ವಿಷ್ಣುಭಟ್ಟ ಗೋಡ್ಸೆಯ ‘ನನ್ನ ಪ್ರವಾಸ'
*ಡಾ. ಜಿ. ಭಾಸ್ಕರ ಮಯ್ಯ ಅವರ "1857 ಭಾರತದ ಪ್ರಥಮ ಮಹಾಸಂಚಲನದಲ್ಲಿ ವಿಷ್ಣು ಭಟ್ಟ ಗೋಡ್ಸೆಯ 'ನನ್ನ ಪ್ರವಾಸ' ಮಾಝಾ ಪ್ರವಾಸ"*
ಡಾ. ಜಿ. ಭಾಸ್ಕರ ಮಯ್ಯ ಅವರು ಅನುವಾದಿಸಿದ ವಿಷ್ಣು ಭಟ್ಟ ಗೋಡ್ಸೆಯವರ "ನನ್ನ ಪ್ರವಾಸ" ಅಥವಾ "ಮಾಝಾ ಪ್ರವಾಸ" 2018ರಲ್ಲಿ ಮುದ್ರಣವಾದ 256 ಪುಟಗಳ ಕೃತಿ. 200 ರೂಪಾಯಿ ಬೆಲೆಯ ಕೃತಿಯನ್ನು ಅನುವಾದಕರಾದ ಭಾಸ್ಕರ ಮಯ್ಯರವರೇ ತಮ್ಮ "ಜನವಾದಿ ಪ್ರಕಾಶನ, ಗುಂಡ್ಮಿ, ಕುಂದಾಪುರ - 576226" ಮೂಲಕ ಪ್ರಕಟಿಸಿದ್ದಾರೆ.
ಮುಂಬೈನ ಕುಲಾಬಾ ಜಿಲ್ಲೆಯ ಪೇಣ ತಾಲೂಕಿನ ವರಸಯಿ ಗ್ರಾಮದ ನಿವಾಸಿಯಾಗಿದ್ದ ಬಾಲಕೃಷ್ಣ ಭಟ್ಟ ಗೋಡ್ಸೆ - ರಾಧಾಬಾಯಿ ದಂಪತಿಗಳ ನಾಲ್ವರು ಮಕ್ಕಳಲ್ಲಿ ಹಿರಿಯ ಸುಪುತ್ರರಾದ ವಿಷ್ಣು ಭಟ್ಟ ಶಾಸ್ತ್ರೀ ಗೋಡ್ಸೆ, ಅತ್ಯಂತ ಪ್ರಾಮಾಣಿಕ, ಮುಗ್ದರಾಗಿದ್ದ ಬಡ ಬ್ರಾಹ್ಮಣ ಪುರೋಹಿತ. ಪೌರೋಹಿತ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಕಲಿತಿದ್ದ, ಓದಿಕೊಂಡಿದ್ದ ಇವರು ದೈಹಿಕವಾಗಿ ಎತ್ತರದವರೂ, ಸ್ಪೂರದ್ರೂಪಿಯೂ ಆಗಿದ್ದರು.
ವಿಷ್ಣು ಭಟ್ಟ ಗೋಡ್ಸೆ (1827 - 1904) ತಮ್ಮ ಮೂವತ್ತರ ಹರೆಯದಲ್ಲಿ (1856 - 1857 - 1858) ಕುಟುಂಬ ಸಾಲದಲ್ಲಿ ಮುಳುಗಿ ಹೋಗಿದ್ದರಿಂದ ಹಣ ಸಂಪಾದಿಸುವ ಉದ್ಧೇಶದಿಂದ ಪರದೇಶಕ್ಕೆ ಯಾತ್ರೆ ಕೈಗೊಳ್ಳುತ್ತಾರೆ. ಹೀಗೆ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಸಿಪಾಯಿ ದಂಗೆ ಆರಂಭವಾಗಿ ಇವರು ಹೋದಲ್ಲೆಲ್ಲಾ ದಂಗೆಯ ನಡುವೆ ಸಿಕ್ಕಿ ಹಾಕಿಕೊಂಡು ಹಣ ಸಂಪಾದಿಸಲಾಗದೆ ಬರಿಕೈಯ್ಯಲ್ಲಿಯೇ ಮನೆಗೆ ಮರಳಬೇಕಾಗಿ ಬಂತು. ಸಂಪಾದಿಸಿದ ಹಣವನ್ನು ಕಳ್ಳರು ಮತ್ತು ಲೂಟಿಕೋರರಿಂದಾಗಿ ಕಳೆದುಕೊಳ್ಳಬೇಕಾಗಿ ಬಂತು. ಒಟ್ಟು ಯಾತ್ರೆಯಲ್ಲಿ ಅನುಭವಿಸಿದ ಸುಖ - ದುಃಖಗಳನ್ನು , ಕಣ್ಣಾರೆ ಕಂಡದ್ದನ್ನು ಕಣ್ಣಿಗೆ ಕಟ್ಟುವಂತೆ ಬರೆದ (1884 - 1885) ಮೂಲ ಕೃತಿಯೇ ಮರಾಠಿ ಭಾಷೆಯಲ್ಲಿ ಪ್ರಕಟವಾದ "ಮಾಝಾ ಪ್ರವಾಸ". ಮೂಲ ಕೃತಿ ಪ್ರಕಟವಾಗಿದ್ದು 1907ರಲ್ಲಿ.
ವಿಷ್ಣು ಭಟ್ಟರು ರಾಯ ಬಹದ್ದೂರ್ ಚಿಂತಾಮಣಿ ವಿನಾಯಕ ವೈದ್ಯರ ಮನೆತನದ ಕುಲ ಪುರೋಹಿತರಾಗಿದ್ದರು. ಪೌರೋಹಿತ್ಯದ ಕೆಲಸದಲ್ಲಿ ವೈದ್ಯರ ಮನೆಗೆ ಬಂದ ಸಂದರ್ಭದಲ್ಲಿ ವಿಷ್ಣು ಭಟ್ಟರು ತಾನು ಕಂಡ ದಂಗೆಯನ್ನು ಮನೆಯಲ್ಲಿ ಹೇಳಿಕೊಳ್ಳುತ್ತಿದ್ದರು. ಆಗ ಕಾನೂನು ವಿದ್ಯಾರ್ಥಿಯಾಗಿದ್ದ ವಿನಾಯಕ ವೈದ್ಯರು ವಿಷ್ಣು ಭಟ್ಟರಲ್ಲಿ ಎಲ್ಲವನ್ನೂ ಬರೆದುಕೊಡಲು ಕೇಳಿಕೊಂಡರು ಮತ್ತು ಭಟ್ಟರು ನೆನಪಿನಲ್ಲಿರುವಷ್ಟು ವಿಷಯಗಳನ್ನು ಬರೆದುಕೊಟ್ಟರು. ವಿನಾಯಕ ವೈದ್ಯರು ಬಳಿಕ ನ್ಯಾಯಾಧೀಶರಾದರು, ಇತಿಹಾಸಕಾರರಾದರು. ವಿಷ್ಣು ಭಟ್ಟರ ನಿಧನಾ ನಂತರ ಅವರು ಮರಾಠಿಯಲ್ಲಿ ಬರೆದ "ಮಾಝಾ ಪ್ರವಾಸ"ವನ್ನು ಪ್ರಕಟಿಸಿದರು. ಈ ಮೂಲ ಕೃತಿ ಬಳಿಕ ಹಿಂದಿ ಸಹಿತ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿತು.
ಡಾ. ಭಾಸ್ಕರ ಮಯ್ಯರು ಅನುವಾದಿಸಿದ "ನನ್ನ ಪ್ರವಾಸ"ವನ್ನು ಓದುತ್ತಾ ಹೋಗುವಾಗ ವಿಷ್ಣು ಭಟ್ಟ ಗೋಡ್ಸೆಯವರ ಜೊತೆಗೆ ನಾನೂ ಪರದೇಶ ಯಾತ್ರೆ ಹೋಗಿ ಬಂದಂಥ ಗಾಢ ಮಾನಸಿಕ ಅನುಭವ ನನಗಾಯಿತು. ಇದು ಅತಿಶಯೋಕ್ತಿಯ ಮಾತಲ್ಲವೇ ಅಲ್ಲ. ಒಂದು ಕೃತಿಯ ಓದುವಿಕೆಯಲ್ಲಿ ಓದುಗನಿಗೆ ಹೀಗಾಗಲು ಎರಡು ಕಾರಣಗಳಿರುತ್ತವೆ. ಒಂದು, ಕೃತಿಕಾರನ ಬರಹದಲ್ಲಿರುವ ನೈಜತೆ, ಪ್ರಾಮಾಣಿಕತೆ, ಸಹಜತೆ, ಸತ್ಯ ಸಂಧತೆ. ಕಂಡುದನ್ನು ಕಂಡಂತೆಯೇ, ಯಾವ ಕೃತ್ರಿಮತೆಯೂ ಇಲ್ಲದೆ ಹೃದಯದಿಂದ ಅಕ್ಷರ ರೂಪಕ್ಕಿಳಿಸಿದ ಪರಿಣಾಮ. ಇನ್ನೊಂದು, ಅನುವಾದ ಕೃತಿಯೂ ಇದೇ ಭಾವನೆಯನ್ನು ಓದುಗನಲ್ಲಿ ಮೂಡಿಸಿತೆಂದರೆ, ಅನುವಾದಕನೂ ಓದುವ ಮತ್ತು ಅನುವಾದಿಸುವ ಪ್ರಕ್ರಿಯೆಯಲ್ಲಿ ಮಾನಸಿಕವಾಗಿ ಮೂಲ ಕೃತಿಕಾರನ ಜೊತೆಯಲ್ಲಿ ಯಾತ್ರೆಯಲ್ಲಿ ಸಹಭಾಗಿಯಾಗಿದ್ದರೆಂದೇ ಅರ್ಥ.
