ವಿಷರಹಿತ ದ್ರಾಕ್ಷಿ ತಿನ್ನೋಣ !

ವಿಷರಹಿತ ದ್ರಾಕ್ಷಿ ತಿನ್ನೋಣ !

ಅಬಾಲ ವೃದ್ಧರವರೆಗೂ ಯಾವುದೇ ಅಂಜಿಕೆ ಇಲ್ಲದೆ ತಿನ್ನಬಹುದಾದ ಸುರಕ್ಷಿತ ದ್ರಾಕ್ಷಿ ಹಣ್ಣು ಇದು. ಹಣ್ಣು ಮಾರಾಟ ಮಾಡುವ ಅಂಗಡಿಯಲ್ಲಿ ತರಾವರಿ ದ್ರಾಕ್ಷಿ ಹಣ್ಣುಗಳಿರುತ್ತವೆ. ನೀವೇನಾದರೂ ಕಡಿಮೆ ಬೆಲೆಗೆ ದೊರೆಯುವ ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಕೇಳಿದರೆ ಅಂಗಡಿಯವನು ನಿಮ್ಮನ್ನು ಪಾದದಿಂದ ಮಸ್ತಕದ ವರೆಗೆ ದಿಟ್ಟಿಸಿ ನೋಡುತ್ತಾನೆ. ಅಲ್ಲಿರುವ ಗಿರಾಕಿಗಳೂ ಸಹ. ಇದನ್ನು ಗಣನೆಗೆ ತೆಗೆದುಕೊಳ್ಳಬೇಡಿ. ತಿನ್ನುವುದಾದರೆ ಬೆಂಗಳೂರು ಬ್ಲೂ ದ್ರಾಕ್ಷಿಯನ್ನೇ ತಿನ್ನಿ.

ಬೆಂಗಳೂರು ಸುತ್ತಮುತ್ತ ಬೆಳೆಯಲ್ಪಡುವ ಕಪ್ಪು ಬೀಜ ಇರುವ ಇದು ದ್ರಾಕ್ಷಿಯಲ್ಲಿ ಅತೀ ಹಳೆಯ ತಳಿ. ನೂರಾರು ವರ್ಷಗಳಿಂದಲೂ ಈ ದ್ರಾಕ್ಷಿ ಬೆಳೆ ಇತ್ತು. ಆ ನಂತರ ಬಂದ ಹೊಸ ದ್ರಾಕ್ಷಿಗಳೆಂದರೆ ಬೀಜ ಇಲ್ಲದ ದ್ರಾಕ್ಷಿಗಳು. ಇದರಲ್ಲಿ ಹಸುರು ದ್ರಾಕ್ಷಿ (ಸೊನಾಕಾ), ಕಪ್ಪು ದ್ರಾಕ್ಷಿಗಳು (ಶರದ್) ಮುಂತಾದ ಹತ್ತಾರು ತಳಿಗಳಿವೆ.

