ವೃಕ್ಷ ಯಜ್ಞ !

ವೃಕ್ಷ ಯಜ್ಞ !

ವೃಕ್ಷಗಳು ಪ್ರಕೃತಿಯ ಆಧಾರ ಸ್ಥಂಭ ಎಂಬುದು ಪ್ರತೀತಿ. ಮನುಷ್ಯನಿಗಿಂತ ಹೆಚ್ಚು ಕಾಲ ಬದುಕುವ ವೃಕ್ಷಗಳ ಉಪಯೋಗ ಗಣನಾತೀತ. ಭೂಜಲ ಮಟ್ಟದ ವರ್ಧನೆ, ಉಸಿರಾಟಕ್ಕೆ ಆಮ್ಲಜನಕ, ಅಂಗಾರಾಮ್ಲ ಸೇವಿಸಿ ಪರಿಸರ ಶುದ್ದಿ, ಆಶ್ರಯ ಬಯಸಿದವರಿಗೆ ನೆರಳು, ಹಸಿವಾದವರಿಗೆ ಹಣ್ಣು, ಮನಸ್ಸಿಗೆ ಆನಂದ ನೀಡುವ ವರ್ಣಮಯ ಪುಷ್ಪಸಂಕುಲ, ಮೃಗ ಪಕ್ಷಿ..... ಆದಿಗಳಿಗೆ ನಿವಾಸ ಹೀಗೆ ವೃಕ್ಷಗಳಿಂದ ಒದಗುವ ಪ್ರಯೋಜನಗಳ ಪಟ್ಟಿ ಅತ್ಯಂತ ದೀರ್ಘ ಮತ್ತು ಅವರ್ಣನೀಯ. ಮನುಷ್ಯನಿಂದ ಪ್ರಯೋಜನಗಳೇನು ಎಂದು ಕೇಳಿದರೆ ಸಿಗಬಹುದಾದ ಉತ್ತರ ಶೂನ್ಯ. ಯಾಕೆಂದರೆ ಮನುಷ್ಯರು ಮಾಡುವರೆನ್ನ ಬಹುದಾದ ಉಪಕಾರಗಳಲ್ಲಿ ಅನ್ಯ ಮೂಲಗಳ ಋಣಭಾರವಿರುತ್ತದೆ. ಮರವೊಂದು ಸತ್ತರೆ ಅದನ್ನು “ಮರ” ವೆಂದೇ ಕರೆಯುತ್ತೇವೆ. ಆದರೆ ಮನುಷ್ಯ ಸತ್ತ ಕ್ಷಣದಲ್ಲಿ ಅವನನ್ನು “ಹೆಣ’” ಎನ್ನುತ್ತೇವೆ. ಅವನು ಮಂತ್ರಿಯೋ ರಾಜನೋ ಏನೇ ಆಗಿರಲಿ ಅದು “ಹೆಣ” ಮಾತ್ರ ಎಂಬುದು ಪರಮ ಸೋಜಿಗ. ಹೆಣದಿಂದೇನು ಲಾಭವಿದೆ? ದಹನವೋ ದಫನವೋ ನಡೆದು ದೇಹ ಅಳಿಯುತ್ತದೆ.

ಮರದ ದೇಹವು ಲಗುಬಗನೆ ಅಳಿಯುವುದಿಲ್ಲ. ವಿದ್ಯಾಲಯ, ದೇವಾಲಯ, ಅರಮನೆ ಅಥವಾ ವಾಸದ ಮನೆಗಳ ಕಿಟಕಿ ಬಾಗಿಲುಗಳಾಗಿ, ಆಸನಗಳಾಗಿ, ಆಟಿಕೆಗಳಾಗಿ, ದೇವರಿಗೆ ರಥವಾಗಿ, ಗರುಡಗಂಬವಾಗಿ, ಬಂಗಾರ ಅಥವ ಹಣ ಇರಿಸುವ ಖಜಾನೆಯಾಗಿ, ಧಾನ್ಯಗಳ ಸಂಗ್ರಾಹಕವಾಗಿ......... ಹೀಗೆ ನೂರಾರು ರೀತಿಯಲ್ಲಿ ಸಾವಿರಾರು ವರ್ಷ ಉಪಕಾರವನ್ನು ಸತ್ತ ಮೇಲೂ ವೃಕ್ಷವು ಮುಂದುವರಿಸುತ್ತದೆ. ಈ ಲೋಕದಲ್ಲಿ ತಲೆಯೆತ್ತಿ ವಿಜೃಂಭಿಸುತ್ತದೆ. ಜೀವವಿದ್ದಾಗ ಮತ್ತು ತನ್ನ ಜೀವ ಹೋದಾಗ ಉಪಕರಿಸಲು ವೃಕ್ಷಗಳಿಗೆ ಮಾತ್ರ ಸಾಧ್ಯ. ಅದಕ್ಕಾಗಿ ಮರ ಎಂದಿಗೂ “ವೃಕ್ಷರಾಜ”. ರಾಜನೇ ಸತ್ತರೂ ಅದು ಹೆಣ. ನಮ್ಮ ಹಿರಿಯರು ವೃಕ್ಷೋಪಾಸನೆ ಮಾಡುತ್ತಿದ್ದರು. ವೃಕ್ಷಗಳಿಗೆ ರೋಗ ನಿವಾರಕ ಶಕ್ತಿ ಇದೆ. ಆಶ್ರಿತನಿಗೆ ರಕ್ಷಣೆ ಮತ್ತು ಪೋಷಣೆ ಮಾಡುವ ಗುಣಗಳು ಮರಗಳಿಗಿರುವುದರಿಂದಲೇ ಋಷಿಗಳು ತಪಸ್ಸು ಮಾಡಲು ವಿಶಾಲವಾದ ಮರವನ್ನೇ ಆರಿಸುತ್ತಿದ್ದರು. ಮರಗಳಡಿಯು ನೆರಳು, ತಂಪು, ಪ್ರಶಾಂತತೆ, ಸೌಗಂಧಿಕ ಪರಿಸರ, ಏಕಾಗ್ರತೆಗೆ ಮೂಲ.