"ನನ್ನ ಪ್ರವಾಸ"ದ 'ಮೊದಲ ನುಡಿ'ಯಲ್ಲಿ ಡಾ. ಜಿ. ಭಾಸ್ಕರ ಮಯ್ಯರು ಬರೆಯುತ್ತಾರೆ: "ರಾಜ್ ಪಾಲ್ ಎಂಡ್ ಸನ್ಸ್ , ದೆಹಲಿ ಪ್ರಕಾಶನವು ಹಿಂದಿಯ ಮಹೋನ್ನತ ಲೇಖಕ ಅಮೃತ್ ಲಾಲ್ ನಾಗರ್ ಅವರ 'ಆಂಖೋಂ ದೇಖಾ ಗದರ್' ಎಂಬ ಶೀರ್ಷಿಕೆಯೊಂದಿಗೆ ವಿಷ್ಣು ಭಟ್ಟರ ಕೃತಿಯನ್ನು ಅನುವಾದಿಸಿ ಸುಮಾರು ಅರವತ್ತು ವರ್ಷಗಳ ಹಿಂದೆಯೇ ಪ್ರಕಟಿಸಿದ್ದರು. ವಾಸ್ತವದಲ್ಲಿ ಅದೊಂದು ವಿದ್ಯಾರ್ಥಿ ಸಂಸ್ಕರಣದಂತಿದೆ. ಹಾಗಾಗಿ ಅದಕ್ಕೆ ಸಾಕಷ್ಟು ಮಿತಿಗಳಿದ್ದುವು. ಮೂಲದ ಹಲವಾರು ಅಂಶಗಳನ್ನು ಅವರು ಬಿಟ್ಟಿದ್ದರು. ಅವರದನ್ನು ಕಾದಂಬರಿಯ ಮಟ್ಟಕ್ಕೆ ತಂದಿರುತ್ತಾರೆ. ನಾನು ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷನಾಗಿದ್ದ ಕಾಲಾವಧಿಯಲ್ಲಿ ಅದನ್ನು ಡಿಗ್ರಿ ಹಿಂದಿ ವಿದ್ಯಾರ್ಥಿಗಳ ಪಠ್ಯದಲ್ಲಿ ಸೇರಿಸಿದ್ದೆ. ಅಂದೇ ನಾನು ಈ ಗ್ರಂಥದಿಂದ ಮೋಹಿತನಾಗಿ ಒಂದೆರಡು ಅಧ್ಯಾಯಗಳನ್ನು ಅನುವಾದಿಸಿದ್ದೆ. ಅದು ಯಾವೊತ್ತೋ ಕಾಲಕವಲಿತವಾಯಿತು. ನಿವೃತ್ತನಾದರೂ ಅದನ್ನು ಅನುವಾದಿಸುವ ನನ್ನ ಆಳವಾದ ಇಚ್ಛೆ ಸುಪ್ತ ಮನಸ್ಸಿನಲ್ಲಿ ಅಡಗಿಕೊಂಡು ಆಗಾಗ್ಗೆ ನನ್ನನ್ನು ಎಚ್ಚರಿಸುತ್ತಿತ್ತು. ಆ ಪ್ರಚೋದನೆಯಿಂದ ತಪ್ಪಿಸಿಕೊಳ್ಳಲಾರದೆ ಅದರ ಮೂಲಗ್ರಂಥ, ವಿವಿಧ ಅನುವಾದಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಶ್ರೀ ವಿಷ್ಣು ಭಟ್ಟ ಶಾಸ್ತ್ರೀ ಗೋಡ್ಸೆಯವರ ಒಂದೇ ಒಂದು ವಾಕ್ಯವೂ ತಪ್ಪಿ ಹೋಗದಂತೆ ಜಾಗೃತೆ ವಹಿಸಿ ನೇರ ಅವರ ಪ್ರವಾಸದಲ್ಲೇ ನಾನು ಜೀವಂತವಾಗಿ ಅನುಭವಿಸಿ ಕನ್ನಡಕ್ಕೆ ತಂದಿದ್ದೇನೆ ಎಂಬುದೇ ನನಗೆ ಮಹೋನ್ನತ ತೃಪ್ತಿ". "ನಾನಿದನ್ನು ಕನ್ನಡಕ್ಕೆ ರೂಪಾಂತರಿಸುವಾಗ ಅನುಭವಿಸಿದ ಆನಂದ ಅವರ್ಣನೀಯ. 'ಸಾಸಿವೆಯ ಮೇಲೆ ಸಾಗರ ಹರಿದಂತಾಗಿತ್ತಯ್ಯಾ' ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ. ಹಲವಾರು ಬಾರಿ ನನ್ನ ಕಣ್ಣಾಲೆಗಳು ತುಂಬಿ ಬಂದಿದ್ದವು. ನಿಜವಾದ 'ಕೆಥಾರ್ಸಿಸ್' ಅನ್ನು ನಾನು ಅನುಭವಿಸಿದ್ದೇನೆ. ಆತ್ಮವಿಲ್ಲ, ಪುನರ್ಜನ್ಮವಿಲ್ಲ, ಭೂತ ಎಂದೂ ವರ್ತಮಾನಕ್ಕೆ ಬಾರದು. ಆದರೂ ಎಲ್ಲವುಗಳಂತೆ, ಎಲ್ಲರಂತೆ ಈ ಕಾಲ ದೇಶ ಬಾಧಿತನಾದ ನಾನು ವಿಷ್ಣು ಭಟ್ಟರ ಪ್ರವಾಸದೊಂದಿಗಿದ್ದೇನೆ ಎಂದು ಮಾನಸಿಕವಾಗಿಯಾದರೂ ಅನುಭವಿಸುವ ಸ್ಥಿತಿಗೆ ತಲುಪಿರುವುದು ಆ ಲೇಖಕನ ಮಹಾನ್ ಕಾಣ್ಕೆಯೇ ಸರಿ."
ವಿಷ್ಣು ಭಟ್ಟ ಗೋಡ್ಸೆ ಸಾಹಿತಿಯಾಗಲಿ, ಲೇಖಕರಾಗಲಿ, ಇತಿಹಾಸಕಾರರಾಗಲೀ ಆಗಿರಲಿಲ್ಲ. ಇದಾವುದೂ ಅಲ್ಲದ ಇವರ ಈ "ನನ್ನ ಪ್ರವಾಸ" (ಮಾಝಾ ಪ್ರವಾಸ) ಯಾವನೇ ಒಬ್ಬ ಪ್ರಖ್ಯಾತ ಬರಹಗಾರನ ಬರಹಕ್ಕಿಂತಲೂ ಕಡಿಮೆಯದ್ದಲ್ಲ. ಈ ಮಾತಿಗೆ ಈ ಕೃತಿಯೇ ಸಾಕ್ಷಿ ಒದಗಿಸುತ್ತದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದು ವಿಷ್ಣು ಭಟ್ಟ ಗೋಡ್ಸೆಯವರ ಮೊದಲ ಕೃತಿಯೂ ಹೌದು, ಕೊನೆಯ ಕೃತಿಯೂ ಹೌದು. ಕೃತಿಕಾರರು 1904ರಲ್ಲಿ ದೈಹಿಕವಾಗಿ ಅಳಿದರೂ, ಅವರ ಈ ಒಂದೇ ಒಂದು ಕೃತಿಯಿಂದಲಾಗಿ ಇಂದಿಗೂ ಉಳಿದಿದ್ದಾರೆ. ಮುಂದೆಯೂ ಉಳಿಯುತ್ತಾರೆ. ನಿಜವಾದ ಅರ್ಥದಲ್ಲಿ "ಚಿರಂಜೀವಿ"ಯಾಗಿದ್ದಾರೆ. ಇಂಥ ಮಹತ್ತರವಾದ ಕಾರ್ಯವನ್ನು ಮಾಡುವಲ್ಲಿ ಕನಿಷ್ಟ ಪೂರ್ವಾಗ್ರಹವೂ ಇಲ್ಲದೆ ರಚಿಸಲ್ಪಟ್ಟ "ನನ್ನ ಪ್ರವಾಸ" ಸಾರ್ಥಕ್ಯ ಪಡೆದಿದೆ.
ವಿಷ್ಣು ಭಟ್ಟರ ಪ್ರವಾಸವನ್ನು ಡಾ. ಮಯ್ಯರು 32 ಅಧ್ಯಾಯಗಳಲ್ಲಿ ಸಹಜ ಸರಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಒಂದೊಂದು ಅಧ್ಯಾಯವೂ ಹಲವು ಕಾರಣಗಳಿಗೆ ಉಲ್ಲೇಖಾರ್ಹವಾಗಿದೆ, ಅನೇಕ ಮಾದರಿಗಳಿಗೆ, ಆದರ್ಶಗಳಿಗೆ ದಾಖಲಾರ್ಹವಾಗಿದೆ.
ಸಾಲದಲ್ಲಿ ಮುಳುಗಿದ ಕುಟುಂಬ ನಿತ್ಯ ಜೀವನದ ನಿರ್ವಹಣೆಗೂ ಬವಣೆ ಪಡುತ್ತಿದ್ದಾಗ ಕುಟುಂಬದ ಹಿರಿಯ ಪುತ್ರನಾದ ಮೂವತ್ತರ ತರುಣ ವಿಷ್ಣು ಭಟ್ಟ ಪೌರೋಹಿತ್ಯದ ಮೂಲಕವೇ ಕುಟುಂಬದ ಸಾಲ ತೀರಿಸಲು ಪರದೇಶಕ್ಕೆ ಯಾತ್ರೆ ಕೈಗೊಳ್ಳಲು ನಿರ್ಧರಿಸುತ್ತಾನೆ. ವಿಷ್ಣು ಭಟ್ಟರ ಮಾತುಗಳಲ್ಲೇ ಹೇಳುವುದಾರೆ, "ದಾರಿದ್ರ್ಯವಂತೂ ನಮಗೆ ತನ್ನ ವರಮಾಲೆಯನ್ನೇ ತೊಡಿಸಿತ್ತು. ಆದಾಯ ಇಲ್ಲ. ಸಾಲ ಹೆಚ್ಚುತ್ತಾ ಇತ್ತು. ಕವಿ ಹೇಳಿದ್ದ : "ಪರೀಕ್ಷ್ಯ ಸತ್ಜುಲಂ ವಿದ್ಯಾಶೀಲಂ ಶೌರ್ಯಸುರೂಪತಾಂ | ವಿಧಿರ್ದದಾತಿ ನಿಪುಣಃ ಕನ್ಯಾಮಿವ ದರಿದ್ರತಾಮ್ ||" (ಸತ್ಕುಲ, ಸೌಂದರ್ಯ, ವಿದ್ಯೆ, ಶೀಲ ಎಲ್ಲವನ್ನೂ ಪರೀಕ್ಷೆ ನೋಡಿ ಬುದ್ಧಿವಂತನಾದ ವಿಧಿ ದಾರಿದ್ರ್ಯವೆಂಬ ಹೆಣ್ಣನ್ನು ಮದುವೆ ಮಾಡಿ ಕೊಟ್ಟು ಬಿಡುತ್ತಾನೆ). ಸಂಪಾದನೆಯ ಎಲ್ಲಾ ಬಾಗಿಲುಗಳು ಮುಚ್ಚಿ ಹೋಗಿದ್ದವು". "ಬಾಲ್ಯದಿಂದಲೂ ಬಡತನವಂತೂ ನಮ್ಮಲ್ಲಿ ಕಾಲು ಮುರಿದುಕೊಂಡು ಬಿದ್ದಿತ್ತು". " ಮನೆಯಂತೂ ದಿವಾಳಿ ಎದ್ದು ಹೋಯಿತು. ಸಾಲ ಸೋಲ ಮಳೆಗಾಲದ ನದಿಯ ಪ್ರವಾಹದ ಹಾಗೆ ಏರುತ್ತಲೇ ಇತ್ತು. ನಮ್ಮೆಲ್ಲರ ಆದಾಯ ಎಲ್ಲಾ ಒಟ್ಟು ಸೇರಿಸಿದರೂ ದಿನ ದೂಡುವುದು ಕಷ್ಟವಾಗುತ್ತಿತ್ತು". (ಪುಟ 23, 24, 25, 26).
