ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 5)

ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 5)

ವಿಷಪೀಡೆನಾಶಕಗಳಿಂದ ಮಾನವಕುಲದ ಮಾರಣ ಹೋಮ
ಢೆಲ್ಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರ (ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್‍ವೈರನ್‍ಮೆಂಟ್) ಪರಿಸರ ರಕ್ಷಣೆಗಾಗಿ ಹಲವಾರು ದಿಟ್ಟ ಹೆಜ್ಜೆಗಳನ್ನಿಟ್ಟ ಸಂಸ್ಥೆ. ದಿವಂಗತ ಅನಿಲ್ ಅಗರ್‍ವಾಲ್ ಸ್ಥಾಪಿಸಿದ ಸಂಸ್ಥೆಯ ಪಾಕ್ಷಿಕ “ಡೌನ್ ಟು ಅರ್ಥ್” ಪರಿಸರಕ್ಕೆ ಧಕ್ಕೆಯಾಗುವ, ಮಾನವಕುಲಕ್ಕೆ ಕುತ್ತಾಗುವ ಸಂಗತಿಗಳನ್ನು ವೈಜ್ನಾನಿಕ ವರದಿಗಳು, ಅಧ್ಯಯನಗಳು ಮತ್ತು ಪುಸ್ತಕಗಳು ಹಾಗೂ ವೆಬ್‍ಸೈಟ್ ಮೂಲಕ ಜಾಗತಿಕ ಮಟ್ಟದಲ್ಲಿ ಜಾಹೀರು ಮಾಡುತ್ತಿರುವ ಪತ್ರಿಕೆ.
ಇದು ೧೯೭೭ರಲ್ಲೇ ಪ್ರಕಟಿಸಿರುವ ಪುಸ್ತಕ: “ಹೊಮಿಸೈಡ್ ಬೈ ಪೆಸ್ಟಿಸೈಡ್ಸ್” (ಪೀಡೆನಾಶಕಗಳಿಂದ ಮನುಷ್ಯರ ಕೊಲೆ). ಇದರ ಉಪಶಿರ್ಷೀಕೆ “ವಾಟ್ ಪೊಲ್ಯೂಷನ್ ಡಸ್ ಟು ಅವರ್ ಬಾಡೀಸ್” (ಪರಿಸರ ಮಾಲಿನ್ಯ ನಮ್ಮ ದೇಹಗಳಿಗೆ ಏನು ಮಾಡುತ್ತದೆ?) ೧೩೪ ಪುಟಗಳ ಈ ಪುಸ್ತಕ ಒಂದೇ ಸಾಕು: ವಿಷಪೀಡೆನಾಶಕಗಳು ಹೇಗೆ ಮಾನವಕುಲದ ಮಾರಣಹೋಮ ಮಾಡುತ್ತಿವೆ? ಎಂಬುದರ ಬಗ್ಗೆ ನಮ್ಮ ಕಣ್ಣು ತೆರೆಸಲು. ಪುಸ್ತಕದ ಕೊನೆಯಲ್ಲಿ ಪಟ್ಟಿ ಮಾಡಲಾಗಿದೆ ೧೦೦ ಆಕರ ಲೇಖನಗಳನ್ನು; ಅವುಗಳಲ್ಲಿ ಪ್ರತಿಯೊಂದೂ ಸತ್ಯದ ಸುತ್ತಿಗೆಯಿಂದ ನಮ್ಮ ತಲೆಗೆ ಹೊಡೆದು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಈಗೊಂದು ಪ್ರಶ್ನೆ: ಪೀಡೆನಾಶಕಗಳ ವಿಷದಿಂದ ಭಾರತದಂತಹ ಮಹಾನ್ ದೇಶದಲ್ಲಿ ಎಷ್ಟು ಸಾವುಗಳಾಗುತ್ತಿವೆ? ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೋ ಪ್ರಕಟಿಸಿದ ಮಾಹಿತಿ ಪ್ರಕಾರ, ೨೦೧೫ರಲ್ಲಿ ೭,೦೬೦ ಸಾವುಗಳಾಗಿವೆ!  (ಗಮನಿಸಿ: ಕಲಬೆರಕೆ ಮತ್ತು ದುರುದ್ದೇಶದ ದುರ್ಬಳಕೆಯಿಂದ ಆಗುವ ಸಾವುನೋವುಗಳದ್ದು ಬೇರೆಯೇ ಸಂಗತಿ.)
