ವೀರ ಸಾವರ್ಕರ್ ; ಸಾಹಸ-ಯಾತನೆ-ಅವಮಾನ

ವೀರ ಸಾವರ್ಕರ್ ; ಸಾಹಸ-ಯಾತನೆ-ಅವಮಾನ

ಪುಸ್ತಕದ ಲೇಖಕ/ಕವಿಯ ಹೆಸರು
ಚಕ್ರವರ್ತಿ ಸೂಲಿಬೆಲೆ
ಪ್ರಕಾಶಕರು
ಅಯೋಧ್ಯಾ ಪಬ್ಲಿಕೇಷನ್ಸ್, ಬನಶಂಕರಿ ಎರಡನೇ ಹಂತ, ಬೆಂಗಳೂರು-೫೬೦೦೭೦
ಪುಸ್ತಕದ ಬೆಲೆ
ರೂ.೧೫.೦೦, ಮುದ್ರಣ: ೨೦೨೨

ವೀರ ಸಾವರ್ಕರ್ ಎಂಬ ಹೆಸರು ಈಗ ಬಹು ಚರ್ಚಿತವಾಗುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿರುವಂತದ್ದೇ. ಸಾವರ್ಕರ್ ಅವರು ದೇಶಭಕ್ತರೇ, ಸ್ವಾತಂತ್ರ್ಯ ಯೋಧರೇ, ಗಾಂಧೀಜಿ ಹತ್ಯೆಯಲ್ಲಿ ಅವರ ಕೈವಾಡವಿದೆಯೇ, ಎರಡು ಜೀವಾವಧಿ ಶಿಕ್ಷೆಗಳನ್ನು ಅವರು ಅಂಡಮಾನಿನ ಸೆಲ್ಯುಲಾರ್ ಜೈಲಿನಲ್ಲಿ ಹೇಗೆ ಕಳೆದರು? ಅಲ್ಲಿನ ಯಾತನಾಮಯ ದಿನಗಳು ಹೇಗಿದ್ದವು? ಅವರು ಬ್ರಿಟೀಷ್ ಸರಕಾರಕ್ಕೆ ಕ್ಷಮಾಪಣಾ ಅರ್ಜಿ ಬರೆದದ್ದು ಹೌದೇ? ಈ ಎಲ್ಲಾ ಸಂಶಯಗಳನ್ನು ನಿವಾರಣೆ ಮಾಡಲು ಖ್ಯಾತ ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಇವರು ‘ವೀರ ಸಾವರ್ಕರ್ ; ಸಾಹಸ-ಯಾತನೆ-ಅವಮಾನ' ಎಂಬ ಕಿರು ಹೊತ್ತಿಗೆಯನ್ನು ಬರೆದಿದ್ದಾರೆ. ೩೨ ಪುಟಗಳ ಈ ಪುಟ್ಟ ಪುಸ್ತಕವನ್ನು ಯಾವಾಗ ಬೇಕಾದರೂ ಸರಾಗವಾಗಿ ಓದಿ ಮುಗಿಸಬಹುದಾಗಿದೆ. 

ಅಂಡಮಾನಿನ ‘ಕಾಲಾಪಾನಿ' ಶಿಕ್ಷೆಯ ದಿನಗಳನ್ನು ಮಾತ್ರ ಓದುವಾಗ ಕಣ್ಣಿನಲ್ಲಿ ನೀರು ಬರುವುದಂತೂ ಗ್ಯಾರಂಟಿ. ಬ್ರಿಟೀಷ್ ಆಡಳಿತ ಸಾವರ್ಕರ್ ಅವರನ್ನು ಅಷ್ಟೊಂದು ಕಠಿಣವಾಗಿ ಶಿಕ್ಷೆಗೆ ಗುರಿ ಮಾಡಿತ್ತು. ಪುಸ್ತಕದ ಹಿಂದಿನ ರಕ್ಷಾಪುಟದಲ್ಲಿರುವ ಮಾತುಗಳು ಹೀಗಿವೆ “ ಯಾವ ದೇಶ ಮಹಾಪುರುಷರನ್ನು ಅಗೌರವಿಸುತ್ತದೆಯೋ ಅಂತಹ 