ಕುಟುಂಬವೊಂದು ಎಷ್ಟೇ ಬಡತನದಿಂದ ಕೂಡಿರಲಿ, ಕುಟುಂಬ ಸದಸ್ಯರ ನಡುವೆ ಪ್ರೀತಿಯೊಂದಿದ್ದರೆ ಸಾಕು, ಪರಸ್ಪರ ಅನ್ಯೋನ್ಯತೆಗೆ ಯಾವ ತೊಂದರೆಯೂ ಇಲ್ಲ ಎನ್ನುವುದಕ್ಕೂ ವಿಷ್ಣು ಭಟ್ಟರ ಕುಟುಂಬ ಮಾದರಿಯೂ ಆಗುತ್ತದೆ. ವಿಷ್ಣುವನ್ನು ಮನೆಯವರು ಬೀಳ್ಕೊಡುವ ಸಂದರ್ಭದ ಅಂತಿಮ ಭಾಗ ಹೀಗಿದೆ: "ಎಲ್ಲಿಯವರೆಗೆ ನೀವು ಬರುತ್ತೀರಿ ಎಂದು ಒತ್ತಾಯಪೂರ್ವಕವಾಗಿ ತಂದೆ, ತಾಯಿ ಮತ್ತು ಮನೆಯವರನ್ನೆಲ್ಲಾ ವಾಪಾಸು ಕಳಿಸಿದೆ. ಆದರೆ, ಹರಿಪಂತ ಒಪ್ಪಲೇ ಇಲ್ಲ. ನಮ್ಮೊಡನೆ ಮತ್ತೂ ಒಂದು ಕ್ರೋಶ ದೂರ ನಡೆದು ಬಂದ. ಮತ್ತೂ ಮುಂದೆ ಬರುವೆನೆಂದು ಒತ್ತಾಯಿಸತೊಡಗಿದ. ನಮಗಾಗಿ ಗಾಡಿ ಎಷ್ಟೊಂದು ಹೊತ್ತು ನಿಲ್ಲಿಸುತ್ತಾ ಇರುವುದು, ನಾನು ಗಾಡಿಗೆ ಮುಂದೆ ಹೋಗಲು ಹೇಳಿ, ನಾವಿಬ್ಬರೂ ಅಣ್ಣ ತಮ್ಮಂದಿರು ಒಂದು ಮರದ ಕೆಳಗೆ ಮೌನವಾಗಿ ನಿಂತೆವು. ನಮ್ಮಿಬ್ಬರಲ್ಲಿ ಯಾರೊಬ್ಬರೂ ಮಾತನಾಡಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಸಾಕಷ್ಟು ಅತ್ತ ಬಳಿಕ ಹರಿಪಂತನೆಂದ, 'ನೋಡು, ಒಂದು ವರ್ಷದ ಒಳಗೆ ನೀನು ಹಿಂದೆ ಬರುವ ಬಗ್ಗೆ ಮಾತು ಕೊಟ್ಟಿದ್ದೆ. ಇವತ್ತಿನ ತನಕ ನಮ್ಮ ಬಂಧುಪ್ರೇಮ ಅತ್ಯಂತ ಉತ್ತಮವಾಗಿತ್ತು. ನಮಗೆ ವಿಯೋಗ ದುಃಖವೇನೆಂದೇ ಗೊತ್ತಿರಲಿಲ್ಲ. ಆದರೆ, ಈಗ ಅದನ್ನು ಅನುಭವಿಸಬೇಕಾಗಿದೆ. ಹೇಗೆ ರಾಮ ವನವಾಸಕ್ಕೆ ತೆರಳಿದನೊ, ಆಗ ಭರತ ಎಷ್ಟು ಹೇಳಿದರೂ ಆತ ಹಿಂತಿರುಗಲಿಲ್ಲವೋ, ಅಂತೆಯೇ, ಕೊನೆಗೆ ಭರತ ನಂದಿ ಗ್ರಾಮದಲ್ಲಿದ್ದು ಬ್ರಹ್ಮಚರ್ಯದ ಉಪೋಷಣದ ನಿಯಮದಲ್ಲಿದ್ದನೋ ಅದೇ ರೀತಿ ನಿನ್ನ ಚರಣಗಳ ಆಣೆಯಾಗಿ ನಾನು ಹೇಳುತ್ತೇನೆ, ನೀನು ಒಂದು ವರ್ಷದೊಳಗೆ ಬಾರದಿದ್ದರೆ ನಾನು ನನ್ನ ಸಂಸಾರವನ್ನು ಬಿಟ್ಟುಬಿಡುತ್ತೇನೆ. ನಿಶ್ಚಯವಾಗಿಯೂ ಸನ್ಯಾಸಿಯಾಗಿ ಬಿಡುತ್ತೇನೆ. ನನ್ನ ಈ ನಿರ್ಣಯವನ್ನು ಮನಸ್ಸಿನಲ್ಲಿಟ್ಟುಕೊಂಡು ಸಂತೋಷದಿಂದ ಪ್ರಯಾಣ ಬೆಳೆಸು. ಮನೆ ಬಗ್ಗೆ ಏನೂ ಯೋಚನೆ ಮಾಡಬೇಡ. ನಾನು ಪ್ರತೀ ವಾರ ಪೇಣದಿಂದ ಬಂದು ಮನೆಯ ಸ್ಥಿತಿಗತಿ ನೋಡಿಕೊಳ್ಳುತ್ತೇನೆ' ಇಷ್ಟೆಲ್ಲಾ ಮಾತುಕತೆಯಾದ ನಂತರ ನಾನು ಹೊರಡಲು ತೊಡಗಿದೆ. ಮತ್ತೂ ಸ್ವಲ್ಪ ದೂರ ಆತ ಬಂದ. ಕೊನೆಗಂತೂ ತನ್ನ ಪ್ರತಿಜ್ಞೆಯನ್ನು ನೆನಪು ಮಾಡಿ ಕಣ್ಣೀರು ಸುರಿಸುತ್ತಾ ನನ್ನ ಕಡೆ ನೋಡುತ್ತಾ ನೋಡುತ್ತಾ ಹಿಂತಿರುಗಿದ". ಕುಟುಂಬ ಪ್ರೀತಿಗೆ ಸಂಬಂಧಿಸಿದ ಹಲವು ಘಟನೆಗಳ ವಿವರಗಳೂ ಕೃತಿಯ ಅಲ್ಲಲ್ಲಿ ಕಂಡುಬರುತ್ತವೆ ಮತ್ತು ಓದುವಾಗ ಕಣ್ಣುಗಳೂ ತೇವಗೊಳ್ಳುತ್ತದೆ.
ಕುಟುಂಬ ಆರ್ಥಿಕ ಬವಣೆಯಲ್ಲಿ ತತ್ತರಿಸುತ್ತಿದ್ದ ಸಂದರ್ಭದಲ್ಲಿಯೇ ವಿಷ್ಣು ಭಟ್ಟ ಪೌರೋಹಿತ್ಯದ ಸಲುವಾಗಿ ಪುಣೆಗೆ ಹೋಗುತ್ತಾರೆ ಮತ್ತು ಇಲ್ಲಿ ಮಥುರಾದಲ್ಲಿ ವಾಯಜಾ ಬಾಯಿ ಸಾಹಬ್ (ಶಿಂಧೆ) ಎಂಬವರು ಆ ಕಾಲದಲ್ಲಿ ಬಹಳ ದೊಡ್ಡ ಮೊತ್ತವಾಗಿರುವ ಏಳೆಂಟು ಲಕ್ಷ ರೂಪಾಯಿ ವೆಚ್ಚದಲ್ಲಿ 'ಸರ್ವತೋಮುಖ' ಯಜ್ಞ ನಡೆಸುವ ಮಾಹಿತಿ ಲಭಿಸುತ್ತದೆ. ಕುಟುಂಬದ ಸಾಲ ತೀರಿಸಲು ಈ ಯಜ್ಞಕ್ಕೆ ಹೋಗಲು ವಿಷ್ಣು ತೀರ್ಮಾನಿಸುತ್ತಾರೆ. ಆದರೆ ಮನೆಯಲ್ಲಿ ಹೆತ್ತವರು ಒಂದೆರಡು ನಿರ್ಧಿಷ್ಟ ಕಾರಣಕ್ಕೆ ಮಗನನ್ನು ಕಳಿಸಿಕೊಡಲು ಸಮ್ಮತಿ ನೀಡುವುದಿಲ್ಲವಾದರೂ, ಕೊನೆಗೆ ವಿಷ್ಣುವಿನ ಚಿಕ್ಕಪ್ಪ ರಾಮ ಭಟ್ಟರ ಸಲಹೆ, ಸೂಚನೆ ಮತ್ತು ತನಗೂ ಸಾಲ ಇದೆ, ನಾವಿಬ್ಬರೂ ಜೊತೆಯಾಗಿ ಹೋಗುವುದಾಗಿ ತಿಳಿಸಿದ ಕಾರಣ ವಿಷ್ಣುವನ್ನು ಚಿಕ್ಕಪ್ಪನ ಜೊತೆಗೆ ಕಳಿಸಿಕೊಡಲು ವಿಷ್ಣುವಿನ ತಂದೆ ಸಮ್ಮತಿ ನೀಡುತ್ತಾರೆ. ಇಲ್ಲಿ, ಆ ಕಾಲದಲ್ಲಿ ಜನರಲ್ಲಿ ಅತೀ ಸಾಮಾನ್ಯವಾಗಿಯೇ ಪ್ರಚಲಿತವಿದ್ದ ಒಂದೆರಡು ಮಹತ್ವದ ವಿಷಯಗಳು ಅನಾವರಣಗೊಳ್ಳುತ್ಥದೆ.
ಒಂದನೆಯದಾಗಿ; ಹದಿನೆಂಟನೇ ಶತಮಾನದ ಕಾಲಘಟ್ಟದಲ್ಲಿ ಈಗಿನ ಉತ್ತರ ಭಾರತವನ್ನು ಮಾತ್ರ "ಹಿಂದೂಸ್ತಾನ" ಎಂದು ಗುರುತಿಸಲಾಗುತ್ತಿತ್ತು. ಮಾತ್ರವಲ್ಲ; ಈ ಹಿಂದೂಸ್ತಾನವು ದಕ್ಷಿಣ ಭಾರತೀಯರಿಗೆ "ಪರದೇಶ" ವೇ ಆಗಿತ್ತು. ಪಶ್ಚಿಮದ ಕೆಲವು ದೇಶಗಳ ಬಗ್ಗೆ ಈ ಭಾಗದ ಜನರಲ್ಲಿದ್ದ ಕೀಳು ಭಾವನೆಯೇ ಹಿಂದೂಸ್ತಾನವೆಂಬ ಉತ್ತರ ಭಾರತದ ಬಗ್ಗೆ ಅಂದಿನ ಜನರಲ್ಲಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿಯೇ ವಿಷ್ಣು ಭಟ್ಟರ ಪ್ರವಾಸದ ಬರಹದುದ್ದಕ್ಕೂ ಅಲ್ಲಲ್ಲಿ "ಪರದೇಶ" ಎಂಬ ಉಲ್ಲೇಖ ಕಂಡು ಬರುತ್ತದೆ. ಮಗನನ್ನು ಕಳಿಸಿಕೊಡಲು ತಂದೆ ಮೊದಲಿಗೆ ಅಸಮ್ಮತಿ ವ್ಯಕ್ತಪಡಿಸಲೂ ಮುಖ್ಯ ಕಾರಣ ಇದುವೇ ಆಗಿರುತ್ತದೆ.