ಇದು ಮೂಲ ದ್ರಾಕ್ಷಿ: ಇದನ್ನು ನಾಟಿ ದ್ರಾಕ್ಷಿ ಎಂದೂ ಕರೆಯಬಹುದು. ಈ ದ್ರಾಕ್ಷಿಗೆ ಸುಮಾರು ೧೫೦ ವರ್ಷಗಳ ಇತಿಹಾಸ ಇದೆ. ಹೆಚ್ಚಾಗಿ ಇದನ್ನು ಬೆಂಗಳೂರು, ಯಲಹಂಕ, ದೊಡ್ಡ ಬಳ್ಳಾಪುರ ಸುತ್ತಮುತ್ತ ಕೆಲವು ಹಳ್ಳಿಗಳಲ್ಲಿ ಬೆಳೆಸುತ್ತಾರೆ. ಇಲ್ಲಿಯ ಮಣ್ಣು ಹವಾಗುಣ ಇದಕ್ಕೆ ಭಾರೀ ಪ್ರಶಸ್ತ. ಹಿಂದೆ ಇದರ ಬೆಳೆ ಹೆಚ್ಚು ಇತ್ತು. ಈಗ ಆ ಸ್ಥಾನವನ್ನು ಬೇರೆ ದ್ರಾಕ್ಷಿ ತಳಿಗಳು ಅತಿಕ್ರಮಿಸಿವೆ. ಕೆಲವು ರೈತರು ಅದರಲ್ಲೂ ಸ್ವಲ್ಪ ಹಳೆ ತಲೆಮಾರಿನ ಬೆಳೆಗಾರರು ಇಂದಿಗೂ ಈ ದ್ರಾಕ್ಷಿ ಬೇಸಾಯವನ್ನು ಉಳಿಸಿಕೊಂಡಿದ್ದಾರೆ. ಇದು ಕಷ್ಟ ಇಲ್ಲದೆ ಬೆಳೆಯಬಹುದಾದ ದ್ರಾಕ್ಷಿ ಬೆಳೆ ಎಂಬ ಕಾರಣಕ್ಕಾಗಿ. ಈ ದ್ರಾಕ್ಷಿಗೆ ಭೌಗೋಳಿಕ (GI Tag) ಸ್ಥಾನಮಾನವೂ ಇದೆ. ಇದರ ಬಗ್ಗೆ ಅಧ್ಯಯನ ಮಾಡಿದ ಆಧುನಿಕ ವೈದ್ಯ ವಿಜ್ಞಾನಿಗಳು, ಇದನ್ನು ಕ್ಯಾನ್ಸರ್ ನಿರೋಧಕ ಶಕ್ತಿ ಪಡೆದ ತಳಿ ಮತ್ತು ಆಯುಸ್ಸು ಹೆಚ್ಚಿಸುವ ಗುಣ ಇರುವ ತಳಿ ಎಂದು ಸಾರಿದ್ದಾರೆ. ಈ ದ್ರಾಕ್ಷಿಯಲ್ಲಿ ಬೀಜ ಇರುವ ಹಾಗೂ ಸ್ವಲ್ಪ ಹುಳಿ ಇರುವ ಕಾರಣದಿಂದ ತಿನ್ನಲು ಬಳಕೆಯಾಗುವುದು ಬಹಳ ಕಡಿಮೆ. ಜ್ಯೂಸ್ ಮಾಡಲು ಇದು ಹೇಳಿ ಮಾಡಿಸಿದ ತಳಿ.

ಯಾಕೆ ವಿಶೇಷ: ಬೆಂಗಳೂರು ಬ್ಲೂ ತಳಿಯ ದ್ರಾಕ್ಷಿ ಒಂದು ನಾಟಿ ತಳಿ. ಇದಕ್ಕೆ ರೋಗ, ಕೀಟ ಬಾಧೆ ತುಂಬಾ ಕಡಿಮೆ, ಬೆಳೆಗಾರರು ಇದಕ್ಕೆ ಸಿಂಪರಣೆ ಮಾಡದೆಯೂ ಬೆಳೆ ತೆಗೆಯಬಹುದು ಎನ್ನುತ್ತಾರೆ. ಯಲಹಂಕದ ನಾಗದಾಸನ ಹಳ್ಳಿಯ ಹಿರಿಯ ದ್ರಾಕ್ಷೀ ಬೆಳೆಗಾರರಾದ ಶ್ರೀ ಎನ್ ಸಿ ಪಟೇಲ್ ರವರು. ಈ ದ್ರಾಕ್ಷಿ ಹಣ್ಣನ್ನು ಎಲ್ಲಾ ವಯೋಮಾನದವರೂ ಯಾವುದೇ ಅಂಜಿಕೆ ಇಲ್ಲದೆ ತಿನ್ನಬಹುದು. ಕಾರಣ ಇದು ಉಳಿದ ದ್ರಾಕ್ಷಿಗಳಂತೆ ಅಲ್ಲ. ಹೆಚ್ಚಿನ ರಾಸಾಯನಿಕ