ದೇಶಕ್ಕೆ ಭವಿಷ್ಯವಿಲ್ಲ ಎನ್ನಲಾಗುತ್ತದೆ. ಸ್ವಾತಂತ್ರ್ಯ ಬಂದ ಐದಾರು ದಶಕ ನಾವು  ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತ್ಯಾಗಿ- ಬಲಿದಾನಿಗಳನ್ನು ಮರೆತು ಬಿಟ್ಟೆವು. ಅಷ್ಟೇ ಅಲ್ಲ, ಅವರಿಗೆ ಭಿನ್ನ ಭಿನ್ನ ಹಣೆಪಟ್ಟಿ ಕಟ್ಟಿ ಅವಮಾನವನ್ನೂ ಮಾಡಿದೆವು.  ಎಲ್ಲಾ ಅವಮಾನಗಳಲ್ಲಿಯೂ ಅತ್ಯಂತ ಹೆಚ್ಚು ಅನುಭವಿಸಿದ್ದು ಸ್ವಾತಂತ್ರ್ಯವೀರ ಸಾವರ್ಕರರೇ. ದುರದೃಷ್ಟವೆಂದರೆ ಬ್ರಿಟಿಷರಿಂದಲೇ ಹೆಚ್ಚು ನೋವಿಗೊಳಗಾಗಿದ್ದು ಅವರೇ. ಕಳೆದ ಒಂದು ದಶಕದಲ್ಲಿ ಈ ಎಲ್ಲಾ ಮಹಾಪುರುಷರಿಗೆ ಮತ್ತೊಮ್ಮೆ ಗೌರವ ದಕ್ಕುವಂತಾಗಿದೆ. ಪ್ರತೀ ಬಾರಿ ಈ ಕ್ರಾಂತಿವೀರರನ್ನು ಯಾರಾದರೂ ಅವಮಾನಿಸಿದಾಗ ಆಕ್ರೋಶ ಉಕ್ಕುವುದು ನಿಜವಾದರೂ ಆಕ್ರೋಶವನ್ನು ಧನಾತ್ಮಕವಾಗಿ ಪರಿವರ್ತಿಸಿ ಈ ಹೋರಾಟಗಾರರನ್ನು ಮತ್ತೊಮ್ಮೆ ಸಮಾಜಕ್ಕೆ ತಲುಪಿಸುವ ಸವಾಲಾಗಿ ಸ್ವೀಕರಿಸುವ ಸಾಹಸ ನಮ್ಮದು. ಈಗ ಮತ್ತೊಮ್ಮೆ ಇಂತಹ ಸವಾಲನ್ನು ಕೆಲವು ಕಿಡಿಗೇಡಿಗಳು ನಮಗೆ ನೀಡಿದ್ದಾರೆ. ಸುಮ್ಮನೆ ಬಿಡುವುದು ಹೇಗೆ? ಸ್ವಾತಂತ್ರ್ಯ ವೀರನನ್ನು ಮತ್ತೊಮ್ಮೆ ಮುನ್ನೆಲೆಗೆ ತರುವ ಪ್ರಯತ್ನ ಮಾಡೋಣ. ಈ ಕೃತಿಯನ್ನು ಓದೋಣ ಇತರರಿಗೆ ಉಡುಗೊರೆ ಆಗಿಯೂ ಕೊಡೋಣ. ಸಾವರ್ಕರ್ ಯಾರೆಂಬುದು ಪ್ರತಿಯೊಬ್ಬ ವ್ಯಕ್ತಿಗೂ ಅರಿವಾಗಲಿ. ದೇಶಭಕ್ತಿ ನಮ್ಮೆಲ್ಲರನ್ನು ಆವರಿಸಲಿ."