ಕೊರೋನಾ ಬಂದಾಗ ಕೋಟ್ಯಂತರ ಕುಟುಂಬಗಳಲ್ಲಿ ಉಸಿರಾಟದ ಸಮಸ್ಯೆಯುಳ್ಳವರಿಗೆ ಆಮ್ಲಜನಕ ನೀಡಲು ವ್ಯಯ ಮಾಡಿದ ಹಣ ಅಪಾರ. ಕೆಲವು ದಿನಗಳ ಉಸಿರಾಟದ ವ್ಯವಸ್ಥೆ ಪಡೆಯಲು ಮನುಷ್ಯನಿಗೆ ಲಕ್ಷಾತರ ರೂಪಾಯಿಗಳ ವೆಚ್ಚವಾಗಿದೆ. ಜೀವನ ಪರ್ಯಂತ ಉಸಿರಾಟಕ್ಕೆ ಬೇಕಾದ ಕೋಟ್ಯಂತರ ರೂಪಾಯಿ ಮೌಲ್ಯದ ಆಮ್ಲಜನಕವನ್ನು ವೃಕ್ಷಗಳು ಬಿಟ್ಟಿಯಾಗಿ ನೀಡುತ್ತವೆ. ಆದುದರಿಂದ ಮರಗಳನ್ನು ಘಾಸಿಗೊಳಿಸುವುದು, ಕಡಿಯುವುದು ಪಾಪಕರ. ನಮ್ಮ ಹಿರಿಯರು ಮರಗಳು ಒಣಗಿದಾಗ ಉರುವಲುಗಳಿಗೆ ಹಾಗೂ ಎಲ್ಲ ಉದ್ದೇಶಗಳಿಗೆ ಬಳಸುತ್ತಿದ್ದರೇ ವಿನಹ ಜೀವಂತ ಮರಕ್ಕೆ ಕೊಡಲಿ ಹಾಕುತ್ತಿರಲಿಲ್ಲ. ಒಂದು ಮರ ಸತ್ತರೆ ಹತ್ತು ಗಿಡ ನೆಡುತ್ತಿದ್ದರು. ನಾವು ನೂರು ಜೀವಂತ ಮರ ಕಡಿದರೆ ಒಂದನ್ನು ನೆಡುವುದು ಸಂದೇಹ. ವನಮಹೋತ್ಸವದ ಹೆಸರಿನಲ್ಲಿ ಗಿಡಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ನೆಡುತ್ತೇವೆ. ಆದರೆ ಅವುಗಳು ಬದುಕಿ ಬೆಳೆಯುವಂತೆ ಮಾಡುವ ಬದ್ಧತೆ ನಮಗಿದೆಯೇ?

ನಾವು ವೃಕ್ಷಯಜ್ಞದ ಮೂಲಕ ಈ ಭೂಮಿಯ ಮೇಲೆ ನಳ ನಳಿಸುವ ಕಾನನಗಳನ್ನು ಪುನರಪಿ ಕಾಣುವ ಸೌಭಾಗ್ಯವಂತಾರಾಗೋಣ. ಸಾಲು ಮರದ ತಿಮ್ಮಕ್ಕನಂತೆ ನಾವೂ ಲಕ್ಷಾಂತರ ವೃಕ್ಷಗಳಿಗೆ ಮಾತಾಪಿತರಾಗೋಣ. ಕೋಟ್ಯಾಧಿಪತಿಗಿಂತ ವೃಕ್ಷಾಧಿಪತಿ ಸರ್ವ ಕಾಲಕ್ಕೂ ಶ್ರೇಷ್ಠ.

-ರಮೇಶ ಎಂ. ಬಾಯಾರು, ಬಂಟ್ವಾಳ.

ಚಿತ್ರ ಕೃಪೆ: ಇಂಟರ್ನೆಟ್ ತಾಣ