ವೀರ ಅರ್ಜುನ

ವೀರ ಅರ್ಜುನ

ಪುಸ್ತಕದ ಲೇಖಕ/ಕವಿಯ ಹೆಸರು
ಜಿ.ಎಂ.ಕೆ.
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೩೫.೦೦, ಮುದ್ರಣ: ಜೂನ್ ೨೦೨೩

ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ನಾಲ್ಕನೇ ಪುಸ್ತಕ ‘ವೀರ ಅರ್ಜುನ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಅರ್ಜುನನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ ನೀಡಿದ್ದಾರೆ. ೨೦೦೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ ಈಗ ನಾಲ್ಕನೇ ಮುದ್ರಣವಾಗಿ ಹೊರಬಂದಿದೆ. 

ಈ ಮಾಲಿಕೆಯ ಬಗ್ಗೆ ಪ್ರಕಾಶಕರು ಬೆನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ “ಜಗತ್ತಿನ ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ‘ಮಹಾಭಾರತದ ಕಥೆ' ಪ್ರಾಚೀನ ಭಾರತದ ಕಥೆಯೂ ಆಗಿದೆ. ಈ ಕಥೆಯನ್ನು ಯಾರು, ಯಾವ ಕಾಲದಲ್ಲಿ ಓದಿದರೂ ಅದು ತಮ್ಮದೇ ಕಥೆ ಎಂಬ ಭಾವ ಗಾಢವಾಗಿ ಕಾಡುತ್ತದೆ. ಏಕೆಂದರೆ ಈ ಮಹಾಕಾವ್ಯದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಮಾನವ ಸಹಜ ಗುಣಗಳಿಂದ, ಭಾವಗಳಿಂದ ತೊಳಲಾಡುತ್ತ ನಮ್ಮ ಮಧ್ಯೆ ಈಗ ಕೂಡಾ ನಲಿದಾಡುತ್ತಿರುವಂತೆ ಭಾಸವಾಗುತ್ತದೆ. ಅವರ ಸಂಗದಲ್ಲಿ ನಮ್ಮ ವ್ಯಕ್ತಿತ್ವ ಇನ್ನಷ್ಟು ಹಸನಾಗುತ್ತದೆ, ಹಾಗೆಯೇ ದುಷ್ಟತನ, ಮಾತ್ಸರ್ಯದಂತಹ ದುರ್ಗುಣಗಳನ್ನು ತೊರೆಯಬೇಕೆಂಬ ಪ್ರಜ್ಞೆ ಜಾಗೃತವಾಗುತ್ತದೆ. ಮಹಾಭಾರತವನ್ನು ಕೇವಲ ದಾಯಾದಿ ಕಥೆಯೆಂದು ಭಾವಿಸದೇ ಮಾನವ ಜನಾಂಗಕ್ಕೆ ಸದಾ ಬೆಳಕು ತೋರುವ ಮಹಾಕೃತಿಯೆಂದು ವಿದ್ವಾಂಸರು ಪರಿಗಣಿಸಿದ್ದಾರೆ. ಈ ಮಾಲಿಕೆಯಲ್ಲಿ ಮಹಾಭಾರತದಲ್ಲಿ ಬರುವ ಹತ್ತು ಪ್ರಮುಖ ಪಾತ್ರಗಳ ಪರಿಚಯವನ್ನು ಕೊಡಲಾಗಿದೆ. ಕೃತಿಯ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಹೇಳಲು ಪ್ರಯತ್ನಿಸಲಾಗಿದೆ. ಪ್ರತಿ ಪಾತ್ರದ ಕಥೆಯನ್ನು ಮೊದಲಿನಿಂದ ಕಡೆಯವರೆಗೆ ಸಮಗ್ರವಾಗಿ ಆದರೆ ಸಂಕ್ಷಿಪ್ತವಾಗಿ ನಿರೂಪಿಸಲು ಪ್ರಯತ್ನಿಸಲಾಗಿದೆ. ಓದುಗರು ಈ ಕೃತಿಯನ್ನು ಆದರದಿಂದ ಸ್ವೀಕರಿಸುವರೆಂಬ ನಂಬಿಕೆ ನಮ್ಮದು" ಎಂದಿದ್ದಾರೆ. 