ಹಿಂದೂಸ್ತಾನವೆಂಬ "ಪರದೇಶ"ದ ಬಗ್ಗೆ ತಂದೆಯ ಅಭಿಪ್ರಾಯ ಮತ್ತು ಮಗನ ಶಪಥ ಹೀಗಿತ್ತು: " ಹಿಂದೂಸ್ತಾನ ಬಹಳ ದೂರವಿದೆ. ಹೋಗುವ ಹಾದಿಯೂ ತಿಳಿದಿಲ್ಲ. ಆ ದಾರಿಯೆಲ್ಲಾ ಅವಘಡ, ತೊಂದರೆ, ಗಲಭೆ ಮತ್ತು ಮೋಸ ವಂಚನೆಗಳಿಂದ ಕೂಡಿದೆ. ಅಲ್ಲಿನ ಜನರು ಭಂಗಿ ಸೇದುತ್ತಾರೆ ಮತ್ತು ಅಲ್ಲಿಯ ಹೆಂಗಸರಂತೂ ಬಹಳ ಮಾಯಾವಿಗಳು. ಗಂಡಸರನ್ನು ವಶೀಕರಿಸಿಕೊಂಡು ಬಿಡುತ್ತಾರೆ. ಹೀಗಾಗಿ ನೀನು ಹಿಂದೂಸ್ತಾನಕ್ಕೆ ಹೋಗುವುದು ನನಗೆ ಸುತಾರಾಂ ಇಷ್ಟವಿಲ್ಲ". ತಂದೆಯ ಸ್ಪಷ್ಟ ನುಡಿಗೆ ಮಗ ಹೀಗೆ ಶಪಥ ಮಾಡುತ್ತಾನೆ: "ನಾನು ಹೆಣ್ಣುಗಳಿಗಾಗಿ ಹಿಂದುಸ್ತಾನಕ್ಕೆ ಹೋಗುತ್ತಿಲ್ಲ ಮತ್ತು ಎಂದೂ ನಾನು ಅವರ ಬಲೆಗೆ ಬೀಳುವುದೂ ಇಲ್ಲವೆಂದು ಶಪಥ ಮಾಡಿ ಹೇಳುತ್ತೇನೆ. ನಶೆ ಬರುವ ಯಾವ ಪದಾರ್ಥವನ್ನೂ ಎಂದೂ ನಾನು ಮುಟ್ಟುವುದಿಲ್ಲ. ನನ್ನ ಆರೋಗ್ಯವನ್ನು ನಾನು ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿರುತ್ತೇನೆ. ಅಲ್ಲದೆ, ಚಿಕ್ಕಪ್ಪನಿಗೆ ಆ ದೇಶದ ಪರಿಚಯ ಚೆನ್ನಾಗಿಯೇ ಇದೆ. ಅವರು ನನ್ನ ಹಿತ - ಅಹಿತವನ್ನು ಖಂಡಿತಾ ನೋಡಿಕೊಳ್ಳುತ್ತಾರೆ. ಅವರು ನನ್ನನ್ನು ಕೆಟ್ಟ ಮಾರ್ಗದಲ್ಲಿ ಹೋಗಲು ಬಿಡುವುದಿಲ್ಲ". (ಪುಟ 28, 31).
ಮನೆಯವರನ್ನು ಒಪ್ಪಿಸಿದ ವಿಷ್ಣು ಭಟ್ಟ ಚಿಕ್ಕಪ್ಪ ಹಾಗೂ ತಮ್ಮದೇ ಊರಿನ ಒಂದು ಕುಟುಂಬದವರ ಜೊತೆ ಪ್ರವಾಸ ಆರಂಭಿಸುತ್ತಾರೆ. ಆ ಕಾಲದ ಯಾತ್ರೆ / ಪ್ರವಾಸ ಹೇಗಿತ್ತು ಎಂಬುದನ್ನು ಪ್ರವಾಸಿಯಿಂದಲೇ ತಿಳಿದುಕೊಳ್ಳೋಣ. "ಸುಖದ ನಿಜವಾದ ಆನಂದ ಕೊಡುವ ಶಕ್ತಿ ಸ್ವಲ್ಪವೂ ಕಷ್ಟವಿಲ್ಲದೆ ಪ್ರಾಪ್ತವಾಗುವುದಿಲ್ಲ. ನಡೆಯುವಾಗ ಕಾಲು ನೋಯುವುದು, ಇವತ್ತು ಊಟ ಸಿಗಲಿಲ್ಲ, ನಿನ್ನೆ ಬಿರು ಬಿಸಿಲಿನಲ್ಲಿ ಯಾವುದೋ ಕೆರೆಯ ಅಲ್ಪ ಸ್ವಲ್ಪ ನೆರಳಿನಾಶ್ರಯದಲ್ಲಿ ನೀರು ಕುಡಿಯುವುದು, ಮೊನ್ನೆ ಚಳಿಯಲ್ಲಿ ಕಾಡಿನಲ್ಲಿ ನರಳುತ್ತಾ ಮುದುಡಿಕೊಂಡಿರುವುದು, ಯಾವುದೋ ವಸ್ತುವನ್ನು ಮರೆತು ಬಿಡುವುದು, ಕಿಸೆಗಳ್ಳರ ಭಯ - ಇಂತಹ ನೂರಾರು ಪ್ರಸಂಗಗಳು ಪ್ರವಾಸದಲ್ಲಿ ಅನುಭವಕ್ಕೆ ಬರುತ್ತವೆ. ನಸುಗತ್ತಲಿನಲ್ಲಿಯೇ ಎದ್ದು ಪ್ರಾತಃಕಾಲದ ಚಳಿಯಲ್ಲಿ ನಾವು ನಡೆಯುತ್ತಿದ್ದೆವು. 9 - 10 ಗಂಟೆ ಸುಮಾರಿಗೆ ಎಲ್ಲಿಯಾದರೂ ಮರದ ಕೆಳಗೆ ನಿಂತುಬಿಡುತ್ತಿದ್ದೆವು. ಒಳ್ಳೆಯ ಸುಂದರವಾದ ನದಿಯ ಪ್ರವಾಹದಲ್ಲಿ - ಎರಡೂ ಕೈಗಳಿಂದ ಸುಖವಾಗಿ ಈಜಾಡಿ ಸ್ನಾನ ಮಾಡುತ್ತಿದ್ದೆವು. ಬಾವಿ ಸಿಗದಿದ್ದರೆ ಮಡಿಕೆ ನೀರಿನಲ್ಲೇ ಸ್ನಾನ ಮುಗಿಸುತ್ತಿದ್ದೆವು. ಸ್ನಾನ ಮುಗಿಸಿ ಬ್ರಹ್ಮಕರ್ಮ ಮುಗಿಸಿ 'ಪಿಠಲಾ ಭಾತ್' (ಒಂದು ಬಗೆಯ ಉಪ್ಪಿಟ್ಟು) ತಯಾರಿಸಿಕೊಳ್ಳುತ್ತಿದ್ದೆವು. ವಿಶ್ರಾಂತಿ ಪಡೆದು ಮತ್ತೆ ನಡೆಯಲು ತೊಡಗುತ್ತಿದ್ದೆವು. ಈ ರೀತಿ ಪುಣೆಯನ್ನು ಬಿಟ್ಟು ರಾತ್ರಿ ವಾಘೋಲಿ ತಲುಪಿದೆವು" (ಪುಟ 37, 38).
ಇಂಥ ಯಾತ್ರೆಯಲ್ಲಿರುವಾಗಲೇ, ಸಿಪಾಯಿ ದಂಗೆ ಅಥವಾ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಸಿಕೊಂಡ ದಂಗೆಗಿಂತ ಮೂರು ದಿನ ಹಿಂದೆಯೇ ಸಿಪಾಯಿಗಳಿಂದಲೇ ದಂಗೆ ನಡೆಯಲಿರುವ ಮಾಹಿತಿ ವಿಷ್ಣು ಭಟ್ಟರಿಗೆ ಸಿಗುತ್ತದೆ. ಆಗಲೂ ವದಂತಿಗಳು ಮತ್ತು ಸುಳ್ಳುಗಳು, ಅರ್ಧ ಸತ್ಯಗಳಿಂದ ಕೂಡಿದ ಸುಳ್ಳುಗಳು ಪ್ರಚಾರದಲ್ಲಿತ್ತು ಎಂಬಿತ್ಯಾದಿ ವಿಷಯಗಳು ಈ ಭಾಗವನ್ನು ಓದುವಾಗ ಇತಿಹಾಸದ ಬಗ್ಗೆ ಅರಿವು ಇರುವವರ ಗಮನಕ್ಕೆ ಇಲ್ಲಿ ಬರದೇ ಇರುವುದಿಲ್ಲ. ಅದೇನೇ ಇರಲಿ, ಪ್ರವಾಸದುದ್ದಕ್ಕೂ ವಿಷ್ಣು ಭಟ್ಟರ ಪ್ರಕೃತಿಯ, ಪರಿಸರದ ವರ್ಣನೆ, ವಿವರಗಳು, ಸ್ಥಳನಾಮದ ಮಾಹಿತಿಗಳು, ವೇದಾಂತದ ಮಾತುಗಳು ಓದುಗನಿಗೆ ಅಪ್ಯಾಯಮಾನವಾಗಿಸುವಲ್ಲಿ ಪೂರಕ ಪಾತ್ರವಹಿಸುತ್ತದೆ.
ಹತ್ತು ಹಲವಾರು ಸಂದರ್ಭಗಳಲ್ಲಿ ಪ್ರವಾಸಕ್ಕೆ ಅನೇಕ ವಿಧದ ಅಡ್ಡಿ ಆತಂಕ ಎದುರಾಗುತ್ತದೆಯಾದರೂ, ಪ್ರವಾಸೀ ವಿಷ್ಣು ಭಟ್ಟ ಹಾಗೂ ಇವರ ಜೊತೆಗಿದ್ದವರು ಭಯಗೊಳ್ಳದೆ, ಹತಾಶೆಗೀಡಾಗದೆ ಹಣ ಸಂಪಾದನೆಯ ಏಕೈಕ ಗುರಿಯೊಂದಿಗೆ ಯಾತ್ರೆ ಮುಂದುವರಿಸುವುದು ಮತ್ತು ಆತಂಕಗಳ ನಡುವೆಯೂ ಕುತೂಹಲ, ಉಪಾಯ ಮತ್ತು ಛಲದೊಂದಿಗೆ ಮುಂದುವರಿಯುವ ಸ್ಥಿತಪ್ರಜ್ಞ ಮನಸ್ಥಿತಿ ವಿಷ್ಣು ಭಟ್ಟರನ್ನು ಓದುಗನ ಆಪ್ತನನ್ನಾಗಿಸುತ್ತದೆ.
