ವಿಸ್ತರಣೆ ಎಂದರೇನು?

ವಿಸ್ತರಣೆ ಎಂದರೇನು?

ವಿಸ್ತರಣೆ ಎಂದರೆ ಹೆಚ್ಚಳ, ವರ್ಧನೆ, ಬೆಳೆಸುವಿಕೆ ಮುಂತಾದ ಸಮಾನ ಅರ್ಥ ನೀಡುತ್ತವೆ. ಹಿಂದೆ ರಾಜರು ಸಾಮ್ರಾಜ್ಯ ವಿಸ್ತರಣೆ ಮಾಡುತ್ತಿದ್ದ ಕಥೆಗಳನ್ನು ಓದಿದ್ದೇವೆ. ಇಂದಿಗೂ ಸಾಮ್ರಾಜ್ಯ ವಿಸ್ತರಣೆ, ಅಧಿಕಾರ ವಿಸ್ತರಣೆಗಳು ನಡಯುತ್ತಲೇ ಇರುತ್ತವೆ. ಬ್ರಿಟೀಷರು ಭಾರತಕ್ಕೆ ಬಂದುದು ಅವರ ಸಾಮ್ರಾಜ್ಯದ ವಿಸ್ತರಣೆ, ತನ್ಮೂಲಕ ಅವರ ದೇಶದ ಸಿರಿವಂತಿಕೆಯ ವಿಸ್ತರಣೆಯ ಉದ್ದೇಶದಿಂದಲೇ ಅಲ್ಲವೇ? ವಿಸ್ತರಣೆಯು ಕೇವಲ ಸಾಮ್ರಾಜ್ಯದ ವಿಸ್ತರಣೆಗಷ್ಟೇ ಸೀಮಿತವಲ್ಲ. ವಿಸ್ತರಣೆಯು ಮಾನವ ಸಂತತಿಗೆ ಮಾತ್ರ ಸೀಮಿತ ಎನ್ನುವಂತೆಯೂ ಇಲ್ಲ. ತನ್ನಲ್ಲಿರುವುದೆಲ್ಲರ ವಿಸ್ತರಣೆಯಾಗಬೇಕೆಂಬ ಉತ್ಕಟವಾದ ಬಯಕೆ ಮನುಷ್ಯನಲ್ಲಿ ಮಾತ್ರ ವಿಪುಲವಾಗಿರುತ್ತದೆ ಎಂಬುದರಲ್ಲಿ ಸತ್ಯವಿದೆ. ತನಗೆ ಸಿಕ್ಕಿದುದನ್ನು, ಬಳಗವನ್ನು ಕರೆದು, ಹಂಚಿ ತಿನ್ನುವ ಗುಣ ಮನುಷ್ಯರಲ್ಲಿ ಬೆಳೆಯಬೇಕು.

ಅಧಿಕಾರ, ಸಂಪತ್ತು, ಖ್ಯಾತಿ, ಜನಪ್ರಿಯತೆಗಳ ವಿಸ್ತಾರವನ್ನು ಬಯಸದವರು ವಿರಳ. ಇವುಗಳ ವಿಸ್ತಾರಕ್ಕೆ ಅವರು ಎಲ್ಲ ಬಗೆಯ ಕಸರತ್ತುಗಳನ್ನು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಇತರರ ಕಾಲೆಳೆಯಲು, ಇತರರಿಗೆ ಮೋಸ ಮಾಡಲು, ಆಮಿಷ ಒಡ್ಡಲು ಹಿಂಜರಿಯರು. ಸ್ವಾರ್ಥದ ಹೊರಗೆ ಅವರ ಚಿಂತನೆ ಹೊರಳುವುದೇ ಇಲ್ಲ. ತಮ್ಮ ಇಚ್ಛಿತ ವಿಚಾರಗಳ ವಿಸ್ತರಣೆಯನ್ನು ಮಾಡುವಲ್ಲಿ ಮನೆಯೊಳಗಿನವರನ್ನೂ ತಿಪ್ಪೆಗೆಸೆಯುವ ಸ್ವಾರ್ಥಿಗಳೂ ಇದ್ದಾರೆ. ಅಧಿಕಾರ, ಸಂಪತ್ತು ಮತ್ತು ಖ್ಯಾತಿಗಳ ಅಮಲು ಹತ್ತಿದವರಿಗೆ ನೆಲ ಕಾಣದು, ನೀತಿ ನಿಯಮ ಗೋಚರಿಸದು, ಬಂಧಗಳ ಬಂಧವೂ ನಿರ್ಬಂಧಿಸದು.

