ವೃಂದಾವನ-ವ್ಯಕ್ತಿಚಿತ್ರಗಳು

ವೃಂದಾವನ-ವ್ಯಕ್ತಿಚಿತ್ರಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦ ಮುದ್ರಣ: ೨೦೨೦

ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು ಸಾಕಷ್ಟು ಅಧ್ಯಯನ ಮಾಡಿ ಬರೆದವುಗಳಾಗಿರುತ್ತವೆ. ಏಕೆಂದರೆ ವ್ಯಕ್ತಿ ಚಿತ್ರಗಳನ್ನು ರೂಪಿಸುವಾಗ ಅವರ ಬಗ್ಗೆ ನಿಖರವಾದ ದಾಖಲೆಗಳಿರುವುದು ಅತ್ಯಂತ ಅವಶ್ಯಕ. ಅಯೋಧ್ಯಾ ಪ್ರಕಾಶನದವರು ಈ ಪುಸ್ತಕದ ಜೊತೆಗೆ ಇನ್ನೊಂದು ಪುಸ್ತಕವನ್ನೂ ಹೊರತಂದಿದ್ದಾರೆ. ಅದರ ಹೆಸರು ಗಂಧದ ಮಾಲೆ. ಅವೂ ವ್ಯಕ್ತಿ ಚಿತ್ರಗಳದ್ದೇ ಕಥನ.

ಪುಸ್ತಕದ ಬೆನ್ನುಡಿಯಲ್ಲಿ ಬರೆದ ವಾಕ್ಯಗಳು ಹೀಗಿವೆ ‘ಕಾಲೇಜು ಶಿಕ್ಷಣ ಪಡೆದು ಯಾವುದಾದರೂ ದೊಡ್ಡ ಉದ್ಯೋಗ ಹಿಡಿದು ತನ್ನ ಮಗ ಲಕ್ಷಾಂತರ ರೂಪಾಯಿ ಸಂಪಾದಿಸಬೇಕೆಂದು ತಂದೆ ಅತ್ತ ಹಂಬಲಿಸುತ್ತಿದ್ದರೆ ಇತ್ತ ಸದ್ದಿಲ್ಲದೆ ಸನ್ಯಾಸಿಯಾಗಿಬಿಟ್ಟ ಸಿದ್ದಗಂಗಾ ಶ್ರೀಗಳ ಕತೆ, ರಾಜ್ಯವನ್ನೇ ಆಳುವ ಸುವರ್ಣ ಅವಕಾಶ ಬಂದರೂ ಅದನ್ನು ರಾಜವಂಶಕ್ಕೇ ಮರಳಿಸಿದ ವ್ಯಾಸರಾಯರ ಕತೆ, ಔಷಧ ಪೊಟ್ಟಣದಲ್ಲಿ ಬಂದ ಬಂಗಾಳಿ ಬರಹವೇ ಕಾರಣವಾಗಿ ಆ ಭಾಷೆ ಕಲಿತು ಹತ್ತಾರು ಕಾದಂಬರಿಗಳನ್ನು ಕನ್ನಡಕ್ಕೆ ತಂದ ವೆಂಕಟಾಚಾರ್ಯರ ಕತೆ, ಕಾಡುತ್ತಿರುವ ಅನಾರೋಗ್ಯದಿಂದ ಮುಕ್ತನಾಗಬೇಕೆಂಬ ಆಸೆಯಲ್ಲಿ ಕಠೋರ ಭಾವನಿಂದ ಯೋಗವನ್ನು ಒಲಿಸಿಕೊಂಡ ಅಯ್ಯಂಗಾರರ ಕತೆ... ಇಲ್ಲಿರುವ ಒಂದೊಂದು ಕತೆಯೂ ರೋಮಾಂಚಕ, ಆಕರ್ಷಕ, ಬುದ್ಧಿ ಪ್ರಚೋದಕ.

ಒಂದಷ್ಟು ಕೆಲಸ ಮಾಡಲಿಕ್ಕಿದೆ ಎಂಬ ಸ್ಪಷ್ಟ ಸಂಕಲ್ಪವನ್ನು ಬೆನ್ನಿಗೆ ಕಟ್ಟಿಕೊಂಡೇ ಈ ಜಗತ್ತಿನಲ್ಲಿ ಹುಟ್ಟಿದಂತಹ ಈ ವ್ಯಕ್ತಿಗಳ ಬದುಕಿನ ಕತೆಗಳು ನಮ್ಮ ಮುಂದಿರುವ ಕತ್ತಲೆಯನ್ನು ಹೊಡೆದೋಡಿಸಬಲ್ಲ ಸ್ಪೂರ್ತಿ ದೀಪಗಳು. ‘ವೃಂದಾವನ' ಪುಸ್ತಕವು ಸತ್ತವರ ಕತೆ ಹೇಳುವುದಿಲ್ಲ. ಚರಿತ್ರೆಯ ಪುಟಗಳಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ಕೆತ್ತಿದವರ ಕತೆಗಳನ್ನು ಹೇಳುತ್ತದೆ. ಈ ವೃಂದಾವನದೊಳಗೆ ೧೫ ಇಂತಹ ಸ್ಪೂರ್ತಿದಾಯಕ ವ್ಯಕ್ತಿ ಚಿತ್ರಗಳಿವೆ. ಸಿದ್ದಗಂಗಾ ಶ್ರೀಗಳಿಂದ ಹಿಡಿದು ಯೋಗ ಗುರು ಅಯ್ಯಂಗಾರ್ ವರೆಗೂ, ವ್ಯಾಸರಾಯರಿಂದ ಕೈಲಾಸಂ, ಸಂಸವರೆಗೂ ಸತ್ಯ ಕತೆಗಳಿವೆ. ಸ್ಪೂರ್ತಿದಾಯಕವಾದ ಸುಮಾರು ೧೨೫ ಪುಟಗಳ ಓದು ನಿಮ್ಮದಾಗಲಿ.