಾಯಿತು. ಆ ದಾಖಲೆಗಳಲ್ಲಿ ಸ್ಪಷ್ಟವಾಗಿ ದಾಖಲಾಗಿತ್ತು – ರೌಂಡಪ್ ಕ್ಯಾನ್ಸರ್ಕಾರಕ ಎಂಬ ವೈಜ್ನಾನಿಕ ಸತ್ಯ. ಆ ಮೂಲಕ, ಮೊನ್ಸಾಂಟೋ ಎಂಬ ದೈತ್ಯ ಕಂಪೆನಿ ೨೫ ವರುಷ ಮಾನವಜನಾಂಗಕ್ಕೆ ಮಾಡಿದ ಮಹಾಮೋಸ ಮತ್ತು ಮಹಾ ಅನ್ಯಾಯ ಜಗಜ್ಜಾಹೀರಾಯಿತು. ಇತರ ವಿಷಪೀಡೆನಾಶಕಗಳದ್ದೂ ಇದೇ ಸಂಗತಿ ಎಂಬುದನ್ನು ಇನ್ನಾದರೂ ಒಪ್ಪಿಕೊಳ್ಳೋಣ. ಈ ಬಗ್ಗೆ ಹೆಚ್ಚಿನ ವಿವರಗಳು “ಅಡಿಕೆ ಪತ್ರಿಕೆ”ಯ ಸಪ್ಟಂಬರ್ ೨೦೧೮ರ “ಮಹಾಮಾರಿ ಕಳೆನಾಶಕ, ಮನುಕುಲಕ್ಕೆ ಮಾರಕ: ಗ್ಲೈಫೊಸೇಟ್” ಎಂಬ ನನ್ನ ಲೇಖನದಲ್ಲಿವೆ.
ಮನೆಮನೆಯ ಊಟದ ಬಟ್ಟಲುಗಳಲ್ಲಿ ವಿಷಭರಿತ ಆಹಾರ
ಭಾರತದಲ್ಲಿ ವಿಷಪೀಡೆನಾಶಕಗಳನ್ನು ಸಿಐಬಿಆರ್ಸಿ (ಕೇಂದ್ರ ಕೀಟನಾಶಕಗಳ ಮಂಡಲಿ ಮತ್ತು ನೋಂದಾವಣೆ ಸಮಿತಿ)ಯಲ್ಲಿ ನೋಂದಾಯಿಸಬೇಕು ಎಂಬುದು ನಿಯಮ. ಕೀಟನಾಶಕಗಳ ಉತ್ಪಾದನೆ, ಆಮದು, ಮಾರಾಟ ಮತ್ತು ಸಾಗಾಟ ಮಾಡುವ ಕಂಪೆನಿಗಳು ಅಲ್ಲಿ ನೋಂದಾಯಿಸಿರುವ ಕೀಟನಾಶಕಗಳು ೨೬೯ (ಇವುಗಳ ಎಲ್ಲ ನಮೂನೆಗಳ ಒಟ್ಟು ಸಂಖ್ಯೆ ೭೩೬) ಅವುಗಳಲ್ಲಿ ಕ್ಲಾಸ್-೧ ಪೀಡೆನಾಶಕಗಳ ಸಂಖ್ಯೆ ೧೮. ಗಮನಿಸಿ: ಒಬ್ಬ ಸಾಮಾನ್ಯ ವಯಸ್ಕ ವ್ಯಕ್ತಿಯನ್ನು ಕೊಲ್ಲಲು ಕ್ಲಾಸ್-೧ ಪೀಡೆನಾಶಕದ ಕೆಲವೇ ಗ್ರಾಮ್ ಸಾಕು! ಅವು ಅಂತಹ ಘೋರ ವಿಷಗಳು. ನಮ್ಮ ದೇಶದಲ್ಲಿ ೨೦೧೫ -೧೬ರಲ್ಲಿ ಒಟ್ಟು ಬಳಕೆಯಾದ ಪೀಡೆನಾಶಕಗಳು ೭,೭೧೭ ಟನ್! ಇದರ ಶೇ.೩೦ ಅಂದರೆ ೨,೨೫೪ ಟನ್ ಕ್ಲಾಸ್-೧ ಪೀಡೆನಾಶಕಗಳು.