ಕೀಟನಾಶಕ, ರೋಗನಾಶಕ ಬೇಕಾಗುವುದಿಲ್ಲ. ಒಂದು ಎಕ್ರೆ ದ್ರಾಕ್ಷಿ ಬೆಳೆಯಲ್ಲಿ ಏನಿಲ್ಲವೆಂದರೂ ೧೫-೨೦ ಟನ್ ಇಳುವರಿ ಬರುತ್ತದೆ. ಸರಾಸರಿ ೨೦ ರೂ. ಬೆಲೆ ಸಿಗುತ್ತದೆ. ಎಕ್ರೆಗೆ ೩-೪ ಲಕ್ಷ ಆದಾಯ ದೊರೆಯುತ್ತದೆ. ಇದರಲ್ಲಿ ೧ ಲಕ್ಷ ಖರ್ಚಾದರೂ ಸಹ ಯಾವುದೇ ಹೆಚ್ಚಿನ ಪ್ರಯಾಸ ಇಲ್ಲದೆ ೨ ಲಕ್ಷ ಆದಾಯ ಇದೆ. ಒಮ್ಮೆ ಚಪ್ಪರ ಮಾಡುವ ಖರ್ಚು. ಇದು ೨೦ ವರ್ಷಗಳ ತನಕವೂ ಬರುತ್ತದೆ. ನೆಟ್ಟ ಗಿಡದಿಂದ ೫೦ ವರ್ಷಗಳ ತನಕವೂ ಇಳುವರಿ ಪಡೆಯುತ್ತಿರಬಹುದು. ದಿನಕ್ಕೆ ಒಂದು ಗಿಡಕ್ಕೆ ೨೦ ಲೀ. ನೀರು ಸಾಕು.

ಇದರ ವಿಶೇಷ ಏನೆಂದರೆ ಇದರ ಒಳ ಭಾಗ ಸಿಹಿ. ಸಿಪ್ಪೆ ಭಾಗ ಹುಳಿ. ಸಿಪ್ಪೆಯು ಗಾಢ ನೇರಳೆ ಬಣ್ಣ. ಇದೇ ಇದರ ವೈಶಿಷ್ಟ್ಯ. ಸಿಪ್ಪೆ ಸಮೇತ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಾಜಾ ಹಣ್ಣಾಗಿ ತಿನ್ನಲು ಬಳಕೆ ಮಾಡುವುದೇ ಅಲ್ಲದೆ ಜ್ಯೂಸ್ ತಯಾರಿಕೆಗೆ ಇದೇ ಸೂಕ್ತವಾದ ದ್ರಾಕ್ಷಿ. ದ್ರಾಕ್ಷಿಯ ಜ್ಯಾಮ್ ಮಾಡುವುದಕ್ಕೂ ಇದೇ ಆಗಬೇಕು. ದ್ರಾಕ್ಷಿ ಹಣ್ಣಿನ ಸ್ವಾಶ್ ಅತೀ ಹೆಚ್ಚು ಮಾರಾಟವಾಗುವ ಸಿದ್ದ ಜ್ಯೂಸ್. ಇದಕ್ಕೂ ಸಹ ಬೆಂಗಳೂರು ಬ್ಲೂ ದ್ರಾಕ್ಷಿಯೇ ಆಗಬೇಕು. ದ್ರಾಕ್ಷಿಯ ವೈನ್ ತಯಾರಿಕೆಗೆ ಈ ದ್ರಾಕ್ಷಿಯಷ್ಟು ಉತ್ತಮ ಬೇರೆ ಇಲ್ಲ. ಇತ್ತೀಚೆಗೆ ವೈನ್ ತಯಾರಿಕೆಗೆ ಅಧಿಕ ಪ್ರಮಾಣದಲ್ಲಿ ಈ ದ್ರಾಕ್ಷಿ ಹೆಚ್ಚಾಗಿ ಬಳಸಲ್ಪಡುತ್ತಿದೆ. ಮೊದಲ ಕೊಯಿಲಿನ ದ್ರಾಕ್ಷಿ ತಿನ್ನಲು ಬಳಕೆಯಾದರೆ ನಂತರದ್ದು ಪೂರ್ತಿಯಾಗಿ ವೈನ್ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಬಳಕೆಯಾಗುತ್ತದೆ. ಸಣ್ಣ ಮಕ್ಕಳು ಈ ದ್ರಾಕ್ಷಿ ಹಣ್ಣು ತಿಂದರೆ ಅವರಿಗೆ ರೋಗ ನಿರೋಧಕ ಶಕ್ತಿ ಬರುತ್ತದೆ. ಅಂತಹ ಗುಣ ಈ ದ್ರಾಕ್ಷಿಗೆ ಇದೆ ಎನ್ನುತ್ತಾರೆ.

