ವಿಷುಕಣಿ (ಬಿಸುಪರ್ಬ) ಎಂಬ ಸೌರಮಾನ ಯುಗಾದಿ

ಚಾಂದ್ರಮಾನ ಯುಗಾದಿಯ ಸಂಭ್ರಮವನ್ನು ನಾವೆಲ್ಲ ಬೇವು-ಬೆಲ್ಲ ಮೆಲ್ಲುವುದರೊಂದಿಗೆ ಸಡಗರದಿಂದ ಆಚರಿಸಿದ್ದೇವೆ. ಈ ವರ್ಷ ಸೌರಮಾನ ಯುಗಾದಿ(ವಿಷು ಹಬ್ಬ,ಬಿಸು ಪರ್ಬ)ವನ್ನು ಈ ದಿನ ಆಚರಿಸುತ್ತಿದ್ದೇವೆ. ಸೂರ್ಯ ದೇವನು ಮೀನ ರಾಶಿಯಿಂದ ಮೇಷರಾಶಿಗೆ ಪ್ರವೇಶ ಆಗುವ ಸಮಯದಿಂದ *ಸೌರಮಾನ ಯುಗಾದಿ* ಆರಂಭ ಅಥವಾ ಆಚರಣೆ. ಅದೃಷ್ಟ ಹಾಗೂ ಸಮೃದ್ಧಿಯ ಸಂಕೇತವೇ ಈ ವಿಷು ಎಂದು ಹೇಳುತ್ತಾರೆ. ಸಂಸ್ಕೃತಿ ಸಂಪ್ರದಾಯ, ಆಚರಣೆ ಎಲ್ಲಾ ಒಂದು ಬೆಸುಗೆಯಂತೆ. ಹಬ್ಬಗಳ ಮಹತ್ವ ನಮ್ಮ ಮಕ್ಕಳಿಗೂ ಅರಿವಾಗಬೇಕಲ್ಲವೇ?
ಕರಾವಳಿ ಭಾಗದ ಜನರಿಗೆ ಅತ್ಯಂತ ವಿಶೇಷ ಹಬ್ಬ. ಹಾಗೆಯೇ ಕೇರಳ, ತಮಿಳುನಾಡು, ಪ.ಬಂಗಾಳ ಇಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಸೂರ್ಯನ ಶಾಖ, ಬೆಳಕು, ಉಷ್ಣತೆ, ಬುವಿಯ ಜೀವಿಗಳಿಗೆ ಬೇಕೇ ಬೇಕು. ಧನಾತ್ಮಕ ಫಲವನ್ನು ನೀಡುವಂಥ ಸೂರ್ಯನ ಪ್ರಭಾವ ಭೂಮಿಗೆ ಸಾಕಷ್ಟಿದೆ. ನಿನ್ನೆಯ ದಿನ ದೇವರ ಮನೆಯನ್ನು ಸ್ವಚ್ಛ ಮಾಡಿ, ಕಣಿ ಇಡಲು ಬೇಕಾದ ಎಲ್ಲಾ ವಸ್ತು, ತರಕಾರಿ, ಪಟ್ಟೆ ಬಿಳಿಯ ಬಣ್ಣದ ಶಾಲು ರೂಢಿಗೆ ಮಾಡಿ ಇಟ್ಟುಕೊಳ್ಳುತ್ತಾರೆ. ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ, ದೇವರ ಕೋಣೆಯನ್ನು ಸಿಂಗರಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಕನ್ನಡಿ ಇಡುವ ಸಂಪ್ರದಾಯ ಇದೆ. ದೀಪವನ್ನು ಉರಿಸಿ, ಬಿಳಿಯ ಬಟ್ಟೆ ದೇವರೆದುರು ಹಾಸಿ ಕ್ರಮವಾಗಿ ಒಂದೊಂದೇ ವಸ್ತುಗಳನ್ನಿಡುತ್ತಾರೆ.