ಇಷ್ಟು ಬೃಹತ್ ಪರಿಮಾಣದ ಪೀಡೆನಾಶಕಗಳ ಉಳಿಕೆ ಸಸ್ಯಗಳ ಫಸಲಿನಲ್ಲಿ ಸೇರಿಕೊಳ್ಳುತ್ತವೆ; ಇವುಗಳಿಂದಾಗಿ ಮಣ್ಣು ಕಲುಷಿತ; ನೀರನಾಶ್ರಯಗಳು ಮತ್ತು ಅಂತರ್ಜಲವೂ ವಿಷಮಯ. ಹೀಗೆ ವಿಷಪೀಡೆನಾಶಕಗಳು “ಆಹಾರ ಸರಪಳಿ”ಯಲ್ಲಿ ಸೇರಿಕೊಳ್ಳುತ್ತವೆ. ಅಂತಿಮವಾಗಿ, ಆಹಾರದ ಮೂಲಕ ಅವು ನಮ್ಮ ಊಟದ ಬಟ್ಟಲಿಗೇ ಬರುತ್ತವೆ – ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಮಾಂಸ, ಎಣ್ಣೆಗಳು, ಬೇಕರಿ ಹಾಗೂ ಸಂಸ್ಕರಿತ ತಿನಿಸುಗಳು ಇವೆಲ್ಲದರಲ್ಲಿ ಸೇರಿಕೊಂಡು.
ಇದಕ್ಕೆಲ್ಲ ಪುರಾವೆ ಎಲ್ಲಿದೆ? ಎಂಬ ಪ್ರಶ್ನೆಗೆ ಒಂದೇ ಉತ್ತರ: ಕಾಣುವ ಕಣ್ಣಿದ್ದರೆ ಕೈತುಂಬ ಪುರಾವೆಗಳಿವೆ.
ಮೊದಲ ಪುರಾವೆ: ೧೯೭೪ರಲ್ಲಿ ಅಹ್ಮದಾಬಾದಿನ ಸಿಇಆರ್ಸಿ (CERC – ಕನ್ಸೂಮರ್ ಎಜುಕೇಷನ್ ಆಂಡ್ ರೀಸರ್ಚ್ ಸೆಂಟರ್) ಪ್ರಕಟಿಸಿದ ಪುಸ್ತಕ “ಟೆಸ್ಟಿಂಗ್ ಆಫ್ ಪೆಸ್ಟಿಸೈಡ್ ರೆಸಿಡ್ಯೂಸ್ ಇನ್ ಫುಡ್”. ಅದು ಹೈದರಾಬಾದಿನ ಎನ್ಐಎನ್ (NIN – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್) ಮೂಲಕ ನಡೆಸಿದ ವಿವಿಧ ಆಹಾರವಸ್ತುಗಳಲ್ಲಿದ್ದ ಪೀಡೆನಾಶಕಗಳ ಉಳಿಕೆ ಪ್ರಮಾಣದ ವರದಿ. ಅಂದರೆ, ೨೫ ವರುಷಗಳ ಮುಂಚೆಯೇ ನಮ್ಮ ದೇಶದಲ್ಲಿ “ಎಚ್ಚರಿಕೆಯ ಗಂಟೆ” ಮೊಳಗಿತ್ತು.
