ವಿಸ್ಮರಣೆ

ವಿಸ್ಮರಣೆ

ಇತ್ತೀಚೆಗೆ ನಿಧನರಾದ ಅಡ್ಯನಡ್ಕ ವಿ.ಮ. ಭಟ್ಟರನ್ನು ಐದಾರು ತಿಂಗಳುಗಳ ಹಿಂದೆ ಭೇಟಿಯಾಗುವ ಒಂದು ಸುಸಂದರ್ಭ ನನಗೊದಗಿತು. ಅವರ ಮನೆ ಪಳ್ಳತಡ್ಕ ಹತ್ತಿರದ ವಾಟೆ. ಉತ್ತಮ ಕವಿ, ಸದಭಿರುಚಿಯ ಲೇಖಕ ಜೊತೆಗೆ ಅಡ್ಯನಡ್ಕ ಜನತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಅಧ್ಯಾಪಕ. ಈಗ ಜನತಾ ಸಂಸ್ಥೆಯಲ್ಲಿ ನಾನು ಆಡಳಿತಾಧಿಕಾರಿ. ಕಳೆದ ನಾಲ್ಕು ವರ್ಷಗಳಿಂದ ನಾನು ಅಧ್ಯಕ್ಷನಾಗಿರುವ ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಬೆಳವಣಿಗೆಯ ಶ್ರಮಿಕರಲ್ಲಿ ಇವರದೂ ಅಮೂಲ್ಯ ಪಾತ್ರವಿದೆ. ಕಿನ್ನಿಗೋಳಿಯಿಂದ ಪ್ರಕಟವಾಗುತ್ತಿರುವ ಮಾಸಿಕ ಪತ್ರಿಕೆ ಯುಗಪುರುಷದ ಅಂಕಣಕಾರ ವಿ.ಮ. ಭಟ್. ನಾನೂ ಕೆಲವು ವರ್ಷ ಯುಗಪುರುಷಕ್ಕೆ ನಿರಂತರ ಬರೆಯುತ್ತಿದ್ದೆ. ಈ ಎಲ್ಲ ಸಂಬಂಧಗಳಿಂದಾಗಿ ಭಟ್ಟರಿಗೂ ನನಗೂ ನಂಟು. ಭಟ್ಟರು “ವಿಸ್ಮರಣೆಗೊಳಗಾಗಿರುವರು” ಎಂಬ ಕಾರಣಕ್ಕೆ ನಾನು ಶ್ರೀಯುತರನ್ನು ಭೇಟಿ ಮಾಡಿದ್ದೆ.

ವಿ.ಮ. ಭಟ್ಟರ ಪೂರ್ತಿ ಹೆಸರು ವಾಟೆ ಮಹಾಲಿಂಗ ಭಟ್. ಭೇಟಿಯಾದಾಗ ಅವರಿಗೆ ನನ್ನ ಪರಿಚಯ ಸಿಗಲಿಲ್ಲ. ಪರಿಚಯ ನೀಡಲು ಅಡ್ಯನಡ್ಕ..., ಮಕ್ಕಳ ಕಲಾ ಲೋಕ..., ಯುಗಪುರುಷ..., ಮಾಸ್ಟ್ರು...., ಆಡಳಿತಾಧಿಕಾರಿ...., ಹೀಗೆ ಹಲವು ವಿಷಯಗಳನ್ನು ಹೆಣೆದರೂ ಅವರಿಗೆ ನೆನಪಿಗೆ ಬಾರದು. ನೆನಪಿಸಲೆಂದು ಕೊಡುತ್ತಿದ್ದ ಪ್ರತಿಯೊಂದು ಸುಳುಹು ಕೂಡಾ ಅವರ ನೆನಪಿನ ಬುತ್ತಿಯನ್ನು ತೆರೆಯಲು ಸಹಾಯಕವಾಗುತ್ತಿರಲಿಲ್ಲ. ಯಾವುದೇ ಕಾಯಿಲೆಯಿರದ ಪಾದರಸದಂತೆ ಅತ್ಯಂತ ಚುರುಕಾಗಿ ವ್ಯವಹರಿಸುತ್ತಿದ್ದ ಶಕ್ತಿ ಅವರು. ಅವರನ್ನು ಮರೆಗುಳಿತನ ಆವರಿಸಿದೆ ಎಂಬುದನ್ನು ಗ್ರಹಿಸಲೂ ಅಸಾಧ್ಯ. ಅಕ್ಷರ ಕಲಿಸಿದ ಸಂತ ಅಕ್ಷರಗಳನ್ನೇ ಮರೆತಿದ್ದರು. ಅವರನ್ನು ನೋಡಿದಾಗ ನನಗನಿಸಿದ್ದು ಹೀಗೆ, “ಯಾವ ರೋಗ ಬಂದರೂ ರೋಗಿಗಷ್ಟೇ ಹೆಚ್ಚು ನೋವು. ಆದರೆ ವಿಸ್ಮರಣೆ ಉಂಟಾದರೆ ಮನೆಯವರೆಲ್ಲರೂ ಕಂಗಾಲು, ರೋಗಿ ಸ್ವಲ್ಪ ನಿರಾಳ.”