'ವೀರ ಅರ್ಜುನ' ಕೃತಿಯು ಆತನ ಜನನದ ಮೂಲಕ ಪ್ರಾರಂಭವಾಗುತ್ತದೆ. ನಂತರ ಅರ್ಜುನನ ಬಿಲ್ವಿದ್ದೆಯ ಕಲಿಕೆ, ದ್ರುಪದನ ಗರ್ವಭಂಗ, ಮತ್ಸ್ಯ ಯಂತ್ರವನ್ನು ಛೇದಿಸಿ ದ್ರೌಪದಿಯ ಜೊತೆಗೆ ವಿವಾಹ, ಸುಭಧ್ರೆಯ ಜೊತೆಗೆ ವಿವಾಹ, ಖಾಂಡವ ವನದ ದಹನ ಪ್ರಕರಣ, ಕರ್ಣನನ್ನು ಕೊಲ್ಲುವ ಪ್ರತಿಜ್ಞೆ, ಶಿವನನ್ನು ಮೆಚ್ಚಿಸಿ ಆತನಿಂದ ಪಶುಪತಾಸ್ತ್ರವನ್ನು ಪಡೆದುಕೊಂಡದ್ದು, ಸ್ವರ್ಗ ಲೋಕದಲ್ಲಿ ಊರ್ವಶಿ ನೀಡಿದ ಶಾಪವನ್ನು ವಿರಾಟನಗರದಲ್ಲಿ ಕಳೆದ ಆಜ್ಞಾತವಾಸದ ಸಮಯದಲ್ಲಿ ಬೃಹನ್ನಳೆಯ ರೂಪ ಧರಿಸಿ ವರವನ್ನಾಗಿಸಿಕೊಂಡದ್ದು, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀ ಕೃಷ್ಣನಿಂದ ಗೀತೋಪದೇಶವನ್ನು ಪಡೆದುಕೊಂಡದ್ದು, ಯುದ್ಧದ ಸಮಯದಲ್ಲಿ ಅರ್ಜುನನ ಪರಾಕ್ರಮ, ಕರ್ಣನ ವಧೆ, ಅರ್ಜುನನ ಕೊನೆಯ ದಿನಗಳು ಮೊದಲಾದ ಘಟನೆಗಳನ್ನು ಬಹಳ ಸ್ವಾರಸ್ಯಕರವಾಗಿ ನಿರೂಪಿಸಲಾಗಿದೆ. ಈ ಪುಸ್ತಕದ ಕೊನೆಯ ಅಧ್ಯಾಯವಾದ ‘ವೀರಪುರುಷನ ಕೊನೆಯ ದಿನಗಳು’ ಇದರಲ್ಲಿ ಅರ್ಜುನನ ದೇಹತ್ಯಾಗದ ವಿಷಯವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಅದನ್ನು ನಿಮಗೆ ಈ ಸಾಲುಗಳನ್ನು ಓದುವಾಗ ಅರಿವಾಗುತ್ತದೆ…