ಅನಂತರ, ಇದೇ ವಿಷಯದ ಬಗ್ಗೆ ಹಲವು ಸಂಸ್ಥೆಗಳು ವಿಸ್ತೃತ ಅಧ್ಯಯನ ನಡೆಸಿ, ವರದಿ ಪ್ರಕಟಿಸಿ, ಮತ್ತೆಮತ್ತೆ ಎಚ್ಚರಿಕೆಯ ಗಂಟೆ ಮೊಳಗಿಸಿವೆ:
-ಹೈದರಾಬಾದಿನ ಕೇಂದ್ರ ಸಸ್ಯ ಸಂರಕ್ಷಣಾ ಸಂಸ್ಥೆ
-ಹೊಸದಿಲ್ಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ
-ಮೈಸೂರಿನ ಕೇಂದ್ರ ಆಹಾರ ತಂತ್ರಜ್ನಾನ ಸಂಶೋಧನಾಲಯ
-ಹಲವು ಕೃಷಿ ವಿಶ್ವವಿದ್ಯಾಲಯಗಳು
ಈ ಎಲ್ಲ ಅಧ್ಯಯನಗಳಲ್ಲಿ ದೇಶದ ವಿವಿಧ ಭಾಗಗಳ ಮಾರುಕಟ್ಟೆ ಮತ್ತು ಮಳಿಗೆಗಳಿಂದ ಆಹಾರಗಳ ಸ್ಯಾಂಪಲುಗಳನ್ನು ಖರೀದಿಸಿ, ಪರೀಕ್ಷಿಸಲಾಗಿತ್ತು. ಆಗ, ಮತ್ತೆಮತ್ತೆ ತಿಳಿದು ಬಂದ ಸಂಗತಿ: ಸುಮಾರು ಶೇ.೩೦ ಸ್ಯಾಂಪಲುಗಳಲ್ಲಿ ವಿಷಪೀಡೆನಾಶಕಗಳ ಉಳಿಕೆ ಪತ್ತೆ. ಜೊತೆಗೆ, ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸಿದ ಸಂಶೋಧನೆಯ ವರದಿಯು ಹೀಗೆಂದಿದೆ: ಭತ್ತ ಮತ್ತು ಗೋಧಿಯ ಶೇ.೩೦ಕ್ಕೂ ಅಧಿಕ ಸ್ಯಾಂಪಲುಗಳಲ್ಲಿ ವೈದ್ಯಕೀಯ ಎಚ್ಚರಿಕೆಯ ಮಿತಿಗಿಂತ ಜಾಸ್ತಿ ಪ್ರಮಾಣದಲ್ಲಿ ವಿಷಪೀಡೆನಾಶಕಗಳ ಉಳಿಕೆ ಪತ್ತೆಯಾಗಿದೆ. ಇವು ಜೀವಕ್ಕೇ ಕುತ್ತು ಎಂದು ತಿಳಿಯಲು ಇನ್ನೇನು ಬೇಕು?
(ದಕ್ಷಿಣ ಕನ್ನಡ ಜಿಲ್ಲೆಯ ಕಾಂತಾವರದ “ಅಲ್ಲಮಪ್ರಭು ಪೀಠ”ದ ಆಶ್ರಯದಲ್ಲಿ ನೀಡಿದ ಈ ಉಪನ್ಯಾಸ. ಅಲ್ಲಮಪ್ರಭು ಪೀಠದ ೨೦೨೦ರ ಪ್ರಕಟಣೆ “ಕರಣ ಕಾರಣ - ೭”ರಲ್ಲಿ ಪ್ರಕಟವಾಗಿದೆ. ೨೬ ಜನವರಿ ೨೦೨೧ರಿಂದ ೫ ದಿನ ಈ ಉಪನ್ಯಾಸ ೫ ಭಾಗಗಳಾಗಿ “ಸಂಪದ"ದಲ್ಲಿ ಪ್ರಕಟವಾಗುತ್ತಿದೆ.)
ಫೋಟೋ ೧ ಮತ್ತು ೨: ಕೇರಳದ ಕಾಸರಗೋಡಿನ ಎಂಡೋಸಲ್ಫಾನ್ ವಿಷಬಾಧಿತರು
ಫೋಟೋ ೧: ಫೇಸ್-ಬುಕ್ ಕೃಪೆ, ಫೋಟೋ ೨: ಡೌನ್ ಟು ಅರ್ತ್ ಜಾಲತಾಣದ ಕೃಪೆ