ಅಂಜಿಕೆ ಬೇಡ- ಇದು ವಿಷ ಮುಕ್ತ: ನೀಲಿ ದ್ರಾಕ್ಷಿಯನ್ನು ನೋಡಿ ಗ್ರಾಹಕರು ಅದರ ಮೇಲ್ಮೈಯಲ್ಲಿರುವ ಬೂದಿ ತರಹದ ಲೇಪನವನ್ನು ಕಂಡು ಕೀಟ- ರೋಗ ನಾಶಕ ಬಳಕೆಯ ಶೇಷ ಎಂದು ಸಂದೇಹ ಪಡುತ್ತಾರೆ. ಇದು ನಿಜವಲ್ಲ. ಆ ಲೇಪನ ಬೆಂಗಳೂರು ಬ್ಲೂ ತಳಿಯ ದ್ರಾಕ್ಷಿಗೆ ನೈಸರ್ಗಿಕ ರಕ್ಷಕ ಲೇಪನ ಅಷ್ಟೇ. ರೈತರು ಬಂಡವಾಳ ಹೂಡಿ ಕೃಷಿ ಮಾಡುವಾಗ ಯಾವುದೇ ಕೀಟ ರೋಗ ಬಂದರೂ ಅದರಿಂದ ಬೆಳೆ ನಷ್ಟವಾಗದಂತೆ ಮಾಡಲು ರಾಸಾಯನಿಕ ಕೀಟ- ರೋಗ ನಾಶಕಗಳನ್ನು ಬಳಸಲೇ ಬೇಕಾಗುತ್ತದೆ. ಕೆಲವು ತಳಿಗಳಿಗೆ ಹೆಚ್ಚು ರೋಗ ಕೀಟ ಬಾಧೆಗಳಿರುತ್ತದೆ. ಕೆಲವು ಗಡಸು ತಳಿಗಳಾಗಿರುತ್ತವೆ. ಅಂತಹ ದ್ರಾಕ್ಷಿಯಲ್ಲಿ ಬೆಂಗಳೂರು ಬ್ಲೂ ಒಂದು. ಇದನ್ನು ಬೆಳೆಯುವವರು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ರಾಸಾಯನಿಕ ಬಳಕೆ ಮಾಡುವ ಕಾರಣ ಇದನ್ನು ಅಬಾಲ ವೃದ್ಧರವರೆಗೆ ಯಾವುದೇ ಅಂಜಿಕೆ ಇಲ್ಲದೆ ಬಳಕೆ ಮಾಡಬಹುದು. ದ್ರಾಕ್ಷಿ ತಿನ್ನುವ ನಾವೆಲ್ಲಾ ಅತೀ ದುಬಾರಿಯ ದ್ರಾಕ್ಷಿಯೊಂದಿಗೆ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲದ ಇಂಥಹ ತಳಿಗಳ ದ್ರಾಕ್ಷಿಯನ್ನು ತಿನ್ನುವುದನ್ನು ಬಿಡಬಾರದು.

ಚಿತ್ರಗಳು - ಮಾಹಿತಿ : ರಾಧಾಕೃಷ್ಣ ಹೊಳ್ಳ