ಹೌದು, ಅಂದು "ಮಾತೆ" ಮಾರಾಟದ, ದಾನದ ವಸ್ತುವಾಗಿದ್ದಳು. ದಂಗೆ ಅದಾಗಲೇ ಆರಂಭವಾಗಿತ್ತು. "ಮಹೂ ಛಾವಣಿ"ಗೆ ಹಚ್ಚಲಾಗಿದ್ದ ಬೆಂಕಿಯ ಧಗಧಗಿಸುತ್ತಿದ್ದ ಅಗ್ನಿಯ ಜ್ವಾಲೆಗಳನ್ನು ನೋಡುತ್ತಲೇ, ಜನರ ಚೀತ್ಕಾರ, ಓಡಾಟಗಳನ್ನು ನೋಡಿಕೊಂಡೇ ಉಜ್ಜಯಿನಿವರೆಗೂ ಬಂದು ತಂಗಿದ್ದರು ವಿಷ್ಣು ಭಟ್ಟರು. ಧಾರಾ ನಗರದಲ್ಲಿ ಯಾರೋ ದುಷ್ಟರಿಂದ ಹಲ್ಲೆಗೊಳಗಾದ ಧಾರಾ ದೇಶದ ರಾಜ ಚೇತರಿಸಿಕೊಳ್ಳದೆ ಮೃತಪಟ್ಟಿದ್ದ. ರಾಜನ ಕುಟುಂಬ ವರ್ಗ ಧಾರಾ ನಗರದಲ್ಲಿ ಉತ್ತರಕ್ರೀಯೆಯ ಭಾಗವಾಗಿ ಭಾರೀ ದೊಡ್ಡ ಪ್ರಮಾಣದಲ್ಲಿ ದಾನ ಕಾರ್ಯವನ್ನು ನಡೆಸಲಿತ್ತು. ಆಗ ಉಜ್ಜಯಿನಿಯಲ್ಲಿದ್ದ ವಿಷ್ಣು ಭಟ್ಟ, ಉಜ್ಜಯಿನಿಯ ಬ್ರಾಹ್ಮಣ ಮಂಡಳಿಯೊಂದಿಗೆ ಧಾರಾ ನಗರಕ್ಕೆ ಚಂಬಲ್ ದಂಡೆಯ ಮೂಲಕ ತಲುಪುತ್ತಾರೆ. "ಇಡೀ ಧಾರಾ ನಗರದ ತುಂಬಾ ಬ್ರಾಹ್ಮಣರೇ ತುಂಬಿಕೊಂಡಿದ್ದರು. ಉಜ್ಜಯಿನಿ, ಇಂದೋರ್, ದೇವಾಸ ಮೊದಲಾದ ಪ್ರದೇಶಗಳಿಂದ ಸುಮಾರು ಹತ್ತು ಸಾವಿರ ದಕ್ಷಿಣದ ಬ್ರಾಹ್ಮಣರು ದಕ್ಷಿಣಾರ್ಥವಾಗಿ ಬಂದಿದ್ದರು. ಪಟ್ಟಣದಲ್ಲಿ ಬ್ರಾಹ್ಮಣರಿಗೆ ಉಳಿದುಕೊಳ್ಳಲು ಸ್ಥಳವೇ ಇರಲಿಲ್ಲ. ಶೂದ್ರರ ಮನೆಗಳೂ ತುಂಬಿದ್ದವು. ಪಟ್ಟಣದಲ್ಲಿ ಒಂದು ಪ್ರಹರ ಕಾಲ ತಂಗಲು ಸ್ಥಳಕ್ಕಾಗಿ ನಾವು ಅಲೆದಾಡತೊಡಗಿದೆವು. ಕೊನೆಗೆ ಪಟ್ಟಣದ ದಕ್ಷಿಣ ಭಾಗದಲ್ಲಿ ಚಿನ್ನದಂಗಡಿಯ ಕಟ್ಟೆಯ ಮೇಲೆ ಆತ ಬೇಡವೆಂದರೂ ನಾವು ಜಂಡಾ ಹೂಡಿಯೇ ಬಿಟ್ಟೆವು" (ಪುಟ 56) ಎಂದು ಹೇಳುವ ವಿಷ್ಣು ಭಟ್ಟರು ಮುಂದುವರಿದು ಅಲ್ಲಿ ನಡೆದ ದಾನಾದಿಗಳನ್ನು ಈ ಕೆಳಗಿನಂತೆ ಬರೆಯುತ್ತಾರೆ.
"ಹೊರಗೆ ಹೋಗುತ್ತಲೇ ದಾನ ಪಡೆದವನನ್ನು ತೈಲಂಗ ಬ್ರಾಹ್ಮಣರು ಗೇಲಿ ಮಾಡುತ್ತಿದ್ದರು. ಅಯ್ಯೋ, ಅದನ್ನು ಕೇಳುವುದೆಂತೂ ? ಹೊರಗೆ ಸಾವಿರಾರು ಜನ ತೈಲಂಗ ಮತ್ತು ಉತ್ತರ ದೇಶದ ಬ್ರಾಹ್ಮಣರು ಮತ್ತು ಪ್ರಜಾ ಜನರು ತುಂಬಿಕೊಂಡಿದ್ದರು. ಹರ್ರೆ ಎನ್ನುತ್ತಾ ಅವರು ಗಟ್ಟಿಯಾಗಿ ನಗುತ್ತಾ ಲೇವಡಿ ಮಾಡುತ್ತಿದ್ದರು. ದಾಸೀದಾನ ಪಡೆದವನ ಕತೆಯಂತೂ ತುಂಬಾ ಹೀನಾಯವಾಗಿತ್ತು. ಸುಂದರ, ಸರ್ವಾಲಂಕಾರಯುಕ್ತಳಾದ ದಾಸಿಯ ಸೆರಗನ್ನು ಯಾರಾದರೂ ಬಡ ಬ್ರಾಹ್ಮಣನ ಧೋತಿಗೆ ಗಂಟು ಹಾಕಿದ್ದನ್ನು ಕಂಡರಂತೂ ಜನ ಕೇಕೆ ಹಾಕಿ ನಗುತ್ತಿದ್ದರು. ಆ ಬಡಪಾಯಿಯ ಪಾಡು ಯಾರಿಗೂ ಬೇಡ. ದಾಸಿ ಎಲ್ಲಾದರೂ ಲುಚ್ಚಳಾಗಿದ್ದು ಚಟಕ - ಮಟಕ್ ಮಾಡಿಕೊಂಡು ಬ್ರಾಹ್ಮಣನ ಪಕ್ಕ ಹೋಗುತ್ತಿದ್ದರಂತೂ ಆ ಬ್ರಾಹ್ಮಣ ನಾಚಿ ನೀರಾಗುತ್ತಿದ್ದ" (ಪುಟ 58).
ವಿಷ್ಣು ಭಟ್ಟ ಗೋಡ್ಸೆಯವರ ಪ್ರವಾಸಾನುಭವದ ಕೇಂದ್ರ ಬಿಂದುವೇ, ಬಹುಮುಖ್ಯ ಅಂಶವೇ 1857ರ ದಂಗೆಯ ಘಟನಾವಳಿಗಳು. "ನನ್ನ ಪ್ರವಾಸ"ದ ಪುಟ 37ರಿಂದ 214ರ ವರೆಗೂ ದಂಗೆಗಳ ವಿವರಗಳು ಲೈವ್ ನಂತೆ ಮೂಡಿಬಂದಿದೆ.
ದಂಗೆ ಆರಂಭವಾದದ್ದು ಜೂನ್ ಹತ್ತರಂದು. ಇದಕ್ಕಿಂತ ಮೂರು ದಿನ ಹಿಂದೆ ಸಾತ್ ಪುಡೆ ಮತ್ತು ಮಹೂ ಛಾವಣಿಯ ಮಧ್ಯೆ ಒಂದೂರಿನಲ್ಲಿ ವಿಷ್ಣು ಭಟ್ಟರಿಗೆ ದಂಗೆಯಲ್ಲಿ ಭಾಗಿಯಾಗಲಿದ್ದ ಗೋವಾ ಮೂಲದ ಸಿಪಾಯಿಗಳ ಭೇಟಿಯಾಗುತ್ತದೆ ಮತ್ತು ಇವರ ಮೂಲಕ ದಂಗೆ ಏಳಲು ಕಾರಣವಾದ ಹಿನ್ನೆಲೆ ಮತ್ತು ಮುಂದೆ ನಡೆಯಬಹುದಾದ ಘಟನಾವಳಿಗಳ ಬಗ್ಗೆ ಮಾಹಿತಿ ಲಭಿಸುತ್ತದೆ.
ದಂಗೆಗೆ ಕಾರಣವಾದ ಮೂಲ ವಿಷಯವನ್ನು ವಿಷ್ಣು ಭಟ್ಟ ಗೋಡ್ಸೆ ಹೀಗೆ ಬರೆದಿದ್ದಾರೆ: " ಒಬ್ಬ ಬ್ರಾಹ್ಮಣ ಸಿಪಾಯಿ ಸ್ನಾನ ಮಾಡಲು ಬಾವಿಯ ಬಳಿಗೆ ಹೋದ. ಅಲ್ಲಿ ಒಬ್ಬ ಚಮಾರ (ಪರಿಶಿಷ್ಟ ಜಾತಿ ಅಥವಾ ವರ್ಗದವ) ನೀರು ಕುಡಿಯಲು ಲೋಟವನ್ನು ಕೇಳಿದ. ಆಗ ಬ್ರಾಹ್ಮಣನೆಂದ - 'ನಾನು ನಿನಗೆ ಲೋಟ ಕೊಟ್ಟರೆ ಅದು ಮೈಲಿಗೆಯಾಗುತ್ತದೆ'. ಅದನ್ನು ಕೇಳಿದ ಚಮಾರ ಸಿಟ್ಟಿನಿಂದ ಹೀಗೆಂದ - 'ಅರೆ, ಹೋಗು ಹೋಗು. ಜಾತಿ ಅಹಂಕಾರ ಹೆಚ್ಚು ತೋರಿಸಬೇಡ. ಇಲ್ಲಿ ಕಾಡತೂಸುಗಳು ತಯಾರಾಗುತ್ತವೆ. ಅದರಲ್ಲಿ ದನ ಮತ್ತು ಹಂದಿಯ ಚರ್ಬಿ ಹಾಕುತ್ತಾರೆ. ಆ ಚರ್ಬಿಯನ್ನು ತಯಾರಿಸಿ ಕೊಡುವವರು ನಾವೇ. ಅದಕ್ಕೆ ನೀವು ಬಾಯಿ ಹಾಕುತ್ತೀರಿ. ಯಾಕೆ ಸುಮ್ಮನೆ ಧರ್ಮದ ಅಹಂಕಾರ ತೋರಿಸುತ್ತೀಯಾ'. ಈ ಎಲ್ಲಾ ಮಾತುಗಳಿಂದ ಬಹಳ ರಾದ್ಧಾಂತವಾಯಿತು. ಕೈ ಕೈ ಮಿಲಾಯಿಸುವ ವರೆಗೆ ಹೋಯಿತು. ತುಕಡಿಯ ಹಾಗೂ ಆಚೆಯೀಚೆಯ ಜನರು ಒಟ್ಟು ಸೇರಿದರು. ಎಲ್ಲರೂ ಚರ್ಬಿಯ ಕತೆ ಕೇಳಿದರು. ಸ್ವಲ್ಪ ಹೊತ್ತಿನಲ್ಲಿಯೇ ಈ ವಿಚಾರ ಎಲ್ಲಾ ಕಡೆಗೂ ಹರಡಿತು".