ಒಂದು ಪರಿಸ್ಥಿತಿಯನ್ನು ಊಹಿಸೋಣ. ವಿಸ್ಮರಣೆಗೊಳಗಾದವರು ಜನದಟ್ಟಣೆಯಲ್ಲಿ ಸಹಚರರ ಕೈ ತಪ್ಪಿದರೆ ಹುಡುಕುವುದಾದರೂ ಹೇಗೆ? ಅವರಲ್ಲಿ ಫೋನಿದ್ದರೂ ಅದರ ಬಳಕೆಯನ್ನೇ ಅವರು ಮರೆತಿದ್ದರೆ....? ಅವರಿಗೆ ತನ್ನ ಮಕ್ಕಳ, ಯಾ ಸಂಗಡ ಬಂದವರ ಹೆಸರು ಮರೆತಿದ್ದರೆ..! ಯಾರನ್ನಾದರೂ ವಿಚಾರಿಸಿ ಮಾಹಿತಿ ಪಡೆಯಬಹುದೆಂಬ ವಿಚಾರವೂ ಅವರು ಮರೆತೇ ಬಿಟ್ಟಿದ್ದರೆ..? ಅವರು ಕುಳಿತೋ ನಡೆದೋ ಕಾಲ ಹರಣ ಮಾಡಬಹುದು ಹೊರತು ಹಸಿವೆಯಾಗುತ್ತಿದೆ, ಬಾಯಾರಿಕೆಯಾಗುತ್ತಿದೆ, ದೇಹ ಬಾಧೆಯಿದೆ.. ಎಂಬುದನ್ನು ಇತರರಿಗೆ ತಿಳಿಸಲೂ ಮರೆವು ಅವರನ್ನು ಬಾಧಿಸುತ್ತಲಿದ್ದರೆ...! ಕುರುಡುತನವಿದ್ದರೂ, ಮೂಗನಾಗಿದ್ದರೂ, ಬಹು ವಿಕಲಾಂಗತೆಯಿದ್ದರೂ ನೆನಪೊಂದಿದ್ದರೆ ಬದುಕು ಪಡೆಯಬಹುದು. ಮರೆವಿನ ಕಾಯಿಲೆಯಿದ್ದರೆ ಬದುಕೇ ಶೂನ್ಯ ಎಂದೆನಿಸುವುದಲ್ಲವೇ..?

ವಿದ್ಯಾರ್ಥಿಗಳು ಹೇಳುವುದಿದೆ, “ಎಷ್ಟು ಓದಿದರೂ ನೆನಪಿಗೆ ಬರುವುದಿಲ್ಲ, ಮರೆತೇ ಹೋಗುತ್ತದೆ.” ಈ ಮರೆವು ನಿಜವಾಗಿಯೂ ಮರೆವಲ್ಲ. ಕೆಲವರಿಗೆ ಅದು ಭ್ರಮೆಯಷ್ಟೆ, ಇನ್ನು ಕೆಲವರಿಗೆ ಏಕಾಗ್ರತೆಯ ಸಮಸ್ಯೆ ಅಷ್ಟೆ. ಅರುವತ್ತರ ನಂತರ ಮರೆವು ಎಂದು ಕೆಲವರು ಹೇಳುವರು. ಅದು ಕೂಡಾ ಕೀಳರಿಮೆಯೇ ಅಂತ ಅನಿಸುತ್ತದೆ. ನಿತ್ಯವೂ ಚಟುವಟಿಕೆಗಳಲ್ಲಿ ನಿರತರಾದವರು ಮರೆಯುವುದಿಲ್ಲ. ನವಯೋಮಾನ ಏರಿದಂತೆ ನೆನಪಿನ ಪ್ರಮಾಣ ಸಣ್ಣ ರೂಪದಲ್ಲಿ ಇಳಿಕೆಯಾಗುವುದೆಂಬುದು ವೈದ್ಯಕೀಯ ಸತ್ಯ. ಆದರೆ ಮರೆಗುಳಿತನ ಪ್ರಬಲವಾಗಿ ಮರೆವಿನ ಕಾಯಿಲೆ ಬಂದರೆ ಬಹಳ ಅಪಾಯಕಾರಿ.