ವೀರ ಸಾವರ್ಕರ್ ಅವರು ಅನುಭವಿಸಿದ ಕಾಲಾಪಾನಿ ಶಿಕ್ಷೆಯ ಬಗ್ಗೆ ಪುಸ್ತಕದಲ್ಲಿ ಪರಿಚಯ ಮಾಡಿಕೊಡಲಾಗಿದೆ. ಸಾವರ್ಕರ್ ಮಾತುಗಳಲ್ಲೇ ಹೇಳುವುದಾದರೆ "ಇಲ್ಲಿ ೬೯೮ ಸೆಲ್ಲುಗಳಿವೆ. ಇತರೆ ಜೈಲುಗಳಂತೆ ಬ್ಯಾರಾಕುಗಳಿಲ್ಲ. ಹೀಗಾಗಿ ಇದನ್ನು  ಸೆಲ್ಯುಲಾರ್ ಜೈಲ್ ಎಂದು ಕರೆಯಲಾಗುತ್ತದೆ.  ಪ್ರತಿ ಸೆಲ್ ಕೂಡ ೧೩.೬ ಅಡಿ ಉದ್ದ ಮತ್ತು ೭.೬ ಅಡಿ ಅಗಲವಿದೆ. ಒಳಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಒಂದು ಕೋಣೆಯಲ್ಲಿರುವ ಕೈದಿಯೊಬ್ಬ ಮತ್ತೊಂದು ಕೋಣೆಯಲ್ಲಿರುವ  ಕೈದಿಯೊಂದಿಗೆ ಮಾತನಾಡುವುದು ಹೆಚ್ಚು ಕಡಿಮೆ ಅಸಾಧ್ಯವೆಂಬಂತೆ ಈ ಜೈಲುಗಳನ್ನು ರೂಪಿಸಲಾಗಿದೆ. ನನಗೆ ಏಳನೇ ನಂಬರಿನ ಸೆಲ್ ಅನ್ನು ನೀಡಲಾಯಿತು. ಇದು ನೇಣಿಗೆ ಹೋಗುವ ಮಂದಿಗೆ ಅತ್ಯಂತ ಹತ್ತಿರವಿರುವ ಸೆಲ್ಲು. ಆ ಮೂಲಕ ಸಾಯುವ ಮಂದಿಯನ್ನು ನೋಡಿ ಮಾನಸಿಕವಾಗಿ ನಾನು ಜರ್ಜರಿತಗೊಳ್ಳಲಿ ಎಂಬುದು ಅಧಿಕಾರಿಗಳ ಬಯಕೆ! ಇಲ್ಲಿನ ವ್ಯವಸ್ಥೆಗಳು ಬಲು ವಿಚಿತ್ರ. ಸ್ನಾನಕ್ಕೆ ಬಿಸಿನೀರು ಬಿಡಿ., ಶುದ್ಧ ನೀರು ಸಹ ಇಲ್ಲ. ಸುತ್ತಲೂ ಭೋರ್ಗರೆವ ಸಮುದ್ರವಿತ್ತಲ್ಲ, ಅಲ್ಲಿಂದಲೇ ಸ್ನಾನಕ್ಕೂ ನೀರು ಬರುತ್ತಿತ್ತು. ಉಪ್ಪು ನೀರನ್ನು ಮೈಮೇಲೆ ಹಾಕಿಕೊಂಡು ಜಮಾದಾರ ಹೇಳಿದಂತೆ ಸ್ನಾನ ಮಾಡುವುದು ಬಲು ಕಠಿಣ. ಸ್ನಾನ ಮಾಡುವಾಗ ಬೇರೆ ಬಟ್ಟೆಗಳು ಸಿಗುತ್ತಿಲ್ಲವಾದ್ದರಿಂದ ಹೆಚ್ಚು-ಕಡಿಮೆ ನಗ್ನವಾಗಿಯೇ ಸ್ನಾನ ಮಾಡಬೇಕಾಗುತ್ತಿತ್ತು. ಸ್ನಾನದ ವೇಳೆಗೆ ಆತ ಕೊಡುತ್ತಿದ್ದ ಅಂಗೈಯಗಲದ ಬಟ್ಟೆ ಯಾವ ಮೂಲೆಯಿಂದಲೂ ಮಾನ ಮುಚ್ಚಿಕೊಳ್ಳಲು ಸಾಕಾಗುತ್ತಿರಲಿಲ್ಲ. ಸೆಲ್ಲಿನ ಒಳಗೆ ಶೌಚಾಲಯವಿಲ್ಲದಿದ್ದುದರಿಂದ ಜಮಾದಾರ ಬೆಳಿಗ್ಗೆ ಹೊರ ಬಿಟ್ಟಾಗಲೇ ಶೌಚಾದಿ ಕ್ರಿಯೆಗಳನ್ನೆಲ್ಲ ಮುಗಿಸಿಕೊಳ್ಳಬೇಕಾಗುತ್ತಿತ್ತು. ಅಪ್ಪಿತಪ್ಪಿ ಮತ್ತೊಮ್ಮೆ ಶೌಚಕ್ಕೆ ಬೇಕೆನಿಸಿದರೆ ಅಸಾಧ್ಯವೇ ಆಗಿತ್ತು. ಕೈದಿಗಳಿಗೆ ಶಿಕ್ಷೆ ಎಂದರೆ ತೆಂಗಿನ ನಾರನ್ನು ತೆಗೆದು ಅದನ್ನು ಹಗ್ಗವಾಗಿ ಹೊಸೆಯುವುದು. ಈ ಬಗೆಯ ಕಾರ್ಯಗಳ ಅನುಭವವೇ ಇಲ್ಲದಿದ್ದ ನನಗೆ ಆರಂಭದಲ್ಲಿಯೇ ಕೈಗಳು ಬಾತುಕೊಂಡು ರಕ್ತ ಒಸರಲಾರಂಭಿಸಿತು. ನಿಗದಿತ ಪ್ರಮಾಣದ ಹಗ್ಗ ಹೊಸೆಯದಿದ್ದರೆ ಜಮಾದಾರರ ಕೆಟ್ಟ ಬೈಗುಳಗಳನ್ನು ಕೇಳಬೇಕಾಗುತ್ತಿತ್ತು. ಮತ್ತೆ ರಾತ್ರಿಯಿಡೀ ಸೆಲ್ಲಿನ ಒಳಗೆ ನಿಂತಿರುವ ಶಿಕ್ಷೆ."