ಒಂದು ನಿರ್ಧಿಷ್ಟ ಮತ್ತು ಸೀಮಿತ ವಿಷಯದ ಹಿನ್ನೆಲೆಯಲ್ಲಿ "ಬಿಳಿಯರ" ಆಡಳಿತದ ವಿರುದ್ಧ ಆರಂಭಗೊಂಡ ದಂಗೆಯಲ್ಲಿ ಎಲ್ಲಾ "ಕರಿಯರಾಗಲೀ, ಕರಿಯರ ತುಕಡಿಗಳಾಗಲೀ" ಭಾಗಿಯಾಗಿರಲಿಲ್ಲ. ಕರಿಯರ ಅನೇಕ ತುಕಡಿಗಳು ಬಿಳಿಯರ ಆಡಳಿತದ ತುಕಡಿಗಳಾಗಿ ದಂಗೆ ಎದ್ದ ಕರಿಯರನ್ನು ಮತ್ತು ದೇಶೀಯ ರಾಜರ ಸೈನ್ಯವನ್ನು ಮಣಿಸುವ ಕರ್ತವ್ಯದಲ್ಲಿ ನಿರತವಾಗಿತ್ತು. ಇದೇ ಹೊತ್ತಲ್ಲಿ ಕೆಲವು ಕರಿಯರ ತುಕಡಿಗಳು ಮಾತ್ರ ಧರ್ಮ ರಕ್ಷಣೆಯ ಹೆಸರಿನಲ್ಲಿ ದಂಗೆ ಎದ್ದರು. ದಂಗೆ ಎದ್ದವರ ಮನಸ್ಥಿತಿ ಹೇಗಿತ್ತು ಎಂಬುದನ್ನು ಮೂರ್ನಾಲ್ಕು ಕಡೆ ವಿಷ್ಣು ಭಟ್ಟ ಗೋಡ್ಸೆ ಅನಾವರಣಗೊಳಿಸಿದ್ದಾರೆ: "ಈ ಜನರಂತೂ ಮದಭರಿತ ಆನೆಯ ಹಾಗೆ ಕೆಟ್ಟು ಹೋದವರು", "ಆದರೆ, ಅವರಿಗೆ ಹಿಡಿ, ಬಡಿ, ಕೊಚ್ಚು, ಕೊಲ್ಲು ಎಂಬುದನ್ನು ಬಿಟ್ಟು ಮತ್ತೇನೂ ತಿಳಿಯುತ್ತಿಲ್ಲ", "ದಂಗೆ ಮಾಡುವ ಜನರಿಗೆ ಧರ್ಮದ ಮೇಲೆ ಬಹಳ ಶ್ರದ್ಧೆ ಇತ್ತು. ನಿರ್ಥಕ ಮತ್ತು ನಿರ್ದಯ ಹತ್ಯಾಕಾಂಡ ಹಾಗೂ ಕಾಮಕ್ರೋಧಾದಿಗಳ ಪ್ರಾಬಲ್ಯದಿಂದಾಗಿ ದಂಗೆಯವರ ಬುದ್ಧಿಯು ಆರೋಗ್ಯಕರವಾಗಿದ್ದಿರಲಿಲ್ಲ". ಇವರ ಈ ಮಾತಿಗೆ ಪೂರಕವಾಗಿರುವ, ಸಾಕ್ಷಿ ಒದಗಿಸುವ ಕೆಲವು ಘಟನೆಗಳು ದಂಗೆಯ ಸಂದರ್ಭದಲ್ಲಿ ನಡೆದುದರಲ್ಲಿ ತನಗೆ ಕಂಡದ್ದನ್ನು ಮತ್ತು ಪ್ರತ್ಯಕ್ಷದರ್ಶಿಗಳು ತನ್ನಲ್ಲಿ ಹೇಳಿಕೊಂಡದ್ದನ್ನು ಕೃತಿಯ ಅಲ್ಲಲ್ಲಿ ವಿಷ್ಣು ಭಟ್ಟ ಗೋಡ್ಸೆ ನೀಡಿದ್ದಾರೆ.
"ಅನಂತರ ತಾತ್ಯಾ ಟೋಪೆ ಗುಲಸರಯಿಯ ರಾಜ ಕೇಶವ ರಾವ್ ಬಳಿ ಬಂದ. ಸಭೆ ಸೇರಿಸಿ ಹೀಗೆಂದ - 'ನಾವು ನಾನಾ ಸಾಹೇಬರ ಕಡೆಯಿಂದ ಬಂದವರು. 'ನಾವು ಹಿಂದೂ ಧರ್ಮಕ್ಕಾಗಿ ಯುದ್ಧ ಮಾಡುತ್ತಿದ್ದೇವೆ. ಪೇಶ್ವಾ ಸೇನೆಯ ಖರ್ಚಿಗಾಗಿ ಮೂರು ಲಕ್ಷ ರೂಪಾಯಿಯನ್ನು ಕೊಡಿರಿ' ಎಂದು ಕೇಳಿದ". ಇದು ದಂಗೆಯವರ ಒಂದು ಕಥೆಯಾದರೆ, ಇನ್ನೊಂದು ಕಥೆ ಹೀಗಿತ್ತು: " ಬಿಳಿಯರಿಂದ ತುಂಬಿದ ಒಂದು ಉಗಿ ಹಡಗು ಇಲಾಹಾಬಾದ್ ಅಥವಾ ಪ್ರಯಾಗದ ಕಡೆಗೆ ಸಾಗುತ್ತಿತ್ತು. ಇಲಾಹಾಬಾದ್ ಇಂಗ್ಲೀಷರ ಭದ್ರಕೋಟೆ. ಅದರಲ್ಲಿ ಅರವತ್ತು ಎಪ್ಪತ್ತು ಹೆಂಗಸರು, ಹತ್ತಿಪ್ಪತ್ತು ಮಕ್ಕಳು ಹಾಗೂ ಸುಮಾರು ಹದಿನೈದು ಜನ ಗಂಡಸರು ಇದ್ದರು", "ಇದನ್ನೆಲ್ಲಾ ಕಂಡ ದಂಡೆಯಂಚಿನಲ್ಲಿರುವ ಸೈನಿಕರು ಶ್ರೀಮಂತನಿಗೆ ಸುದ್ಧಿ ಮುಟ್ಟಿಸಿದರು. ಅಲ್ಲದೆ ಅವರೆಂದರು - 'ಆ ಹಡಗು ವೇಗವಾಗಿ ಧ್ರುವ ಘಾಟಿನ ಮೂಲಕ ಹೋಗುವಾಗ ಅವರ ಮೇಲೆ ಆಕ್ರಮಣ ಮಾಡಲು ನೀವು ಆಜ್ಞೆ ಮಾಡಲಿಲ್ಲ. ಈಗ ಆ ಹಡಗು ಗಂಗೆಯಲ್ಲಿ ಸಿಕ್ಕಿ ಬಿದ್ದಿದೆ.ಗಂಗೆಯೇ ಅವರ ಮೇಲೆ ಮುನಿಯದೆ ಇದ್ದರೆ ಇದು ಹೇಗೆ ಸಾಧ್ಯವಾಗುತ್ತಿತ್ತು ?. ಮೊದಲು ನೀವು ಆದೇಶ ನೀಡಲಿಲ್ಲ. ಈಗ ತಾವು ಅಪ್ಪಣೆ ಕೊಡಲೇಬೇಕು. ನಾವು ಅದನ್ನು ಉಡಾಯಿಸಿ ಎಲ್ಲರನ್ನೂ ಕೊಂದೇ ಬಿಡುತ್ತೇವೆ". ಹೀಗೆನ್ನುತ್ತಾ ಅವರು ತಮ್ಮ ಕಾವಲು ವಲಯಕ್ಕೆ ಹಿಂತಿರುಗಿ ಅಪ್ಪಣೆಯಿಲ್ಲದೆ ಗುಂಡಿಕ್ಕಲು ಆದೇಶಿಸಿದರು", " ಅಲ್ಲಿದ್ದ ಹೆಚ್ಚಿನೆಲ್ಲಾ ಹೆಂಗಸರು, ಮಕ್ಕಳು ಭಸ್ಮವಾದರು", "ಬ್ರಹ್ಮಾವರ್ತದಲ್ಲಿ ಸರಿಸುಮಾರು 8 ಬಿಳಿ ಹೆಂಗಸರು ಮತ್ತೆ ಕೆಲವು ಮಕ್ಕಳುಜೈಲಿನಲ್ಲಿದ್ದರು. ಈ ಮೊದಲೇ ಬಿಠೂರಿನ ಜೈಲಿನಲ್ಲಿ 40 ಇಂಗ್ಲೀಷ್ ಮಹಿಳೆಯರು ಮತ್ತು ಹತ್ತು ಹದಿನೈದು ಮಕ್ಕಳು ಜೈಲಿನಲ್ಲಿದ್ದರು. ಅದಕ್ಕೀಗ ಇನ್ನಷ್ಟೂ ಸೇರ್ಪಡೆಯಾಯಿತು", "ಆಗ ನಾನಾ ಸಾಹೇಬಾಜ್ಞಾಪಿಸಿದ - 'ಹೆಂಗಸರನ್ನು ಕೊಲ್ಲುವುದು ಸರಿಯಲ್ಲ, ಯಾವ ಹೆಂಗಸು ಈ ಒಳಸಂಚು ಮಾಡಿರುವಳೋ ಅವಳನ್ನು ಮಾತ್ರ ಮುಗಿಸಿಬಿಡಿ'. ಆದರೆ, ಸಿಪಾಯಿಗಳು ಎಲ್ಲಿ ಅವರ ಮಾತುಗಳನ್ನು ಕೇಳುತ್ತಾರೆ ? ಅವರು ಆ ಕ್ಷಣವೇ ಜೈಲನ್ನು ಹೊಕ್ಕು ಎಲ್ಲರನ್ನು ಚಿಂದಿ ಚಿಂದಿ ಮಾಡಿದರು".
ಆಂಗ್ಲ ಆಡಳಿತದ ಸೈನಿಕರು ಯಾವ ರಾಜ್ಯದ ಮೇಲೆ ದಾಳಿ ನಡೆಸಿ ಜಯ ಸಾಧಿಸುತ್ತಿದ್ದರೋ, ಆ ರಾಜ್ಯದ ನಗರಗಗಳಲ್ಲಿ ಬಿಳಿಯ ಸೈನಿಕರ ಲೂಟಿ, ಕೊಲೆ, ದೌರ್ಜನ್ಯ ಸರ್ವ ಸಾಮಾನ್ಯವೇ ಆಗಿತ್ತು. ಇವುಗಳೆಲ್ಲವನ್ನೂ ಎಲ್ಲರೂ ಎಲ್ಲೆಡೆ ದಾಖಲಿಸಿದ್ದಾರೆ. ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಈ ಬಿಳಿಯ ಸೈನಿಕರ ಜೊತೆಗೆ ಆಂಗ್ಲ ಆಡಳಿತದಡಿಯಲ್ಲಿದ್ದ ಕರಿಯ ಸೈನಿಕರೂ ಲೂಟಿ ನಡೆಸುತ್ತಿದ್ದನ್ನು ವಿಷ್ಣು ಭಟ್ಟರು ತಮ್ಮ ಕೃತಿಯಲ್ಲಿ ನಿಷ್ಪಕ್ಷಪಾತವಾಗಿ ಬರೆದಿದ್ದಾರೆ. ಮಾತ್ರವಲ್ಲ, ದಂಗೆ ಎದ್ದ ಸಿಪಾಯಿಗಳು ನಡೆಸಿದ ಕುಕೃತ್ಯವನ್ನೂ ದಾಖಲಿಸಿದ್ದಾರೆ. "ಯುದ್ಧದಲ್ಲಿ ಪೇಶ್ವೆಗೆ ಪರಾಜಯವಾಗುತ್ತಲೇ ನಾವು ನಮ್ಮ ಪ್ರಾಣಭಯಕ್ಕೆ ಸಿಲುಕಿದೆವು. ಕೆಲವು ದಕ್ಷಿಣದ ಬ್ರಾಹ್ಮಣರು ಪಟ್ಟಣ ಬಿಟ್ಟು ಓಡುತ್ತಿದ್ದರು. ನಾವು ಕೂಡಾ ಅವರೊಂದಿಗೆ ಪಲಾಯನ ಮಾಡತೊಡಗಿದೆವು. ಆದರೆ, ಆ ಸಮಯದಲ್ಲಿ ಪಟ್ಟಣವಾಸಿಗಳ ಮಹಾ ದುರ್ದಶೆಯನ್ನು ಕಂಡು ನಾನು ನನ್ನ ದುಃಖವನ್ನು ಮರೆತೆ. ಕಾಲಪಿಯ ರಸ್ತೆಗಳಲ್ಲಿ ಸಕ್ಕರೆಯಂತೂ ಎಲ್ಲೆಲ್ಲೂ ಹರಡಿಕೊಂಡಿತ್ತು. ಅಲ್ಲಲ್ಲಿ ಸಿಪಾಯಿಗಳು ಸಾಹುಕಾರರಿಗೆ ನಾನಾ ರೀತಿಯ ಕಷ್ಟ ಕೊಟ್ಟು ಅವರ ಸಂಪತ್ತು ಲೂಟಿ ಮಾಡುತ್ತಿದ್ದರು. ಇಂಗ್ಲೀಷರು ಎಂತೆಂಥ ಅತ್ಯಾಚಾರ ಮಾಡಿಯಾರು ಎಂಬ ಭಯ, ಆತಂಕ ಎಲ್ಲೆಡೆಯೂ ವದಯಾಪಿಸಿತ್ತು. ಇನ್ನೊಂದೆಡೆ ಊರಿನ ಲುಚ್ಚರು, ಅನ್ಯಾಯಿಗಳು, ಗೂಂಡಾಗಳು ಲೂಟಿ, ಅತ್ಯಾಚಾರ ಮಾಡುತ್ತಾ ರೈತರನ್ನು, ಜನರನ್ನು ಬಲಿತೆಗೆದುಕೊಳ್ಳುತ್ತಿದ್ದರು. ಕೆಲವು ಕಡೆ ಪಾಪದ ಅಬಲೆಯರ ಮೇಲೆ ಅನ್ಯಾಯವಾಗುತ್ತಿದ್ದುದನ್ನು ಕಂಡು ನಮ್ಮ ದುಃಖ ಭಯ ಇಮ್ಮಡಿಯಾಯಿತು. ಅಲ್ಲಿ ಇಲ್ಲಿ ಅಡಗಿಕೊಳ್ಳುತ್ತಾ, ಓಡುತ್ತಾ ಹೇಗೋ ನಗರದಿಂದ ಹೊರಗೆ ಬಂದೆವು".