“ಕುರುಕ್ಷೇತ್ರ ಮಹಾಯುದ್ಧ ನಡೆದು ಮೂವತ್ತಾರು ವರ್ಷಗಳ ತರುವಾಯ ಆಕಾಶದಲ್ಲಿ ಉತ್ಪಾತಗಳು ಕಾಣಿಸಿಕೊಳ್ಳಲಾರಂಭಿಸಿದವು. ಇದನ್ನು ಕಂಡ ಕೃಷ್ಣ, ಇನ್ನು ದ್ವಾಪರಯುಗ ಮುಗಿಯಿತೆಂದೂ ಕಲಿ ಕಾಲಿರಿಸಿದ್ದಾನೆಂದು ಅರಿತು, ಈ ಲೋಕ ಬಿಟ್ಟು ಹೋಗಲು ತಯಾರಾದ. ಕೃಷ್ಣನ ಮಹಾಪ್ರಸ್ತಾನದ ನಂತರ ಆತನ ಅಣತಿಯಂತೆ ದ್ವಾರಕೆಯಲ್ಲಿದ್ದ ಹೆಂಗಳೆಯರನ್ನು ಅರ್ಜುನನು ಹಸ್ತಿನಾಪುರಕ್ಕೆ ಕರೆತರುತ್ತಿರುವಾಗ ದಾರಿಯಲ್ಲಿ ಕಳ್ಳರು ಅವನನ್ನೆದುರಿಸಿದರು. ಅರ್ಜುನನಿಗೆ ಗಾಂಢೀವ ಏರಿಸುವುದು ಕೂಡಾ ಕಷ್ಟವಾಯ್ತು. ಅಸ್ತ್ರದ ಮಂತ್ರ ಕೂಡಾ ನೆನಪಿಗೆ ಬರಲಿಲ್ಲ. ಕಳ್ಳರು ಸ್ತ್ರೀಯರನ್ನು, ಸಂಪತ್ತನ್ನು ದೋಚಿಕೊಂಡು ಹೋದರು. ಕೃಷ್ಣನ ಅನುಗ್ರಹವಿಲ್ಲದ ಅರ್ಜುನನನಿಗೆ ಬೆಲೆಯಿಲ್ಲ ಎಂದರಿತ ಅರ್ಜುನ ತುಂಬಾ ಘಾಸಿಗೊಂಡ. ಕೆಲವು ದಿನಗಳ ತರುವಾಯ ಪಾಂಡವರು ಮಹಾಪ್ರಸ್ಥಾನಕ್ಕೆ ಸಿದ್ಧರಾದರು.” ಈ ಸಾಲುಗಳನ್ನು ಓದುವಾಗ ಒಂದು ಕಾಲದ ಅತಿರಥ ತನ್ನ ಕೊನೆಯ ಕಾಲದಲ್ಲಿ ಬಿಲ್ಲನ್ನೂ ಎತ್ತಲಾರದೇ, ಸ್ತ್ರೀಯರನ್ನು ರಕ್ಷಿಸಲಾರದೇ ಹೋದನಲ್ಲಾ ಎನ್ನುವ ವ್ಯಥೆಯಾಗುತ್ತದೆ. ಅದೇ ಸಮಯ ದೇವರು ನಮ್ಮ ಜೊತೆ ಇದ್ದರೆ ಮಾತ್ರ ನಮಗೆ ಶ್ರೀರಕ್ಷೆ ಇರುತ್ತದೆ ಎನ್ನುವ ಸತ್ಯದ ಅರಿವೂ ಆಗುತ್ತದೆ.

ಕೃತಿಗೆ ಪುಟಗಳ ಮಿತಿ ಇರುವುದರಿಂದ ಸಂಕ್ಷಿಪ್ತವಾಗಿ ಅರ್ಜುನನ ಮಾಹಿತಿಯನ್ನು ನೀಡಲಾಗಿದೆ. ಇದು ಮಕ್ಕಳಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಪೌರಾಣಿಕ ಪ್ರಬಂಧ, ಭಾಷಣ, ನಾಟಕ ರಚನೆಗೆ ಸಹಕಾರಿಯಾಗಬಲ್ಲದು. ಪುಸ್ತಕದ ಒಳಪುಟಗಳಲ್ಲಿ ಅಲ್ಲಲ್ಲಿ ಸೊಗಸಾದ ರೇಖಾಚಿತ್ರಗಳನ್ನು ನೀಡಲಾಗಿದೆ. ೫೦ ಪುಟಗಳ ಈ ಪುಟ್ಟ ಕೃತಿಯು ‘ವೀರ ಅರ್ಜುನ' ನ ಬಗ್ಗೆ ಬಹಳಷ್ಟು ವಿಷಯಗಳನ್ನು ಚುಟುಕಾಗಿ ತಿಳಿಸುವಲ್ಲಿ ಸಹಕಾರಿಯಾಗಿದೆ.