ಜ್ಞಾನ ವಿಸ್ತಾರ ಮಾಡುವುದು ಸ್ವಹಿತ ಮತ್ತು ಪರಹಿತಕಾರಕ. ಜ್ಞಾನದ ವಿಸ್ತರಣೆ ಮಾಡುವ ಬಯಕೆಯಿಲ್ಲದವರೇ ಇಲ್ಲ. ಆದರೆ ಲೌಕಿಕವಾದ ಆಸಕ್ತಿಗಳು, ತಮ್ಮೊಳಗಿರುವ ನಾನಾ ಅಮಲುಗಳ ತೋಳ ಬಂಧದಿಂದ ಕಳಚಿ ಹೊರ ಬಾರದವರಿಗೆ ಜ್ಞಾನ ವಿಸ್ತಾರವಾಗುವುದಾದರೂ ಹೇಗೆ? ಜ್ಞಾನ ವಿಸ್ತಾರ ತನ್ನಿಂದ ತಾನೇ ನಡೆಯದು. ಪರಿಶ್ರಮವಿಲ್ಲದೆ ಜ್ಞಾನ ವಿಸ್ತಾರವಾಗುವುದೇ ಇಲ್ಲ. ಆಲಿಸುವ, ವಾಚಿಸುವ, ದರ್ಶಿಸುವ ದಿಕ್ಕಿನಲ್ಲಿ ಹೆಚ್ಚು ಸಮಯವನ್ನು ಮನೋಬದ್ಧವಾಗಿ ಹೂಡುವವರ ಜ್ಞಾನ ಬಹಳ ವೇಗವಾಗಿ ವಿಸ್ತಾರವಾಗುತ್ತದೆ. ಜ್ಞಾನವಿಸ್ತಾರದಿಂದ ರಾಷ್ಟ್ರದ ಪ್ರಗತಿಯೂ ವೇಗ ಪಡೆಯುತ್ತದೆ. ಜ್ಞಾನ ವಿಸ್ತಾರವಾದಂತೆ ಮನೋಬಲವೂ ಹೆಚ್ಚುವುದು. ಒಂದು ಮರ ವಿಸ್ತಾರವಾದಂತೆಯೇ ಅದರ ಬೇರು ಬಲಗೊಳ್ಳುತ್ತದೆ, ಲೋಕಕ್ಕೂ ಪ್ರಯೋಜನವಾಗುತ್ತದೆ. ಮರದ ಆಯುಷ್ಯ ಹೆಚ್ಚುತ್ತದೆ. ಮರಗಳಿಗೆ ಬೇರು ಹೇಗೋ ಹಾಗೆಯೇ ಮನುಷ್ಯನಿಗೆ ಮನಸ್ಸು ಬಲಗೊಳ್ಳಬೇಕು. ಮನಸ್ಸು ಬಲಗೊಳ್ಳಲು ಜ್ಞಾನದ ವಿಸ್ತರಣೆಯಾಗಬೇಕು.

ದೈನಂದಿನ ನಮ್ಮ ಅಗತ್ಯಗಳು ನಮಗೊದಗಲು ಕೃಷಿಯೇ ಆಧಾರ. ಕೃಷಿ ಲಾಭದಾಯಕವಲ್ಲ ಎಂದು ಅನ್ನದ ಬಟ್ಟಲಾಗಿರುವ ಭೂಮಿಯನ್ನು ಬಂಜರಾಗಿರಿಸಿರುವ ಅಸಂಖ್ಯ ಭೂ ಒಡೆಯರು ಎಲ್ಲ ಪ್ರದೇಶಗಳಲ್ಲೂ ಇದ್ದಾರೆ. ಭೂಮಿಯು ತನ್ನಲ್ಲಿ ಬೆಳೆ ಬೆಳೆಸುವ ಕೃಷಿಕರನ್ನು ಅಥವಾ ರೈತರನ್ನು ಉಪವಾಸ ಕೆಡಹುವುದಿಲ್ಲ. ಕೃಷಿಕರು ಉಂಡು ಉಳಿಯುವಷ್ಟು ಬೆಳೆಗಳು ಬಂದೇ ಬರುತ್ತವೆ. ನಿರಂತರ ಕೃಷಿಯ ಅಥವಾ ಬೇಸಾಯದ ವಿಸ್ತರಣೆ ಆಗುತ್ತಲೇ ಇರಬೇಕು. ಜನಸಂಖ್ಯೆ ಏರಿದಂತೆ ಆಹಾರೋತ್ಪಾದನೆಯೂ ವಿಸ್ತರಣೆ ಆಗದೇ ಹೋದರೆ, ಹಸಿವನ್ನು ತಾಳಲಾರದೆ ಸಾಯುವವರನ್ನು ಕಾಪಾಡುವುದಾದರೂ ಹೇಗೆ?

ಸಮಾಜದಲ್ಲಿ ಜನರ ಆಲೋಚನೆಗಳು ಏಕಮುಖವಾಗುತ್ತಿವೆ. ಉದ್ಯೋಗ ಎಂದರೆ “ವ್ಹೈಟ್ ಕಾಲರ್ ಜಾಬ್” ಮಾತ್ರ ಎಂಬ ಕಲ್ಪನೆ ಹೆಚ್ಚಾಗುತ್ತಿದೆ. ಅದರಲ್ಲೂ ಎಲ್ಲರ ಕಣ್ಣು ಡಾಕ್ಟರ್ ವೃತ್ತಿಯ ಮೇಲಿರುತ್ತದೆ. ಸಣ್ಣ ಮಗುವಿನಲ್ಲಿ ಕೇಳಿದರೂ “ನಾನು ಡಾಕ್ಟರ್ ಆಗಬೇಕು” ಎಂದು ಬಿಂಕದಿಂದ ಅದು ಹೇಳುತ್ತದೆ. ನಮ್ಮ ಮಾನಸಿಕತೆ ಎಲ್ಲ ವೃತ್ತಿಗಳೂ ಸಮಾನ ಗೌರವ ಪಡೆದಿವೆಯೆಂದು ವಿಸ್ತಾರವಾಗಿ ವಿವೇಚಿಸುವುದಿಲ್ಲ. ನಮ್ಮ ದೃಷ್ಟಿ ಹೆಚ್ಚುಗಳಿಕೆಯತ್ತ ಮಾತ್ರವೇ ಹರಡಿದೆ. ಹೀಗೆ ಸಣ್ಣ ಸಣ್ಣ ವಿಚಾರಗಳ ಬಗ್ಗೆಯೂ ನಾವು ಮನಸ್ಸನ್ನು ವಿಸ್ತರಿಸಿ ಯೋಚಿಸಿದಾಗ ಸಮಷ್ಠಿಯು ಸುಖವನ್ನು ಸಂತಸವನ್ನು ಆರೋಗ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