ವಿಷ್ಣು ಭಟ್ಟ ಗೋಡ್ಸೆಯವರ ಕೃತಿಯಲ್ಲಿ ದಾಖಲಾದ ಮತ್ತೊಂದು ಗಮನಾರ್ಹ ವಿಷಯವೆಂದರೆ, ದೇಶೀಯ ರಾಜರುಗಳು ಶತ್ರುಗಳ ನಾಶಕ್ಕಾಗಿ, ರಾಜ್ಯದ ರಕ್ಷಣೆಗಾಗಿ ಅರಮನೆಯಲ್ಲಿ ಮತ್ತು ದೇವಸ್ಥಾನಗಳಲ್ಲಿ ನಡೆಸುತ್ತಿದ್ದ ಧಾರ್ಮಿಕ ಅನುಷ್ಠಾನಗಳನ್ನು, ಬ್ರಾಹ್ಮಣ ಸಂತರ್ಪಣೆಗಳನ್ನು, ದಾನ ದಕ್ಷಿಣೆಗಳನ್ನು ಸಾಕಷ್ಟು ನೀಡುತ್ತಿದ್ದರು ಎಂಬುದು. ಇಷ್ಟೆಲ್ಲಾ ಮಾಡಿಯೂ ಇಂಗ್ಲೀಷರ ಸೈನ್ಯದ ಎದುರು ಸೋತು ಪಲಾಯನ ಮಾಡಬೇಕಾದ ಪರಿಸ್ಥಿತಿ ಬರುತ್ತಿತ್ತು. ಇದನ್ನೆಲ್ಲಾ ಓದುವಾಗ ದೇಶೀಯ ರಾಜರುಗಳು ಅನುಷ್ಠಾನ ಮತ್ತು ಬ್ರಾಹ್ಮಣ ಸಂತರ್ಪಣೆ ಹಾಗೂ ಬ್ರಾಹ್ಮಣರಿಗೆ ಕೊಟ್ಟ ದಾನ ದಕ್ಷಿಣೆಯ ಮೊತ್ತವನ್ನೇ ತಮ್ಮ ತಮ್ಮ ಸೈನಿಕ ಶಕ್ತಿಯ ವೃದ್ಧಿಗಾಗಿ ವಿನಿಯೋಗ ಮಾಡುತ್ತಿದ್ದರೆ, ಇವರು ಯುದ್ಧ ಗೆಲ್ಲುತ್ತಿದ್ದರೇನೋ ಎಂಬ ಭಾವನೆ ಮೂಡಿಸುವಂತೆ ಮಾಡುತ್ತದೆ.
ಝಾಂಸೀ ರಾಣಿಯ ಅನುಷ್ಠಾನದ ಬಗ್ಗೆ ವಿಷ್ಣು ಭಟ್ಟ ಗೋಡ್ಸೆ ನೀಡಿದ ಚಿತ್ರಣವನ್ನು ನೋಡಿ. "ಶತ್ರುಗಳು ನಾಶವಾಗಲಿ, ರಾಜ್ಯ ಸುರಕ್ಷತವಾಗಿರಲಿ ಎಂಬ ಉದ್ಧೇಶಕ್ಕಾಗಿ ರಾಣಿ ಸಾಹೇಬರು ಅನೇಕ ಅನುಷ್ಠಾನಗಳನ್ನು ಮಾಡಿಸುತ್ತಿದ್ದರು. ಮಹಾಲಕ್ಷ್ಮೀ ದೇವಳದಲ್ಲಿ ದಿನವೂ ನವಚಂಡಿಯು ನಡೆಯುತ್ತಿತ್ತು. ಗೃಹ ಶಾಂತಿಗಾಗಿ ನಾನಾ ಜಪ ಮತ್ತು ದಾನಗಳ ವಿನಿಯೋಗವಾಗುತ್ತಿತ್ತು. ಗಣಪತಿ ದೇವಳದಲ್ಲಿ ದಿನವೂ ಅಥರ್ವಶೀರ್ಷದ ಸಹಸ್ರ ಆವರ್ತನಗಳು ಆಗುತ್ತಿದ್ದುವು. ಆಗಲೇ ಕುಂಡ ಮಂಡಪ ಸಹಿತ ಗೃಹ್ಯ ಪರಿಶಿಷ್ಟೋಕ್ತ ಸಹಸ್ರ ಪಕ್ಷ ಕಾಮ್ಯ ಗೃಹ ಯಜ್ಞವನ್ನು ಮಾಡಿಸುವುದೆಂದು ನಿರ್ಣಯವಾಯಿತು. ಮಹಲಿನ ಬಳಿಯೇ, ಒಂದು ಒಳ್ಳೆಯ ಸ್ಥಳವನ್ನು ನೋಡಿ 'ವಿಸ್ತೀರ್ಣ ಛಾಯಾ ಮಂಟಪ' ವನ್ನು ಮಾಡಲಾಯಿತು. ಮತ್ತು ದೇವಿ ಸಹಿತ ಎಲ್ಲಾ ಸರಂಜಾಮುಗಳ ವ್ಯವಸ್ಥೆಯಾಯಿತು. ಕಾಶಿ ಮತ್ತು ಬ್ರಹ್ಮಾವರ್ತದಿಂದ ದೊಡ್ಡ ದೊಡ್ಡ ವಿದ್ವಾನ್ ಬ್ರಾಹ್ಮಣರನ್ನು ಕರೆಸಲಾಗಿತ್ತು. ದಿನವೂ ಹೋಮಕ್ಕಾಗಿ ನೂರು ಬ್ರಾಹ್ಮಣರನ್ನು ನಿಯೋಜಿಸಲಾಗಿತ್ತು. ಮುಹೂರ್ತದ ದಿನ ರಾಜಾಶ್ರಿತ ಹಾಗೂ ಹೊರಗಿನಿಂದ ಬಂದ ಎಲ್ಲಾ ಬ್ರಾಹ್ಮಣರೂ ಉಪಸ್ಥಿತರಿದ್ದರು", " ಅನುಷ್ಠಾನದ ಸಂದರ್ಭದಲ್ಲಿ ಪ್ರತಿನಿತ್ಯ ಬ್ರಾಹ್ಮಣ ಭೋಜನವಾಗುತ್ತಿತ್ತು. ನಾಲ್ಕನೆಯ ದಿನ ಮುಕ್ತದ್ವಾರ - ಎಲ್ಲರಿಗೂ ಊಟ, ಎಲ್ಲಾ ಬ್ರಾಹ್ಮಣರಿಗೂ ದಕ್ಷಿಣೆ ಮತ್ತು ಉಡುಗೊರೆಗಳನ್ನು ನೀಡಲಾಯಿತು", "ಕೆಲವು ದಿನಗಳ ನಂತರ ಸಪ್ತಶತಿಯ ಜತೆಗೆ ಸಪ್ತಚಂಡಿಯ ಅನುಷ್ಠಾನವೂ ಮಾಡಲ್ಪಡಲಿ ಎಂಬುದಾಗಿ ನಿರ್ಣಯಿಸಲಾಯಿತು", " ಮಹಾಲಕ್ಷ್ಮೀ ದೇವಾಲಯದಲ್ಲಿ ನಾಲ್ಕು ಬಾರಿ ಸಹಸ್ರ ಬ್ರಾಹ್ಮಣ ಭೋಜನವಾಯಿತು. ಅಲ್ಲಿ ಎಲ್ಲರಿಗೂ ನಾಲ್ಕು ಆಣೆ ದಕ್ಷಿಣೆ ಮತ್ತು ಒಂದು ಕಲ್ಲು ಸಕ್ಕರೆ ಲಾಡು ನೀಡಲಾಗುತ್ತಿತ್ತು".
ಧಾರ್ಮಿಕ ಅನುಷ್ಠಾನಗಳಿಂದ, ಬ್ರಾಹ್ಮಣರಿಗೆ ಸಂತರ್ಪಣೆ, ದಾನ ದಕ್ಷಿಣೆ ಕೊಡುವುದರಿಂದ ಯುದ್ಧ ಗೆಲ್ಲಲು ಸಾಧ್ಯವೇ ? ನಂತರ ನಡೆದ ಆಂಗ್ಲರ ದಾಳಿಯಲ್ಲಿ ಝಾಂಸೀ ರಾಣಿ ಝಾಂಸಿಯಿಂದ ಪಲಾಯನ ಮಾಡಿದಳು. ಝಾಂಸೀ ನಗರವನ್ನು ಆಂಗ್ಲ ಆಡಳಿತದ ಸೈನಿಕರು ಲೂಟಿ ಮಾಡಿದರು. ನೂರಾರು ಪ್ರಜೆಗಳು ಬ್ರಿಟೀಷ್ ದೌರ್ಜನ್ಯಕ್ಕೆ ಬಲಿಯಾದರು. ಯಾವುದು ಶತ್ರುಗಳನ್ನು ನಾಶಗೊಳಿಸುತ್ತದೆ ಎಂದೂ, ಯಾವುದು ರಾಜ್ಯವನ್ನು ಸುರಕ್ಷಿತವಾಗಿರಿಸುತ್ತದೆ ಎಂದೂ ಝಾಂಸೀ ರಾಣಿ ಲಕ್ಷ್ಮೀ ಬಾಯಿ (ಬ್ರಾಹ್ಮಣ ಪುರೋಹಿತ ಮೋರೋಪಂತ ತಾಂಬೆಯವರ ಮಗಳು ಸುಂದರಿ) ಬಲವಾಗಿ ನಂಬಿದ್ದಳೋ , ಅದ್ಯಾವುದೂ ಕೆಲಸ ಮಾಡಿರಲಿಲ್ಲ. ಇದು ಝಾಂಸೀ ರಾಣಿಗೆ ಸೀಮತವಾದ ವಿಷಯವಲ್ಲ.