ಸಾವರ್ಕರ್ ಅವರಿಗೆ ಈ ಕೆಲಸವಲ್ಲದೇ ಗಾಣದಿಂದ ಎಣ್ಣೆ ತೆಗೆಯುವ ಕೆಲಸವನ್ನೂ ಕೊಡುತ್ತಿದ್ದರು. ನಿಗದಿತ ಪ್ರಮಾಣದ ಎಣ್ಣೆಯನ್ನು ತೆಗೆಯದೇ ಇದ್ದಲ್ಲಿ ಮತ್ತೆ ರಾತ್ರಿಯಿಡೀ ನಿಂತುಕೊಂಡೇ ಇರುವ ಶಿಕ್ಷೆ ನೀಡುತ್ತಿದ್ದರು. ಅತ್ಯಂತ ಕಡಿಮೆ ಪ್ರಮಾಣದ ಆಹಾರವನ್ನು ಸಾವರ್ಕರ್ ಅವರಿಗೆ ನೀಡುತ್ತಿದ್ದರಂತೆ. ಇಷ್ಟೆಲ್ಲಾ ಶಿಕ್ಷೆಗಳನ್ನು ಅನುಭವಿಸಿದ ನಂತರ ಅಂಡಮಾನ್ ಜೈಲಿನಿಂದ ಯಾರೂ ಹಿಂದೆ ಬರುತ್ತಿರಲಿಲ್ಲ. ಒಂದೋ ಶಿಕ್ಷೆಯಿಂದ, ಇನ್ನೊಂದು ಮಾನಸಿಕ ಹಿಂಸೆಯಿಂದ ಮರಣವನ್ನಪ್ಪುತ್ತಿದ್ದರು. ಅದರಲ್ಲೂ ಎರಡೆರಡು ಜೀವಾವಧಿ ಶಿಕ್ಷೆಗೆ ಒಳಗಾದ ಸಾವರ್ಕರ್ ಬದುಕಿ ಬಂದದ್ದು ಒಂದು ಪವಾಡವೇ ಸರಿ. ಈ ಕಥಾನಕವನ್ನು ಪೂರ್ತಿಯಾಗಿ ಓದಲೇ ಬೇಕು.