ತಮಾಷೆಗಾಗಿ ಹೇಳುವುದಿದೆ, “ಸಾಲ ತೆಗೆದುಕೊಂಡವನಿಗೆ ವಿಸ್ಮರಣೆ ಬಂದರೆ ಸಾಲಕೊಟ್ಟವನಿಗೆ ಸಂಕಟ, ಸಾಲ ಕೊಟ್ಟವನಿಗೆ ವಿಸ್ಮರಣೆ ಬಂದರೆ, “ಸಾಲ ಪಡೆದವನಿಗೆ ಹಬ್ಬ.” ಹಿಂದೆ ಬೈಸಿಕೊಂಡವನಿಗೆ ವಿಸ್ಮರಣೆ ಬಂದರೆ ಬೈದವನು ನಿರಾಳ ಎಂದೂ ಹೇಳುವರು. ವ್ಯಂಗ್ಯ ಕುಹಕಗಳೇನಿದ್ದರೂ ಮರೆವು ರೋಗ ಅಸಹನೀಯ. ವಿಸ್ಮೃತಿಗೊಳಗಾದವನ ಆರೈಕೆಯೂ ಭಾರವೇ ಸರಿ. “ಊಟ ಮಾಡುವ ಸಮಯ ಎಂದು ಮರೆಗುಳಿಗೆ ಹೇಳಿದರೆ ಆತ, “ಊಟ? ಅದೇನದು?” ಎಂದರೆ? ಅನ್ನ ನೋಡಿ ಅದರ ಹೆಸರು ಕೇಳಿದರೆ? “ಸ್ನಾನ?”, “ಬಸ್?” ಹೀಗೆ ಪ್ರಶ್ನೆಗಳೇ ಪ್ರತಿಕ್ಷಣ ಎದುರಾದರೆ?.... ಉರವೆಳೆಯುವ ಮಗುವನ್ನಾದರೂ ಆರೈಕೆ ಮಾಡಬಹುದು? ನಾಲ್ಕು ಕಾಲಿನಲ್ಲಿ ನಡೆಯುವ ವೃದ್ಧರನ್ನೂ ಆರೈಕೆ ಮಾಡಬಹುದು. ಆದರೆ ಮರೆಗುಳಿಯನ್ನು ಆರೈಕೆ ಮಾಡುವ ಮನಸ್ಸು ನಿಜವಾದ ಭಗವದ್ ಮನಸ್ಸಾಗಿರಬೇಕಾಗುತ್ತದೆ.

Alzheimer's disease (ವಿಸ್ಮರಣೆ ಕಾಯಿಲೆ) ಯು ಬುದ್ಧಿ ಮಾಂದ್ಯಕ್ಕಿಂತ ಅಪಾಯಕಾರಿ. ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳೇ ಇವೆರಡೂ ಆಗಿದ್ದರೂ ವಿಸ್ಮರಣೆಯು ಅರುವತ್ತೈದರ ನಂತರ ತೀವ್ರತೆಗೊಳಗಾಗುತ್ತಾ ಹೋಗುತ್ತದೆ. ಈ ಕಾಯಿಲೆಯವರಿಗೆ ಹೊಸ ವಿಚಾರಗಳು ನೆನಪಿನಲ್ಲಿ ದಾಖಲಾಗದು ಮತ್ತು ಹಳೆಯವು ಮರೆಯಲಾರಂಭವಾಗುತ್ತವೆ. ಔಷಧೋಪಚಾರದ ಮೂಲಕ ಸ್ಮರಣೆಯ ಸ್ಥಿತಿ ಮತ್ತೆ ಬಾರದು.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