ಈ ರಾಜಾಡಳಿತಗಳನ್ನು ಬ್ರಾಹ್ಮಣ ಪುರೋಹಿತರ ಮಾಯೆ ಎಷ್ಟರ ಮಟ್ಟಿಗೆ ಪ್ರಭಾವಿಸಿತ್ತು ಎಂದರೆ, ಯಾವುದೇ ಹಂತದಲ್ಲೂ ತಮ್ಮ ರಾಜ್ಯದ ರಕ್ಷಣೆಗಾಗಿ ಹುತಾತ್ಮರಾದ ಸೈನಿಕರ ಕುಟುಂಬ ರಾಜರ ಕಣ್ಣಿಗೆ ಕಾಣುತ್ತಿರಲಿಲ್ಲ. ಇದಕ್ಕೆ ಪೂರಕವಾದ ಒಂದು ದಾನದ ಪ್ರಸಂಗವನ್ನು ಇಲ್ಲಿ ಉಲ್ಲೇಖಿಸಬಹುದು.
"ನಮ್ಮೆಲ್ಲಾ ಬಡ ಬ್ರಾಹ್ಮಣರಿಗೆ ಬಖ್ಶೀಶನ್ನು ಕೊಟ್ಟು ಬಾಯೀ ಸಾಹೇಬರು ಅತ್ಯಂತ ನಮ್ಮನ್ನು ಬೀಳ್ಕೊಂಡರು. ದಾಸ ದಾಸಿಯರಿಗೆ, ಯೋಧರಲ್ಲದವರೆಲ್ಲರಿಗೂ ದಾನ ದಕ್ಷಿಣೆ ಕೊಟ್ಟು ಸಂತೃಪ್ತಿ ಪಡಿಸಿದರು. ಹೀಗೆ ಎಲ್ಲರೂ ಕೋಟೆಯಿಂದ ಹೊರಗೆ ಪಟ್ಟಣಕ್ಕೆ ಬಂದರು. ನಾನು ಕೂಡಾ ಚಿಕ್ಕಪ್ಪನೊಂದಿಗೆ ಮಾಂಡವಗಣೆಯವರಲ್ಲಿಗೆ ಬಂದೆ". ಝಾಂಸೀ ರಾಣಿ ಲಕ್ಷ್ಮೀ ಬಾಯಿಯವರು ಹೀಗೆ ಯೋಧರಲ್ಲದವರಿಗೆ ದಾನ ದಕ್ಷಿಣೆ ನೀಡಿ ಸಂತೃಪ್ತಿ ಪಡಿಸಿದ್ದು, ಝಾಂಸಿಯಿಂದ ಪಲಾಯನ ಮಾಡುವ ಸಂದರ್ಭದಲ್ಲಿ. ಝಾಂಸೀ ರಾಜ್ಯದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರ ವಿಧವೆ ಪತ್ನಿಯಂದಿರು, ಹೆತ್ತವರು ಬಾಯೀ ಸಾಹೇಬರ ಮನಸ್ಸಿಗೆ ಬರಲೇ ಇಲ್ಲ !
ವಿಷ್ಣು ಭಟ್ಟ ಗೋಡ್ಸೆ ಹಾಗೂ ಇವರ ಚಿಕ್ಕಪ್ಪ ವರಸಯಿಗೆ ಮರಳುವ ಕೊನೆಯ ವರ್ಷ ಚಿತ್ರಕೂಟ, ನೈಮಿಷಾರಣ್ಯ, ಅಯೋಧ್ಯೆ, ಕಾಶಿ, ಪಂಚವಟಿ, ನಾಸಿಕ್ ಮುಂತಾದ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದರು. ಈ ಪೈಕಿ ವಿಷ್ಣು ಭಟ್ಟ ಗೋಡ್ಸೆ ನೋಡಿದ ಅಯೋಧ್ಯೆಯನ್ನು ಓದುಗರಿಗೂ ಇಲ್ಲಿ ನೋಡುವ ಅವಕಾಶ ಇದೆ. 1858ರಲ್ಲಿ ವಿಷ್ಣು ಭಟ್ಟರು ಹಾಗೂ ಆ ಕಾಲದ ರಾಮ ಭಕ್ತರು ನೋಡಿದ ಅಯೋಧ್ಯೆಯನ್ನೇ ಈಗಿನ ರಾಮ ಭಕ್ತರು ನೋಡಿದ್ದೇ ಆದರೆ, ಸರಿಯಾಗಿ ಗ್ರಹಿಸಿಕೊಂಡದ್ದೇ ಆದರೆ ರಾಮ ಭಕ್ತರಿಗೆ ಸತ್ಯದ ಅರಿವಾಗಬಹುದು, ಜನ್ಮ ಸಾರ್ಥಕವಾಗಬಹುದು.
ವಿಷ್ಣು ಭಟ್ಟ ಗೋಡ್ಸೆ ಕಣ್ತುಂಬಿಸಿಕೊಂಡ ಅಯೋಧ್ಯೆ: "ನವಮಿಯ ಮಧ್ಯಾನ್ನ ಸರಯೂ ನದಿಯಲ್ಲಿ ಸ್ನಾನ ಮಾಡಿ ರಾಮನು ಜನ್ಮವೆತ್ತಿದ ಪ್ರದೇಶಕ್ಕೆ ಹೋದೆವು. ಅಲ್ಲಿ ದರ್ಶನಕ್ಕಾಗಿ ಹೋದೆವು. ಲಕ್ಷಾಂತರ ದರ್ಶನಾರ್ತಿಗಳು ಅಲ್ಲಿಗೆ ತುಳಸಿ ಮತ್ತು ಅಡಿಕೆ ತೆಗೆದುಕೊಂಡು ಬಂದಿದ್ದರು. ರಾಮ ಜನ್ಮ ಸ್ಥಾನವು ಒಂದು ತೆರೆದ ಮೈದಾನ. ಅಲ್ಲಿ ಐವತ್ತು ಕೈ ಅಳತೆ ಉದ್ದ ಮತ್ತು ನಲವತ್ತು ಕೈ ಅಳತೆ ಅಗಲದ ಒಂದು ಕಟ್ಟೆ ಇದೆ. ಅದು ಸೊಂಟದಷ್ಟು ಎತ್ತರವಿದೆ. ಕಟ್ಟೆಯ ಸುತ್ತ ಎರಡು ಕೈ ಅಳತೆಯ ಗೋಡೆ ನಾಲ್ಕೂ ಸುತ್ತ ಇದೆ. ಮತ್ತೆ ಸುತ್ತೆಲ್ಲಾ ಮುಳ್ಳು ಪೊದೆಗಳು. ಆ ಮೈದಾನದಿಂದ ಸಾಕಷ್ಟು ದೂರದಲ್ಲಿ ಹಳೆಯ ಎತ್ತರದ ಗೋಡೆಗಳಿವೆ. ಕೌಸಲ್ಯಾ ಮಹಲು ಎಂಬ ಸ್ಥಳವೂ ಒಂದು ವಿಶಾಲ ಮೈದಾನ. ಆದರೆ, ಅಲ್ಲಿ ಲಕ್ಷಾಂತರ ಜನರು ಸೇರಿದ್ದರು. ಜನ ಅಷ್ಟೊಂದು ಸಂಖ್ಯೆಯಲ್ಲಿ ಸೇರುವಾಗ್ಗೆ ನೂಕುನುಗ್ಗಲು ಭಯಂಕರ. ರಾಮ ನವಮಿಯಂದು ಜನರನ್ನು ನಿಯಂತ್ರಿಸಲು ಸರಕಾರೀ ವ್ಯವಸ್ಥೆಯಿದೆ. ಕೆಲವು ಸಿಪಾಯಿಗಳು ಆನೆಯ ಮೇಲೆ, ಕೆಲವರು ಕುದುರೆಗಳ ಮೇಲೆ. ಇಷ್ಟೊಂದು ಬಂದೋಬಸ್ತ್ ಇದ್ದರೂ ಪ್ರತೀ ವರ್ಷ ಹತ್ತಾರು ಜನ ಕಾಲ್ತುಳಿತಕ್ಕೊಳಗಾಗಿ ಸಾವನ್ನಪ್ಪುತ್ತಾರೆ" (ಪುಟ 225).
ವಿಷ್ಣು ಭಟ್ಟ ಗೋಡ್ಸೆ, ಚಿಕ್ಕಪ್ಪ ರಾಮ ಭಟ್ಟರೊಂದಿಗೆ ಹುಟ್ಟೂರು ವರಸಯಿಯಿಂದ ಯಾತ್ರೆ ಹೊರಟದ್ದು 1856ರ ಮಾರ್ಚ್ 11ರಂದು. ಮೂರು ವರ್ಷಗಳ ಯಾತ್ರೆ ಮುಗಿಸಿ ಮರಳಿ 1858ರಲ್ಲಿ ವರಸಯಿ ನದಿಯ ಅಣೆಕಟ್ಟಿಗೆ ಬಂದು ತಲುಪಿದರು. ಇಲ್ಲಿ ಇವರನ್ನು ಕಂಡ ಊರ ಗಣ್ಯರಾದ ರಾಜರಾಜೇಶ್ವರ ಅಣ್ಣಾ ಸಾಹೇಬ ಕರ್ವೆ ಎಂಬವರು "ಹೀಗೆ ಹಳ್ಳಿಯ ಒಳಗೆ ಸಾಧಾರಣ ರೀತಿಯಲ್ಲಿ ಪ್ರವೇಶ ಮಾಡುವುದು ಶೋಭೆಯಲ್ಲ" ಎಂದು ತೀರ್ಮಾನಿಸಿ, ಬೇಂಡು ಓಲಗ ತರಿಸಿ, ಜನರನ್ನು ಕರೆಸಿ, ವೈಭವದ ಮೆರವಣಿಗೆಯಲ್ಲಿ ಊರೊಳಗೆ, ಮನೆಗೆ ಪ್ರವೇಶಿಸುವಂತೆ ಮಾಡಿ ಊರಿನಲ್ಲಿ ವಿಷ್ಣು ಭಟ್ಟ ಗೋಡ್ಸೆಯವರ ಐತಿಹಾಸಿಕ ಯಾತ್ರೆಯನ್ನು ಚಿರಸ್ಥಾಯಿಗೊಳಿಸಿದರು.
ಇತಿಹಾಸ, ರಾಜಾಡಳಿತ, ಬ್ರಿಟೀಷ್ ಆಡಳಿತ, ಸಿಪಾಯಿ ದಂಗೆ, ಸ್ವಾತಂತ್ರ್ಯ ಹೋರಾಟ, ಪ್ರವಾಸ, ತೀರ್ಥಯಾತ್ರೆ, ಪಾದಯಾತ್ರೆ, ಧಾರ್ಮೀಕ ಅನುಷ್ಠಾನ, ಯುದ್ಧ ಇತ್ಯಾದಿಗಳಲ್ಲಿ ಆಸಕ್ತಿ ಇರುವವರು ಓದಲೇಬೇಕಾದ ಅತ್ಯುತ್ತಮ ಕೃತಿ ರತ್ನ, "ವಿಷ್ಣು ಭಟ್ಟ ಗೋಡ್ಸೆಯ 'ನನ್ನ ಪ್ರವಾಸ' ಮಾಝಾ ಪ್ರವಾಸ" (ಕನ್ನಡ ಅನುವಾದ: ಡಾ. ಜಿ. ಭಾಸ್ಕರ ಮಯ್ಯ)
~ ಶ್ರೀರಾಮ ದಿವಾಣ