ಇಷ್ಟೆಲ್ಲ ಪುರಾವೆಗಳಿದ್ದರೂ, ಮಾನವಕುಲಕ್ಕೆ ಮಾರಕವಾದ ವಿಷಪೀಡೆನಾಶಕಗಳನ್ನು ನಮ್ಮ ದೇಶದಲ್ಲಿ ನಿಷೇಧಿಸಲಿಲ್ಲ. ಸುಮಾರು ೮೦ ದೇಶಗಳು ನಿಷೇಧಿಸಿದ ವಿಷಪೀಡೆನಾಶಕಗಳನ್ನು ನಮ್ಮ ದೇಶದಲ್ಲಿ ನಿಷೇಧಿಸಲಿಲ್ಲ! ಯಾಕೆಂದರೆ, ಪೀಡೆನಾಶಕಗಳ ಕಂಪೆನಿಗಳದ್ದು ವರುಷಕ್ಕೆ ಸುಮಾರು ೫೦,೦೦೦ ಕೋಟಿ ರೂಪಾಯಿಗಳ ದಂಧೆ!
ಅಂತೂಇಂತೂ ವಿಷಮುಕ್ತ ಆಹಾರ ಆಂದೋಲನದ ಕ್ರಿಯಾಶೀಲರಿಗೆ ಈ ವರುಷ (೨೦೧೮ರಲ್ಲಿ) ಭಾಗಶಃ ಯಶಸ್ಸು ಲಭಿಸಿತು: ೮ ಆಗಸ್ಟ್ ೨೦೧೮ರಿಂದ ನಮ್ಮ ಪುಣ್ಯಭೂಮಿ ಭಾರತದಲ್ಲಿ ೧೮ ಮಾರಕ ಕೀಟನಾಶಕಗಳನ್ನು ನಿಷೇಧಿಸಲಾಗಿದೆ (ಕೇಂದ್ರ ಸರಕಾರದ ಗೆಜೆಟ್ ನೋಟಿಫಿಕೇಶನ್ ಎಸ್.ಒ. ೩೯೫೧ (ಇ) ಅನುಸಾರ). ಇನ್ನೂ ಆರು ಮಾರಕ ಕೀಟನಾಶಕಗಳನ್ನು ೧ ಸಪ್ಟಂಬರ್ ೨೦೧೯ರಿಂದ ನಿಷೇಧಿಸಲಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ರೈತರು ಮಾಡಬೇಕಾದ್ದೇನು?
೧೯೬೦ರ ಮುಂಚೆ, ನಮ್ಮ ಪುಣ್ಯಭೂಮಿ ಭಾರತದಲ್ಲಿ ರಾಸಾಯನಿಕ ಗೊಬ್ಬರ ಮತ್ತು ರಾಸಾಯನಿಕ ಪೀಡೆನಾಶಕಗಳ ಬಳಕೆ ಇಲ್ಲದೆ ಕೃಷಿ ಮಾಡಲಾಗುತ್ತಿತ್ತು. ನಮ್ಮ ಮಕ್ಕಳು ಮೊಮ್ಮಕ್ಕಳ ಉಳಿವಿಗಾಗಿ, ಅದೇ ಪಾರಂಪರಿಕ ವಿಧಾನದಲ್ಲಿ ಕೃಷಿ ಮಾಡಿದರಾಯಿತು. ಚೇರ್ಕಾಡಿ ರಾಮಚಂದ್ರರಾವ್, ಶ್ರೀಪಾದ ದಾಬೋಲ್ಕರ್, ಭಾಸ್ಕರ ಸಾವೆ, ಎಲ್. ನಾರಾಯಣ ರೆಡ್ಡಿ, ಸುಭಾಷ ಪಾಳೇಕರ್, ಪೂರ್ಣಚಂದ್ರ ತೇಜಸ್ವಿ – ಇವರೆಲ್ಲರೂ ಪ್ರಕೃತಿಯ ತತ್ವಗಳ ಅನುಸಾರ ವಿಷರಹಿತ ಕೃಷಿ ಮಾಡಲು ಸಾಧ್ಯವೆಂದು ತೋರಿಸಿ ಕೊಟ್ಟಿದ್ದಾರೆ. ಸಾವಿರಾರು ರೈತರು ಇಂತಹ ಕೃಷಿವಿಧಾನ ಅನುಸರಿಸಿ ನೆಮ್ಮದಿಯಿಂದ ಕೃಷಿಯಲ್ಲಿ ತೊಡಗಿದ್ದಾರೆ. ತಾವು ಬೆಳೆಸಿದ್ದನ್ನು ವಿಷಮುಕ್ತ ಆಹಾರ ಎಂಬ ವಿಶ್ವಾಸದಿಂದ ಖರೀದಿಸಿ ಸೇವಿಸುವ ಬಳಕೆದಾರರಿಗೆ ವಿಷ ಉಣಿಸುವ “ಪಾಪ” ತಮಗೆ ಬೇಡ ಎಂಬ ವಿವೇಕ ರೈತರಲ್ಲಿ ಇದ್ದರಾಯಿತು, ಅಲ್ಲವೇ?

ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಮಾಡಬೇಕಾದ್ದೇನು?
ತಮ್ಮ ಮನೆಯವರೆಲ್ಲರ ಊಟದ ಬಟ್ಟಲಿನಲ್ಲಿ ವಿಷಮುಕ್ತ ಆಹಾರವೇ ಇರುವ ಬಗ್ಗೆ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿದರಾಯಿತು. ಮೊದಲನೇ ಸೂತ್ರ: ನಮ್ಮ ಆಹಾರ ನಾವೇ ಬೆಳೆಯುವುದು. ನಗರಗಳಲ್ಲಿಯೂ ನಮ್ಮ ಕೈತೋಟದಲ್ಲಿ ಅಥವಾ ತಾರಸಿ ತೋಟದಲ್ಲಿ ನಮ್ಮ ಕುಟುಂಬಕ್ಕೆ ಬೇಕಾದ ತರಕಾರಿ ಬೆಳೆದುಕೊಳ್ಳಲು ಖಂಡಿತವಾಗಿ ಸಾಧ್ಯವಿದೆ. ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ” ಮತ್ತು ಹಲವು ನಗರಗಳಲ್ಲಿ ಸಕ್ರಿಯವಾಗಿರುವ ಸಾವಯವ ಬಳಗಗಳು ಈ ನಿಟ್ಟಿನಲ್ಲಿ ತಮ್ಮ ಸದಸ್ಯರಿಗೆ ಸೂಕ್ತ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿರುವ ಕಾರಣ ಈಗ ಸಾವಿರಾರು ಕುಟುಂಬಗಳು ಯಶಸ್ವಿಯಾಗಿ ತಮಗೆ ಬೇಕಾದ ತರಕಾರಿ ತಾವೇ ಬೆಳೆದುಕೊಳ್ಳುತ್ತಿವೆ. ಎರಡನೆಯ ಸೂತ್ರ: ಸಾವಯವ ಕೃಷಿಕರನ್ನು ಸ್ಥಳೀಯವಾಗಿ ಸಂಘಟಿಸಿ, ಅವರು ವಿಷಮುಕ್ತವಾಗಿ ಬೆಳೆಸಿದ ಧಾನ್ಯ, ತರಕಾರಿ ಮತ್ತು ಹಣ್ಣುಗಳ ನೇರ ಮಾರಾಟಕ್ಕೆ (ಅಂದರೆ ಸಾವಯವ ರೈತರಿಂದ ನೇರವಾಗಿ ಗ್ರಾಹಕರಿಗೆ) ವಾರಕ್ಕೊಮ್ಮೆಯಾದರೂ ವ್ಯವಸ್ಥೆ ಮಾಡುವುದು. ಮಂಗಳೂರಿನಲ್ಲಿ ಮತ್ತು ಇತರ ಅನೇಕ ನಗರಪಟ್ಟಣಗಳಲ್ಲಿ ಇಂತಹ ವ್ಯವಸ್ಥೆ ಕಳೆದ ಹಲವಾರು ವರುಷಗಳಿಂದ ಯಶಸ್ವಿಯಾಗಿ ಜರಗುತ್ತಿದೆ. ಅಂತಿಮವಾಗಿ, ಬ್ರಾಂಡೆಡ್ ಸಾವಯವ ಆಹಾರವಸ್ತುಗಳನ್ನು ಹೆಚ್ಚಿನ ಬೆಲೆಗೆ ಖರೀದಿಸುವ ಆಯ್ಕೆಯೂ ಲಭ್ಯವಿದೆ.