ನಾಣ್ಯಗಳು, ನೋಟುಗಳು, ಬಂಗಾರದ ಆಭರಣಗಳು, ಅಕ್ಕಿ, ತೆಂಗಿನಕಾಯಿ, ಲಭ್ಯವಿರುವ ತರಕಾರಿ, ಹಣ್ಣುಗಳು, ಕುಂಕುಮ, ಗಂಧ, ವಿವಿಧ ಹೂಗಳನ್ನು ಎಲ್ಲಾ ಜೋಡಿಸುತ್ತಾರೆ. ದೇವರಿಗೆ ನೈವೇದ್ಯಕ್ಕೆ ಕೆಲವು ಕಡೆ ಕೆಲವು ರೀತಿಯ ಖಾದ್ಯಗಳನ್ನು ಮಾಡುತ್ತಾರೆ. ಬಾಳೆಹಣ್ಣು, ಬೆಲ್ಲ, ಹಾಲು ವಿಶೇಷ.
ಪಾಯಸ, ಸಿಹಿ ಅಪ್ಪ, ಕಜ್ಜಾಯ ಸಹ ಮಾಡುವರು. ಗೇರುಬೀಜದ ಪಾಯಸ ಯುಗಾದಿ ಮತ್ತು ವಿಷುವಿಗೆ ವಿಶೇಷ. ಕೊಟ್ಟೆ ಕಡುಬು ಸಹ ಮಾಡುವರು. ಮನೆಯವರೆಲ್ಲ ಒಟ್ಟಾಗಿ ಕಣಿ ನಮಸ್ಕಾರ ಮಾಡಿ, ಮನೆಯ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಬಹುಶಃ ಕೇರಳ ಪ್ರಾಂತ್ಯದಲ್ಲಿ ‘ಉರುಳಿ’ ಎನ್ನುವ ಅಗಲವಾದ ಪಾತ್ರೆಯಲ್ಲಿ ಈ ಕಣಿ ವಸ್ತುಗಳನ್ನು ಇಡುವ ಸಂಪ್ರದಾಯವೂ ಇದೆಯಂತೆ. ದೇಶಕ್ಕೆ,ಜೀವಜಗತ್ತಿಗೆ ಆವರಿಸಿದ ಕಷ್ಟ-ನಷ್ಟಗಳು, ರೋಗರುಜಿನಗಳು ತೊಲಗಿ ಸುಕ್ಷೇಮ ಉಂಟಾಗಲೆಂದು ಹಾರೈಸೋಣ.
ಮನೆಯ ಸದಸ್ಯರು, ಕೊಟ್ಟ ಹೆಣ್ಣು ಮಗಳ ಸಂಸಾರ ತವರಿಗೆ ಬಂದು ಜೊತೆಯಾಗಿ ಕುಳಿತು ಮಾತು, ನಗು, ಊಟ ಮಾಡಿ ಸಂತಸಪಡುತ್ತಾರೆ. ಈ ವರ್ಷದ ವಾತಾವರಣದಲ್ಲಿ ಹೊರಗಿನ ಬಿಸಿಲಝಳ ವಿಪರೀತವಿದೆ. ಬಿಸಿಯನ್ನು ತಗ್ಗಿಸುವ ಮಳೆರಾಯ ಬೇಗ ಬಂದು ಇಳೆಯನ್ನು ತಂಪುಗೊಳಿಸಲಿ. ಎಲ್ಲರಿಗೂ ಒಳ್ಳೆಯದಾಗಲಿ, ಸುಖ-ಶಾಂತಿ ನೆಲೆಸಲಿ, ಕಾಲಕಾಲಕ್ಕೆ ಮಳೆ-ಬೆಳೆಯಾಗಲಿ ರೈತಾಪಿ ವರ್ಗದವರ ಕನಸು ನನಸಾಗಲೆಂದು, ಈ ಸಂದರ್ಭದಲ್ಲಿ ಭಗವಂತನನ್ನು ಪ್ರಾರ್ಥಿಸಿಕೊಳ್ಳೋಣ.
-ರತ್ನಾ ಕೆ.ಭಟ್, ತಲಂಜೇರಿ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