ಅಂತೂ, ವಿಷಮುಕ್ತ ಆಹಾರ ಸೇವಿಸಿ, ಆರೋಗ್ಯಭರಿತ ಜೀವನ ಸಾಗಿಸಲು ಖಂಡಿತವಾಗಿ ಸಾಧ್ಯವಿದೆ. ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುವ ಆಹಾರವಸ್ತುಗಳಲ್ಲಿ ವಿಷವಿದೆಯೆಂದು ತಿಳಿದುಕೊಂಡು, ಅವನ್ನು ಖರೀದಿಸುವ ಬದಲಾಗಿ ವಿಷಮುಕ್ತ ಆಹಾರ ಪಡೆದು, ಅದನ್ನೇ ಸೇವಿಸಲು ಆರಂಭಿಸುವುದು ನಮ್ಮ ಕೈಯಲ್ಲೇ ಇರುವ ಪರಿಹಾರದ ಸೂತ್ರ, ಅಲ್ಲವೇ?
(ದಕ್ಷಿಣ ಕನ್ನಡ ಜಿಲ್ಲೆಯ ಕಾಂತಾವರದ “ಅಲ್ಲಮಪ್ರಭು ಪೀಠ”ದ ಆಶ್ರಯದಲ್ಲಿ ನೀಡಿದ ಈ ಉಪನ್ಯಾಸ. ಅಲ್ಲಮಪ್ರಭು ಪೀಠದ ೨೦೨೦ರ ಪ್ರಕಟಣೆ “ಕರಣ ಕಾರಣ - ೭”ರಲ್ಲಿ ಪ್ರಕಟವಾಗಿದೆ. ೨೬ ಜನವರಿ ೨೦೨೧ರಿಂದ ೫ ದಿನ ಈ ಉಪನ್ಯಾಸ ೫ ಭಾಗಗಳಾಗಿ “ಸಂಪದ"ದಲ್ಲಿ ಪ್ರಕಟ. ಇದು ಕೊನೆಯ ಭಾಗ)

ಫೋಟೋ ೧: ಮಾನವಕುಲಕ್ಕೆ ಮರಣಾಂತಿಕವಾದ ಎಂಡೋಸಲ್ಫಾನನ್ನು ಜಗತ್ತಿನಲ್ಲೇ ನಿಷೇಧಿಸಬೇಕೆಂದು ಆಗ್ರಹಿಸುವ ಭಿತ್ತಿಪತ್ರ

ಫೋಟೋ ೨: ಎಂಡೋಸಲ್ಫಾನ್ ಘೋರವಿಷಬಾಧಿತ ಹುಡುಗ; ಅರಳುವ ಮೊದಲೇ ಕಮರಿದ ಬದುಕು (ಎಂಡೋಸಲ್ಫಾನ್.ಇನ್ ಜಾಲತಾಣದಿಂದ)

ಫೋಟೋ ೩: ಈ ಉಪನ್ಯಾಸ ಪ್ರಕಟವಾದ ಕಾಂತಾವರದ ಅಲ್ಲಮಪ್ರಭು ಪೀಠದ "ಕರಣ ಕಾರಣ -೭" ಪುಸ್ತಕದ ಮುಖಪುಟ